fbpx
+919945850945

ಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೧

ಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೧

 “ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ।
ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ ॥” (ಗೀತೆ ೧೫-೧೪)
ಆಹಾರ ಸೇವನೆ ಎಂಬುದು ಒಂದು ನಿತ್ಯ ಯಜ್ಞ! ಇದಕ್ಕೆ ಹವಿಸ್ಸು ಆಹಾರ! ಹೀಗೆ ಸೇವಿಸಿದ ಆಹಾರದ ಪವಿತ್ರತೆಯಿಂದ ದೇಹಧಾತುಗಳ ಪುಷ್ಟಿ.
ಆಹಾರ ಸಂಭವಂ ವಸ್ತು
ರೋಗಾಶ್ಚಾಹಾರಾ ಸಂಭವಾ ॥ (ಚರಕ)
ದೇಹ ಆಹಾರದಿಂದಲೇ ಸಂಭವಿಸುತ್ತದೆ. ದೇಹಕ್ಕೆ ಬರುವ ರೋಗಗಳು ಆಹಾರದ ಏರುಪೇರಿನಿಂದಲೇ ಉಂಟಾಗುತ್ತದೆ. ಪಾಚಕಾಗ್ನಿ (ಊಷ್ಮಾ). ವಾಯು, ಕ್ಲೇದ (ದ್ರವಾಹಾರ), ಸ್ನೇಹ, ಇಂಧನ (ಆಹಾರ) ಹಾಗೂ ಇವುಗಳ ಸರಿಯಾದ ಪ್ರಮಾಣದ ಯೋಜನೆ ಕಾಲಕಾಲಕ್ಕೆ ಸರಿಯಾಗಿ ನಡೆದಲ್ಲಿ ಮಾತ್ರ ಸ್ವಾಸ್ಥ್ಯ. ಇವುಗಳಲ್ಲಿ ಊಷ್ಮಾ ಹೆಚ್ಚಾದಲ್ಲಿ ದೇಹ ಕೃಶತೆ, ಕೈಕಾಲು ಉರಿ, ರಕ್ತಪಿತ್ತ ಮುಂತಾದ ಖಾಯಿಲೆಗಳು, ವಾಯು ಹೆಚ್ಚಾದಲ್ಲಿ ಹೊಟ್ಟೆಯುಬ್ಬರ, ನೋವು, ಹೃತ್ ಶೂಲ, ತಲೆನೋವು, ಮೈ ಒಣಗುವುದು ಇತ್ಯಾದಿ ತೊಂದರೆಗಳು, ಕ್ಲೇದ ಹೆಚ್ಚಾದಲ್ಲಿ ದ್ರವ ಮಲ ಪ್ರವೃತ್ತಿ, ಪ್ರಮೇಹ, ಮೈಭಾರ, ಪ್ರತಿಶ್ಯಾಯಮ, ಉಬ್ಬಸ ಮುಂತಾದ ತೊಂದರೆಗಳನ್ನೂ, ಸ್ನೇಹ ಹೆಚ್ಚಾದಲ್ಲಿ ಮೂತ್ರ ವಹ ಸ್ರೋತಸ್ಸಿನ ತೊಂದರೆಗಳು, ಸ್ಥೌಲ್ಯ, ಹೃದ್ರೋಗ, ಗ್ರಂಥಿ ಮುಂತಾದ ಸಮಸ್ಯೆಗಳೂ, ಆಹಾರ ಹೆಚ್ಚಾದಲ್ಲಿ ಜೀರ್ಣವಾಗದೆ ವಾಂತಿ – ಭೇದಿ, ಗ್ರಹಣೀದುಷ್ಟಿ, ಶಿರಃಶೂಲ, ಉದರಶೂಲ ಮುಂತಾದ ತೊಂದರೆಗಳೂ ಆಗುತ್ತವೆ.
 
              ಸರ್ವೇ ರೋಗಾಃ ಮಂದೇಽಗ್ನೌ (ಚರಕ)
ಎಲ್ಲ ರೋಗಗಳೂ ಅಗ್ನಿಮಾಂದ್ಯದಿಂದಲೇ ಆರಂಭವಾಗುತ್ತವೆ. ಪಾಚಕಾಗ್ನಿ ಆಹಾರದ ಆರಂಭಿಕ ಪಚನಕ್ರಿಯೆಗೆ ಸಹಾಯಮಾಡುತ್ತದೆ. ಹೀಗೆ ಪಾಕವಾದ ಆಹಾರ, ಖಲೇಕಪೋತನ್ಯಾಯ, ಕೇದಾರಿ ಕುಲ್ಯಾನ್ಯಾಯ ಹಾಗೂ ಕ್ಷೀರದಧಿನ್ಯಾಯದ ಮೂಲಕ ದೇಹ ಸರ್ವಸ್ರೋತಸ್ಸುಗಳನ್ನು ಪ್ರವೇಶಿಸಿ ಪ್ರತಿಯೊಂದು ಧಾತುವಿನ ಜೀವಕೋಶಗಳನ್ನು ತಲುಪುತ್ತದೆ. ಹೀಗೆ ಪ್ರತಿಯೊಂದು ಧಾತುವನ್ನು ತಲುಪಿದ ಆಹಾರ ರಸವು ರಸಾಗ್ನಿ, ರಕ್ತಾಗ್ನಿ, ಮಾಂಸಾಗ್ನಿ, ಮೇದಧಾತ್ವಗ್ನಿ, ಆಸ್ಥ್ಯಗ್ನಿ, ಮಜ್ಞಾಗ್ನಿ ಹಾಗೂ ಶುಕ್ರಾಗ್ನಿಗಳೆಂಬ ಏಳು ಅಗ್ನಿಗಳಿಂದ ಪುನಃಪಾಕ ಹೊಂದಿ ಆಯಾ ಧಾತು ಸ್ವರೂಪವನ್ನು ತಾಳುತ್ತದೆ. ಪಾಚಕಾಗ್ನಿಯಿಂದ ಧಾತ್ವಗ್ನಿ ಪಾಕದವರೆಗೂ ಜೊತೆ ಜೊತೆಯಲ್ಲಿ ಭೂತಾಗ್ನಿ ಪಾಕ ನಡೆಯುತ್ತಿರುತ್ತದೆ. ತಿಂದಂತಹ ಆಹಾರ ಕೇವಲ ಆಯಾ ಧಾತು ಸ್ವರೂಪವನ್ನು ಪಡೆದರೆ ಮಾತ್ರ ಸಾಲದು. ಅದು ಆಯಾ ಪಂಚೀಕೃತ ದೇಹ ಸ್ವರೂಪದಲ್ಲಿಯೂ ಪರಿವರ್ತನೆ ಹೊಂದಲೇಬೇಕು.ಈ ರೀತಿಯ ಬದಲಾವಣೆ ಪಂಚ ಭೂತಾಗ್ನಿ ವ್ಯಾಪರದಿಂದಲೇ ಆಗುತ್ತದೆ. ಪೃಥಿವ್ಯಗ್ನಿ, ಜಲಾಗ್ನಿ, ತೇಜೋಗ್ನಿ, ವಾಯ್ವಗ್ನಿ ಹಾಗೂ ಆಕಾಶಾಗ್ನಿ ಪಂಚಭೂತಾಗ್ನಿಗಳಿಂದ ಪಾಕ ಹೊಂದಿದ ಆಹಾರ ರಸವು ಆಯಾ ಶರೀರದ ಸ್ವರೂಪವನ್ನು ಹೊಂದುತ್ತದೆ.
“ಅನ್ನಮಾದಾನ ಕರ್ಮಾತು ಪ್ರಾಣಃ ಕೋಷ್ಠಂ ಪ್ರಕರ್ಷತಿ।
ತದ್ರವೈರ್ಭಿನ್ನಸಂಘಾತಂ ಸ್ನೇಹೇನ ಮೃದುತಾಂ ಗತಂ ॥೬॥
ಸಮಾನೇನಾವಧೂತೋಽಗ್ನಿರುದರ್ಯಃ ಪವನೋದ್ವಹಃ ।
ಕಾಲೇಂ ಭುಕ್ತಂ ಸಮಂ ಸಮ್ಯಕ್ ಪಚತ್ಯಾಯುರ್ವಿವೃದ್ಧಯೇ ॥” (ಚರಕ)
ಪ್ರಾಣವಾತವು ಆದಾನಕರ್ಮದಿಂದ ಅನ್ನವನ್ನು ಆಮಾಶಯಕ್ಕೆ ತರುತ್ತದೆ. ಈ ಅನ್ನ ದ್ರವದಿಂದ ಭಿನ್ನಗೊಳಿಸಲ್ಪಟ್ಟು, ಸ್ನೇಹ (ಜಿಡ್ಡು)ದಿಂದ ಮೃದುವಾಗುತ್ತದೆ. ಉದರದಲ್ಲಿರುವ ಅಗ್ನಿ ಸಮಾನ ವಾತದಿಂದ ಪ್ರೇರೇಪಿಸಲ್ಪಟ್ಟು ಈ ಅನ್ನವನ್ನು ಪಾಕಮಾಡಿ ನಂತರ ವಾತದಿಂದಲೇ ಮುಂದೆ ತಳ್ಳಲ್ಪಡುತ್ತದೆ. ಹೀಗೆ ಸಕಾಲದಲ್ಲಿ ಸೇವಿಸಿದ ಆಹಾರ ಪಾಕವಾಗಿ ಆಯುಸ್ಸಿನ ಅಭಿವೃದ್ಧಿಗೆ ಕಾರಣವಾಗುತ್ತದೆ.
ಹಿತ-ಮಿತವಾದ ಆಹಾರವಾದರೂ ಅದು ಅಗ್ನಿಯಿಂದ ಪಾಕಹೊಂದಿದಾಗಲೇ ದೇಹಧಾತು ವೃದ್ಧಿಗೆ ಕಾರಣವಾಗುತ್ತದೆಯೇ ಹೊರತು ಅಪಕ್ವವಾದ ಆಹಾರವಲ್ಲ !
”ಯದನ್ನ ದೇಹಧಾತ್ವೋಜೋ ಬಲವರ್ಣಾದಿ ಪೋಷಕಂ ತತ್ರಾಗ್ನಿ ಹೇತುರಾಹಾರಾನ್ನ ಹ್ಯಪಕ್ವಾದ್ರ ಸಾದಯಃ ॥೫॥”
ಹಸಿವೆ ಚೆನ್ನಾಗಿದ್ದು, ಮಲ ಪ್ರವೃತ್ತಿ ಸರಿಯಾಗಿದ್ದರೆ ಮೈ ಹಗುರವಾಗಿ ಉತ್ಸಾಹ ಮೈಗೂಡುವುದನ್ನು ಕಾಣುತ್ತೇವೆ. ಏನೆಲ್ಲಾ ತಿಂದು ಜೀರ್ಣಿಸಿಕೊಂಡು ಆರೋಗ್ಯವಂತರಾಗಿ ಇರುವವರನ್ನೂ, ಸ್ವಲ್ಪವೇ ತಿಂದೂ ರೋಗದಿಂದ ನರಳುವವರನ್ನೂ ನಾವು ಪ್ರತಿನಿತ್ಯ ಕಾಣಬಹುದು. ಈ ವ್ಯತ್ಯಾಸಕ್ಕೆ ವ್ಯಕ್ತಿಯ ಜೀರ್ಣಶಕ್ತಿಯಲ್ಲಿರುವ ವ್ಯತ್ಯಾಸವೇ ಕಾರಣ.
 “ಆಯುರ್ವರ್ಣೋ ಬಲಂ ಸ್ವಾಸ್ಥ್ಯ ಮುತ್ಸಾಹೋ ಪಚಯೌ ಪ್ರಭಾ ।
 ಓಜಸ್ತೇಜ್ಯೋಗ್ನಯಃ ಪ್ರಾಣಾಶ್ಚೋಕ್ತಾ ದೇಹಾಗ್ನಿ ಹೇತುಕಾಃ ॥೩॥
 ಶಾಂತೇಽಗ್ನೌಮ್ರಿಯತೇ, ಯುಕ್ತೇ ಚಿರಂಜೀವತ್ಯನಾಮಯಃ ।
 ರೋಗೀ ಸ್ಯಾದ್ವಿಕೃತೇ, ಮೂಲಮಗ್ನಿಸ್ತಸ್ಮಾನ್ನಿರುಚ್ಯತೇ ॥೪॥” (ಚರಕ ಸಂಹಿತೆ)
 ದೀರ್ಘಾಯುಸ್ಸು, ಉತ್ತಮವಾದ ಮೈಬಣ್ಣ, ಆರೋಗ್ಯ, ಉತ್ಸಾಹ, ದೇಹ ಬೆಳವಣಿಗೆ, ಕಾಂತಿ, ಓಜಸ್ಸು, ಧಾತ್ವಗ್ನಿ ಭೂತಾಗ್ನಿಗಳು ಹಾಗೂ ”ಪ್ರಾಣ” ಇವು ”ಅಗ್ನಿ” ( ಪಾಚಕಾಗ್ನಿ) ಯನ್ನು ಅವಲಂಭಿಸಿಕೊಂಡಿವೆ ! ಅಗ್ನಿ ಶಾಂತವಾದರೆ ಮರಣ ! ಅಗ್ನಿ ಚೆನ್ನಾಗಿದ್ದರೆ ರೋಗರಹಿತ ದೀರ್ಘಾಯುಸ್ಸು !! ವಿಕೃತವಾದ ಅಗ್ನಿಯಿದ್ದರೆ ರೋಗ !! ಹೀಗೆ ”ಅಗ್ನಿ”ಯೇ ಆಯುಸ್ಸಿನ ಮೂಲವೆನ್ನುತ್ತಾರೆ.

Share With Your Friends

Leave a Comment