ತ್ರಿದೋಷಗಳಲ್ಲಿ ಪ್ರಧಾನ ದೋಷ – ವಾತ
ಸ್ವತಂತ್ರವೂ , ನಿತ್ಯವೂ, ಎಲ್ಲೆಡೆಗೆ ಕಂಡುಬಂದರೂ ಅವ್ಯಕ್ತವಾದ ವಾಯುವೇ ತ್ರಿದೋಷಗಳಲ್ಲಿ ಮೊದಲನೆಯದು. ರಜೋಗುಣ ಅಧಿಕವಾದ ಈ ವಾಯುವು ಶೀಘ್ರವಾಗಿ ರೋಗೋತ್ಪತ್ತಿಕಾರಕ. ಮಹಾವ್ಯಾಧಿಗಳನ್ನುಂಟುಮಾಡುವ ಸ್ವಭಾವದ್ದು. ಮೂರು ದೋಷಗಳಲ್ಲಿಯೂ ವಾಯುವಿಗೆ ಮಾತ್ರ ಗತಿಯುಂಟು.“ವಾ ಗತಿ ಗಂಧನಯೋಃ” ಗತಿ ಮತ್ತು ಜ್ಞಾನಕ್ಕೆ ಕಾರಣವಾದದ್ದು ವಾತ ಎಂಬುದು ಶಬ್ಧ ವಾಖ್ಯೆ. ಸಮಸ್ಥಿತಿಯಲ್ಲಿರುವ ವಾತ ಆರೋಗ್ಯಕ್ಕೆ ಪೂರಕ. ಅದರ ಕಾರ್ಯಗಳು
“ಉತ್ಸಾಹೋಚ್ಛಾ ಸನಿಃಶ್ವಾಸ ಚೇಷ್ಟಾವೇಗಃ ಪ್ರವರ್ತನೈಃ ।
ಸಮ್ಯಗ್ಗತ್ಯಾ ಚ ಧೂತಾನಾಂ ಅಕ್ಷಾಣಾಂ ಪಾಟಿವೇನ ಚ ॥
ಅನುಗೃಹ್ಣಾತ್ಯವಿಕೃತಃ….” (ಅ. ಹೃ. ಸೂ.)
- ಉಸಿರಾಟದ ಪ್ರಕ್ರಿಯೆ
- ಶಾರೀರಿಕ ಕ್ರಿಯೆಗಳು
- ಮಲ, ಮೂತ್ರ, ಸ್ವೇದ ಪ್ರವೃತ್ತಿ
- ಹಸಿವು
- ನೀರಡಿಕೆ
- ಕೆಮ್ಮು
- ಆಕಳಿಕೆ
- ಊರ್ಧ್ವಾಧೋವಾತ
- ಸೀನು
- ನಿದ್ರೆ
- ಶ್ರಮಶ್ವಾಸ
- ವೀರ್ಯಪ್ರವೃತ್ತಿ ಮುಂತಾದ ಸರ್ವ ಶಾರೀರಿಕ, ಸಿಟ್ಟು, ದುಃಖ ಮುಂತಾದ ಮಾನಸಿಕ ಪ್ರವೃತ್ತಿಗಳಿಗೂ ವಾತವೇ ಸಹಾಯಕಾರಿ.
- ರಸ, ರಕ್ತ, ಮಾಂಸ, ಮೇದ, ಮಜ್ಜಾ, ಶುಕ್ರ, ಅಸ್ಥಿ ಮುಂತಾದ ಧಾತುಗಳ ನಿರ್ಮಾಣ ಪ್ರಕ್ರಿಯೆ ಇಂದ್ರಿಯಗಳ ಕಾರ್ಯಗಳಿಗೆಲ್ಲ ಅವಿಕೃತವಾದ ವಾಯುವಿನ ಸಹಾಯವಿರಲೇಬೇಕು.ಶರೀರದ ಎಲ್ಲಾ ರೀತಿಯ ಕ್ರಿಯೆಗಳಲ್ಲೂ ವಾತದ ಕಾರ್ಯವಿರಲೇಬೇಕು.
ವಾತದ ಗುಣಗಳು:
“ತತ್ರ ರೂಕ್ಷೋ ಲಘುಃ ಶೀತಃ ಖರಃ ಸೂಕ್ಷ್ಮಶ್ಚಲೋsನಿಲಃ ॥”
ವಾತದ ಗುಣಗಳೆಂದರೆ ಒಣಗುಣ. ಹಗುರ, ತಂಪು, ಒರಟು, ಸೂಕ್ಷ್ಮ ಹಾಗೂ ಚಲ (ಗತಿ) ಗುಣಗಳು. ನಾವು ಸೇವಿಸುವ ಆಹಾರ ವಿಹಾರಗಳಲ್ಲಿ ಮೇಲ್ಕಂಡ ಗುಣಗಳು ಹೆಚ್ಚಾಗಿದ್ದಲ್ಲಿ ಆಗ ವಾತದೋಷ ದೇಹದಲ್ಲಿ ಹೆಚ್ಚಾಗುತ್ತದೆ. ಹೀಗೆ ಹೆಚ್ಚಾದ ವಾತ ಕೆಳಕಂಡ ಲಕ್ಷಣಗಳನ್ನು ತೋರುತ್ತದೆ.
“………….ವೃದ್ಧಸ್ತು ಕುರುತೇನೀಲಃ ।
ಕಾರ್ಷ್ಯಕಾರ್ಷ್ಣ್ಯೋಷ್ಣಕಾಮಿತ್ವಕಂ ಪನಾಹ ಶಕೃದ್ ಗ್ರಹಾನ್।
ಬಲನಿದ್ರೇಂದ್ರಿಯ ಭ್ರಂಶ ಪ್ರಲಾಪ ಭ್ರಮದೀನತಾ॥”
- ಕೃಶತೆ,
- ಕಪ್ಪುವರ್ಣ,
- ಬಿಸಿಯ ಬಯಕೆ,
- ಶರೀರ ನಡುಗುವಿಕೆ,
- ಉದರ ಶೂಲ,
- ಮಲಸ್ತಂಭನ,
- ಬಲಹೀನತೆ,
- ಇಂದ್ರಿಯ ಕ್ಷೀಣತೆ,
- ನಿದ್ರಾಲ್ಪತೆ,
- ಪ್ರಲಾಪ,
- ತಲೆತಿರುಗುವಿಕೆ ಹಾಗೂ
- ದೀನತೆ.
ವಾಯು ಸರ್ವಶರೀರಗತವೇ ಸರಿ. ಆದರೂ ಅದರ ವಿಶೇಷ ಸ್ಥಾನಗಳು-
೧) ಪಕ್ವಾಶಯ (ದೊಡ್ಡ ಕರುಳು) ,
೨) ಸೊಂಟ,
೩) ಕೈ, ಕಾಲುಗಳು
೪) ಕಿವಿ
೫)ಮೂಳೆಗಳು
೬)ಚರ್ಮ. ಅದರಲ್ಲೂ ವಿಶೇಷವಾಗಿ ಪಕ್ವಾಶಯ ವಾತದ ಮೂಲ ಸ್ಥಾನವಾಗಿದೆ.
ವಾತದ ಚಿಕಿತ್ಸೆಯಲ್ಲಿ ಬಸ್ತಿ ( ಸ್ನೇಹ, ನಿರೂಹ) ಚಿಕಿತ್ಸೆ ಇದೇ ಕಾರಣದಿಂದ ಅತೀವ ಪರಿಣಾಮಕಾರಿಯಾಗಿದೆ. ವಾತವನ್ನು ಪುನಃ ೫ ಪ್ರಕಾರವಾಗಿ ವಿಭಜಿಸಲಾಗಿದೆ.
೧) ಪ್ರಾಣ,
೨) ವ್ಯಾನ,
೩) ಸಮಾನ,
೪)ಉದಾನ,
೫) ಅಪಾನ ವಾಯು
೧) ಪ್ರಾಣವಾತ :
” ಪ್ರಾಣೋsತ್ರ ಮೂರ್ಧಗಃ।
ಹೃದಯೇಂದ್ರಿಯ ಚಿತ್ತಧೃಕ್ ಷ್ಠಿವನ ಕ್ಷವಥೂದ್ಗಾರ ನಿಃಶ್ವಾಸಾನ್ನ ಪ್ರವೇಶಕೃತ್॥”
ಶಿರಸ್ಸಿನಲ್ಲಿ ಆಶ್ರಿತವಾಗಿ ಶಿರಸ್ಸಿನಿಂದ ಹೊರಡುವ ಪ್ರಾಣವಾತವು ಹೃದಯಗತಿ, ಇಂದ್ರಿಯ ಹಾಗೂ ಮನಸ್ಸಿನ ನಿಯಂತ್ರಣಕ್ಕೆ ಕಾರಣವಾಗುತ್ತದೆ. ಉಗುಳುವಿಕೆ, ಸೀನು, ತೇಕು, ಉಸಿರಾಟ ಹಾಗೂ ಅನ್ನ ಪ್ರವೇಶ ಪ್ರಕ್ರಿಯೆಗಳು ಪ್ರಾಣವಾತದಿಂದಾಗುತ್ತದೆ.
ಈ ಪ್ರಾಣವಾತದ ಪ್ರಕೋಪವು ಈ ಕೆಳಗಿನ ಕಾರಣಗಳಿಂದಾಗಿ ಆಗುತ್ತದೆ.
ಶರೀರವನ್ನು ಒಣಗಿಸುವಿಕೆ, ಅತಿ ವ್ಯಾಯಾಮ, ಅತಿ ಉಪವಾಸ, ಅತಿ ಆಹಾರ ಸೇವನೆ, ಅತಿ ನಡೆಯುವಿಕೆ, ಮಲ ಮೂತ್ರಾದಿ ಶರೀರದ ಸಹಜ ಪ್ರವೃತ್ತಿಗಳನ್ನು ಒತ್ತಾಯದಿಂದ ಪ್ರೇರೇಪಿಸುವುದು ಹಾಗೂ ತಡೆಯುವುದು.
ಪರಿಣಾಮ:
ಹೀಗೆ ಪ್ರಕುಪಿತವಾದ ಪ್ರಾಣವಾತವು ಇಂದ್ರಿಯಗಳ ಕಾರ್ಯಹಾನಿ, ನೆಗಡಿ, ಅರ್ಧಾಂಗವಾಯು, ಬಾಯಾರಿಕೆ, ಕೆಮ್ಮು, ಉಬ್ಬಸ ಮುಂತಾದ ಅನೇಕ ವ್ಯಾಧಿಗಳನ್ನು ಉಂಟುಮಾಡುತ್ತದೆ.
೨) ಉದಾನ ವಾಯು :
“ಉರಃ ಸ್ಥಾನ ಮುದಾನಸ್ಯ। ನಾಸಾನಾಭಿಗಲಾಂಶ್ಚರೇತ್।
ವಾಕ್ಪ್ರವೃತ್ತಿಃ ಪ್ರಯತ್ನೋರ್ಜಾ ಬಲವರ್ಣ ಸ್ಮೃತಿಕ್ರಿಯಾಃ।”
ಉದಾನವಾಯು ಎದೆಯಲ್ಲಿ ಆಶ್ರಿತ, ಮೂಗು, ನಾಭಿ, ಗಂಟಲುಗಳಲ್ಲಿ ಪ್ರವಹಿಸುತ್ತಾ ಶಬ್ದೋತ್ಪತ್ತಿಗೆ, ಪ್ರಯತ್ನಕ್ಕೆ ಊರ್ಜಾ (ಶಕ್ತಿ) ಉತ್ಪತ್ತಿಗೆ, ಶರೀರ ಬಲ ವೃದ್ಧಿಗೆ, ಅಕ್ಷ್ರರೋತ್ಪತ್ತಿ (ವರ್ಣ ವಿನ್ಯಾಸ) ಹಾಗೂ ಸ್ಮರಣ ಶಕ್ತಿಗಳ ನಿರ್ವಾಹಕವಾಗಿದೆ.
ಉದಾನ ಪ್ರಕೋಪದ ಕಾರಣಗಳು:
ಸೀನು, ತೇಕು, ವಾಂತಿ, ನಿದ್ರೆಗಳ ಪ್ರವೃತ್ತಿಗಳನ್ನು ತಡೆಯುವುದರಿಂದ,ಅತಿ ಭಾರವಹನ, ಅತಿ ಜಡವಾದ ಅಹಾರ ಸೇವನೆ, ಅತಿಯಾದ ನಗು, ಅಳು ಮುಂತಾದವುಗಳಿಂದ ಪ್ರಕುಪಿತವಾಗುತ್ತದೆ.
ಪರಿಣಾಮ:
ಗಂಟಲಿನಲ್ಲಿ ತಡೆ, ಮನೋವಿಭ್ರಮ, ವಾಂತಿ, ಅರುಚಿ, ನೆಗಡಿ, ಗಲಗಂಡ ಹಾಗೂ ಕಣ್ಣು, ಕಿವಿ, ಮೂಗು, ಮುಖಗಳಿಗೆ ಸಂಬಂಧಿಸಿದ ಅನೇಕ ರೋಗಗಳನ್ನು ಉತ್ಪತ್ತಿ ಮಾಡುತ್ತದೆ.
೩) ವ್ಯಾನವಾತ:
“ವ್ಯಾನೋಹೃದಿಸ್ಥಿತಃ ಕೃತ್ಸ್ನ ದೇಹಚಾರಿಮಹಾಜವಃ
ಗತ್ಯಪಕ್ಷೇಪಣೋಕ್ಷೇಪ ನಿಮೇಷೋನ್ಮೇಷಣಾದಿಕಾಃ ।
ಪ್ರಾಯಃ ಸರ್ವಾಃ ಕ್ರಿಯಾಸ್ತಸ್ಮಿನ್ ಪ್ರತಿಬದ್ಧಾಃ ಶರೀರಿಣಾಂ॥”
ಹೃದಯದಲ್ಲಿ ಸ್ಥಿತವಾಗಿ, ಸರ್ವಶರೀರದಲ್ಲೂ ಅತಿ ವೇಗದಿಂದ ಸಂಚರಿಸುತ್ತಾ ಶರೀರದ ಗತಿ, ಮೇಲೆ ಹಾರುವುದು, ಕೆಳಗೆ ಜಿಗಿಯುವುದು, ಕಣ್ಣು ರೆಪ್ಪೆಗಳ ನಿಮೇಷೋನ್ಮೇಷಣ ಮುಂತಾದ ಪ್ರಾಯಶಃ ಶರೀರದ ಎಲ್ಲಾ ಕಾರ್ಯಗಳಲ್ಲೂ ವ್ಯಾನವಾತದ ಕಾರ್ಯವಿದೆ.
ಅತಿಗಮನ, ಅತಿಧ್ಯಾನ, ಅತಿಕ್ರೀಡೆ, ವಿಷಮ ಕ್ರಿಯೆಗಳು, ವಿರುದ್ಧಾಹಾರ, ಒಣ ಪದಾರ್ಥಗಳು, ಭಯ, ಹರ್ಷ, ವಿಷಾದಾದಿಗಳಿಂದ ಪ್ರಕುಪಿತವಾಗುತ್ತದೆ.
ಪರಿಣಾಮ:
(ಎ) ಪುಂಸ್ತ್ವಭ್ರಂಶ,
(ಬಿ) ಉತ್ಸಾಹಭ್ರಂಶ,
(ಸಿ) ಬಲಭ್ರಂಶ,
(ಡಿ) ಬಾವು,
(ಇ) ಮಾನಸಿಕ ಅಸಂತುಲನ,
(ಎಫ್) ಜ್ವರ,
(ಜಿ) ಸರ್ವಾಂಗತ ರೋಗ,
(ಎಚ್) ಶರೀರದಲ್ಲಿ ಚುಚ್ಚಿದಂತೆ ವೇದನೆ,
(ಐ) ರೋಮ ಹರ್ಷ,
(ಜೆ) ಸ್ಪರ್ಶ ಜ್ಞಾನ ನಾಶ,
(ಕೆ) ಚರ್ಮದ ಖಾಯಿಲೆಗಳು,
(ಎಲ್) ಸರ್ಪ ಸುತ್ತು,
(ಎಂ) ಮನ್ಯಾಸ್ತಂಭ ಮುಂತಾದ ಸರ್ವ ಶರೀರ ವ್ಯಾಪಿ ಖಾಯಿಲೆಗಳು ಕಂಡುಬರುತ್ತವೆ.
೪) ಸಮಾನ ವಾತ:
“ಸಮಾನೋಗ್ನಿ ಸಮೀಪಸ್ಥಃ ಕೋಷ್ಟೇಚರತಿ।
ಅನ್ನಂ ಗೃಹ್ಣಾತಿ, ಪಚತಿ, ವಿವೇಚಯತಿ ಮುಂಚತಿ॥”
ಅಗ್ನಿಗೆ ಹತ್ತಿರವಾಗಿ (ಕೋಷ್ಟದಲ್ಲಿ) ಸ್ಥಿತವಾದ ಸಮಾನ ವಾತವು ಅನ್ನಗ್ರಹಣ, ಪಚನ ಹಾಗೂ ಮುಂದೆ ತಳ್ಳುವ ಕಾರ್ಯವನ್ನು ಮಾಡುತ್ತದೆ.
ಪ್ರಕೋಪ ಕಾರಣಗಳು:
ವಿಷಮಾಹಾರ, ಅಜೀರ್ಣಾಹಾರ, ತಣ್ಣನೆ ಆಹಾರ, ಕೊಳೆತ ಆಹಾರ, ಅಕಾಲದಲ್ಲಿ ನಿದ್ರೆ, ಜಾಗರಣೆ ಮುಂತಾದವುಗಳಿಂದ ಪ್ರಕುಪಿತವಾಗುತ್ತದೆ.
ಪರಿಣಾಮ:
ನೋವು, ಉದರಶೂಲ, ಗ್ರಹಣೀರೋಗ ಮುಂತಾದ ಕರುಳಿನಿಂದ ಉದ್ಭವವಾಗುವ ಅನೇಕ ರೋಗಗಳನ್ನುಂಟುಮಾಡುತ್ತದೆ.
೫) ಅಪಾನವಾತ:
“ಅಪಾನೋಪಾನಗಃ ಶ್ರೋಣಿಬಸ್ತಿಮೇಢ್ರೋರು ಗೋಚರಃ ।
ಶುಕ್ರಾರ್ತವ ಶಕೃನ್ಮೂತ್ರಗರ್ಭನಿಷ್ಕ್ರಮಣಕ್ರಿಯಾಃ ॥”
ಅಪಾನಕ್ಷೇತ್ರದಲ್ಲಿ ಸ್ಥಿತವಾದ ಅಪಾನವಾತ, ಮೂತ್ರಾಶಯ, ಮೇಢ್ರ, ತೊಡೆಗಳಲ್ಲಿ ತಿರುಗುತ್ತದೆ. ವೀರ್ಯ, ರಜಸ್ಸು, ಮಲ, ಮೂತ್ರ, ಗರ್ಭಗಳನ್ನು ಹೊರ ಹಾಕುವ ಕಾರ್ಯ ಮಾಡುತ್ತದೆ.
ಪ್ರಕೋಪಕ್ಕೆ ಕಾರಣಗಳು:
ಒಣ ಆಹಾರ, ಪಚನಕ್ಕೆ ಜಡವಾದ ಆಹಾರ, ಮಲ, ಮೂತ್ರಗಳ ತಡೆ, ಅತಿ ವೇಗಗಳ ಪ್ರವೃತ್ತಿ, ಅತಿ ಪ್ರಯಾಣ, ಅತಿ ಒಂದೇ ಸ್ಥಾನದಲ್ಲಿ ನಿಲ್ಲುವಿಕೆ. ಅತಿ ನಡೆಯುವಿಕೆಗಳಿಂದ ಅಪಾನವಾತ ಹಾಳಾಗುತ್ತದೆ.
ಪರಿಣಾಮ:
ದೊಡ್ಡ ಕರುಳಿಗೆ ಸಂಬಂಧಪಟ್ಟ ಖಾಯಿಲೆಗಳು. ಮೂತ್ರರೋಗ, ಪ್ರಜನನ ಸಂಬಂಧೀ ಖಾಯಿಲೆಗಳು, ಮೂಳೆರೋಗ, ಗುದಭ್ರಂಶ, ( ಚಂಡು ಮೂಲವ್ಯಾಧಿ) ಮುಂತಾದ ಖಾಯಿಲೆಗಳನ್ನುಂಟುಮಾಡುತ್ತದೆ.
ವಾತ ಅತ್ಯಂತ ಪ್ರಕುಪಿತವಾದಾಗ ಉಂಟು ಮಾಡುವ ವಿಕೃತಿಗಳು:
ಧಾತುಗಳ ಶಿಥಿಲತೆ, ಅಂಗಾಂಗಗಳಲ್ಲಿ ತೀವ್ರ ಸ್ಪಂದನ, ಗುದ್ದಿದಂತೆ, ಚುಚ್ಚಿದಂತೆ ವೇದನೆ, ಸತತವಾದ ನೋವು, ಸ್ಪರ್ಶ ಜ್ಞಾನ ನಾಶ, ಮಲಮೂತ್ರ ಪ್ರವೃತ್ತಿಯ ತಡೆ, ಹೃದಯದಲ್ಲಿ, ನರವ್ಯೂಹದಲ್ಲಿ ರಕ್ತಸಂಚಲನದಲ್ಲಿ ತಡೆ, ಅಂಗಾಂಗಗಳ ಸಂಕೋಚ, ಕೈಕಾಲುಗಳಲ್ಲಿ ಸುತ್ತಿದಂತೆ ವೇದನೆ.
ಮರಗಟ್ಟುವಿಕೆ, ಅಸ್ಥಿಪೊಳ್ಳಾಗುವಿಕೆ, ವಾಯುವಿನ ಮೇಲ್ಮುಖ ಪ್ರವೃತ್ತಿ, ಬಾಯಿಯಲ್ಲಿ ಒಗರು ರುಚಿ, ಕಪ್ಪು ಅಥವಾ ಅರುಣ ವರ್ಣಗಳು ಕಂಡುಬರುತ್ತವೆ.
ಚಿಕಿತ್ಸೆ:
“ವಾತಸ್ಯೋಪಕ್ರಮಃ ಸ್ನೇಹಃ ಸ್ವೇದಃ ಸಂಶೋಧನಃ ಮೃದು ।
ಸ್ವಾದ್ವಮ್ಲ ಲವಣೋಷ್ಣಾನಿ ಭೋಜ್ಯಾನ್ಯಭ್ಯಂಗಮರ್ದನಂ ॥೧॥
ವೇಷ್ಟನಂ ತ್ರಾಸನಂ ಸೇಕೋ ಮದ್ಯಂ ಪೈಷ್ಟಿಕ ಗೌಡಿಕಂ ।
ಸ್ನಿಗ್ಧೋಷ್ಣಾ ಬಸ್ತಯೋಃ ಬಸ್ತಿ ನಿಯಮಃ ಸುಖಶೀಲತಾ ॥೨॥
ದೀಪನೈಃ ಪಾಚನೈಃ ಸಿದ್ಧಾಃ ಸ್ನೇಹಾಶ್ಚಾನೇಕಯೋನಯಃ ।
ವಿಶೇಷಾನ್ಮೇದ್ಯ ಪಿಶಿತರಸ ತೈಲಾನುವಾಸನಂ ॥೩॥”
(ಅ. ಹೃ.ಸೂ.೧೩)
- ಸರ್ವಾಂಗ ಅಭ್ಯಂಗ,
- ಸ್ನೇಹಪಾನ,
- ಮೃದುವಾದ ಸಂಶೋದನೆ,
- ಸಿಹಿ, ಹುಳಿ, ಉಪ್ಪಿನಿಂದ ಕೂಡಿದ ಆಹಾರ,
- ಮೃದು ಮರ್ದನ,
- ಪರಿಷೇಕ,
- ಬೆಲ್ಲದಿಂದ ತಯಾರಿಸಿದ ವಿವಿಧ ಆಸವಾರಿಷ್ಟಗಳು,
- ಬಟ್ಟೆ ಸುತ್ತುವಿಕೆ (ಬಂಧನ),
- ಸ್ನಿಗ್ಧ ಉಷ್ಣ ಬಸ್ತಿಗಳು ( Medicated Enema),
- ವಿಶ್ರಾಂತಿ,
- ದೀಪಕ, ಪಾಚಕ ತೈಲಘೃತಗಳು,
- ಮಾಂಸಾಹಾರಿಗಳಿಗೆ ಮಾಂಸಾಹಾರ,
- ವಿವಿಧ ತೈಲಗಳಿಂದ ಅನುವಾಸನ ಬಸ್ತಿ – ಮುಂತಾದ ಪಂಚಕರ್ಮ ಚಿಕಿತ್ಸೆಗಳು,
- ವಾತದ ಔಷಧಿಗಳು ವಾತ ಸಂಶಮನಕ್ಕೆ ಉತ್ತಮ ಚಿಕಿತ್ಸೆಯಾಗಿದೆ.