ಶರತ್ಕಾಲದ ಚಂದ್ರಮ
‘ಶರತ್ಕಾಲ ಚಂದ್ರಮನಂತೆ ನೂರ್ಕಾಲಬಾಳಿ ಬೆಳಗು!’ ಇದು ಹಿರಿಯರು ಪೊಡಮಡಿದ ಚಿಣ್ಣರಿಗೆ ಮಾಡುವ ಶುಭಾಶೀರ್ವಾದ. ಶರತ್ಕಾಲದಲ್ಲಿ ಚಂದ್ರ ಭೂಮಿಗೆ ಅತೀ ಹತ್ತಿರ. ಹುಣ್ಣಿಮೆ ದಿನವಂತೂ ದೊಡ್ಡದಾಗಿ ಕೈಗೆ ಸಿಗುವಂತೆ ಕಾಣುವ ಈ ಚಂದಿರ, ಮಳೆಗಾಲ ಪೂರ್ತಿ ಮೋಡ ಮುಸುಕಿ ಕವಿದ ಕತ್ತಲೆಯಿಂದ ಹೊರಬರುವ ಈ ಕಾಲ ನಿಜಕ್ಕೂ ಅಪ್ಯಾಯಮಾನವಾದದ್ದು. ನದಿ ಕೆರೆಗಳ ಮಣ್ಣು ಕರಡಿದ ನೀರು ತಿಳಿಯಾಗಿ ಶುಭ್ರವಾದ ಜಲ ಎಲ್ಲೆಡೆ ಕಾಣಸಿಗುವುದು. ತಿಳಿ ನೀಲಿಯಾದ ಆಕಾಶ, ಪ್ರಕಾಶಮಾನವಾದ ಸೂರ್ಯನ ಬೆಳಕು ಎಲ್ಲೆಡೆ ಪ್ರಸನ್ನತೆಯನ್ನುಂಟುಮಾಡುವುದು.
ಹಂಸೋದಕ!
” ತಪ್ತಂ ತಪ್ತಾಂಶುಕಿರಣೈಃ ಶೀತಂ ಶೀತಾಂಶುರಶ್ಮಿಭಿಃ ॥೫೧॥
ಸಮಂತಾದಪ್ಯಹೋರಾತ್ರಮಗಸ್ತ್ಯೋದಯನಿ ರ್ದಿಷಮ್।
ಶುಚಿ ಹಂಸೋದಕಂ ನಾಮ ನಿರ್ಮಲಂ ಮಲಜಿಜ್ಜಲಂ ॥೫೨॥
ನಾಭಿಷ್ಯಂದಿ ನ ವಾ ರೂಕ್ಷಂ ಪಾನಾದಿಷ್ಟಮೃತೋಪಮಮ್ ॥” (ಅ. ಹೃ. ಸೂ..)
ಹಗಲಿಡೀ ಪ್ರಖರ ಸೂರ್ಯನ ಕಿರಣಗಳಿಂದ ಕುದಿದು, ರಾತ್ರಿ ತಂಪಾದ ಚಂದ್ರನ ಕಿರಣಗಳಿಂದ ತಂಪಾಗಿ ಉದಿತ ಅಗಸ್ತ್ಯ ನಕ್ಷತ್ರದ ದೃಷ್ಟಿಯಿಂದ ನಿರ್ವಿಷವಾದ ಈ ಶರದ್ ಋತುವಿನ “ದೋಷಹರ” ವಾದ ನೀರಿಗೆ ”ಹಂಸೋದಕ” ವೆಂದು ಹೆಸರು. ಅಭಿಷ್ಯಂದಿಕರವಲ್ಲದ, ಒಣಗಿಸದ ಈ ನೀರು ಕುಡಿಯಲು ಅಮೃತಕ್ಕೆ ಸಮಾನವಾದದ್ದು.
ಪಿತ್ತ ಹೆಚ್ಚಾಗುವ ಕಾಲ!
ಮಳೆಗಾಲದಲ್ಲಿ ವಾತಾವರಣದ ಹುಳಿಯಿಂದಾಗಿ ಸಂಚಿತವಾದ ಪಿತ್ತ ಈ ಋತುವಿನಲ್ಲಿ ಒಮ್ಮೆಲೇ ಬಿಸಿಲಿನ ಝಳಕ್ಕೆ ಕರಗಿ ಕೆರಳುತ್ತದೆ. ಪಿತ್ತ ಪ್ರಧಾನವಾದ ರೋಗಗಳು ಈ ಋತಿವಿನಲ್ಲಿ ಸಹಜವಾಗಿ ಹೆಚ್ಚಾಗುತ್ತದೆ. ಜ್ವರ, ವಿಸರ್ಪ, ಅತಿಸಾರ, ಆಮ್ಲಪಿತ್ತ, ಚರ್ಮರೋಗ, ವಾತರಕ್ತಗಳು ಇಲ್ಲಿ ಹೆಚ್ಚು.
ಕಹಿತುಪ್ಪ, ವಿರೇಚನ
* ಸಂಚಿತವಾದ ಪಿತ್ತವನ್ನು, ಗೆಲ್ಲಲು ಕಹಿತುಪ್ಪ ಸೇವಿಸಿ ಎಂಬುದು ಶಾಸ್ತ್ರದ ಅಂಬೋಣ. ಅಮೃತಬಌ, ಬೇವು, ಕಿರಾತಕಡ್ಡಿ, ಆಡುಸೋಗೆ, ಕೊಡಸ, ಈಶ್ವರೀ ಬಌ, ನೆಲನೆಲ್ಲಿ, ಜೇಕಿನಗಡ್ಡೆ, ಸೊಗದೇ ಬೇರು ಮುಂತಾದ ಔಷಧಗಳ ಕಷಾಯ / ಕಲ್ಕಗಳೊಂದಿಗೆ ಶಾಸ್ತ್ರೋಕ್ತ ವಿಧಾನದಿಂದ ಕುದಿಸಿ ಸಂಸ್ಕರಿಸಿ ತಯಾರಿಸಿದ ಆಕಳ ತುಪ್ಪಕ್ಕೆ ಕಹಿತುಪ್ಪ / ತಿಕ್ತಕ ಘೃತವೆನ್ನುತ್ತಾರೆ. ರಕ್ತ ದೋಷವನ್ನು ಗೆಲ್ಲಲು ಅತ್ಯುತ್ತಮವಾದ ಈ ತುಪ್ಪವನ್ನು ವಾಗ್ಭಟರು ಆರೋಗ್ಯವಂತನಿಗೂ ಸೇವಿಸಲು ಹೇಳಿದ್ದಾರೆ.
* ಈ ಋತುವಿನಲ್ಲಿ ಒಮ್ಮೆ ‘ಭೇದಿ’ಗೆ ಹರಳೆಣ್ಣೆ / ತಿವೃತ ಲೇಹ್ಯ / ಅಳಲೇಕಾಯಿ ಇವುಗಳಲ್ಲೊಂದನ್ನು ವೈದ್ಯರ ಮಾರ್ಗದರ್ಶನದಲ್ಲಿ ಸಕ್ಕರೆ/ಬೆಲ್ಲ/ಹಾಲಿನೊಂದಿಗೆ ಸೇವಿಸಿದರೆ ದೇಹಶುದ್ಧಿಯಾಗಿ ಪಿತ್ತಜನ್ಯವಾದ ತೊಂದರೆಗಳು ವರ್ಷಪೂರ್ತಿ ಇಲ್ಲವಾಗುವುದು.
* ರಕ್ತ ಕೆಟ್ಟು ಬಂದ ಖಾಯಿಲೆಗಳಿಂದ ವಾತರಕ್ತ, ರಕ್ತ ಪಿತ್ತ, ಚರ್ಮರೋಗ ಮುಂತಾದುವುಗಳಲ್ಲಿ ‘ರಕ್ತಮೋಕ್ಷಣ’ ಚಿಕಿತ್ಸೆಗೂ ಇದು ಸಕಾಲವಾಗಿದೆ. ಜಿಗಣೆ ಕಚ್ಚಿಸಿ ಕೆಟ್ಟ ರಕ್ತ ತೆಗೆಯುವ ಜಲೌಕಾವಚರಣಕ್ಕೆ ಇದು ಉತ್ತಮ ಸಮಯ. ಇಡೀ ವರ್ಷದಲ್ಲಿ ರಕ್ತದಾನಕ್ಕೂ ಇದು ಸರಿಯಾದ ಸಮಯವಾಗಿದೆ.
ಬೇಕು-ಬೇಡಗಳಿವು!
* ಪಿತ್ತಕರವಾದ ಹುಳಿ-ಉಪ್ಪು ಖಾರಗಳೀಗ ಬೇಡ. ಕಹಿ-ಸಿಹಿ-ಒಗರು ಸೇವನೆಯನ್ನು ಮಾಡಬೇಕು.
* ಪಚನಕ್ಕೆ ಹಗುರವಾದ ಆಹಾರವಿರಲಿ.
* ಹೆಸರು, ಸಕ್ಕರೆ, ನೆಲ್ಲಿ,ಪಡವಲ, ಜೇನು ಇವು ಉತ್ತಮ ಆಹಾರಗಳು.
* ಹೀರೆ, ಕ್ಯಾರೆಟ್, ಕೋಸು, ಬೀಟ್ ರೂಟ್, ಒಣ ಪ್ರದೇಶದ ಮಾಂಸ – ಈ ಋತುವಿನಲ್ಲಿ ಸೇವಿಸಬಹುದು.
* ಮೀನು- ಚಿಕನ್ ಮುಂತಾದ ಉಷ್ಣ ಸ್ವಭಾವದ ಮಾಂಸ ಸೇವನೆ ಅಷ್ಟಾಗಿ ಒಳ್ಳೆಯದಲ್ಲ.
* ತೀಕ್ಷ್ಣ ಮದ್ಯ ಸೇವನೆ, ಉಪ್ಪಿನಕಾಯಿ,ಬಿಸಿಲಿನಲ್ಲಿ ಓಡಾಟ ಒಳ್ಳೆಯದಲ್ಲ.
* ದಾಳಿಂಬೆ, ಸೇಬು, ಸಪೋಟಾ, ಅಂಜೂರ, ಉತ್ತತ್ತಿ, ಖರ್ಜೂರ, ಮುಂತಾದ ಸಿಹಿ ಹಣ್ಣುಗಳು ಸೇವನೆಗೆ ಉತ್ತಮ. ಹುಳಿ ಹಣ್ಣುಗಳು ಬೇಡ.
* ವ್ಯಾಯಾಮ ಮಧ್ಯಮ ಪ್ರಮಾಣದಲ್ಲಿರಲಿ, ಹಗಲು ನಿದ್ರೆ ಬೇಡ, ಮೈಥುನ ವಾರದಲ್ಲಿ ೨ ದಿನಕ್ಕಿಂತ ಹೆಚ್ಚು ಬೇಡ. ಸ್ನಾನಕ್ಕೆ ತಣ್ಣೀರು/ ಉಗುರು ಬೆಚ್ಚಗಿನ ನೀರಿನ ಸೇವನೆ ಇರಲಿ.
* ಮನಸ್ಸು ಪ್ರಸನ್ನವಾಗಿದ್ದರೆ ಪಿತ್ತ ವೃದ್ಧಿಯಾಗದು. ಮಾನಸಿಕ ಏರುಪೇರುಗಳಿಗೆ ಅವಕಾಶ ಕೊಡದಿರಿ.