fbpx
+919945850945

ಮಳೆಗಾಲದಲ್ಲಿ ಯಾವ ಆಹಾರ ದೇಹಕ್ಕೆ ಹಿತ ?

ಮಳೆಗಾಲದಲ್ಲಿ ಎರಡು ರೀತಿಯ ವಾತಾವರಣಗಳುಂಟು. ತೀವ್ರ ಮಳೆ, ಗಾಳಿ, ತಂಪಿನಿಂದ ಕೂಡಿದ ವಾತಾವರಣವೊಂದೆಡೆಯಾದರೆ, ಮಳೆ ಬಾರದೆ ಇರುವ ದಿನ ಇನ್ನೊಂದು. ಈ ಎರಡೂ ದಿನಗಳಂದೂ ಆಹಾರ – ವಿಹಾರಗಳ ವಿಧಾನ ಬೇರೆ ಬೇರೆ!

ಮಳೆಗಾಲದಲ್ಲಿ ಮಳೆಯಿರದ ದಿನ!

ಒಟ್ಟಿನಲ್ಲಿ ಜೀರ್ಣಶಕ್ತಿ ಮಂದವಾಗಿರುವ ದಿನಗಳಿವು. ಇಂತಹ ವಾತಾವರಣದಲ್ಲಿ “ಭಜೇತ್ ಸಾಧಾರಣಂ ಸರ್ವಂ ಊಷ್ಮಣಸ್ತೇಜನಂ ಯತ್ ।” (ವಾಗ್ಭಟ) ಯಾವುದೇ ವಿಶೇಷವಿಲ್ಲದ ಷಡ್ರಸವಿರುವ ಆಹಾರವನ್ನು ಸೇವಿಸಬೇಕು. ಆದರೆ, ಅದು ಹಸಿವೆ ಹೆಚ್ಚಿಸುವಂತಹ ಸ್ವಭಾವ ಹಾಗೂ ಪ್ರಮಾಣ ಹೊಂದಿರಬೇಕು. ಕೊಂಚ – ಖಾರ ಹೆಚ್ಚಿರುವ ಬಿಸಿಬಿಸಿಯಾದ ಆಹಾರ ಹೆಚ್ಚು ಹಿತಕರ. ಹೆಚ್ಚು ದ್ರವಾಹಾರ ಸೇವನೆ ಬೇಡ.

ಮಳೆಯಿಂದ ಕೂಡಿದ ಮಳೆಗಾಲದ ದಿನ !

ಆರ್ದ್ರತೆಯಿಂದ ಕೂಡಿದ ವಾತಾವರಣ ಕಫವನ್ನು ಹೆಚ್ಚಿಸಿ ಅಗ್ನಿಮಾಂದ್ಯವನ್ನು ಹೆಚ್ಚಿಸುತ್ತದೆ. ತಂಪುಗಾಳಿ- ಮಳೆ- ವಾತವೃದ್ಧಿಕರ. ಸ್ವಲ್ಪ ಎಚ್ಚರ ತಪ್ಪಿದಲ್ಲಿ ಈ ಕಾಲ ತ್ರಿದೋಷ ಪ್ರಕೋಪ, ಪಿತ್ತಜ ವ್ಯಾಧಿಗಳು, ವಿಷಮ ಜ್ವರ ಮುಂತಾದ ದುಃಷ್ಪರಿಣಾಮಗಳನ್ನು ಉಂಟುಮಾಡಬಲ್ಲದು. ಈ ಸಂದರ್ಭದಲ್ಲಿ ವಾತವನ್ನು ಶಮನಗೊಳಿಸುವ ಆರ್ದ್ರತೆ (ಕ್ಲೇದ)ಯನ್ನು ಕಡಿಮೆ ಮಾಡುವಂತಹ ಆಹಾರ ಸೇವನೆ ಅಗತ್ಯ.

“ವ್ಯಕ್ತಾಮ್ಲಲವಣಸ್ನೇಹಂ ಸಂಶುಷ್ಕಂ ಕ್ಷೌದ್ರವಲ್ಲಘು ।” (ವಾಗ್ಭಟ)

ಕೊಂಚ ಹೆಚ್ಚಾದ ಆಮ್ಲ- ಲವಣ ರಸಗಳು ಹಾಗೂ ಜಿಡ್ಡು, ಶುಷ್ಕವಾದ ಆಹಾರ, ಜೇನು ಸೇರಿಸಿದ ಆಹಾರ ಪಚನಕ್ಕೆ ಹಗುರವಾದ ಆಹಾರ ಸೂಕ್ತ. ಉತ್ತರ ಕನ್ನಡದಲ್ಲಿ ಬಹಳವಾಗಿ ಬಳಸುವ “ಅಪ್ಪೆಹುಳಿ” ಇಂತಹ ಒಂದು ಉತ್ತಮ ಆಹಾರವಾಗಿದೆ. ಬಹುಶಃ ವರ್ಷದಲ್ಲಿ ೪-೫ ತಿಂಗಳು ಮಳೆಗಾಲ ಕಂಡುಬರುವ ಈ ಪ್ರದೇಶದಲ್ಲಿ ಇದೇ ಕಾರಣದಿಂದಲೇ ಅಪ್ಪೆಹುಳಿಯ ಬಳಕೆ ವಿಶೇಷವಾಗಿದೆ.ಇದು ಹಸಿವೆ ಹೆಚ್ಚಿಸುವ, ವಾತ ಶಮನಗೊಳಿಸುವ, ಮಲಾನುಲೋಮನಗೊಳಿಸುವ ಸ್ವಭಾವದಿಂದ ಕೂಡಿದ್ದು, ಅತ್ಯಂತ ರುಚಿಕರವಾಗಿದೆ. ಆದರೆ, ಈ ಅಪ್ಪೆಹುಳಿಯ ಸೇವನೆಯಲ್ಲಿ ಕೆಳಗಿನ ಎಚ್ಚರವನ್ನು ಗಮನಿಸಲೇಬೇಕು.

  • ಬೇಸಿಗೆ, ಶರದೃತುಗಳಲ್ಲಿ ಅಪ್ಪೆಹುಳಿ ಸೇವನೆ ಪಿತ್ತವರ್ಧಕವಾಗುತ್ತದೆ. ಇದು ಒಳ್ಳೆಯದಲ್ಲ.
  • ಪಿತ್ತಪ್ರಕೃತಿಯವರಿಗೆ ಅಪ್ಪೆಹುಳಿ ಅಸಿಡಿಟಿ, ಉರಿ ಮೊದಲಾದ ಪಿತ್ತಲಕ್ಷಣಗಳನ್ನು ಹೆಚ್ಚಿಸುತ್ತದೆ.
  • ನಿರಂತರ ಅಪ್ಪೆಹುಳಿ ಸೇವನೆ ಒಳ್ಳೆಯದಲ್ಲ.
  • ಅಪ್ಪೆಹುಳಿಗೆ “ಕೊಬ್ಬರಿ ಎಣ್ಣೆ” ಸೇರಿಸಿ ಅಥವಾ ಅದರಲ್ಲಿಯೇ ಒಗ್ಗರಣೆ ಕೊಟ್ಟು ಸೇವಿಸುವುದೇ ಒಳ್ಳೆಯ ವಿಧಾನ.

ಮುರುಗನ ಹುಳಿ

 ಅಪ್ಪೆಹುಳಿ ವಿಧಾನದಲ್ಲಿಯೇ ಮುರುಗನ ಹುಳಿಯ ಸಿಪ್ಪೆ ನೆನೆಸಿ ಹಿಂಡಿ ಅಥವಾ ಬೇಯಿಸಿ ತಯಾರಿಸುವುದೇ ಮುರುಗನ ಹುಳಿ ಅಥವಾ ಮುರುಗನ ತಿಳಿಸಾರು ! ಇದು ಪಿತ್ತವನ್ನು ಅನುಲೋಮನ ಮಾಡಿ ಹೊರಹಾಕುವುದರಿಂದ ಆಗ್ಗಾಗ್ಗೆ ಸೇವಿಸಿದರೆ ಪಿತ್ತ ಪ್ರಕೃತಿಯವರಿಗೂ ತೊಂದರೆ ಕೊಡದು. ಒಣ ಕೆಮ್ಮು, ಪಿತ್ತದ ಗಂದೆಗಳು, ಉಬ್ಬದ, ಒಣಗಿದ ಕಫ, ಗಂಟಲು ನೋವು, ಮಲಬದ್ಧತೆಯಿರುವವರಿಗೆ ಉತ್ತಮ ಆಹಾರ. ಬಿಸಿ ಮುರುಗನ ಹುಳಿ ತಿಳಿಸಾರಿಗೆ ಎರಡು ಮಿಳ್ಳೆ ತುಪ್ಪ ಸೇರಿಸಿ ಸೇವಿಸಿದರೆ ಆ ಊಟದ ರುಚಿ ಸವಿದವನೇ ಬಲ್ಲ!

 ನೆಲ್ಲಿ ಹುಳಿ

 ಬೇಯಿಸಿದ ನೆಲ್ಲಿ ಅಥವಾ ಹಸಿನೆಲ್ಲಿ ಬಳಸಿ ಮಾಡಿದ ನೆಲ್ಲಿ ಸಾರು ತ್ರಿದೋಷಹರ. ರಸಾಯನ ಮಧುಮೇಹಕ್ಕೆ ಸಿದ್ಧೌಷಧ. ಎಲ್ಲಾ ಖಾಯಿಲೆಗಳಲ್ಲೂ ಪಥ್ಯ, ಧಾತುವರ್ಧಕ, ಕಣ್ಣಿಗೆ ಬಲಕೊಡುವಂತಹದು. ಮಲಾನುಲೋಮಕ ಹಾಗೂ ಆಯುರ್ವಧಕವಾದದ್ದು.

ದಾಳಿಂಬೆ ಹುಳಿ

 ದಾಳಿಂಬೆ ಬೀಜಗಳನ್ನು ಕೊಂಚ ಹಿಂಡಿ ರಸ ತೆಗೆದು ಇದರಿಂದ ಮಾಡಿದ ತಿಳಿಸಾರು ಅತ್ಯಂತ ರುಚಿಕರ. ಆಮ್ಲಪಿತ್ತ, ರಕ್ತಪಿತ್ತ, ದ್ರವಾತಿಸಾರವಿರುವವರಿಗೆ ಉತ್ತಮವಾದ ಆಹಾರವಾಗಿದೆ. ವಿಶೇಷವಾಗಿ ಜ್ವರದಲ್ಲಿ ಕೊಂಚ ಬೇಯಿಸಿದ ಹೆಸರು ಬೇಳೆ ಸೇರಿಸಿ ಮಾಡಿದ ದಾಳಿಂಬೆ ಸಾರು ಉತ್ತಮ ಪಥ್ಯಾಹಾರವಾಗಿದೆ. ಜೊತೆಗೆ ಬಾಯಿ ರುಚಿ ಉಂಟುಮಾಡಿ, ದೋಷಾನುಲೋಮನ ಮಾಡುವ ಸ್ವಭಾವದ್ದು.

ನಿಂಬೂ ಹುಳಿ

 ನಿಂಬೂರಸವನ್ನು ನೀರಿಗೆ ಹಾಕಿ, ಹುಳಿ, ಉಪ್ಪು, ಸಿಹಿ, ಖಾರ ಬೆರೆಸಿ ಒಗ್ಗರಣೆ ಕೊಟ್ಟು ಮಾಡಿದ ತಿಳಿಸಾರು ಜೀರ್ಣಶಕ್ತಿ ಹೆಚ್ಚಿಸುವ ವಾಂತಿ ನಿಲ್ಲಿಸುವ ಸ್ವಭಾವದ್ದು. ಅತ್ಯಂತ ರುಚಿಕರವಾದ ಇದು ಮಲಾನುಲೋಮಕವೂ ಹೌದು. ಹೆಚ್ಚಿಗೆ ಸೇವಿಸಿದಲ್ಲಿ ಪಿತ್ತವನ್ನು ಹೆಚ್ಚಿಸುತ್ತದೆ.

 ಇದೇ ಕ್ರಮದಲ್ಲಿ ಹುಣಸೇಹುಳಿ, ವಾಟೆಹುಳಿ, ಚಾಂಗೇರಿಸೊಪ್ಪು (ಹುಳಿಸೊಪ್ಪು) ಮುಂತಾದವನ್ನು ಬಳಸಿ ಹುಳಿ/ತಿಳಿ ಸಾರು ಮಾಡಬಹುದು. ಚಾಂಗೇರಿ ಗುದಭ್ರಂಶ ನಾಶಕ, ಹುಣಿಸೆ – ಉದರಶೂಲಹರ, ವಾಟೆ ಕಫವಾತಹರವಾಗಿದೆ.

ಈ ಎಲ್ಲ ಹುಳಿಗಳನ್ನು ಬಳಸುವಾಗ ಜೊತೆಯಲ್ಲಿ ಕೊಂಚ ಶುಂಠೀ, ಬೋಳುಕಾಳು ಹಾಗೂ ಎಣ್ಣೆ ಅಥವಾ ತುಪ್ಪ ಸೇರಿಸಿ ಬಳಸುವುದು ಒಳ್ಳೆಯದು. ಜೊತೆಯಲ್ಲಿ ಬಿಸಿ ಆಹಾರ, ಬಿಸಿ ನೀರು ಇದ್ದರೆ ಒಳಿತು. ಇತಿಮಿತಿಯಲ್ಲಿ ಹುಳಿ ಸೇವನೆ ಅಗ್ನಿವರ್ಧಕವಾದ್ದರಿಂದ ಹಿತಕರ. ಅತಿಯಾದಲ್ಲಿ ರಕ್ತ – ಪಿತ್ತಕರ ಹಾಗೂ ಅನೇಕ ರೋಗಗಳಿಗೆ ಕಾರಣ ಹಾಗೂ ಧಾತುಶೈಥಿಲ್ಯಕರವಾಗಿದೆ.

ಸಾಮಾನ್ಯವಾಗಿ ನೆಲ್ಲಿ – ದಾಳಿಂಬೆಗಳೆರಡನ್ನು ಹೊರತುಪಡಿಸಿ ಇನ್ನಿತರ ಎಲ್ಲ ಹುಳಿ ಪದಾರ್ಥಗಳೂ ಹೆಚ್ಚಾಗಿ ಸೇವಿಸಿದಲ್ಲಿ ಕಫ, ಪಿತ್ತಗಳನ್ನು ಹೆಚ್ಚು ಮಾಡುವ ಸ್ವಭಾವವೆಂಬುದನ್ನು ನಾವು ಎಂದಿಗೂ ಮರೆಯಬಾರದು.

Share With Your Friends

Leave a Comment