ನಾವು ಆರೋಗ್ಯವಂತರೇ? (ಆರೋಗ್ಯ ಪರೀಕ್ಷೆಯ ೧೨ ಘಟ್ಟಗಳು)
ಅನೇಕ ಸಲ ‘ನಾನು ಆರೋಗ್ಯವಂತನೇ?’ ಎಂಬ ಜಿಜ್ಞಾಸೆ ಮೂಡುತ್ತದೆ. ಅನೇಕ ರೀತಿಯ ರಕ್ತ, ಮೂತ್ರ ಪರೀಕ್ಷೆ, ಸ್ಕ್ಯಾನಿಂಗ್ ಮಾಡಿ ನೋಡಿಯೂ ಸಹ ಕೆಲವೊಮ್ಮೆ ನಾವು ಆರೋಗ್ಯವಂತರೆನ್ನಲಾಗದು. ವಿಶೇಷವಾಗಿ ಯಾವುದೇ ಒಂದು ಖಾಯಿಲೆಯಿಂದ ಗುಣವಾದ ನಂತರ ಗುಣವಾಗಿರುವುದರ ಬಗ್ಗೆ ಖಾತ್ರಿ ಏನು? ಎಂಬ ಸಂಶಯ ತಲೆ ತಿನ್ನುತ್ತದೆ. ಇಂತಹ ಸಂದರ್ಭದಲ್ಲಿ ಯಾವುದೇ ಖರ್ಚಿಲ್ಲದೇ,ನಮ್ಮ ಆರೊಗ್ಯದ ಬಗ್ಗೆ ನಿಶ್ಚಯವಾದ ತಿಳುವಳಿಕೆಗೆ ಮಾರ್ಗವೇನಾದರೂ ಇದೆಯೇ ಎಂದರೆ, ಹೌದು, ಚರಕ ಸಂಹಿತೆಯ ವಿಮಾನ ಸ್ಥಾನದ ೮ನೇ ಅಧ್ಯಾಯದಲ್ಲಿ ಅರೋಗ್ಯ ಪರೀಕ್ಷೆಯ ಸುಲಭ ಕೈಪಿಡಿ ದೊರಕುತ್ತದೆ. ಈ ೧೨ ಲಕ್ಷಣಗಲು ಹೀಗಿದೆ :
೧. ರುಗುಪಶಮನಂ:
ಯಾವುದೇ ರೀತಿಯ ನೋವು ಶರೀರದಲ್ಲಿರಬಾರದು.ಈಗಾಗಲೇ ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದರೆ, ಔಷಧಿಗಳಾವುವೂ ಇಲ್ಲದೇ ನೋವು ಕಾಣಿಸಿಕೊಳ್ಳಬಾರದು. ಆಗ ಮಾತ್ರ ಇದು ಆರೋಗ್ಯದ ಲಕ್ಷಣವೆನ್ನಬಹುದು.
೨. ಸ್ವರವರ್ಣ ಯೋಗ:
ನಮ್ಮ ಧ್ವನಿ ಹಾಗೂ ಶರೀರದ ವರ್ಣವನ್ನು ಗಮನಿಸಿದಾಗ ಆರೋಗ್ಯ ಅನಾರೋಗ್ಯದ ವಿನಿಶ್ಚಯ ಉಂಟಾಗುತ್ತದೆ. ಸಹಜವಾದ ಸ್ವರ, ಸಾಮಾನ್ಯವಾಗಿರುವ ತನ್ನ ಶರೀರವರ್ಣ ಇದ್ದರೆ ಅದು ಆರೋಗ್ಯದ ಲಕ್ಷಣ. ರಕ್ತಹೀನತೆ, ಕ್ಷಯ, ಸರ್ಪ ಸುತ್ತು ,ಮುಂತಾದ ರೋಗಗಳಲ್ಲಿ ಶರೀರದ ಸಹಜ ವರ್ಣ ಬದಲಾಗುತ್ತದೆ.
೩. ಶರೀರೋಪಚಯ:
ಶರೀರದ ಬೆಳವಣಿಗೆ ಆಯಾ ವಯಸ್ಸಿಗೆ ತಕ್ಕಂತೆ ಸರಿಯಾಗಿರಬೇಕು. ಶರೀರದ ಭಾರಹಾನಿ, ಕ್ಯಾನ್ಸರ್, ಕ್ಷಯ, ಜ್ವರ, ಮಾನಸಿಕ ರೋಗ ಮುಂತಾದ ರೋಗಗಳು ದ್ಯೋತಕ.
೪. ಬಲವೃದ್ಧಿ :
ಶರೀರದ ಭಾರವಹನ ಸಾಮರ್ಥ್ಯ ಅಥವಾ ರೋಗ ನಿರೋಧಕ ಗುಣ ಹೆಚ್ಚಾಗುತ್ತಿರಬೇಕು. ಸಾಂಕ್ರಾಮಿಕ ರೋಗ ಪೀಡಿತ ಪ್ರದೇಶಗಳಲ್ಲಿ ಓಡಾಟದಿಂದಲೂ ರೋಗ ಹರಡುವಿಕೆ ಹಾಗೂ ಹೆಚ್ಚು ಕಾಲ ಶ್ರಮವಹಿಸಿ ಕೆಲಸ ಮಾಡಿದರೂ ಆಯಾಸವಾಗದಿರುವಿಕೆಯೇ ಬಲವ್ರುದ್ಧಿಯ ಪ್ರಮಾಣವಾಗಿದೆ.
೫. ಅಭ್ಯವಹಾರ್ಯಾಭಿಲಾಷ:
ತಿನ್ನಬೇಕೆಂಬ ಅಭಿಲಾಷೆ, ಕ್ಷಯ,ಜ್ವರ ,ಸರ್ಪ ಸುತ್ತು,ಆಮವಾತ, ಮೂತ್ರಾಶ್ಮರೀ, ಉಬ್ಬಸ ಮುಂತಾದ ರೋಗಗಳಲ್ಲಿ ಇರದು. ಆದ್ದರಿಂದ ಆಹಾರದಲ್ಲಿ ಆಸಕ್ತಿ ಸರಿಯಾಗಿರುವುದೇ ಆರೋಗ್ಯದ ಮುಖ್ಯ ಲಕ್ಷಣ.
೬. ರುಚಿರಾಹಾರ ಕಾಲೇ:
ಆಹಾರ ಸೇವಿಸುವಾಗ ಆಹಾರದ ರುಚಿ ತಿಳಿಯುವಿಕೆ. ಕೆಲವೊಮ್ಮೆ ಅಜೀರ್ಣ, ಜ್ವರ ಮುಂತಾದ ಖಾಯಿಲೆಗಳಲ್ಲಿ ‘ರುಚಿ’ ತಿಳಿಸುವ ಜಿಹ್ವಾ ಗ್ರಂಥಿಗಳಲ್ಲಿ ಉಂಟಾದ ತಡೆಯ ಕಾರಣ ರುಚಿಯೇ ತಿಳಿಯುವುದಿಲ್ಲ. ಹಾಗಿದ್ದಲ್ಲಿ, ಈ ತಡೆ ನಿವಾರಣೆಗೆ ಚಿಕಿತ್ಸೆ ಬೇಕಾಗುತ್ತದೆ.
೭. ಅಭ್ಯವಹ್ರುತಸ್ಯಚಾಹಾರಸ್ಯಕಾಲೇ ಸಮ್ಯಗ್ಜರಣಂ:
ತಿಂದಂತಹ ಆಹಾರ ಸಕಾಲದಲ್ಲಿ ಸರಿಯಾಗಿ ಜೀರ್ಣವಾಗಬೇಕು. ಇದು ನಮ್ಮ ಜೀರ್ಣಾಂಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬುದರ ಸೂಚನೆ.”ಸರ್ವೇ ರೋಗಾ: ಮಂದೇಗ್ನೌ” ಎಂಬ ಸೂತ್ರದಂತೆ ಅನೇಕ ರೋಗಗಳು ಜೀರ್ಣಶಕ್ತಿ ಕಡಿಮೆಯಾಗಿಯೇ ಉತ್ಪತ್ತಿಯಾಗುತ್ತವೆ.
೮. ನಿದ್ರಾ ಲಾಭೋ ಯಥಾಕಾಲಂ:
ಸಕಾಲದಲ್ಲಿ ಸರಿಯಾಗಿ ಬರುವ ನಿದ್ರೆ ಮನಸ್ಸು- ಇಂದ್ರಿಯಗಳ ಆರೋಗ್ಯದ ಸೂಚಕ.“ನಿದ್ರಾ ಸಂತೋಷ ತ್ರುಪ್ತಸ್ಯ ಸ್ವಕಾಲಂ ನಾತಿವರ್ತತೇ” ಕರ್ತವ್ಯಗಳ ನಿರ್ವಹಣೆ ತೃಪ್ತಿದಾಯಕವಾದಲ್ಲಿ ಸಾಮಾನ್ಯವಾಗಿ ಸಕಾಲದಲ್ಲಿ ನಿದ್ರೆ ಬಂದೇ ಬರುತ್ತದೆ. ಆಹಾರ, ನಿದ್ರೆ,ಬ್ರಹ್ಮಚರ್ಯಗಳು ಬದುಕಿನ ತ್ರಯೋಪಸ್ತಂಭಗಳು ಎಂಬುದನ್ನು ತಿಳಿದಾಗ ಸಕಾಲದಲ್ಲಿ ಸರಿಯಾದ ನಿದ್ರೆಯ ಮಹತ್ವ ತಿಳಿಯುತ್ತದೆ. ಶರೀರದಲ್ಲಿ ವಾತ- ಪಿತ್ತ-ಜನ್ಯ ರೋಗಗಳು ಹೆಚ್ಚಿದಾಗ ನಿದ್ರೆಬಾರದು. ಆದರೆ, ಆರೋಗ್ಯವಂತನಿಗೆ ಕಣ್ಣು ಮುಚ್ಚಿದರೆ ಸಾಕು ನಿದ್ರೆ ಆರಂಭವಾಗುತ್ತದೆ. ಉದ್ವೇಗಭರಿತ ಆಧುನಿಕ ಜೀವನದಲ್ಲಿ ನಿದ್ರೆ ಬಹಳ ‘ತುಟ್ಟಿ’ಯಾಗುತ್ತಿದೆ ಎಂಬುದು ಅನುಭವಿಗಳ ಮಾತು. ಸಕಾಲದಲ್ಲಿ ನಿದ್ರೆ ಎಂಬ ಮಾತಿನಿಂದ ರಾತ್ರಿ ಜಾಗರಣೆ ಹಾಗೂ ಹಗಲು ನಿದ್ರೆ ಒಳ್ಳೆಯದಲ್ಲ ಎಂಬ ಮಾತು ಸಹ ವಿದಿತವಾಗುತ್ತದೆ.
೯. ವೈಕಾರಿಕಾಣಾಂ ಚ ಸ್ವಪ್ನಾನಾಮದರ್ಶನಂ:
ರಾತ್ರಿ ಕನಸು ಬೀಳುವುದು ತಪ್ಪಲ್ಲ. ಆದರೆ, ವಿಕ್ರುತವಾದ ಸ್ವಪ್ನಗಳು ಅನಾರೋಗ್ಯವನ್ನು ಸೂಚಿಸುತ್ತದೆ. ಕೆಲವು ಮಹಾವ್ಯಾಧಿಗಳಲ್ಲಿ ಮರಣ ಸೂಚಕವಾದ ಸ್ವಪ್ನಗಳ ವಿಚಾರವನ್ನು ಶಾಸ್ತ್ರದಲ್ಲಿ ಹೇಳಲಾಗಿದೆ. ಒಟ್ಟಿನಲ್ಲಿ ಕನಸಿಲ್ಲದ ಗಂಭೀರ ನಿದ್ರೆ ಉತ್ತಮ ಆರೋಗ್ಯ ಸೂಚಕ ಎಂಬುದರಲ್ಲಿ ಎರಡು ಮಾತಿಲ್ಲ.
೧೦. ಸುಖೇನ ಚ ಪ್ರತಿಬೋಧನಂ:
ಎದ್ದಾಗ “ಫ್ರೆಶ್” ಆಗಿರಬೇಕು. ಪ್ರತಿದಿನ ಹೊಸ ಹೊಸ ಕೆಲಸಗಳನ್ನೆತ್ತಿಕೊಂಡು ಪೂರೈಸುವ ಹುಮ್ಮಸ್ಸಿರಬೇಕು. ಆಗ ರಾತ್ರಿ ನಿದ್ರೆ ಚೆನ್ನಾಗಿ ಬಿದ್ದಿದೆ ಎನ್ನಬಹುದು. “ಏಳುವಾಗಲೇ ಆಲಸ್ಯ, ಮೈ ಕೈ ನೋವು,ಏಳುವುದೇ ಬೇಡ” ಎನ್ನುವ ಅನಿಸಿಕೆ ಅನಾರೋಗ್ಯದ ಲಕ್ಷಣವೇ ಸರಿ.
೧೧. ವಾತಮೂತ್ರಪುರೀಷರೇತಸಾಂ ಮುಕ್ತಿ:
ಅಪಾನವಾಯು, ಮೂತ್ರ, ಮಲ, ವೀರ್ಯ ಇವು ಸಕಾಲದಲ್ಲಿ ಸರಿಯಾಗಿ ಆಗುತ್ತಿರುವಿಕೆ ಆರೋಗ್ಯದ ಒಂದು ಮುಖ್ಯ ಲಕ್ಷಣ. ಕೆಲವರು ಕೆಳಗಿನ ಗ್ಯಾಸ್ ಪಾಸಾಗುವುದು ರೋಗದ ಲಕ್ಷಣ ಎಂದು ಚಿಕಿತ್ಸೆಗಾಗಿ ಓಡಾಡುವುದುಂಟು. ಕನಸಿನಲ್ಲಿ ವೀರ್ಯ ಸ್ಖಲನವಾದಾಗ ಹೆದರುವವರುಂಟು. ಆದರೆ, ಸಕಾಲದಲ್ಲಿ ಆಗುವ ಈ ಕೆಳಮುಖ ಪ್ರವ್ರುತ್ತಿಗಳು ಆರೋಗ್ಯ ಸೂಚಕಗಳೇ ಹೌದೆಂದು ಎಲ್ಲರೂ ನೆನಪಿನಲ್ಲಿಡಬೇಕಾದ ವಿಷಯ.
೧೨. ಸರ್ವಾಕಾರೈರ್ಮನೋ ಬುದ್ಧೀಂದ್ರಿಯಾಣಾಂ ಚಾವ್ಯಾಪತ್ತಿ:
ಎಲ್ಲ ರೀತಿಯಿಂದಲೂ ಶರೀರಕ್ಕೆ, ಮನಸ್ಸಿಗೆ, ಬುದ್ಧಿಗೆ ಹಾಗೂ ಇಂದ್ರಿಯಗಳಿಗೂ ಯಾವುದೇ ಬಾಧೆಯಿರದೆ ಅವು ಕ್ರಿಯಾಶೀಲವಾಗಿರಬೇಕು. ಮನಸ್ಸಿನ ವಿಚಿಕಿತ್ಸತೆ, ಬುದ್ಧಿಯ ನಿಶ್ಚಯತ್ವ, ಇಂದ್ರಿಯಗಳ ಪಟುತ್ವ ಇದೇ ಮನುಷ್ಯನ ಕಾರ್ಯಸಾಧಕಗಳಾಗಿವೆ.
ಹೀಗೆ ಈ ೧೨ ಪರೀಕ್ಷೆಗಳ ಪಾಸಾದ ರೋಗ ವಿಮುಕ್ತರನ್ನೂ ಆರೋಗ್ಯವಂತರೆನ್ನಬಹುದು. ಹಾಗೆಯೇ ರೋಗವಿಲ್ಲದವರನ್ನೂ ಇವೆಲ್ಲವೂ ಸರಿಯಾಗಿದ್ದರೆ ಸ್ವಸ್ಥರೆನ್ನಬಹುದು.ನಿಜಕ್ಕೂ ಅತಿ ಸುಲಭವಾದ ಆರೋಗ್ಯ ಪರೀಕ್ಷೆಯ ವಿಧಾನವಲ್ಲವೇ ಇದು?!