fbpx

ಪರಿಸರ ಮಾಲಿನ್ಯದಿಂದ ‘ಸ್ವ’ರಕ್ಷಣೆ ಹೇಗೆ? -೨

ಶಿರಸ್ಸು ಇಂದ್ರಿಯಗಳ ರಕ್ಷಣೆಗೆ ತೈಲ ಗಂಡೂಷ

oil-pulling

ಬೆಚ್ಚಗಿನ ಎಣ್ಣೆಯನ್ನು ಬಾಯಲ್ಲಿ ತುಂಬಿಕೊಳ್ಳುವುದೇ “ಗಂಡೂಷ” ವಿಧಿ. ಇದನ್ನೇ ಬಾಯಲ್ಲಿ  ತುಂಬಿ ಮುಕ್ಕಳಿಸಿದರೆ “ಕವಲಗ್ರಹ“. ಇವೆರಡೂ ಕಣ್ಣು, ಕಿವಿ, ಮೂಗು ಹಾಗೂ ಮುಖಕ್ಕೆ ಸಂಬಂಧಪಟ್ಟ ಖಾಯಿಲೆಗಳನ್ನು ತಡೆಗಟ್ಟಲು ಹಾಗೂ ಖಾಯಿಲೆಯಿದ್ದಾಗ ಆಯಾ ರೋಗಕಾಯಕ ಔಷಧಗಳಿಂದ ಮಾಡಿದಾಗ ಗುಣಮಾಡಲು ಸಹಾಯಕ. ಸರಿಯಾದ ಪ್ರಮಾಣದಲ್ಲಿ ‘ಗಂಡೂಷ’/’ಕವಲಗ್ರಹ’ ಮಾಡಿದರೆ ದೇಹವೂ ರೋಗರಹಿತವಾಗುವುದಲ್ಲದೆ ಇಂದ್ರಿಯಗಳ ಬಲವೂ ಹಿಗ್ಗುತ್ತದೆ.
ತೈಲ ಮಾತ್ರವಲ್ಲದೇ, ಅಯಾ ವ್ಯಕ್ತಿಯ ಪ್ರಕೃತಿ/ರೋಗಕ್ಕೆ ಅನುಸಾರವಾಗಿ ಹಾಲು, ಜೇನು, ಮಾಂಸರಸ, ಗೋಮೂತ್ರ, ತುಪ್ಪ, ಹುಳಿರಸ, ಒಗರುಕಷಾಯ ಹಾಗೂ ಬಿಸಿನೀರು ಇವುಗಳನ್ನು ಚಿಕಿತ್ಸೆಗೆ ಬಳಸಲಾಗುತ್ತದೆ.
ವಾತ ಪ್ರಧಾನ ರೋಗಗಳಲ್ಲಿ  ಬಿಸಿಯಾದ ಜಿಡ್ಡನ್ನೂ, ಪಿತ್ತಪ್ರಧಾನ ರೋಗಗಳಲ್ಲಿ ಸಿಹಿಯಾದ  ಆದರೆ ತಂಪಾದ ಔಷಧಗಳನ್ನೂ, ಕಫ ಪ್ರಧಾನ ರೋಗಗಳಲ್ಲಿ ಖಾರ, ಹುಳಿ, ಉಪ್ಪು ರುಚಿಯಿಂದ  ಕೂಡಿದ ಬಿಸಿ ಸಾರನ್ನೂ, ಮತ್ತು ಬಾಯಿಹುಣ್ಣನ್ನು ಗುಣಪಡಿಸಲು  ಒಗರು, ಕಹಿ ಹಾಗೂ ಸಿಹಿ ಗುಣಗಳಿಂದ ಕೂಡಿದ ಕಷಾಯಗಳನ್ನೂ ‘ಕವಲಗ್ರಹ’ಕ್ಕೆ ಬಳಸಲಾಗುತ್ತದೆ. (ಸು. ಚಿ. ೪೦-೫೮-೬೦)
 
“ಹನ್ವೋರ್ಬಲಂ ಸ್ವರಬಲಂ ವದನೋಪಚಯಃ ಪರಃ।
ಸ್ಯಾತ್ ಪರಂ ಚ ರಸಜ್ಞಾನಮನ್ನೇ ಚ ರುಚಿರುತ್ತಮಾ॥೭೮॥
ನ ಚಾಸ್ಯ ಕಂಠಶೋಷಃ ಸ್ಯಾನ್ನೋಷ್ಠಯೋಃ ಸ್ಪುಟನಾದ್ಭಯಂ।
ನ ಚ ದಂತಾಃ ಕ್ಷಯಂ ಯಾಂತಿ ದೃಢಮೂಲಾ ಭವಂತಿ ಚ।
ನ ಶೂನ್ಯತೇ ನ ಚಾಮ್ಲೇನ ಹೃಷ್ಯಂತೇ ಭಕ್ಷಯಂತಿ ಚ।
ಪರಾನಪಿ ಖರಾನ್ ಭಕ್ಷಾನ್ ತೈಲಗಂಡೂಷಧಾರಣತಃ ॥೮೦॥” (ಚರಕ ಸೂತ್ರ ೫)

ತೈಲಗಂಡೂಷದಿಂದ  ಸಿಗುವ ಲಾಭಗಳು:

 • ಹನು ಸಂಧಿ (jaw) ಗಳಿಗೆ ಬಲವುಂಟಾಗುತ್ತದೆ.
 • ಸ್ವರಬಲವೂ, ಮುಖಕ್ಕೆ ಕಾಂತಿಯೂ ಉಂಟಾಗುತ್ತದೆ.
 • ರುಚಿ ಶಕ್ತಿ ಹೆಚ್ಚುತ್ತದೆ. ಎಲ್ಲಾ ರುಚಿಗಳು ಚೆನ್ನಾಗಿ ತಿಳಿಯುತ್ತವೆ.
 • ಗಂಟಲೆಂದೂ ಒಣಗುವುದಿಲ್ಲ. ತುಟಿ ಒಣಗುವುದಿಲ್ಲ.
 • ಹಲ್ಲುಗಳು ಕ್ಷಯವಾಗವು ಹಾಗೂ ಅವುಗಳ ಮೂಲ ಗಟ್ಟಿಯಾಗುತ್ತದೆ.
 • ಹುಳಿ ತಿಂದರೂ ಹಲ್ಲು ಚುರುಗುಟ್ಟುವುದಿಲ್ಲ. ಅಲ್ಲದೇ
 • ಅತಿಯಾದ  ಗಟ್ಟಿಯಾದ ಒರಟಾದ ಭಕ್ಷ್ಯಗಳನ್ನೂ ಸುಲಭವಾಗಿ ಜಗಿಯುವಷ್ಟು ಹಲ್ಲುಗಳು ಸದೃಢವಾಗುತ್ತವೆ.

ಹೇಗೆ ಮಾಡಬೇಕು?

 • ೩-೪ ಚಮಚೆಯಷ್ಟು ಎಣ್ಣೆಯನ್ನು ಬೆಚ್ಚಗೆ ಮಾಡಿ ಬಾಯಿಯಲ್ಲಿ (೩/೪ ಭಾಗ) ತುಂಬಿಕೊಂಡು ೫ ನಿಮಿಷಗಳ ಕಾಲ ಇಟ್ಟುಕೊಂಡು ನಂತರ ಚೆನ್ನಾಗಿ ಕುಚು ಕುಚು ಮಾಡಿ ಬಾಯಿ ಮುಕ್ಕಳಿಸಿ ಉಗುಳಿ. ಹೀಗೆ ೨-೩ ಸಲ ಮಾಡಿ.
 • ನಂತರ ಬಿಸಿ ನೀರಿನಿಂದ ಒಮ್ಮೆ ಬಾಯಿ ಮುಕ್ಕಳಿಸಿದರೆ ಒಳ್ಳೆಯದು.
 • ಗಂಟಲಿನ ರೋಗ, ಜ್ವರ, ಕಫರೋಗವಿರುವಾಗ ತೈಲ ಗಂಡೂಷ ಬೇಡ. ಆಗ ಮಾಡುವುದಾದರೆ ವೈದ್ಯರ ಸಲಹೆಯಂತೆ ವಿಶಿಷ್ಟ ಔಷಧಿಗಳಿಂದ ‘ಗಂಡೂಷ’ ಮಾಡಬಹುದು.

ತಲೆಯ ರಕ್ಷಣೆಗಾಗಿ

head-massage
ನಿತ್ಯಂ ಸ್ನೇಹಾರ್ದ್ರಶಿರಸಃ………. 
ಕೂದಲುದುರುವುದು, ಬೆಳ್ಳಗಾಗುವುದು, ಹೊಟ್ಟು ಉಂಟಾಗಿ ತಲೆ ಕೆರೆತ, ತಲೆ ನೋವು, ನಿದ್ರೆ ಕಡಿಮೆಯಾಗುವುದು ಇತ್ಯಾದಿಗಳು ಆಧುನಿಕ ವೈಜ್ಞಾನಿಕ ಯುಗದ ವಿಶೇಷ ಕೊಡುಗೆಗಳು. ತಲೆಗೆ “ಶಾಂಪೂ” ಹಾಕುವರೇ ಹೊರತು, ನಾವು ಎಣ್ಣೆ ಕಾಣಿಸುವವರಲ್ಲ. ಸ್ನಾನದ ನಂತರ ತಲೆಗೆ ಎಣ್ಣೆ ಇಟ್ಟುಕೊಳ್ಳುವವರು ವಿರಳವೇ ಸರಿ ! ಇದಕ್ಕಿರುವ ಏಕೈಕ ಪರಿಹಾರವೆಂದರೆ ತಲೆಗೆ ಎಣ್ಣೆ ಹಾಕಿ ಸ್ನಾನ ಮಾಡುವುದು ಹಾಗೂ ಸ್ನಾನದ ನಂತರವೂ ತಲೆಗೆ ಎಣ್ಣೆ ಹಾಕಿಯೇ ಬಾಚುವುದು.
ಧೂಳು, ಗಾಳಿ, ಹೊಗೆ ಇರುವೆಡೆ, ರೋಗಾಣುಗಳಿರುವ ಕೊಳಕು ಪರಿಸರದಲ್ಲಿ ಓಡಾಡುವಾಗ ತಲೆಗೂ, ಕೂದಲುಗಳಿಗೂ ಇಂದ್ರಿಯಗಳಿಗೂ ರಕ್ಷಣೆಯೆಂದರೆ ಈ ಎಣ್ಣೆಯೇ !
 
“ನಿತ್ಯಂ ಸ್ನೇಹಾರ್ದ್ರಶಿರಸಃ ಶಿರಃ ಶೂಲಂ ನ ಜಾಯತೇ ।
ನ ಖಾಲಿತ್ಯಂ ನ ಪಾಲಿತ್ಯಂ ನ ಕೇಶಾಃ ಪ್ರಪತಂತಿ ಚ ॥೮೧॥
ಬಲಂ ಶಿರಃ ಕಪಾಲಾನಾಂ ವಿಶೇಷೇಣಾಭಿವರ್ಧತೇ।
ದೃಢಮೂಲಾ ಚ ದೀರ್ಘಾಶ್ಚಕೃಷ್ಣಕೇಶಾ ಭವಂತಿ ಚ ॥೮೨॥
ಇಂದ್ರಿಯಾಣಿ ಪ್ರಸೀದಂತಿ ಸುತ್ವಗ್ಭವತಿ ಚಾನನಮ್।
ನಿದ್ರಾಲಾಭಃ ಸುಖಂ ಚ್ ಸ್ಯಾತ್ ಮೂರ್ಧ್ನಿತೈಲನಿಷೇವಣಾತ್॥” (ಚ. ಸೂ. ೫-೮೧-೮೪)
 • ಪ್ರತಿನಿತ್ಯ ಸ್ನೇಹದಿಂದ ( ತೈಲದಿಂದ) ಶಿರಸ್ಸನ್ನು ಆರ್ದ್ರವಾಗಿ  (ಹಸಿಯಾಗಿ)  ಇಟ್ಟುಕೊಳ್ಳುವವರಿಗೆ ತಲೆ ನೋವು ಬರುವುದಿಲ್ಲ.
 • ತಲೆ ಕೂದಲುದುರುವುದು, ಬೋಳಾಗುವುದು ಹಾಗೂ ಬಿಳಿಯಾಗುವುದು ಇವು ಉಂಟಾಗುವುದಿಲ್ಲ.
 • ತಲೆ ಬುರುಡೆ ( ಶಿರಃ- ಕಪಾಲ) ಗಟ್ಟಿಯಾಗಿರುತ್ತದೆ.
 • ಕೂದಲುಗಳ ಮೂಲ ದೃಢವಾಗಿಯೂ, ಕೂದಲುಗಳು ಕಪ್ಪಾಗಿಯೂ ದೀರ್ಘವೂ ಆಗುತ್ತವೆ.
 • ಇಂದ್ರಿಯಗಳಿಗೆ ನಿತ್ಯ ಪುಷ್ಠಿ ಉಂಟಾಗುವ ಕಾರಣ ಕೊನೆಯವರೆಗೆ ದೃಷ್ಟಿ, ಶ್ರವಣ, ಘ್ರಾಣಶಕ್ತಿಗಳು  ಚೆನ್ನಾಗಿರುತ್ತವೆ.
 • ಮುಖದ ಚರ್ಮ, ಕಾಂತಿಯುತವೂ ಸುಂದರವೂ ಆಗುತ್ತದೆ.
 • ಸಕಾಲದಲ್ಲಿ ಸರಿಯಾದ ನಿದ್ರೆ ಬರುವುದು ಆರ್ದ್ರ ಶಿರಸ್ಸಿನ ಮುಖ್ಯವಾದ ಭಾಗ.
 • ಶಿರೋಗತವಾದ ಎಲ್ಲ ರೋಗಗಳನ್ನೂ ಶಿರೋಭ್ಯಂಗವು ತಡೆಯುತ್ತದೆ.

ಪಾದಾಭ್ಯಂಗದ ಲಾಭಗಳು:

foot-massage
 • ನಿತ್ಯ ಪಾದಾಭ್ಯಂಗದಿಂದ ಕಣ್ಣುಗಳಿಗೆ ಹಿತಕರ, ಶ್ರಮನಾಶವಾಗುತ್ತದೆ.
 • ಸುಖನಿದ್ರೆಯುಂಟಾಗುತ್ತದೆ.
 • ರಾತ್ರಿ ಮಲಗುವಾಗ ಪಾದಗಳಿಗೆ ಸುಖವಾಗುವಂತೆ ಮೃದುವಾಗಿ ಎಣ್ಣೆ ತಿಕ್ಕಿ ಹಿಸುಕಿದರೆ, ಸುಖವಾದ ನಿದ್ರೆಯುಂಟಾಗುವುದಲ್ಲದೇ ಪಾದಗಳು ಒಡೆದು ಬಿರುಕು ಬಿಡುವುದು ತಪ್ಪುತ್ತದೆ.

ರಕ್ಷಣೆಯ ಇನ್ನಷ್ಟು ಉಪಾಯಗಳು

ಇವುಗಳಲ್ಲದೇ, ಮಳೆ, ಬಿಸಿಲುಗಳಲ್ಲಿ ತಲೆಗೆ ರುಮಾಲು, ಪೇಟಾ, ಟೋಪಿ ಹಾಕಿಕೊಳ್ಳುವುಸು, ಮಳೆಯಲ್ಲಿ ಛತ್ರಿಯಿಂದ ಶಿರಸ್ಸಿಗೆ ರಕ್ಷಣೆ ಕೊಡುವುದು, ಕಿವಿಗಳಿಗೆ ಹತ್ತಿ ಹಾಕಿಕೊಂಡು ಥಂಡಿ, ಗಾಳಿಯಿರುವಾಗ ಹೊರಬೀಳುವುದು, ಹೊರಗಿನಿಂದ ಬಂದಕೂಡಲೇ ಕೈಕಾಲು ಮುಖ ತೊಳೆಯುವುದು, ಸಕಾಲದಲ್ಲಿ ಹಿತಮಿತವಾದ ಬಿಸಿ ಅಹಾರವನ್ನು ಬಿಸಿ ನೀರಿನೊಂದಿಗೆ ಸೇವಿಸುವುದು ಇವು ಪರಿಸರ ಮಾಲಿನ್ಯದಿಂದ ‘ಸ್ವ’ ರಕ್ಷಣೆಗಿರುವ ಇನ್ನಿತರ ಉಪಾಯಗಳು.

Share With Your Friends

Leave a Comment