fbpx

ಹೀಗಿರಲಿ …ನಿಮ್ಮ ಚಳಿಗಾಲದ ದಿನಚರ್ಯೆ!

” ಈ ವರ್ಷ ನೆಲ್ಲಿ ಫಸಲು ಇಲ್ಲವೇ ಇಲ್ಲ. ಎಲ್ಲೋ ಕೆಲವು ಗಿಡಗಳಿಗೆ ಕೆಲವೇ ಕಾಯಿಗಳು ಲಭ್ಯ ಡಾಕ್ಟ್ರೇ” ಎಂಬುದು ಹಲವು ರೈತರ ಅಳಲು. ನೆಲ್ಲಿ ಉತ್ತಮವಾದ ಆಹಾರವೂ ಹೌದು, ಔಷಧವೂ ಹೌದು. ಇದರ ಲಭ್ಯತೆ ಸಾಮಾನ್ಯವಾಗಿ ಚಳಿಗಾಲದಲ್ಲಿ ಯಾಕಿರಬಹುದು? ದೇಹಕ್ಕೆ ಬಲಕಾರಕವಾದ ಆಹಾರವನ್ನು ಸೇವಿಸಿ ಶರೀರವನ್ನು ಸದೃಢಪಡಿಸಿಕೊಳ್ಳಬೇಕಾದ ಕಾಲವಿದು. ಈ ಕಾಲದಲ್ಲಿಯೇ ಸರ್ವಧಾತುವರ್ಧಕವೂ, ಬಲವರ್ಧಕವೂ ಹೌದು ನೆಲ್ಲಿಯ ಲಭ್ಯತೆ. ಈ ಋತುವಿನಲ್ಲಿ ಇಡೀ ವರ್ಷದಲ್ಲಿಯೇ ಅತಿ ಹೆಚ್ಚು ಸಹಜ ಬಲವಿರುವ ಕಾಲ. ಕೆರೆ – ಸರೋವರಗಳ ನೀರು ತಂಪಾಗಿ ಮೀನು- ಆಮೆಗಳು ಒಳಕ್ಕೆ ಸರಿಯುತ್ತವೆ. ಚಳಿ ಹೆಚ್ಚಾಗಿ ನಮ್ಮ ಶರೀರದ ಉಷ್ಣತೆಯೂ ಒಳಸರಿವ ಕಾರಣ ಹಸಿವೆಯೂ ಹೆಚ್ಚಾಗುತ್ತದೆ. ಈ ಋತುವಿನಲ್ಲಿ ಏನನ್ನು ತಿಂದೂ ದಕ್ಕಿಸಿಕೊಳ್ಳಬಹುದು.

ಈಗ ಜಿಡ್ಡು ಆಹಾರದಲ್ಲಿ ವಿಫುಲವಾಗಿರಲಿ !

ಈ ಛಳಿಯಲ್ಲಿ ಹೆಚ್ಚಾದ ಹಸಿವೆಯನ್ನು ಶಮನಗೊಳಿಸಲು ತುಪ್ಪ ತಿನ್ನಬೇಕು.  “ಸಾಲ ಮಾಡಿಯಾದರೂ ತುಪ್ಪ ತಿನ್ನು!” ಎಂಬ ಮಾತಿನಂತೆ. ತುಪ್ಪ, ಕೊಬ್ಬರಿ ಎಣ್ಣೆ ಆಹಾರದ ಜೊತೆಗೆ ಚೆನ್ನಾಗಿ ಸೇವಿಸಬೇಕು. ಜೊತೆಯಲ್ಲಿ ಸಿಹಿ ತಿಂಡಿ ಹಾಗೂ ಕರಿದ ತಿಂಡಿಯನ್ನೂ ಇಲ್ಲಿ ಹೆಚ್ಚಾಗಿ ತಿನ್ನಬಹುದು. ಈ ಎಲ್ಲದರಿಂದ ” Cholesterol” ಭಯ ಬೇಡ. ಈ ಭೂತ ಹೆಚ್ಚಾಗುವುದು ಹಸಿವೆ ಇಲ್ಲದೆ ತಿಂದಾಗ ಹಾಗೂ ವ್ಯಾಯಾಮವಿಲ್ಲದಾಗ ಮಾತ್ರ. ಹಾಗೆಯೇ ಉದ್ದು, ಮೊಸರು ಇವುಗಳನ್ನು ಸೇವಿಸಬಹುದು. ಚಳಿಗಾಲದಲ್ಲಿ ಈ ಎರಡನ್ನೂ ಸೇವಿಸುವುದರಿಂದ ಶರೀರವನ್ನು ದೃಡಗೊಳಿಸುತ್ತವೆ ಹಾಗೂ ವಾತರೋಗಗಳು ಕಡಿಮೆಯಾಗುತ್ತವೆ.

ಹುಳಿ, ಉಪ್ಪು, ಖಾರ, ಕಹಿಗಳೂ ಇರಲಿ !

‘ಕಫ’ ಸಂಚಯವಾಗದೇ ಕರಗಲು ‘ಹುಳಿ’ ‘ಉಪ್ಪು’ ಸಹಾಯ ಮಾಡುತ್ತದೆ. ‘ಕಹಿ-ಖಾರ’ಗಳು ಕಫವನ್ನು ಶಮನ ಮಾಡುತ್ತವೆ. ಜಿಡ್ಡಿನ ಪದಾರ್ಥಗಳನ್ನು ಸಹ ಈ ಮೇಲಿನ ರುಚಿಯುಳ್ಳ ಪದಾರ್ಥಗಳೊಂದಿಗೇ ಸೇವಿಸಬೇಕು.

ಮನೆ, ಆಹಾರ, ಬಿಸಿ – ಬಿಸಿಯಾಗಿರಲಿ !

 ‘ಛಳಿ’ಯಿಂದಾಗಿ ಚರ್ಮ ಒಡೆಯುತ್ತದೆ, ಮನೆಯಲ್ಲಿ ಸದಾ ಅಗ್ಗಿಷ್ಟಿಕೆ ಉರಿಸುವುದರಿಂದ ಈ ಪರಿಣಾಮವನ್ನು ತಪ್ಪಿಸಬಹುದು.ನೆಲಮಾಳಿಗೆಯ ಉಪಯೋಗ ಈ ಚಳಿಗಾಲದಲ್ಲಿ ಒಳ್ಳೆಯದು. ಜೊತೆಯಲ್ಲಿ ಬಿಸಿ ನೀರಿನ ಸೇವನೆ. ಬಿಸಿ,ಬಿಸಿ ಊಟ ಅತ್ಯುತ್ತಮವಾದದ್ದು. ಒಂದು ವಾರಕ್ಕೆ ೨ಸಲ ಕಾಳುಮೆಣಸಿನ ಕಟ್ನೆ ಸಾರು, ಬಿಸಿ ಅಪ್ಪೆ ಹುಳಿ ಸೇವನೆಗೂ ಇದು ಸಕಾಲ. ಮೂಲಂಗೀ, ಶುಂಠಿ, ಈರುಌ, ಬೆಳ್ಳುಌಗಳನ್ನು ವಿಶೇಷವಾಗಿ ಸೇವಿಸಬಹುದು. ವಿವಿಧ ಪಾಚಕ ಗುಣವುಳ್ಳ ಸೊಪ್ಪು ಬೇರುಗಳಿಂದ ಮಾಡಿದ ತಂಬುಳಿ ಸೇವನೆಗೆ ಇದು ಸಕಾಲ. ಹಾಗೆಯೇ, ಬೂದುಗುಂಬಳ, ಬಟಾಟೆ, ಬೀಟ್ ರೂಟ್ ಮುಂತಾದ ಸಿಹಿ ತರಕಾರಿಗಳ ಸೇವನೆಗೂ ಇದು ಸಕಾಲ.

ಪ್ರತಿನಿತ್ಯ ಎಣ್ಣೆ ಸ್ನಾನ ಉತ್ತಮ !

 ಸ್ವಲ್ಪ ಬಿಸಿ ಕೊಬ್ಬರಿ ಎಣ್ಣೆ, ಉಪ್ಪು, ಕರ್ಪೂರ ಸೇರಿಸಿ ಇಡೀ ಮೈಗೆ ಹಚ್ಚಿ ಬಿಸಿ ನೀರು ಸ್ನಾನ ಮಾಡುವುದರಿಂದ ಮೈಕಾಂತಿ ಹೆಚ್ಚುತ್ತದೆ. ‘ಧಾತ್ವಗ್ನಿ’ ಹೆಚ್ಚಾಗಿ ಶರೀರದ ಧಾತುಗಳು ಹೆಚ್ಚಾಗಿ ವೃದ್ಧಿಯಾಗುತ್ತದೆ. ಮಾಂಸ ಖಂಡಗಳು ದಷ್ಟಪುಷ್ಟವಾಗಿ, ಉತ್ಸಾಹ ಹೆಚ್ಚುತ್ತದೆ. ಶಕ್ತಿ ಹೆಚ್ಚುತ್ತದೆ ಮಾತ್ರವಲ್ಲದೆ, ಸುಖ ನಿದ್ರೆಗೆ ಕಾರಣವಾಗುತ್ತದೆ. ಶರೀರದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಭ್ಯಂಗ ಸ್ನಾನ ದೀರ್ಘಾಯುಸ್ಸಿಗೂ ಕಾರಣ ಎಂಬುದು ಸದಾ ನೆನಪಿರಲಿ.

ಆದರೆ, ವ್ಯಾಯಾಮಕ್ಕೂ ಇದು ಸಕಾಲ !

 ಚೆನ್ನಾಗಿ ತಿನ್ನುವ ಈ ಕಾಲದಲ್ಲಿ ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡದಿದ್ದಲ್ಲಿ, ಮುಂದೆ ವಸಂತ ಋತುವಿನಲ್ಲಿ ಕಫಜ ವ್ಯಾಧಿಗಳು ಬರುವುದು ನಿಶ್ಚಯ! ಬೊಜ್ಜು ಸಹಿತ ಬರಬಹುದು ಜೋಕೆ ! ಮೈ ಬೆವರಿಸುವಷ್ಟು ವ್ಯಾಯಾಮ ಆರಂಭಿಸುವವರೂ ಈ ಋತುವಿನಲ್ಲಿ ಆರಂಭಿಸಬಹುದು. ಶೀಘ್ರ ನಡಿಗೆ, ಜಾಗಿಂಗ್, ಆಸನಗಳನ್ನು, ಸೂರ್ಯನಮಸ್ಕಾರ, ವಿವಿಧ ರೀತಿಯ ಸಂಧಿ ಸಡಿಲಿಸುವಿಕೆಯ ವ್ಯಾಯಾಮಗಳು ಇಲ್ಲಿ ಅತ್ಯುತ್ತಮ. ವಿವಾಹಿತರಿಗೆ ಗ್ರಾಮ್ಯಧರ್ಮಕ್ಕೂ ಇದು ಸಕಾಲ. ನಿತ್ಯ ಮೈಥುನವೂ ಈಗ ನಿಷಿದ್ಧವಲ್ಲ. (ಶರೀರ ಬಲವನ್ನು ಗಮನಿಸಿಕೊಳ್ಳಬೇಕು.)

ಹಗಲು ನಿದ್ರೆ ಬೇಡ !

ಈ ಋತುವಿನಲ್ಲಿ ಹಗಲು ನಿದ್ರೆ ಕಫಜ ವ್ಯಾಧಿಗಳಿಗೆ ಮೂಲ, ಬೇಡವೇ ಬೇಡ. ಅಂತೆಯೇ ರಾತ್ರಿ ಬೇಗನೇ ಚೆನ್ನಾಗಿ ದಪ್ಪನೆ ಹೊದಿಕೆ ಹೊದ್ದು ಮಲಗುವುದು ಸೂಕ್ತ.

ರಸಾಯನ ಚಿಕಿತ್ಸೆಗೆ ಇದೇ ಸುಸಮಯ!

 ಈ ಋತುವಿನಲ್ಲಿ ಅಗ್ನಿಬಲ ಹೆಚ್ಚು. ಶರೀರ ಬಲವರ್ಧನೆಗೆ ನೆಲ್ಲಿಗುಳಂಬ, ಕೂಷ್ಮಾಂಡ ರಸಾಯನ, ಅಶ್ವಗಂಧಾವಲೇಹ, ಚ್ಯವನಪ್ರಾಶ, ಬಾದಾಮಿಪಾಕ ಮುಂತಾದ ಧಾತುವರ್ಧಕ ರಸಾಯನ ಸೇವಿಸಿ, ಶರೀರ ಬಲವರ್ಧನೆ ಮಾಡಿಕೊಳ್ಳಬಹುದು.

ಒಟ್ಟಿನಲ್ಲಿ ಛಳಿಗಾಲ ಇಡೀ ವರ್ಷದಲ್ಲಿಯೇ ಆರೋಗ್ಯಕರ ಕಾಲ. ವೈದ್ಯರೂ ಸ್ವಲ್ಪ ಬಿಡುವಾಗಿರುವ ಕಾಲ. ಸರಿಯಾಗಿ ತಿಳಿದು ದಿನಚರ್ಯೆ ರೂಢಿಸಿದಲ್ಲಿ ಬರುವ ವರ್ಷ ಸುಖವಾಗಿರಬಹುದು.

Share With Your Friends

Leave a Comment