fbpx
+919945850945

ಕಾಲಕ್ಕೆ ತಕ್ಕಂತೆ ಕುಣಿಯಬೇಕು

winter
ಕಾಲಕ್ಕೆ ತಕ್ಕಂತೆ ಕುಣಿಯಬೇಕು
“ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…….
ಹೊಸ ವರುಷಕೆ ಹೊಸ ವರುಷವ ಹೊಸತು ಹೊಸತು ತರುತಿದೆ……
ಸಾಂಪ್ರದಾಯಿಕವಾಗಿ ಹೋಳಿಗೆ, ತುಪ್ಪ, ಬೇವು- ಬೆಲ್ಲ ಮೆಲ್ಲುವ ಮೋಜಿನ ಸಮಯ ದೂರವಿದ್ದರೂ ಹೊಸ ವಸಂತದ ಆಗಮನದ ಸೂಚನೆಗಳಂತೂ ಮಾವಿನ ಚಿಗುರೂ, ಮಾಮರದ ಕೋಗಿಲೆಯ ಕಂಠವೂ ಸಾರಿ ಹೇಳುತ್ತಿದೆ. ಅಂತೆಯೇ ಹಿಮಾಲಯ ಕರಗಿ ಗಂಗೆಯ ಮಡಿಲ ತುಂಬಿದಂತೆ, ಬಿಸಿಲಿನಿಂದ ಕರಗಿದ ಕಫ ಮೂಗಿನಿಂದ ಬಳಬಳನೆ ಹರಿಯಲಾರಂಭಿಸಿದೆ. ಹೊಟ್ಟೆಯಲ್ಲಿ ತಳಮಳ, ಹಸಿವು ಇಂಗುತ್ತಿದೆ. ಕೆಲವರಿಗೆ ಕಫವಾಂತಿಯಾದರೆ, ಹಲವರಿಗೆ ಜ್ವರ- ಭೇದಿ ಪ್ರಾರಂಭವಾಗುತ್ತದೆ. ಈ ಸುಂದರ ವಸಂತದಲ್ಲಿ ದುಃಖಕರ ರೋಗಗಳಿಗೆ ತುತ್ತಾಗುವುದನ್ನೂ ತಪ್ಪಿಸಬಹುದಲ್ಲವೇ? ಅದಕ್ಕಿರುವ ಸರಳ ಸೂತ್ರವೆಂದರೆ ‘ಕಾಲಕ್ಕೆ ತಕ್ಕಂತೆ ಕುಣಿಯಬೇಕು!’
ಚಳಿಗಾಲ ಬಂದಕೂಡಲೇ ಉಣ್ಣೆ ಬಟ್ಟೆ ಬೇಕಾಗುತ್ತದೆ. ಮಳೆಗಾಲದಲ್ಲಿ ಕೊಡೆಯೇ ಆಸರೆ! ದೇಹದ ಹೊರಗಿನ ರಕ್ಷಣೆಗೆ ಅನಾಯಾಸವಾಗಿ ಪ್ರಯತ್ನಿಸುವ ನಾವು ಒಳಗಿನ ರಕ್ಷಣೆಗೂ ಪ್ರಯತ್ನಿಸಬೇಕಲ್ಲವೇ?

ವಸಂತದ ಆರೋಗ್ಯಕ್ಕಾಗಿ ಸರಳ ಸೂತ್ರಗಳು

  • ಆಹಾರವು ಬೇಗ ಜೀರ್ಣವಾಗುವಂತಿರಲಿ 
ಸಹಜವಾಗಿಯೇ ಜೀರ್ಣಶಕ್ತಿ ಕಡಿಮೆಯಾಗುವುದರಿಂದ ಪಚನಕ್ಕೆ ಜಡವಾದ ಪದಾರ್ಥಗಳಿಂದ ದೂರವಿರುವುದೇ ಲೇಸು. ಅಭ್ಯಾಸವಿರುವ ಲಘು ಬೋಜನ ಹಿತಕರ. ಮಲೆನಾಡಿನವರಿಗೆ ಹುರಿದಕ್ಕಿ ಗಂಜಿ, ಹುಗ್ಗಿ, ಹುರುದಕ್ಕಿ ತೆಳ್ಳವು, ಮೆಂತೆ ದೋಸೆ, ತೊಡದೇವುಗಳು ಹಿತಕರ ಸಿಹಿ, ಹುಳಿ ಮತ್ತು ಶೀತ ಪದಾರ್ಥಗಳ ಬಳಕೆಯಿಂದ ಕಫ ಹೆಚ್ಚಾಗಿ ಆರೋಗ್ಯ ಕೆಡುತ್ತದೆ. ಬಿಸಿಲಿನ ತೀಕ್ಷ್ಣತೆಗೆ ಮೋಸ ಹೋಗಿ ಐಸ್ ಕ್ರೀಂ ತಿಂದರೆ ಗಂಟಲು ನೋವು – ಜ್ವರ ಉಚಿತ ! ಬೆಳಗಿನ ದೋಸೆ ಬಿಸಿಯಿಲ್ಲದಿದ್ದರೆ ಜೇನುತುಪ್ಪ ಸವರಿ ಸವಿಯುವುದು ಕಫ ಹೆಚ್ಚಾಗುವುದನ್ನು ತಡೆಯುತ್ತದೆ! ಮೊಸರು – ಉದ್ದು- ಕರಿದ ಪದಾರ್ಥಗಳಿಗೆ ಜನವರಿ – ಫೆಬ್ರವರಿ – ಮಾರ್ಚ್ ಗಳಲ್ಲಿ ವಿದಾಯ ಹೇಳುವುದೇ ಉತ್ತಮ.
  • ಕುಡಿಯುವ ನೀರಿನ ಬಗ್ಗೆ ಗಮನವಿರಲಿ 
  ನೀರು ಆರೋಗ್ಯಕ್ಕೆ ಅನಿವಾರ್ಯ, ತಪ್ಪಾದರೆ ರೋಗಕ್ಕೆ ಮೂಲ!
– ವಸಂತದಲ್ಲಿ ಸಣ್ಣ ತುಂಡು ಶುಂಠಿ ಹಾಕಿ ಕುದಿಸಿದ ನೀರು ಕಫ ಕಟ್ಟುವುದನ್ನು ತಪ್ಪಿಸುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
– ಭದ್ರಮುಷ್ಠಿಯ ಬೇರು ಹಾಕಿ ಕುದಿಸಿದ ನೀರು ಪದೇ ಪದೇ ಜ್ವರ, ಭೇದಿ ಅಜೀರ್ಣಗಳಾಗುವುದನ್ನು ತಡೆಯುತ್ತದೆ.
– ಅತಿಸ್ಥೂಲಕಾಯರಿಗೆ ತಣ್ಣೀರು/ ಕಾದಾರಿದ ನೀರಿನಲ್ಲಿ ಐದಾರು ಹನಿ ಜೇನು ಸೇರಿಸಿ ಬಳಸುವುದು ಹಿತಕರ.
ವಸಂತದಲ್ಲಿ  ವ್ಯಾಯಾಮ ದೇಹದೃಢತೆಗೆ ಕಾರಣ 
– ಪ್ರತಿನಿತ್ಯವೂ ಖಾಲಿ ಹೊಟ್ಟೆಯಲ್ಲಿ ಬೆವರು ಬರುವವರೆಗೆ ವ್ಯಾಯಾಮ ಬೇಕು.
– ಹಗಲು ನಿದ್ದೆ ಹಾನಿಕಾರಕವಾಗಿರುತ್ತದೆ.
– ವ್ಯಾಯಾಮದ ನಂತರ ಎಣ್ಣೆ ಹಚ್ಚಿ ಕಡ್ಲೆ ಹಿಟ್ಟು ಅಥವಾ ಹೆಸರಿಟ್ಟಿನಿಂದ ಉಜ್ಜಿ ಬಿಸಿ ನೀರ ಸ್ನಾನ ಮಾಡುವುದು ಹಿತಕರ.
ಚಳಿಗಾಲದಲ್ಲಿಯೇ ಕಫದ ಸಂಚಯ ಬಹಳಷ್ಟು ಆದವರಿಗೆ, ಬಿಸಿಲೇರುತ್ತಿದ್ದಂತೆಯೇ ಸಹಜವಾಗಿಯೇ ರೋಗದ ಬೀಜಗಳು ಮೊಳಕೆಯೊಡೆಯುತ್ತದೆ. ಅಂತವರು ಸುಶಿಕ್ಷಿತ ಆಯುರ್ವೇದ ವೈದ್ಯರಲ್ಲಿ ವಮನ ಕರ್ಮ ಮಾಡಿಸಿ ದೇಹವನ್ನು ಶುದ್ಧಿಗೊಳಿಸಿಕೊಳ್ಳುವುದು ಹಿತಕರ. ಅದು ವಯಸ್ಸಾಗಲೀ, ಋತುವಾಗಲೀ ಕಾಲವನ್ನರಿತು ನಡೆದರೆ ಸುಃಖ ಕಟ್ಟಿಟ್ಟ ಬುತ್ತಿ.

Share With Your Friends

Leave a Comment