fbpx

ಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೨

ಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೨

“ಸ್ವಾಮೀ, ನನಗೆ ಹಸಿವೆಯಾಗುತ್ತಲೇ ಇಲ್ಲ. ತಿಂದ ಕೂಡಲೇ ಹೊಟ್ಟೆಯುಬ್ಬರ. ಬೆಳಗ್ಗೆ ಏಳುತ್ತಿರುವಾಗಲೇ ತಲೆ ಧಿಮ್ಮೆಂದು ತಿರುಗುತ್ತದೆ. ಇಡೀ ದಿನ ತಲೆನೋವು. ಉತ್ಸಾಹವೇ ಇಲ್ಲ. ಜೀವನವೇ ಸಾಕು ಸಾಕಾಗಿದೆ.” ಎಂದರು. ಕೊಂಚ ಇವರ ದಿನಚರಿಯನ್ನು ಗಮನಿಸೋಣವೆಂದು ಬೆಳಗಿನಿಂದ ರಾತ್ರಿಯವರೆಗೂ ಏನೇನು ಆಹಾರ ಸೇವಿಸುತ್ತಿರುವಿರೆಂದು ಕೇಳಿದೆ. ಅವರ ಕತೆ ಕೇಳಿ ನಿಜಕ್ಕೂ ನಗು ಬಂತು. ಬೆಳಗ್ಗೆ ೬ ಘಂಟೆಗೆ ಟೀ ಹಾಗೂ ಬಿಸ್ಕೇಟ್ ಅಂತೆ. ೮ ಘಂಟೆಗೆ ದೋಸೆ, ಮೊಸರು, ತುಪ್ಪ ಹಾಗೂ ಬೆಲ್ಲ. ೧೦.೩೦ ಕ್ಕೆ ಗಂಜಿಯೂಟ. ೧.೩೦ಕ್ಕೆ ಊಟ. ಮಧ್ಯಾಹ್ನ ಮಲಗಿ ಎದ್ದ ಮೇಲೆ ಸ್ವಲ್ಪ ಕರಿದ ತಿಂಡಿ ಹಾಗೂ ಚಹಾ. ಸಂಜೆ ೬ ಕ್ಕೆ ದೋಸೆ. ರಾತ್ರಿ ೯ ಕ್ಕೆ ಊಟ. ಮಲಗುವಾಗ ಬಾಳೆಹಣ್ಣು, ಹಾಲು. ಇಷ್ಟೇ !! ಜೊತೆಗೇ ನಮ್ಮದೆಲ್ಲಾ ಸಾದಾ ಊಟ, ಹೆಚ್ಚಿಗೆ ಏನನ್ನೂ ತಿನ್ನುವುದಿಲ್ಲ ಎಂದು ಹೇಳುವುದನ್ನು ಮರೆಯಲಿಲ್ಲ. ಅಂದರೆ, ಒಟ್ಟು ದಿನಕ್ಕೆ ೮ ಸಲ ಆಹಾರ ಸೇವನೆ!! ಸ್ವಾಮೀ ಏನಾಗಬೇಕು ಈ ದೇಹ? ಇದು ಜೀವವೇ? ಬರಿಯ ಯಂತ್ರವೇ? ತಿಳಿಯಲಿಲ್ಲ. ಕೊನೆಗೆ ಇವೆಲ್ಲವನ್ನು ಕಡಿಮೆ ಮಾಡಿ ದಿನಕ್ಕೆ ೩ ಬಾರಿ ಮಾತ್ರ ಆಹಾರ ಸೇವಿಸಿರೆಂದು ಒಪ್ಪಿಸಲು ಸಾಕುಸಾಕಾಯಿತು. ಆದರೆ, ಒಂದೇ ವಾರದಲ್ಲಿ ಖಾಯಿಲೆ ಮಂಗಮಾಯ! ಮೈ ಹಗುರ !! ಇದು ಆಹಾರವೆಂಬ ಹವಿಸ್ಸನ್ನು ಎಗ್ಗಿಲ್ಲದೇ, ಕ್ರಮವಿಲ್ಲದೇ ಹೊಟ್ಟೆ ಒಂದು ಕಸದ ಚೀಲವೆಂದುಕೊಂಡು ತುಂಬಿಸುವವರ ಪಾಡಾಯಿತು. ಇನ್ನೊಬ್ಬರು ಬಂದಿದ್ದರು. ಕಳೆದ ಅನೇಕ ವರ್ಷಗಳಿಂದ ಕರ್ನಾಟಕದ ವೈದ್ಯರನ್ನೆಲ್ಲಾ ಕಂಡುಬಂದೆ. ಯಾರಿಂದಲೂ ಗುಣವಾಗಲಿಲ್ಲವೆಂದರು. ಹಾಗಾದರೆ ಏನು ಖಾಯಿಲೆ? ಕೇಳಿದೆ. ತನಗೆ ಕೆಲವೊಮ್ಮೆ ೮-೧೦ ಬಾರಿಯವರೆಗೂ ಮಲಪ್ರವೃತ್ತಿಯಾಗುತ್ತದೆ. ಹಸಿವೆಯಾಗದು, ನಿದ್ರೆ ಬರದು, ಮೈ ಕೈ ನೋವು, ತುಂಬಾ ಸುಸ್ತು. ತೂಕ ಕಡಿಮೆಯಾಗುತ್ತಿದೆ ಎಂದರು. ವಿವರವಾಗಿ ಚರ್ಚಿಸಿದಾಗ ತಿಳಿದಿದ್ದಿಷ್ಟು. ಶ್ರೀಯುತರಿಗೆ ೮-೧೦ ವರ್ಷಗಳ ಹಿಂದೆ ವೈದ್ಯರೊಬ್ಬರು ಹೇಳಿದ್ದರಂತೆ – ” ನೀರು ಹೆಚ್ಚು ಕುಡಿ. ಆರೋಗ್ಯಕ್ಕೆ ಒಳ್ಳೆಯದು” ಎಂದು. ಅಂದಿನಿಂದ ಇಲ್ಲಿಯವರೆಗೆ ದಿನಕ್ಕೆ ೮-೯ ಲೀಟರ್ ನೀರು ಕುಡಿಯುತ್ತಿರುವರಂತೆ!! ಸಾಕೋ? ! ಚರಕಸಂಹಿತೆ ತೆಗೆದು ತೋರಿಸಿದೆ – ಅತಿಸಾರಕ್ಕೆ “ಅತ್ಯಂಬುಪಾನ” ಹೇಗೆ ಕಾರಣವಾಗುತ್ತದೆಂದು. ಇದು ಕ್ಲೇದ (ದ್ರವಾಹಾರ) ಹೆಚ್ಚಾಗಿ ತೊಂದರೆ ಅನುಭವಿಸುತ್ತಿರುವ ಮಹನೀಯರೊಬ್ಬರ ಅನುಭವ. ಹಸಿವೆಯಾಗದೆ ಆಹಾರ ತುರುಕುವುದು, ಬಾಯಾರಿಕೆಯಿರದೆ ನೀರು ಇಂಗಿಸುವುದು ಬೀದೀಲಿ ಹೋಗುವ ರೋಗವೆಂಬ ಮಾರಿಯನ್ನು ಮನೆಯೆಂಬ ದೇಹದಲ್ಲಿ ಸೇರಿಸಿಕೊಂಡಂತೆಯೇ ಸರಿ.
ಅಗ್ನಿವೇಶರು ಚರಕ ಸಂಹಿತೆಯಲ್ಲಿ ಈ ವಿಚಾರ ತಿಳಿಸುತ್ತಾ –
 ” ನ ರಾಗ್ನಾನ್ಯಾಪ್ಯವಿಜ್ಞಾನಾದಾಹಾರಾನುಪಯೋಜಯೇತ್ ।
  ಪರೀಕ್ಷ್ಯಹಿತಮಶ್ನೀಯಾದ್ದೇಹೋಹ್ಯಾಹಾರಸಂಭವಃ ॥
ತದಾತ್ವಸುಖ ಸಂಜ್ಞೇಷು ಭಾವೇಷು ಆಜ್ಞೋಽನುರಜ್ಯತೇ ।
  ರಜ್ಯತೇ ನ ತು ವಿಜ್ಞಾತಾ ವಿಜ್ಞಾನೇಹ್ಯಮಲೀಕೃತೇ॥” (ಚರಕ ಸೂತ್ರ)
ಯಾರದೇ ಒತ್ತಾಯಕ್ಕಾಗಲೀ, ಮೋಹದಿಂದಾಗಲೀ, ಚಪಲದಿಂದಾಗಲೀ ಆಹಾರವನ್ನು ಸೇವಿಸಬಾರದು. ಚೆನ್ನಾಗಿ ಪರೀಕ್ಷಿಸಿ ಹಿತವಾದ ಆಹಾರವನ್ನು ಮಾತ್ರ ಸೇವಿಸಬೇಕು. ಈ ದೇಹ ಆಹಾರದಿಂದಲೇ ಉಂಟಾಗಿರುವ ಕಾರಣ ಈ ವಿಷಯದಲ್ಲಿ ಮೈಮರೆಯುವಂತಿಲ್ಲ. ಈ ಭೌತಿಕ ಸುಖ ನೀಡುವ ವಸ್ತುಗಳಲ್ಲಿ ಏನನ್ನೂ ತಿಳಿಯದ ಅಜ್ಞರು ಮಾತ್ರ ಅಂಟಿಕೊಳ್ಳುತ್ತಾರೆ. ಅವುಗಳನ್ನು ಚೆನ್ನಾಗಿ ಅರಿತು ವಿಜ್ಞಾನಿಯು ತನಗೆ ತಿಳಿದ ಜ್ಞಾನವನ್ನು ಜೀವನದಲ್ಲಿ ಅಳವಡಿಸುವ ಕಾರಣ ಹೀಗೆ ಅಂಟಿಕೊಳ್ಳುವುದಿಲ್ಲ.
” ಹಿತಾಭಿರ್ಜುಹುಯಾನ್ನಿತ್ಯಮಂತರಗ್ನಿಂ ಸಮಾಹಿತಃ ।
  ಅನ್ನಪಾನಸಮಿಧ್ಬಿರ್ನಾಮಾತ್ರಕಾಲೌವಿಚಾರಯನ್ ॥೩೪೫॥
  ಅಹಿತಾಗ್ನಿಃ ಸದಾ ಪಥ್ಯಾನ್ಯಂತರಗ್ನೌ ಜುಹೋತಿ ಯಃ ।
  ದಿವಸೇ ದಿವಸೇ ಬ್ರಹ್ಮಜಪತ್ಯಥ ದದಾತಿ ಚ ॥೩೪೬॥
  ನರಂ ನಿಃಶ್ರೇಯಸೇ ಯುಕ್ತಂ ಸಾತ್ಮ್ಯಜ್ಞಂ ಪಾನಬೋಜನೇ ।
  ಬಜಂತೇ ನಾಮಯಾಃ ಕೇಚಿದ್ಭಾವಿನೋಽಪ್ಯಂತರಾದೃತೇ ॥೩೪೭॥
  ಷಡ್ ತ್ರಿಂಶತಂ ಸಹಸ್ರಾಣಿ ರಾತ್ರೀಣಾಂ ಹಿತಭೋಜನಃ ।
  ಜೀವತ್ಯನಾತುರೋ ಜಂತುಃ ಜಿತಾತ್ಮಾ ಸಂಮತಃಸತಾಂ ॥೩೪೮॥” (ಚರಕ ಸೂತ್ರ -೨೭)
ಸರಿಯಾದ ಕಾಲದಲ್ಲಿ, ಸರಿಯಾದ ಪ್ರಮಾಣದಲ್ಲಿ ಹಿತಕರವಾದ ಅನ್ನ – ಪಾನಗಳೆಂಬ ಸಮಿತ್ತಿನಿಂದ ಬಹು ಎಚ್ಚರಿಕೆಯಿಂದ ಅಂತರಗ್ನಿಗೆ ಆಹುತಿ ಕೊಡಬೇಕು. ಸಾತ್ಮ್ಯ ಆಹಾರದಿಂದ ವ್ಯವಸ್ಥಿತವಾದ ಅಗ್ನಿಗೆ ಅಥವಾ ಅಹಿತಾಗ್ನಿಯಂತೆ ಪ್ರಾತಃ – ಸಾಯಂ ಎರಡೂ ಕಾಲಗಳು ಮಾತ್ರ ಸದಾ ಪಥ್ಯಕರವಾದ ಪದಾರ್ಥಗಳಿಂದ ಯಾರು ಹೋಮ ಮಾಡುವರೋ ( ಆಹಾರ ಸೇವಿಸುವರೋ), ಯಾರು ಪ್ರತಿನಿತ್ಯ ಬ್ರಹ್ಮ ( ಪ್ರಣವಾದಿ ಮಂತ್ರ) ಜಪವನ್ನು ಮಾಡುತ್ತಾ ದಾನ ಮಾಡುತ್ತ ಇರುವರೋ, ಪಾನ – ಭೋಜನಗಳಲ್ಲಿ ತನಗೆ ಹಿತಕರವಾದುದು ಯಾವುದೆಂದು ತಿಳಿದು ಕಲ್ಯಾಣಕರ ಮಾರ್ಗದಲ್ಲಿರುವರೋ ಅವರಿಗೆ ರೋಗಕ್ಕೆ ಅನ್ಯ ಕಾರಣಗಳು ಇಲ್ಲದಿದ್ದರೆ, ಈ ಜನ್ಮದಲ್ಲೂ ಮುಂದಿನ ಜನ್ಮದಲ್ಲೂ ಯಾವುದೇ ರೋಗ ಪೀಡಿಸದು ! ಇಂಥ ಸಂಯಮವುಳ್ಳ ಜನರು ೩೬೦ ಸಾವಿರ ರಾತ್ರಿಗಳು  (೧೦೦ ವರ್ಷ) ಹಿತ ಭೋಜನವನ್ನು ಮಾಡುತ್ತಾ ರೋಗರಹಿತವಾಗಿ ಬದುಕುತ್ತಾರೆ. ಆಹಾರ ನಿಯಮಗಳಿಂದಾಗಿ ಈ ಜನ್ಮದಲ್ಲೂ ಜಪ-ತಪಗಳ ಪುಣ್ಯಪ್ರಭಾವದಿಂದ ಮುಂದಿನ ಜನ್ಮದಲ್ಲೂ ಇಂಥವರಿಗೆ ರೋಗ ತಟ್ಟದು ಎಂಬುದು ತಾತ್ಪರ್ಯ.

Share With Your Friends

Leave a Comment