ಪರಿಸರ ಮಾಲಿನ್ಯದಿಂದ ‘ಸ್ವ’ರಕ್ಷಣೆ ಹೇಗೆ? – ೩
ಬೆಂಗಳೂರು, ಚೆನ್ನೈ, ದಿಲ್ಲಿ, ಕೋಲ್ಕತಾ ನಗರಗಳಲ್ಲಿ ಪರಿಸರ ಮಾಲಿನ್ಯ ಮಿತಿಮೀರಿದೆ. ಎಷ್ಟರಮಟ್ಟಿಗೆ ಇದು ಹೆಚ್ಚಿದೆಯೆಂದರೆ, ಒಂದು ಸಲ ನಗರ ಮಧ್ಯ ಹೋಗಿ ಬಂದವರ ಮೈಯ್ಯಲ್ಲಿ ದಪ್ಪನೆಯ ಕಪ್ಪುಧೂಳು ಹೆಪ್ಪುಗಟ್ಟಿ ಕೂತಿರುತ್ತದೆ. ಎಚ್೧ಎನ್೧, ಟಿ.ಬಿ, ಹಂದಿ ಜ್ವರ ಮುಂತಾದ ಪ್ರಾಣವಹ ಸ್ರೋತಸ್ಸನ್ನು ಹಾಳುಮಾಡಿ ಬರುವ ವ್ಯಾಧಿಗಳು ಸಹ ಮಿತಿಮೀರಿವೆ. ಇವುಗಳನ್ನು ತಡೆಯಲು ಅಭ್ಯಂಗ, ಕರ್ಣಪೂರಣ, ಪ್ರತಿಮರ್ಶನಸ್ಯ, ಗಂಡೂಷ, ಪಾದಾಭ್ಯಂಗ, ಶಿರೋಭ್ಯಂಗ ಸ್ನಾನ ಮುಂತಾದವುಗಳು ಪರಿಣಾಮಕಾರಿಯಾಗಬಲ್ಲವು.
ಆದರೆ ರಾಸಾಯನಿಕ ಮಿಶ್ರಿತ ರಸಗೊಬ್ಬರದ ಬೆರಕೆಯಿಂದ ಬೆಳೆದ ತರಕಾರಿ, ಅಕ್ಕಿ, ಗೋಧಿ, ಬೇಳೆಕಾಳುಗಳನ್ನು ಸೇವಿಸುವುದು ಹಾಗೂ ಯೂರಿಯಾ ಮಿಶ್ರಿತ ಮೇವು ತಿಂದ ಆಕಳ ಹಾಲಿನ ಸೇವನೆಯಿಂದ ದೇಹವನ್ನು ಹಾಳುಮಾಡಿಕೊಳ್ಳುವುದು ಸಹ ತಾನೇ ಅನ್ನಕ್ಕೆ ವಿಷ ಬೆರೆಸಿಕೊಂಡು ತಿನ್ನುವ ಈ ಪರಿ ಮೂರ್ಖತನವೇ? ಇದು ಪರಿಸರ ಮಾಲಿನ್ಯದ ಇನ್ನೊಂದು ಮುಖ.
ಇಂತಹ ಪರಿಸ್ಥಿತಿಯಿಂದ ಹೊರಬರಲು ಕೆಲವು ಉಪಾಯಗಳನ್ನು ಅನುಸರಿಸಬಹುದಲ್ಲವೇ?
- ಅಕ್ಕಿ, ಗೋಧಿ, ಬೇಳೆಕಾಳುಗಳನ್ನು ನೈಸರ್ಗಿಕವಾಗಿ ರಸಗೊಬ್ಬರವಿಲ್ಲದೆ ಬೆಳೆದ ಬೆಳೆಯನ್ನು ಉಪಯೋಗಿಸುವ ಪ್ರಯತ್ನ ಮಾಡಬೇಕು.
- ಸಾಧ್ಯವಾದಷ್ಟು ಚಿಕ್ಕ ತೋಟವಿದ್ದರೂ ಸರಿಯೇ, ಸ್ವಂತ ತರಕಾರಿಯನ್ನು ಬೆಳೆದು ಉಪಯೋಗಿಸುವ ಪ್ರಯತ್ನವನ್ನು ಮಾಡಬೇಕು.
- ಯೂರಿಯಾ ಮಿಶ್ರಿತ ಮೇವು ತಿನ್ನದ ಆಕಳ ಹಾಲನ್ನು ಯೂರಿಯಾ ಬೆರೆಸದೆ ಸಂಗ್ರಹಿಸಿ ಸೇವಿಸುವ ಪ್ರಯತ್ನ ಮಾಡಬೇಕು.
- ಅಯೋಡಿನ್ ಮಿಶ್ರಿತವಲ್ಲದ ಉಪ್ಪನ್ನು ಸೇವಿಸುವುದು ಒಳ್ಳೆಯದು. ( ಇತ್ತೀಚೆಗೆ ಥೈರಾಯಿಡ್ ಗ್ಲಾಂಡಗೆ ಸಂಬಂಧಿಸಿದ ಖಾಯಿಲೆಗಳು ಹೆಚ್ಚಿರುವುದು ಇದಕ್ಕೆ ಪುರಾವೆಯೆನ್ನಬಹುದು.)
- ಇನ್ನು ಜನಪದೋಧ್ವಂಸಕರ (Epidemic) ಖಾಯಿಲೆಗಳು ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುತ್ತವೆ. ಇವುಗಳನ್ನು ತಡೆಯಲು ಸಹ ಮೇಲ್ಕಂಡ ಅಭ್ಯಂಗ, ನಸ್ಯ, ಕರ್ಣಪೂರಣ ಮುಂತಾದ ಉಪಕ್ರಮಗಳು ಸಹಾಯಕಗಳೇ ಸರಿ! ಜೊತೆಯಲ್ಲಿ ನಿತ್ಯ ಕ್ಷೀರ, ಘೃತಗಳ ಸೇವನೆ ರೋಗನಿರೋಧಕ ಶಕ್ತಿ ವರ್ಧಕವಾಗಿದೆ. ‘ಘೃತಸೇವನೆ‘ ಓಜೋವರ್ಧಕವಾದ್ದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಯಲ್ಲಿ “ಧಾರಯೇತ್ ಸತತಂ ರತ್ನಸಿದ್ಧಮಂತ್ರಮಹೌಷಧೀಃ॥”ಎಂಬ ವಾಗ್ಭಟರ ವಾಣಿಯಂತೆ, ಗುರುವಿನಿಂದ ದತ್ತ ಮಂತ್ರಗಳ ಉಚ್ಚಾರಣೆ, ರತ್ನ ಔಷಧಗಳನ್ನು ಧರಿಸುವುದರಿಂದಲೂ ರಕ್ಷಣೆ ಮಾಡಿಕೊಳ್ಳಬಹುದು.
ಗ್ರಹ ಶಾಂತಿ ಹವನ, ಅಥರ್ವಣವೇದೋಕ್ತ ರಕ್ಷಾವಿಧಾನಗಳು ವೈಯಕ್ತಿಕ, ಸಾಮಾಜಿಕ ರೋಗಗಳನ್ನು ತಡೆಯುವ ಉಪಾಯಗಳಿವೆ.
ಕೆಳಕಂಡ ‘ಸದ್ವತ್ತ’ಗಳ ಆಚರಣೆಯೂ ಸಹ ಮಾನವನ ಏಳ್ಗೆಗೂ , ರಕ್ಷಣೆಗೂ ಸಹಾಯಕಗಳಾಗಿವೆ.
- ಸತ್ಯವನ್ನೇ ನುಡಿಯುವುದು
- ಕೋಪ ತಾಳದೇ ಇರುವುದು
- ಮದ್ಯಪಾನ ಮಾಡದಿರುವುದು
- ಮೈಥುನವನ್ನು ಗೃಹಸ್ಥಧರ್ಮದ ನಿಯಮದಿಂದ ಆಚರಿಸುವುದು
- ಹಿಂಸೆ ಮಾಡದಿರುವುದು
- ಅತಿಯಾದ ಪ್ರವೃತ್ತಿ ಮಾಡದಿರುವುದು
- ಆಂತರಿಕ ನೆಮ್ಮದಿ ( ಪ್ರಶಾಂತತೆ)ಯನ್ನು ಕಾಯ್ದುಕೊಳ್ಳುವುದು
- ಮಂತ್ರಜಪವನ್ನು ಮಾಡುವುದು
- ಯಾವಾಗಲೂ ಶುಚಿತ್ವವನ್ನು ಪಾಲಿಸುವುದು
- ಧೈರ್ಯಗೆಡದಿರುವುದು
- ನಿತ್ಯದಾನವನ್ನು ಮಾಡುವುದು
- ನಿಯಮಿತವಾದ ಶಿಸ್ತಿನ ಜೀವನ ನಡೆಸುವುದು
- ಹಿರಿಯರನ್ನು,ಗುರುಗಳನ್ನು, ಜ್ಞಾನಿಗಳನ್ನು ಗೌರವಿಸುವುದು
- ದೇವಕಾರ್ಯಗಳನ್ನು ಶ್ರದ್ಧೆಯಿಂದ ಮಾಡುವುದು
- ಎಲ್ಲರ ಬಗ್ಗೆ ಕರುಣೆಯಿಂದ ವರ್ತಿಸುವುದು
- ಸಕಾಲದಲ್ಲಿ ನಿದ್ರೆ, ಸಕಾಲದಲ್ಲಿ ಏಳುವ ಅಭ್ಯಾಸ ಇಟ್ಟುಕೊಳ್ಳುವುದು
- ಹಾಲು, ತುಪ್ಪಗಳನ್ನು ನಿತ್ಯವೂ ಸೇವಿಸುವುದು
- ತಾನು ಇರುವ ಸಮಯ, ಸಂಧರ್ಭಗಳನ್ನರಿತು ವರ್ತಿಸುವುದು
- ಉಪಾಯದಿಂದ ಕೆಲಸಗಳನ್ನು ಮಾಡುವುದು
- ಅಹಂಕಾರ ರಹಿತನಾಗಿರುವುದು
- ಸಂಕುಚಿತ ಬುದ್ಧಿ ಬಿಟ್ಟು ಎಲ್ಲರಲ್ಲಿಯೂ ಭಗವಂತನನ್ನು ಕಾಣುವುದು
- ಆಸ್ತಿಕರ, ಜಿತೇಂದ್ರಿಯರ, ತನಗಿಂತ ವೃದ್ಧರ ಸಹವಾಸದಲ್ಲಿರುವುದು
- ಧರ್ಮ ಶಾಸ್ತ್ರಗಳ ಅಧ್ಯಯನ, ಅನುಷ್ಠಾನ.
ಇವಿಷ್ಟು ಮನುಷ್ಯನಿಗೆ ನಿತ್ಯರಸಾಯನಗಳೆನಿಸಿ ಇಹಪರಗಳ ಅಭಿವೃದ್ಧಿಗೂ ‘ಸ್ವ’ರಕ್ಷಣೆಗೂ ಸಹಾಯಕವಾಗುವುದರಲ್ಲಿ ಸಂದೇಹವಿಲ್ಲ.
ಸತ್ಯವಾದಿನಮಕ್ರೋಧಂ… ಯಥೋಕ್ತಾನ್ ಸ ಸಮಶ್ನುತೇ॥ (ಚ. ಚಿ. ೧-೪-೩೦-೩೫)