fbpx

ಸದ್ವೃತ್ತದಿಂದ ಇಹಪರಗಳಲ್ಲೂ ಶ್ರೇಯಸ್ಸು

happy

ಸದ್ವೃತ್ತದಿಂದ ಇಹಪರಗಳಲ್ಲೂ ಶ್ರೇಯಸ್ಸು

“ಆಯುಸ್ಸು” ಶರೀರ, ಮನಸ್ಸು, ಇಂದ್ರಿಯಗಳು ಹಾಗೂ ಆತ್ಮ ಈ ನಾಲ್ಕರ “ಸಂಯೋಗ”. ಈ ನಾಲ್ಕು ಪರಸ್ಪರ ಪೂರಕವಾಗಿ ವರ್ತಿಸುತ್ತಿರುವಾಗ  “ಸ್ವಸ್ಥ ಬದುಕು!” ಇವುಗಳಲ್ಲಿ ಸಾಮರಸ್ಯ ಹಾಳಾದಾಗ “ರೋಗ!”. ಇವುಗಳಲ್ಲಿ  “ವಿಯೋಗ”ವಾದಾಗ “ಮರಣ”. ಆದರೆ ಈ ಮರಣ ಶರೀರಕ್ಕೆ ಮಾತ್ರ ಉಳಿದ ಮೂರಕ್ಕಲ್ಲ. ದೇಹದಿಂದ ದೇಹಕ್ಕೆ ‘ಆತ್ಮ’ ಮನಸ್ಸಿನೊಂದಿಗೆ ಚಲಿಸುತ್ತಾನೆ. ಈ ‘ಮರಣ’ ಅಂತಿಮವಾಗಿ “ಆತ್ಮ” ಶರೀರವನ್ನು ಬಿಡುವುದರೊಂದಿಗೆ ಘಟಿಸುತ್ತದಾದರೂ ಈ ಕಾರ್ಯ ಅನೇಕ ವರ್ಷಗಳಿಂದ ಕ್ರಮವಾಗಿ ಆಗುತ್ತದೆ. ಸಾಮಾನ್ಯವಾಗಿ ೬೦ ಕಳೆದ ಮೇಲೆ ನಾಶವಾಗುವ ಜೀವಕೋಶಗಳ ಸಂಖ್ಯೆ ಹೆಚ್ಚು. ಆದರೆ, ಕೆಲವೊಮ್ಮೆ ಅಕಾಲಿಕ “ಮರಣ”ವೂ ಆಗುವುದುಂಟು! ಏಕೆ ಹೀಗೆ? ವಾಗ್ಭಟರು ಹೇಳುವಂತೆ –
“ಮರಣಂ ಪ್ರಾಣಿನಾಂ ದೃಷ್ಟಂ ಆಯುಃಪುಣ್ಯೋಭಯ ಕ್ಷಯಾತ್ ತಯೋರಪ್ಯಕ್ಷಯಾತ್ ದೃಷ್ಟಂ ವಿಷಮಾಪರಿಹಾರಿಣಾಮ್ ।” (ಅ. ಪ. ಶಾರೀರ ೫-೧೩೨)
 
ಸಾಮಾನ್ಯವಾಗಿ “ಸಾವು” ಆಯುಸ್ಸು ಹಾಗೂ ಪುಣ್ಯ ಎರಡೂ ಕ್ಷಯವಾದಾಗ ಬರುತ್ತದೆ. ಆದರೆ “ವಿಷಮ” ಸ್ಥಾನಗಳನ್ನು ಪರಿಹಾರ ಮಾಡಿಕೊಳ್ಳದಿದ್ದಾಗ ಅಕಾಲಿಕವಾಗಿಯೂ ಬರಬಹುದು. “ವಿಷಮ” ವಿಷಯಗಳೆಂದರೆ ಶಾಸ್ತ್ರದಲ್ಲಿ ಹೇಳಿದ ಸದ್ವೃತ್ತದ ವಿಚಾರಗಳನ್ನು ಆಚರಿಸದಿರುವುದು. ಸಾಹಸ, ರಾತ್ರಿ ಪ್ರಯಾಣ, ವಿಮಾನಯಾನ, ತಿಳಿಯದ ವೃಕ್ಷ ಏರುವುದು, ಎಚ್ಚರಿಕೆ ವಹಿಸದೆ ಕತ್ತಲಲ್ಲಿ ಗಮನ ಇತ್ಯಾದಿ. ಆದರೆ, ಇಲ್ಲೂ ಸಹ ಆಯುಸ್ಸು ಇದ್ದು ಪುಣ್ಯ ಕ್ಷಯವಾಗಿದ್ದರೆ ಮಾತ್ರ “ಮರಣ”. ಪುಣ್ಯದ ಗಂಟಿದ್ದವರು ಎಂತಹ “ಅವಘಡ” ದಲ್ಲೂ ಬದುಕುಳಿಯಬಲ್ಲರು ಎಂಬುದನ್ನು ಮರೆಯಬಾರದು. ಕೆಲವೊಮ್ಮೆ ಕೆಲವೊಂದು ಭೂಪ್ರದೇಶದಲ್ಲಿರುವ ಇಡೀ ಜನಾಂಗದ ಪುಣ್ಯಕ್ಷ್ಯಯವಾಗಲೂ ಭೂಕಂಪ, ಅತಿವೃಷ್ಟಿ, ಸುನಾಮಿ ಇತ್ಯಾದಿ ಕಾರಣಗಳಿಂದ ಇಡೀ ಸಮೂಹವೇ ನಾಶವಾಗಬಹುದಾಗಿದೆ.
 
ಕೆಲವೊಮ್ಮೆ ಆಯುಸ್ಸು ಇನ್ನೂ ಇರುವ ಕಾರಣ ಪುಣ್ಯಕ್ಷಯವಾದರೂ ದುರಾತ್ಮರು ಹಾಸಿಗೆಯಾಳಾಗಿ ಬದುಕುಳಿಯುತ್ತಾರೆ. ಹಾಗೆಯೇ ಆಯುಸ್ಸು ಮುಗಿದಿದ್ದರೂ “ಪುಣ್ಯ” ಉಳಿದಿರುವುದರಿಂದ ಅನೇಕರು ಹೆಚ್ಚು ಕಾಲ ಬದುಕು ಸವೆಸುತ್ತಾರೆ.
 
ಒಟ್ಟಿನಲ್ಲಿ ಆಯುರ್ವೇದ ಹೇಳಿದ “ಸ್ವಸ್ಥವೃತ್ತ”ದ ಆಚರಣೆಯಿಂದ “ಆಯುಸ್ಸಿನ ರಕ್ಷಣೆ” ಹಾಗೂ “ಸದ್ವೃತ್ತ” ಸೂತ್ರಗಳನ್ನು ಜೀವನದಲ್ಲಿ ಅಳವಡಿಸುವುದರಿಂದ  “ಪುಣ್ಯ” ಸಂಪಾದನೆ ಇವು “ಸ್ವಸ್ಥ”ವಾದ “ದೀರ್ಘ” ಬದುಕನ್ನು ಕೊಡಬಲ್ಲವು ಎಂಬುದು ನಿಃಸಂಶಯವೇ ಸರಿ!
 
ಸದ್ವೃತ್ತದ ಸೂತ್ರಗಳನ್ನು ವರ್ಣಿಸಿ ಸಾರಾಂಶದಲ್ಲಿ “ಚರಕರು” ಕೆಳಗಿನ ಕಿವಿ ಮಾತುಗಳನ್ನು ಹೇಳಿದ್ದಾರೆ. “ಬ್ರಹ್ಮಚರ್ಯ ಜ್ಞಾನ ದಾನ ಮೈತ್ರೀ ಕಾರುಣ್ಯ ಹರ್ಷೋಪೇಕ್ಷಾ ಪ್ರಶಮಪರಃ ಸ್ಯಾದಿತಿ ॥೨೯॥” (ಚ.ಸೂ ೮)
 

೧. ಬ್ರಹ್ಮಚರ್ಯ:

ಈ ಶಬ್ದಕ್ಕೆ ಅನೇಕ ಅರ್ಥಗಳಿವೆ. “ಬ್ರಹ್ಮಣೇ ಮೋಕ್ಷಾಯಾ ಚರ್ಯಂ ಬ್ರಹ್ಮಚರ್ಯಂ ” ಉಪಸ್ಥನಿಗ್ರಹಾದಿ ಎಂಬುದು ಚಕ್ರಪಾಣಿಯವರ ಮತ. ಮುಕ್ತಿಗಾಗಿ ಬ್ರಹ್ಮನಲ್ಲಿ ಮನಸ್ಸಿಟ್ಟು ಮೈಥುನಾದಿ ಕರ್ಮಗಳ ನಿಗ್ರಹ ಎಂಬರ್ಥದಲ್ಲಿ. “ಬ್ರಹ್ಮಚರ್ಯಂ ಇಂದ್ರಿಯ ಸಂಯಮೋ ವೇದಾಧ್ಯಯನಂ ವಾ ” ಎಂಬುದು ಡಲ್ಹಣರ ಅಭಿಪ್ರಾಯ.
ಇಲ್ಲಿ ಮನುಷ್ಯ ತನ್ನ ಸಂಪೂರ್ಣ ಶಕ್ತಿಯನ್ನು ಜ್ಞಾನಪ್ರಾಪ್ತಿಗಾಗಿ ತೊಡಗಿಸುತ್ತಾ ಸಹಜವಾಗಿ ಇಂದ್ರಿಯಾಸಕ್ತಿಯಿಂದ ಹೊರಬರುವ ರಚನಾತ್ಮಕ ಸಂದೇಶವಿಲ್ಲಿದೆ.
ವೇದಾಧ್ಯಯನ, ಗಾಯತ್ರೀ- ಸಂಧ್ಯೋಪಾಸನೆ, ಅಗ್ನಿಹೋತ್ರ, ಅತಿಥಿ ಪೂಜನ ಇತ್ಯಾದಿ ತಪಸ್ಸುಗಳ ಮೂಲಕ ಪಾಪಕರ್ಮಕ್ಷಯ ಹಾಗೂ ಪುಣ್ಯ ಸಂಪಾದನೆಗೆ ಇದು ದಾರಿ! “ಗೃಹಸ್ಥ”ನಿಗೆ ಸಂಯಮಪೂರ್ಣ ಜೀವನವೇ ಬ್ರಹ್ಮಚರ್ಯವಾಗುತ್ತದೆ.

೨. ಜ್ಞಾನ :

ವಿವಿಧ ಸದ್ಗ್ರಂಥಿಗಳ ಅಧ್ಯಯನದ ಮೂಲಕ ಸತ್ಯದ ಅರಿವನ್ನು ಪಡೆಯುವುದೇ ಇಲ್ಲಿ ಉದ್ದೇಶ. “ಮೋಕ್ಷೇ ಜ್ಞಾನಂ ಅನ್ಯತ್ರ ವಿಜ್ಞಾನಂ ಶಿಲ್ಪಶಾಸ್ತ್ರಯೋಃ” ಎಂಬ ಅಮರಕೋಶದ ವ್ಯಾಖ್ಯಾನದ ಮೂಲಕ ಆತ್ಮನ ಸದ್ಗತಿಗೆ ಸಹಾಯಕವಾಗಬಲ್ಲ ತಿಳುವಳಿಕೆಯನ್ನು “ಜ್ಞಾನ” ಎಂದು ಕರೆದಿದ್ದಾರೆ. ಮಿಕ್ಕೆಲ್ಲ ತಿಳುವಳಿಕೆಯನ್ನು “ವಿಜ್ಞಾನ” ಎನ್ನಲಾಗಿದೆ.ವಸ್ತುತಃ ಪರಮಾತ್ಮನ ಅಂಶವಾದ ನಮಗೆಲ್ಲವೂ ತಿಳಿದಿರುತ್ತದೆ. ಆದರೆ, ಮಾಯೆಯ ಆವರಣ ಅದನ್ನು ಮರೆಮಾಡಿರುತ್ತದೆ. ಬಾಹ್ಯ ವ್ಯಕ್ತಿ, ಗ್ರಂಥ, ವಿಷಯಗಳ ಮೂಲಕ ಸಂಯೋಗವಾದಾಗ ತಾನಾಗಿಯೇ ಈ “ಜ್ಞಾನ” ಒಳಗಿಂದಲೇ ತೆರೆದುಕೊಳ್ಳುತ್ತದೆ. ಮಲಿನವಾದ ಕನ್ನಡಿಯಲ್ಲಿ “ವಸ್ತು” ಸರಿಯಾಗಿ ಕಾಣದಿರುವಂತೆ ಮಾಯೆಯ ಆವರಣ ನಮ್ಮನ್ನು ಅಜ್ಞಾನಿಯಾಗಿಸುತ್ತದೆ. ತಿಳಿಯಾದ ನೀರಿನಲ್ಲಿ ಎಲ್ಲವೂ ಕಾಣುತ್ತದೆ. ಹಾಗೆಯೇ “ಇಚ್ಛಾ” “ದ್ವೇಷ” “ಮೋಹ”ಗಳಿಂದ ಕೂಡಿದ “ಮನಸ್ಸು” ನಿಚ್ಛಳ ತತ್ವವನ್ನು ಕಾಣಲಾರದು. 
 
“ಆತ್ಮಾ “ಜ್ಞಃ” ಕರಣೈರ್ಯೋಗಾತ್ ಜ್ಞಾನಂ ತ್ವಸ್ಯ ಪ್ರವರ್ತತೇ।
ಕರಣಾನಾಮವೈಮಲ್ಯಾದಯೋಗಾದ್ವಾ ನ ವರ್ತತೇ ॥೫೪॥
ಪಶ್ಯತೋ ಪಿ ಯಥಾದರ್ಶೇ ಸಂಕ್ಲಿಪ್ಟೇ ನಾಸ್ತಿ ದರ್ಶನಂ ।
ತತ್ವಂ ಜಲೇ ವಾ ಕಲುಷೇ ಚೇತಸ್ಯು ಪಹತೇ ತಥಾ॥೫೫॥” (ಚ. ಶಾರೀರ- ೧)

೩. ದಾನ:

   “ಯಾತಿ ಪಾಪೋ ಲ್ಪಫ಼ಲತಾಂ ದಾನ – ಹೋಮಜಪಾದಿಭಿಃ ।” ( ಆ. ಹೃ. ಶಾ. ೬-೬೪) 
“ಪಾಪ” ಕ್ಷಯಕ್ಕೆ ಮತ್ತು ಪಾಪಜನ್ಯವಾದಂತಹ ತೊಂದರೆಗಳಿಗೆ ಇರುವ ಅತ್ಯುತ್ತಮವಾದ ಉಪಾಯಗಳಲ್ಲಿ  “ದಾನ” ಮೊದಲನೆಯದು. ಅನ್ನದಾನ, ದ್ರವ್ಯದಾನ, ವಿದ್ಯಾದಾನ ಮುಂತಾದ ವಿಧಾನಗಳಿಂದ ಮನುಷ್ಯನ ಪಾಪಕ್ಷಯವಾಗಿ ಪುಣ್ಯ ಸಂಚಯವಾಗುತ್ತದೆ. ಆದರೆ, ಈ ದಾನ “ಹೆಸರಿ”ಗಾಗಿ, ಪ್ರಚಾರಬಯಸಿ ಮಾಡಿದರೆ ಮಾಡಿದ ದಾನದ ಫಲವನ್ನು ಆಗಲೇ ಪಡೆದಂತಾಗುತ್ತದೆ. ‘ಸಾತ್ವಿಕದಾನ’ ಅತ್ಯಂತ ಶ್ರೇಷ್ಠವಾದದ್ದು.
   “ದಾತವ್ಯಮಿತಿ ಯದ್ದಾನಂ ದೀಯತೇ ನುಪಾಕಾರಿಣೇ।
    ದೇಶೇ ಕಾಲೇ ಚ ಪಾತ್ರೇ  ಚ ತದ್ದಾನಂ ಸಾತ್ವಿಕಂ ಸ್ಮೃತಂ ॥೨೦॥” (ಗೀತೆ ೧೭-೨೦)
ಕೇವಲ ಕೊಡಬೇಕೆಂಬ ಸಂಕಲ್ಪದಿಂದ ಮಾಡಿದ ದಾನ, ಪ್ರತ್ಯುಪಕಾರ ಬಯಸದೇ ಸಕಾಲದಲ್ಲಿ ಸರಿಯಾದ ಸ್ಥಾನದಲ್ಲಿ ಮಾಡಿದ ದಾನ ಸಾತ್ವಿಕವಾದದ್ದು.
ಮಹಾಭಾರತ, ವಿಷ್ಣು ಪುರಾಣಗಳಲ್ಲಿ ಈ ದಾನ ಆದಾಯದ ೧/೩ ನೇ ಭಾಗ ಅಥವಾ ೧/೫ ನೇ ಭಾಗ ಇರಬೇಕೆಂಬ ವಿಧಿಯನ್ನು ತಿಳಿಸುತ್ತದೆ.
ಮಹಾವ್ಯಾಧಿಗಳು ಅತಿಯಾದ ಪಾಪಕರ್ಮಗಳಿಂದಲೇ ಬರುತ್ತವೆಯಾದ ಕಾರಣ ಅಂಥವರು ೩೦-೪೦% ವರೆಗೂ ತಮ್ಮ ಆದಾಯದಿಂದ ಸತ್ಪಾತ್ರರಿಗೆ ಧರ್ಮಶಾಸ್ತ್ರವಿದರನ್ನು ಸಂಪರ್ಕಿಸಿ ಅವರು ತಿಳಿಸಿದ ರೀತಿಯಲ್ಲಿ ಮಾಡಬೇಕೆಂದು ಅನೇಕ ಯೋಗಿಗಳ ಅಭಿಪ್ರಾಯವಿದೆ. 
ಆದರೆ, ದಾನ ಮಾಡುವಾಗ “ಶ್ರೀಯಾ ದೇಯಂ” “ಹ್ರೀಯಾ ದೇಯಂ” “ಸಂವಿದಾ ದೇಯಂ” ಎಂಬ ಉಪನಿಷತ್ ವಾಕ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂಬುದನ್ನು ಮರೆಯಬಾರದು.

೪. ಮೈತ್ರೀ :

ಸರ್ವ ಪ್ರಾಣಿಗಳಲ್ಲೂ ಬಂಧುತ್ವ, ಎಲ್ಲ ಸತ್ವದ ಜನರೊಂದಿಗೆ ಸಮಭಾವದ ಮಿಳಿತ, ಮನುಷ್ಯನನ್ನು ಉನ್ನತಿಯತ್ತ ಕೊಂಡೊಯ್ಯಬಲ್ಲುದು.
  “ವಿದ್ಯಾವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನೀ।
    ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ॥” (ಗೀತೆ)
 
ಜ್ಞಾನಿ, ವಿನಯಿ, ಬ್ರಾಹ್ಮಣ, ಆಕಳು, ಆನೆ,ನಾಯಿ, ಚಾಂಡಾಲ ಎಲ್ಲರನ್ನೂ ಸಮಭಾವದಲ್ಲಿ ಕಾಣುವವ, ನಿಜಕ್ಕೂ ತಿಳಿದವ ಎಂಬುದನ್ನು ಮರೆಯಬಾರದು.
ವಿಶೇಷವಾಗಿ ಪ್ರಾಣ ಹೋಗುವ ಸಂದರ್ಭ ಹೊರತುಪಡಿಸಿ ಇನ್ನಿತರ ಕಾರಣಗಳಿಗೆ ಆಹಾರಕ್ಕಾಗಿ  “ಪ್ರಾಣಿಹಿಂಸೆ” ಸರ್ವಥಾ ಮಾಡಬಾರದು ಎನ್ನುತ್ತದೆ ಧರ್ಮಶಾಸ್ತ್ರಗಳು.
  ” ಆತ್ಮವತ್ ಸತತಂ ಪಶ್ಯೇತ್ ಅಪಿ ಕೀಟಪಿಪೀಲಿಕಮ್ ॥” (ಅ. ಹೃ. ಸೂ.೨ )
    ‘ಕ್ರಿಮಿ ಕೀಟಗಳನ್ನು ತನ್ನಂತೆಯೇ ಕಾಣು’ ಎಂಬ ಅಮೃತ ವಾಕ್ಯವನ್ನು ಹೇಳಿದ್ದಾರೆ ವಾಗ್ಭಟರು.

೫. ಕಾರುಣ್ಯ:

“ಕರುಣೆ” ಮನುಷ್ಯ ಸಹಜವಾದ ಗುಣ. ವಾಲ್ಮೀಕಿಗೆ ಈ ಕರುಣೆ ಮಹಾಕಾವ್ಯವನ್ನೇ ಕರುಣಿಸಿತು. ಎಲ್ಲಾ ಪ್ರಾಣಿಗಳ ಮೇಲೆ ದಯೆಯನ್ನಿಡಬೇಕೆಂಬುದು ಎಲ್ಲಾ ಧರ್ಮಗಳ ಅಭಿಪ್ರಾಯವೂ ಆಗಿದೆ. “ಪರದುಃಖಹಾನೀಚ್ಛಾ”  ಇನ್ನೊಬ್ಬರ ದುಃಖ ನಿವಾರಿಸುವ ಇಚ್ಛೆಯೇ ಕರುಣೆಯಾಗಿದೆ. ಕಷ್ಟದಲ್ಲಿರುವವರನ್ನು ಕಂಡು ದ್ರವೀಭೂತ ಹೃದಯವುಳ್ಳವನಾಗಿ ಕನಿಕರದಿಂದ  ವರ್ತಿಸುವುದೇ ಕರುಣೆ. ಹೀಗೆ, ಇತರರ ಮೇಲೆ ಕರುಣೆ ತೋರಿಸುವವರನ್ನು ಪರಮಾತ್ಮ ಸದಾ ಕಾಪಾಡುತ್ತಾನೆ ಎಂಬುದು ಜ್ಞಾನಿಗಳ ಮತ.

೬. ಹರ್ಷ :

ನಮ್ಮ ನೋವು ನಮಗಿರಲಿ. ಅದನ್ನು ಇತರರಿಗೆ ಹಂಚಿ ವಾತಾವರಣವನ್ನು ಕಲುಷಿತಗೊಳಿಸಬಾರದು. ನಾವೇ ಬಿತ್ತಿದ ಬೀಜ ಮರವಾಗಿ ಕೊಡುವ ಕರ್ಮ ಫಲವನ್ನು ನಗುನಗುತ್ತಾ ಅನುಭವಿಸಬೇಕು. ಎಲ್ಲರಿಗೂ ಸಂತಸವನ್ನೇ ಹಂಚಬೇಕು. ಮನಸ್ಸನ್ನು ಸದಾ ಆನಂದಮಯವಾದ ಆತ್ಮನಲ್ಲಿ ನೆಲೆಯಿಟ್ಟಾಗ ಇದು ಸುಲಭವಾಗುತ್ತದೆ.
 
ಡಿ. ವಿ.ಜಿ ಹೇಳುವಂತೆ-
 “ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ,
  ಮಿತವಿರಲಿ ವಚನದಲಿ ಋತವ ಬಿಡದಿರಲಿ।
  ಹಸನೊಂದು ನುಡಿಯಲ್ಲಿ ನಡೆಯಲ್ಲಿ ನೋಟದಲಿ 
  ಪಸರುತಿರೆ ಬಾಳ್ ಚೆಲುವು -ಮಂಕುತಿಮ್ಮ ॥”

೭. ಉಪೇಕ್ಷಾ :

ಕಷ್ಟಗಳನ್ನು ಉಪೇಕ್ಷೆ ಮಾಡಬೇಕು. ಅಕಾರಣವಾಗಿ ಬೇರೆಯವರು ಮಾಡುವ ಟೀಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಉಪೇಕ್ಷಿಸಬೇಕು. ಇಂದ್ರಿಯಗಳು ಇಂದ್ರಿಯಾರ್ಥಗಳಲ್ಲಿ ಮುಳುಗಿರುವಾಗ ಅದು ಇಂದ್ರಿಯಗಳ ಸ್ವಭಾವ. ನಾನು ಇಂದ್ರಿಯವಲ್ಲ ಎಂದು ಉಪೇಕ್ಷಿಸಿ ಜ್ಞಾನದಲ್ಲಿ ತೊಡಗಬೇಕು. ವಿಶೇಷವಾಗಿ ಮರಣಾಸನ್ನ ವ್ಯಕ್ತಿಗೆ ಆ ಚಿಕಿತ್ಸೆ ಈ ಚಿಕಿತ್ಸೆ ಎಂದು ವೈದ್ಯರಿಂದ ವೈದ್ಯರೆಡೆಗೆ ತಿರುಗಿಸುತ್ತಾ ಹಿಂಸೆ ಮಾಡಬಾರದು. ಸುಲಭವಾಗಿ ಪ್ರಾಣ ತ್ಯಾಗಕ್ಕೆ ಸಹಾಯ ಮಾಡಬೇಕು. “ಉಪ – ಸಮೀಪೇ ಸ್ಥಿತ್ವಾ ಈಕ್ಷಾ – ಉಪಚರೇತ್” ಎಂಬರ್ಥದಲ್ಲಿ ಆಧ್ಯಾತ್ಮದ ಮಾರ್ಗದಲ್ಲಿ ಪ್ರಯತ್ನಿಸಬೇಕು ಎಂದಿದ್ದಾರೆ. ಇಂದ್ರಿಯಾರ್ಥಗಳು ನಮ್ಮನ್ನು ಮೋಹದ ಬಲೆಯಲ್ಲಿ ಕೆಡವಲು ಅನೇಕ ರೀತಿಯಿಂದ ಪ್ರಯತ್ನಿಸುವಾಗಲೂ ಉದಾಸೀನವೇ ಅದಕ್ಕೆ ಮದ್ದು ಎಂಬರ್ಥವನ್ನು ಕೊಡುತ್ತದೆ.

೮. ಪ್ರಶಮಪರಃ :

ಎಲ್ಲೆಡೆಯಲ್ಲಿಯೂ ಶಾಂತಿ – ಸಮಾಧಾನಕ್ಕಾಗಿ ಪ್ರಯತ್ನಿಸಬೇಕು. ಸಂಘರ್ಷವನ್ನು ತಡೆಯಬೇಕು. ಇಂತಹ ಜೀವನ ಸಾರ್ಥಕವಾಗಿ ಈ ಜನ್ಮದಲ್ಲಿ ಆರೋಗ್ಯಪೂರ್ಣವಾದ ಜೀವನ ಹಾಗೂ ಪರಲೋಕದಲ್ಲಿಯೂ ಶ್ರೇಯಸ್ಸು ಸಾಧ್ಯವೆಂದಿದ್ದಾರೆ.
” ಸ್ವಸ್ಥವೃತ್ತಂ ಯಥೋದ್ದಿಷ್ಟಂ ಯಃ ಸಮ್ಯಗನುತಿಷ್ಠತಿ ।
ಸ ಸಮಾ ಶತಮವ್ಯಾಧಿರಾಯುಷಾ ನ ವಿಯುಜ್ಯತೇ॥೩೧॥
ನೃ ಲೋಕಮಾಪೂರಾಯತೇ ಯಶಸಾ ಸಾಧುಸಂಮತಃ ।
ಧರ್ಮಾರ್ಥಾವೇತಿ ಭೂತಾನಾಂ ಬಂಧುತಾಮುಪಗಚ್ಛತಿ ॥೩೨॥
ಪರಾನ್ ಸುಕೃತಿನೋ ಲೋಕಾನ್ ಪುಣ್ಯಕರ್ಮಾಪ್ರಪದ್ಯತೇ ।
ತಸ್ಮಾದ್ವೃತ್ತಮನುಷ್ಟೇಯಮಿದಂ ಸರ್ವೇಣ ಸರ್ವದಾ ॥೩೩॥” ( ಚ. ಸೂ. ೮-೩೧-೩೩)
 
ಇಲ್ಲಿ ಹೇಳಿರುವ ಸ್ವಸ್ಥವೃತ್ತ ವಿಧಾನವನ್ನು ಅನುಸರಿಸುವುದರಿಂದ ಆಗುವ ಪ್ರಯೋಜನಗಳು.
೧. ೧೦೦ ವರ್ಷಗಳ ಕಾಲ ರೋಗರಹಿತವಾಗಿ ಇರುತ್ತಾನೆ.
೨. ಈ ಲೋಕದಲ್ಲಿ ಅತ್ಯಂತ ಯಶಸ್ಸನ್ನು ಗಳಿಸುತ್ತಾನೆ.
೩. ಧರ್ಮಾರ್ಥಗಳೆರಡನ್ನೂ ಸಂಪಾದಿಸುತ್ತಾ ಎಲ್ಲರ ಮಿತ್ರನಾಗುತ್ತಾನೆ.
೪. ಶ್ರೇಷ್ಠಕಾರ್ಯಗಳನ್ನು ಮಾಡಿ ಅತ್ಯಂತ ಪುಣ್ಯ ಗಳಿಕೆ ಮಾಡಿದ ಕಾರಣ ಪುಣ್ಯ ಲೋಕಗಳನ್ನು ಹೊಂದುತ್ತಾನೆ.
ಆದ್ದರಿಂದ ಈ ಸದ್ವೃತ್ತದ ಅನುಷ್ಠಾನವನ್ನು ಎಲ್ಲರೂ ಯಾವಾಗಲೂ ಅನುಸರಿಸಬೇಕು. 

Share With Your Friends

Leave a Comment