ಬೇಸಿಗೆಯ ಬಿಸಿಲಿಗೆ, ಉಷ್ಣವಾಯುವಿನ ಹೊಡೆತ ಪ್ರತಿವರ್ಷ ನೂರಾರು ಜನರು ಬಲಿಯಾಗುತ್ತಿದ್ದಾರೆ. ಕಾರಣ ಈ ಋತುವಿನ ಸ್ವಭಾವವನ್ನು ಅರಿಯದೆ ಸೂಕ್ತ ಪರಿಹಾರವನ್ನು ಮಾಡದೇ ಇರುವುದೇ ಮುಖ್ಯ ಕಾರಣ. ತೀವ್ರತಾಪಕಾರಕವಾದ ಗ್ರೀಷ್ಮದ ಕುರಿತು ಮಹಾಕವಿ ಕಾಳಿದಾಸರು ಹೇಗೆ ವರ್ಣಿಸಿದ್ದಾರೆ ಗೊತ್ತೇ?
” ಪಟುತರದವದಾಹೋಚ್ಛುಷ್ಕ ಸಸ್ಯಪ್ರರೋಹಾಃ ಪರುಷಪವನ ವೇಗೋತ್ಷಿಪ್ತ ಸಂಶುಷ್ಕಪರ್ಣಾಃ ।ದಿನಕರ ಪರಿತಾಪಕ್ಷೀಣ ತೋಯಾಃ ಸಮಂತಾತ್ ವಿದಧತಿ ಭಯ ಮುಚ್ಷೈರ್ವೀಕ್ಷ್ಯ ಮಾಲಾವನಾಂತಾಃ ॥”
ಕಾಡ್ಗಿಚ್ಚಿನಿಂದ ಅರಣ್ಯದ ಹುಲ್ಲುಕಡ್ಡಿಗಳೆಲ್ಲ ಭಸ್ಮವಾಗಿದೆ. ತೀಕ್ಷ್ಣವಾದ ಬಿಸಿಗಾಳಿಯಿಂದ ಒಣಗಿದ ಎಲೆಗಳು ಉದುರುತ್ತಿವೆ. ಸೂರ್ಯನ ಪ್ರಚಂಡ ಪರಾಕ್ರಮದಿಂದ ಜಲಾಶಯಗಳು ಒಣಗುತ್ತಿವೆ. ಕಾಡಿನ ಯಾವೆಡೆಗೆ ನೋಡಿದರೂ ಭಯವಾವರಿಸುತ್ತಿದೆ.
” ರವೇರ್ಮಯೂಖೈರಭಿತಾಪಿತೋಭೃಶಂ ವಿದಹ್ಯಮಾನಃ ಪಥಿ ತಪ್ತಪಾಂಸುಭಿಃ ।ಅವಾಂಗ್ಮುಖೋ ಜಿಹ್ಮಗತಿಃ ಶ್ವಸನ್ಮುಹುಃ ಫಣೀ ಮಯೂರಸ್ಯ ತಲೇ ನಿಷೇದತಿ ॥”
ಸೂರ್ಯನ ಕಿರಣಗಳಿಂದ ಅತಿಬಿಸಿಯಾದ ಮೈಯುಳ್ಳ ಹಾವು ಬಿಸಿಯಾದ ಧೂಳಿನಿಂದ ಕೂಡಿದ ಭೂಮಿಯಲ್ಲಿ ತಾಪಪಡುತ್ತಾ ವಕ್ರವಕ್ರವಾಗಿ ದಾರಿಸವೆಸುತ್ತಾ ಪದೇ ಪದೇ ನಿಟ್ಟುಸಿರು ಬಿಡುತ್ತಾ (ಭುಸುಗುಡುತ್ತಾ) ಆಯಾಸದಿಂದ ಬಳಲಿ ತನ್ನ ಶತ್ರುವಾದ ನವಿಲಿನ ಕೆಳಗೆ ವಿಶ್ರಾಂತಿ ಪಡೆಯುತ್ತಿದೆ. (ಬಿಸಿಲಿನ ಬೇಗೆ ಬಳಲಿದ ಹಾವಿಗೆ – ತನ್ನನ್ನು ನಾಶಪಡಿಸಬಹುದಾದ ನವಿಲಿನ ನೆರಳಾದರೂ ಸರಿ – ಅಷ್ಟು ನಿತ್ರಾಣವಾಗಿದೆ ಹಾಗೂ ತಂಪನ್ನು ಬಯಸುತ್ತಿದೆ ಎಂದರ್ಥ. )
ಆಯುರ್ವೇದದ ಅಷ್ಟಾಂಗ ಸಂಗ್ರಹದಲ್ಲಿ ಬೇಸಿಗೆಯ ವರ್ಣನೆ ಹೀಗೆ ಮಾಡಿದ್ದಾರೆ
” ಗ್ರೀಷ್ಮೆ ತಸೀ ಪುಷ್ಪನಿಭಸ್ತೀಕ್ಷ್ಣಾಂಶುರ್ದಾವದೀಪಿತಾಃ । ದಿಶೋಜ್ವಲಂತಿ ಭೂಮಿಶ್ಚಮಾರುತೋ ನೈಋತಃ ಸುಖಃ । ಪವನಾತಪ ಸಂಸ್ವೇದೈಃ ಜಂತವೋ ಜ್ವರಿತಾ ಇವ । ತಾಪಾರ್ತತುಂಗ ಮಾತಂಗ ಮಹಿಷೈಃ ಕಲುಷೀಕೃತಾಃ ।। ದಿವಾಕರಕರಾಂಗಾರನಿಕರೈಃ ಕ್ಷಪಿತಾಂಭಸಃ । ಪ್ರವೃದ್ಧರೋಧಸೋ ನದ್ಯಃ ಛಾಯಾಹೀನಾ ಮಹೀರುಹಾಃ ॥ ವಿಶೀರ್ಣಜೀರ್ಣಪರ್ಣಾಶ್ಚಶುಷ್ಕವಲ್ಕಲತಾಂಕಿತಾಃ ।” (ಆ. ಸಂ.ಸೂತ್ರ)
- ಅಗಸೆ ಹೂವಿನಂತೆ ವಾತಾವರಣವೆಲ್ಲವೂ ತೀಕ್ಷ್ಣ ಕಿರಣಗಳಿಂದ ಜ್ವರಿತವಾಗಿದೆ.
- ಭೂಮಿಯ ಎಲ್ಲಾ ಭಾಗಗಳು ಉರಿಯುತ್ತಿದೆ.
- ಗಾಳಿ ನೈರುತ್ಯ ದಿಕ್ಕಿನಿಂದ ಬೀಸುತ್ತಾ ಕೊಂಚ ತಂಪನ್ನೀಯುತ್ತಿದೆ.
- ಬಿಸಿಗಾಳಿ, ಬಿಸಿಲು, ಬೆವರಿನಿಂದಾಗಿ ಜೀವಿಗಳೆಲ್ಲಾ ಜ್ವರ ಬಂದವರಂತೆ ಸುಡುತ್ತಿವೆ.
- ಬಿಸಿಲಿನಲ್ಲಿ ಬಳಲಿದ ಕುದುರೆ, ಆನೆ, ಎಮ್ಮೆಗಳಿಂದ ಕಲುಷಿತವಾದ ಜಲಾಶಯಗಳ ನೀರು ಸೂರ್ಯನ ಕಿರಣಗಳಿಂದ ಆವಿಯಾಗಿ ಕಡಿಮೆಯಾಗಿದೆ.
- ನದಿಗಳಲ್ಲಿ ಭೋರ್ಗರೆತವಿಲ್ಲ ! ವೃಕ್ಷಗಳಿಗೆ ನೆರಳೂ ಇಲ್ಲ.
- ಒಣಗಿದ, ಹರಿದ, ಎಲೆ, ಬಌ, ತೊಗಟೆಗಳಿಂದ ವೃಕ್ಷಗಳು ಕ್ಷೀಣವಾಗಿವೆ.
” ತೀಕ್ಷ್ಣಾಂಶುರತಿತೀಕ್ಷ್ಣಾಂಶುಃ ಗ್ರೀಷ್ಮೇ ಸಂಕ್ಷಿಪತೀವ ಯತ್ ॥೨೬॥
ಪ್ರತ್ಯಹಂ ಕ್ಷೀಯತೇ ಶ್ಲೇಷ್ಮಾ ತೇನ ವಾಯುಶ್ಚ ವರ್ಧತೇ।
ಆತೋ ಸ್ಮಿನ್ ಪಟುಕಟ್ವಮ್ಲ ವ್ಯಾಯಾಮಾರ್ಕಕರಾಂಸ್ತ್ಯಜೇತ್ ॥೨೭ ॥
ಇಂತಹ ಗ್ರೀಷ್ಮ ಋತುವಿನಲ್ಲಿ ಬಿಸಿಲಿನ ಕಿರಣಗಳಿಂದ ಪ್ರತಿನಿತ್ಯ ಜೀವಿಗಳು ಕ್ಷೀಣಿಸತೊಡಗುತ್ತಾರೆ. ಕಫ ಈಗ ಪ್ರತಿನಿತ್ಯ ಕಡಿಮೆಯಾಗುತ್ತಾ ಹೋಗಿ ವಾಯು ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ದೇಹಕ್ಷೀಣಗೊಳಿಸುವ ರಸಗಳಾದ ಉಪ್ಪು, ಖಾರ, ಹುಳಿಯಿರುವ ಆಹಾರವನ್ನು ಹೆಚ್ಚು ಸೇವಿಸಬಾರದು. ಬಿಸಿಲಿನಲ್ಲಿ ಓಡಾಡಕೂಡದು ಹಾಗೂ ವ್ಯಾಯಾಮವನ್ನು ಸಹ ಇಲ್ಲಿ ಅತಿ ಮಾಡಬಾರದು. ಸೂರ್ಯನ ಬಿಸಿಲಿನಲ್ಲಿ ಓಡಾಟ ಜಾಸ್ತಿಯಾದರೆ ಈ ಋತುವಿನಲ್ಲಿ ಜ್ವರ, ತಲೆಶೂಲೆ, ಮೈಕೈನೋವು, ಕೈಕಾಲು ಕಣ್ಣುಗಳಲ್ಲಿ ಉರಿ, ಪಿತ್ತ ಹೆಚ್ಚಾಗಿ ಕಾಮಾಲೆ ಮುಂತಾದವು ಕಂಡುಬರುತ್ತವೆ. ಸಹಜವಾಗಿಯೇ ತೀರಾ ಆಯಾಸ, ಸುಸ್ತು ಇರುವ ಈ ಕಾಲದಲ್ಲಿ ನಿರಂತರ ವ್ಯಾಯಾಮ ಮಾಡುವವರು ಅತಿ ಕಡಿಮೆ ಮಾಡಬೇಕಲ್ಲದೆ ವಯಸ್ಸಾದವರು, ಬಾಲಕರು, ಮಹಿಳೆಯರು ಹಾಗೂ ಮಹವ್ಯಾಧಿಗಳಿಂದ ಕ್ಷೀಣರಾದವರು ವ್ಯಾಯಾಮ ಮಾಡಲೇಬಾರದು.
ಯಾವ ರೀತಿಯ ಆಹಾರ ಸೇವಿಸಬೇಕು?
” ಭಜೇನ್ ಮಧುರಮೇವಾನ್ನಂ ಲಘುಸ್ನಿಗ್ಧಂ ಹಿಮಂ ದ್ರವಂ । ಕುಂದೇಂದು ಧವಲಂ ಶಾಲಿಮಶ್ನೀಯಾಜ್ಜಾಂಗಲೈಃ ಪಲೈಃ । ಮದ್ಯಂ ನ ಪೇಯಂ, ಪೇಯಂ ವಾಸ್ವಲ್ಪಂ ಸುಬಹುವಾರಿವಾ ॥ ಅನ್ಯಥಾ ಶೋಷ ಶೈಥಿಲ್ಯದಾಹ ರೋಗಾನ್ ಕರೋತಿ ತತ್ ।”
- ಸಿಹಿ ಪದಾರ್ಥದ ಬಳಕೆ ಹೆಚ್ಚಿರಲಿ
- ಪಚನಕ್ಕೆ ಹಗುರವಾಗಿರಲಿ
- ಕೊಂಚ ಜಿಡ್ಡಿನ ಸೇವನೆ ಹಿತಕರ
- ತಂಪಾದ ದ್ರವ ಪದಾರ್ಥಗಳ ಸೇವನೆ ಅತ್ಯುತ್ತಮ ಆದರೆ, ತೀರಾ ಫ್ರಿಜ್ ನಲ್ಲಿಟ್ಟು ತಂಪಾದದ್ದಲ್ಲ,
- ಅನ್ನ ಹೂವಿನಂತೆ ಮೃದುವಾಗಿಯೂ, ಬೆಳ್ಳಗಾಗಿಯೂ ಇರಲಿ,
- ಮಾಂಸರಸದೊಂದಿಗೆ ಮಾಂಸಾಹಾರಿಗಳು ಅನ್ನವನ್ನು ಸೇವಿಸಬಹುದು,
- ಆದರೆ, ಮದ್ಯ ಸೇವಿಸುವವರು ಈ ಋತುವಿನಲ್ಲಿ ಮಧ್ಯಪಾನ ಮಾಡಬಾರದು,
- ಕುಡಿಯಲೇ ಬೇಕಾದಲ್ಲಿ ಅತಿ ಕಡಿಮೆ ಮದ್ಯವನ್ನು ಹೆಚ್ಚು ನೀರು ಸೇವಿಸಿ ಕುಡಿಯಬಹುದು ಇಲ್ಲದಿದ್ದರೆ ಅತಿಮದ್ಯಪಾನವು ದೇಹಶೋಷಣೆ, ಧಾತುಶೈಥಿಲ್ಯ, ಉರಿ, ಮಧುಮೇಹ ರೋಗಗಳನ್ನುಂಟುಮಾಡುತ್ತದೆ.
ಬಿಸಿಲಿನ ಬವಣೆ ತಪ್ಪಿಸಲು ಉಪಾಯಗಳೇನು?
“ಸುಶೀತತೋಯ ಸಿಕ್ತಾಂಗೋ ಲಿಹ್ಯಾತ್ ಸಕ್ತೂನ್ ಸಶರ್ಕರಾನ್ ॥ಪಿಬೇದ್ರಸಂ ನಾತಿಘನಂ ರಸಾಲಂ ರಾಗ ಖಾಂಡವೌ ॥೩೦॥ಪಾನಕಂ ಪಂಚಸಾರಂ ವಾ ನವಮೃದ್ಭಾಜನೇಸ್ಥಿತಂ ।ಮೋಚಚೋಚದೆಕಲೈರ್ಯುಕ್ತಂ ಸಾಮ್ಲಂಮೃನ್ಮಯಶುಕ್ತಿಭಿಃ ।।ಪಾಟಲಾವಾಸಿತಂ ಚಾಂಭಃ ಸಕರ್ಪೂರಂ ಸುಶೀಲಮ್ ॥”
- ತಣ್ಣೀರಿನ ಸ್ನಾನ,
- ಸಕ್ಕರೆ ಹಾಕಿದ ಅರಳು ಹಿಟ್ಟಿನ ಉಂಡೆಯನ್ನು ತಿನ್ನಿ
- ಮೊಸರಿನಿಂದ ತಯಾರಿಸಿದ ಶ್ರೀಖಂಡ, ಜೇನುತುಪ್ಪ, ಸಕ್ಕರೆ ಹಾಕಿದ ಪಾನಕಗಳು, ಹುಳಿಪಾನಕ ಸೇವನೆಗೆ ಉತ್ತಮ.
- ದ್ರಾಕ್ಷಿ, ಖರ್ಜೂರ, ಜೇನು, ಕಿತ್ತಲೆ ಮುಂತಾದವುಗಳಿಂದ ಮಾಡಿದ ಪಂಚಸಾರ ಪಾನಕವನ್ನು ಹೊಸ ಮಡಿಕೆಯಲ್ಲಿ ಸಂಗ್ರಹಿಸಿ ಕುಡಿಯಬೇಕು.
- ಬಾಳೆಹಣ್ಣು, ತೆಂಗಿನ ಹಾಲು, ದಾಳಿಂಬೆ ರಸದಿಂದ ತಯಾರಿಸಿದ ವಿವಿಧ ದ್ರವ ಪದಾರ್ಥಗಳನ್ನು ಆಸ್ವಾದಿಸಬೇಕು.
- ಪಾದರಿ ಹೂವನ್ನ ಪಚ್ಚ ಕರ್ಪೂರದೊಂದಿಗೆ ನೀರಿನಲ್ಲಿ ನೆನೆಸಿ, ತಣ್ಣಗಾದ ಪರಿಮಳಯುಕ್ತವಾದ ನೀರನ್ನು ಸೇವಿಸಬೇಕು.
- ಹೀಗೆಯೇ ಲಾವಂಚದ ನೀರು, ಕೇಸರಿ – ಪಚ್ಚಕರ್ಪೂರದ ನೀರು ಸೇವನೆಗೆ ಅತ್ಯುತ್ತಮ.
- ಎಲ್ಲ ರೀತಿಯ ಹಣ್ಣಿನ ರಸಗಳು, ಹುಳಿಯಿಲ್ಲದ ಹಣ್ಣಿನ – ರಸದಿಂದ ತಯಾರಿಸಿದ ಫ್ರುಟ್ ಮಿಲ್ಕ್ ಶೇಕ್ ಗಳನ್ನು ಸೇವಿಸಬಹುದು.
- ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ತಂಪಾದ ಐಸ್ ಕ್ರೀಮ್ ಸೇವನೆಗೂ ಇದು ಸಕಾಲ. ಎಳೆನೀರು, ಕಬ್ಬಿನ ಹಾಲುಗಳನ್ನು ಸಾಕಾಗುವಷ್ಟು ಸೇವಿಸಬಹುದು. ಕಲ್ಲಂಗಡಿ, ಕರಬೂಜಗಳು ಅಮೃತ ಸಮಾನವಾಗಿದೆ.
- ಮಧ್ಯಾಹ್ನದ ಹೊತ್ತು ಎತ್ತರದ ವೃಕ್ಷಗಳಿಂದ ಆವೃತ ತಂಪಾದ ಪ್ರದೇಶಗಳಲ್ಲಿ, ದ್ರಾಕ್ಷಿಯ ಹಂದರದ ಕೆಳಗೆ ಕಾಲ ಕಳೆಯಬೇಕು.
- ಸುಗಂಧಿತ ತಂಗಾಳಿ ಹರಡುವ ವಸ್ತ್ರಗಳಿಂದ ಆವೃತ ಬಿದಿರಿನ ಮನೆ ಹಿತಕರ.
- ತಂಪಾದ ಶೀತಧಾರೆಗಳುಳ್ಳ ಧಾರಾಗೃಹ ಇರಲು ಅನುಕೂಲಕರ.
- ಕರ್ಪೂರ, ಗೋಪಿಚಂದನಗಳ ಲೇಪ ಹಿತಕರ.
- ಹಗಲು ನಿದ್ರೆ ಮಾಡಬಹುದು.
- ದಂಪತಿಗಳು ೧೫ ದಿನಗಳಿಗೊಮ್ಮೆ ಸೇರಬಹುದು. ಒಟ್ಟಿನಲ್ಲಿ ವಿಶ್ರಾಂತಿ, ಬಿಸಿಲಿನ ತಾಪದಿಂದ ರಕ್ಷಣೆಯೇ ಪ್ರಧಾನ ಸೂತ್ರವಾಗಿದೆ.