fbpx

ನಮ್ಮ ಜೀವನದ ಗುರಿ ಏನು?

ನಮ್ಮ ಜೀವನದ ಗುರಿ ಏನು?

purpose of life
ನಮ್ಮಲ್ಲಿ ಅನೇಕರು  ಇಲ್ಲದಿದ್ದುದಕ್ಕಾಗಿ ಕೊರಗುತ್ತಾ ಇದ್ದುದನ್ನು ಗೌರವಿಸದೇ  ಜೀವನವನ್ನು ಹಾಳು ಮಾಡಿಕೊಳ್ಳುತ್ತೇವೆ. ಜೀವನದ ಗೊತ್ತು ಗುರಿಗಳರಿಯದೇ  ಕೇವಲ ‘ಸುಖ‘ವೆಂಬ ಮರೀಚಿಕೆಯನ್ನು ಅರಸುತ್ತಾ ಅಲೆದಾಡುತ್ತಿರುತ್ತೇವೆ.
ವಸ್ತುತಃ ಪರಮಾತ್ಮನ ಅಂಶವಾದ ನಾವು ಎಲ್ಲವನ್ನೂ ಅರಿತಿರುತ್ತೇವೆ. ಆದರೂ ರಜಸ್ತಮಗಳಿಂದ ಆವೃತವಾಗಿರುವ ಕಾರಣದಿಂದ ಆಜ್ಞರಂತಿರುತ್ತೇವೆ. ಚರಕ ಸಂಹಿತೆಯಲ್ಲಿ “ಆತ್ಮಾ ಕಿಮಜ್ಞೋ ಜ್ಞಃ?” ಎಂಬ ಪ್ರಶ್ನೆಗೆ ಉತ್ತರ ನೀಡುತ್ತಾ ಆತ್ರೇಯರು –
“ಆತ್ಮಾಜ್ಞಃ ಕರಣೈ ಯೋಗಾತ್ ಜ್ಞಾನಂ  ತ್ವಸ್ಯ ಪ್ರವರ್ತತೇ । 
ಕರಣಾನಾಮವೈಮಲ್ಯಾದಯೋಗಾದ್ವಾನ  ವರ್ತತೇ ।।
ಪಶ್ಯತೋ ಪಿ  ಯಥಾದರ್ಶೇ  ಸಂಕ್ಲಿಷ್ಟೇ ನಾಸ್ತಿ ದರ್ಶನಂ ।
ತತ್ವಂ ಜಲೇ ವಾ ಕಲುಷೇ ಚೇತಸ್ಯು ಪಹತೇ ತಥಾ ।। ಎಂದಿದ್ದಾರೆ.
ವಸ್ತುತಃ ಆತ್ಮಾ “ಜ್ಞಃ” ಎಂದರೆ ಎಲ್ಲವನ್ನೂ ತಿಳಿದವನು. ಕರಣಗಳ ಸಂಯೋಗದಿಂದ ಈ ಜ್ಞಾನದ ಪ್ರವೃತ್ತಿಯಾಗುತ್ತದೆ. ಕರಣಗಳು ಹೊಲಸಾಗಿದ್ದರೆ ಅಥವಾ ಅಸಂಯೋಗವಿದ್ದರೆ ಜ್ಞಾನದ ಪ್ರವೃತ್ತಿಯಾಗುವುದಿಲ್ಲ.
ಕನ್ನಡಿ ಮಲಿನವಾಗಿದ್ದರೆ ರೂಪ ಹೇಗೆ ಕಾಣುವುದಿಲ್ಲವೋ ಹಾಗೂ ನೀರು ತಿಳಿಯಾಗಿಲ್ಲದಿದ್ದರೆ ತಳ ಕಾಣುವುದಿಲ್ಲವೋ ಹಾಗೆಯೇ ಮನಸ್ಸು ಮಲಿನವಾಗಿದ್ದರೆ ಜ್ಞಾನ ಪ್ರಾಪ್ತಿಯಾಗದು. ಬೇಡದ ವಿಚಾರಗಳು ಮನಸ್ಸಿನಲ್ಲಿ  ತುಂಬಿದಾಗ ಶುದ್ಧ ಜ್ಞಾನದ ಪ್ರಕಟೀಕರಣ  ಅಸಾಧ್ಯ.
ಇಂದ್ರಿಯ, ಶರೀರ ಹಾಗೂ ಮನಸ್ಸುಗಳು “ಆತ್ಮ”ನ ಕರಣಗಳು. ಇವುಗಳಲ್ಲಿ ಪರಿಶುದ್ಧತೆಯಿರಬೇಕು. ಪತ್ರಿಕೆ, ಟಿ.ವಿ, ಮಾಧ್ಯಮಗಳ ಮೂಲಕ ನಿತ್ಯ ಅನವಶ್ಯಕ ಬಾಹ್ಯ ವಿಚಾರಗಳತ್ತ ಮನಸ್ಸು ಹರಿಯತೊಡಗಿದರೆ, ಆಂತರಿಕ ಪರಿಶುದ್ಧಿಗೆ ಅವಕಾಶವೆಲ್ಲಿ?
ಈ ಇಂದ್ರಿಯ ಮನಸ್ಸುಗಳೇ ಜನ್ಮ ಜನ್ಮಾಂತರಗಳ ಪ್ರಾಪ್ತಿಗೆ ಮೂಲ ಕಾರಣಗಳು. ವಾಸನೆಗಳ ಮೂಲಕ ಬದುಕಿಗೆ ಲಿಪ್ತವಾಗುವ ಮನಸ್ಸು ಕರ್ಮಗಳ ಸಂಚಯಕ್ಕೆ ಕಾರಣವಾಗಿ ಪುನಃ ಪುನಃ ಜನ್ಮಕ್ಕೆ ಕಾರಣವಾಗುತ್ತದೆ.
“ರಜಸ್ತಮೋಭ್ಯಾಂ ಯುಕ್ತಸ್ಯ ಸಂಯೋಗೋ ಯಮನಂತವಾನ್।
ತಾಭ್ಯಾಂ ನಿರಾಕೃತಾಭ್ಯಾಂ ತು ಸತ್ವವೃದ್ಧ್ಯಾ ನಿವರ್ತತೇ॥ ೩೬॥” (ಚ.ಶಾ. ೧)
ರಜಸ್ತಮನಸ್ಸುಗಳೊಡನೆ ಕೂಡಿದ ಈ ರಾಶಿಪುರುಷ ಅನಂತ ಜನ್ಮಗಳನ್ನು ಹೊಂದುತ್ತಾನೆ. ಅವೆರಡನ್ನೂ ಇಲ್ಲವಾಗಿಸಿ ಸತ್ವ ವೃದ್ಧಿಯಾದಾಗ ಮುಕ್ತಿಪ್ರಾಪ್ತಿ ಸಾಧ್ಯ. ರಹಸ್ತಮನಸ್ಸುಗಳ ಈ ಆವರಣ ನೈಜ ಬದುಕಿನಲ್ಲಿ ಯಾವ ಸ್ವರೂಪದ್ದಾಗಿರುತ್ತದೆ? ಅನಾದಿ ಸ್ವರೂಪದ ಆತ್ಮನಿಗೆ ಉತ್ಪತ್ತಿಯಿಲ್ಲದಿರುವಾಗ ಜನ್ಮ ಹೇಗಾಗುತ್ತದೆ? ಎಂಬ ಪ್ರಶ್ನೆಗಳಿಗೆ ಚರಕರು-
“ಪ್ರಭವೋ ನಹ್ಯನಾದಿತ್ವಾದ್ವಿದ್ಯತೇ ಪರಮಾತ್ಮನಃ॥
ಪುರುಷೋ ರಾಶಿಸಂಜ್ಞಸ್ತು ಮೋಹೇಚ್ಛಾದ್ವೇಷಕರ್ಮಜಃ॥೩೪॥” (ಚ.ಶಾ. ೨)
ಅನಾದಿ ಸ್ವರೂಪದ ಪರಮಾತ್ಮನಿಗೆ ಸೃಷ್ಟಿ ಇಲ್ಲ. ಆದರೆ  ರಾಶಿ ಸ್ವರೂಪದ ಪುರುಷನಿಗೆ ಮೋಹ, ಇಚ್ಛಾ, ದ್ವೇಷ, ಸ್ವರೂಪೀ ರಜಸ್ತಮಗಳ ಆವರಣದಿಂದ ಪುನರ್ಜನ್ಮವುಂಟು.
ಯಾವುದೇ ವ್ಯಕ್ತಿ, ವಿಷಯಗಳ ಕುರಿತು ಮನಸ್ಸಲ್ಲಿ ಉಂಟಾಗುವ ಅತಿಯಾದ ಪ್ರೀತಿ, ಬೇಕುಬೇಕೆಂಬ ಭಾವ, ಪ್ರಬಲವಾದ ದ್ವೇಷಗಳು ಮುಂದಿನ ಜನ್ಮದಲ್ಲಿ ಇವುಗಳ ಫಲವುಣ್ಣಲು ಕಾರಣವಾಗುತ್ತದೆ.
ಆದ್ದರಿಂದ ನಿರ್ಲಿಪ್ತವಾಗಿ “ಕರ್ಮ” ಮಾಡುವುದು ಕೇವಲ ಭಗವಂತನನ್ನು ಮೆಚ್ಚಿಸಲು ಮಾಡುವ ಕಾರ್ಯಗಳು ಜನ್ಮ, ಮರಣಗಳೆಂಬ ಬಂಧನದಿಂದ ಮುಕ್ತಿ ದೊರಕಿಸಬಲ್ಲವು. ಇದೇ ರೀತಿ ಪ್ರತಿಯೊಬ್ಬ ಜೀವಿಯ ಬದುಕಿನ ಪರಮ ಉದ್ದೇಶವಾಗಿದೆ.

Share With Your Friends

1 thought on “ನಮ್ಮ ಜೀವನದ ಗುರಿ ಏನು?”

  1. ನಮ್ಮ ಜೀವನದಲ್ಲಿ ಅಂದುಕೊಂಡಿದ್ದ ಈಡೇರು ತದೆ ಎಂಬ ಧನತ್ಮಕ ಯೋಚನೆಯಲ್ಲಿದ್ದಾಗ ಬರುವ ಸಂದೇಶಗಳು ಋಣಾತ್ಮಕವಾಗಿದ್ದಾಗ, ಆಗಲು ನಾವು ಧಾನಾತ್ಮಕ ಯೋಚನೆಯಲ್ಲಿರಬೇಕೆ? ಮತ್ತೆ ಅದಕ್ಕೆ ಏನು ಮಾಡಬೇಕು? ಅದರಿಂದ ಮನಸಿಗಾಗುವ ನೋವನ್ನು ಹೇಗೆ ಪರಿಹರಿಸಿಕೊಳ್ಳಬೇಕು?

    Reply

Leave a Comment