fbpx
+919945850945

ಋತುಚರ್ಯೆ

shadrutu

ಋತುವಿಲಾಸ / ಕಾಲಕ್ಕೆ ತಕ್ಕಂತೆ ಕುಣಿಯಬೇಕು ( ಋತುಚರ್ಯೆ)

ಋತುಚರ್ಯಾ ವಿಜ್ಞಾನ-೧

ಋತುವಿಲಾಸ

ಇದೋ ಮುಂಜಾವು…………….. ಬಾಲ ರವಿ ತನ್ನ ಹೊಂಗಿರಣಗಳನ್ನು ಹೊರಸೂಸುತ್ತಾ ಮರೆಯಿಂದ ಮೇಲೆದ್ದು ಬರುತಿರುವ …. ಹಕ್ಕಿಗಳ ಚಿಲಿಪಿಲಿಗಾನ….. ಶಾಂತವಾದ ಜಗತ್ತು ಮೆಲ್ಲಗೆ ಎದ್ದು ತನ್ನ ಇರುವನ್ನು ತೋರುವಂತೆ ಚಟುವಟಿಕೆಗಳನ್ನು ಆರಂಭಿಸಿದೆ.ಬಿಸಿಲು ಮೇಲೇರುತ್ತಾ ಹೋಗಿ ಮಧ್ಯಾಹ್ನ ನಡುನೆತ್ತಿಯ ಸೂರ್ಯ ಜಗತ್ತಿನ ತುಂಬೆಲ್ಲಾ ಬಿಸಿ ಹರಡಿಸಿ ಬವಳಿಸುತ್ತಾನೆ……. ಸಂಜೆಗೆ ಪುನಃ ಪಡುವಣ ದಿಕ್ಕಿನಲ್ಲಿ ಅದೇ ಹೊಂಗಿರಣಗಳ ರಥವೇರಿದ ರವಿ ಟಾಟಾ ಹೇಳಿ ಕೈಬೀಸಿ ಹೊರಟಂತೆ ಮರೆಯಾಗುತ್ತಾನೆ. ನಿಧಾನವಾಗಿ ಕತ್ತಲಿನ ಆವರಣ…….. ಆದರೆ ಇದೋ ಸ್ವಲ್ಪ ಹೊತ್ತಿನಲ್ಲಿಯೇ ಬಿದಿಗೆಯ ಚಂದ್ರಮ ತನ್ನ ಶೀತಲ ಕಿರಣಗಳನ್ನು ಹರಡುತ್ತಾ ರವಿಯ ಕೊರತೆಯನ್ನು ಕೊಂಚ ನೀಗಿ ತಿಳಿ ಬೆಳದಿಂಗಳಿನಿಂದ  ಹಾಲು ಚೆಲ್ಲಿದಂತೆ ಜಗತ್ತನ್ನೇ ಆವರಿಸುತ್ತಾನೆ.
 
  ” ಕಾಲೋ ಹಿನಾಮ (ಭಗವಾನ್) ಸ್ವಯಂಭೂರನಾದಿಮಧ್ಯನಿಧನಃ । ಅತ್ರ ರಸವ್ಯಾಪತ್ ಸಂಪತ್ತೀ ಜೀವಿತ ಮರಣೇ ಚ ಮನುಷ್ಯಾಣಾಂ  ಆಯತ್ತೇ । ಸ ಸೂಕ್ಷ್ಮಾಮಪಿ ಕಲಾಂ ನ ಲೀಯತ ಇತಿ ಕಾಲಃ, ಸಂಕಲಯತಿ ಕಲಯತಿ ವಾ ಭೂತಾನೀತಿ ಕಾಲಃ ॥೩॥” (ಸು. ಸೂ. ೬-೩)
 
ಹೀಗೆ ಸೂರ್ಯ ಚಂದ್ರರು ಸೇರಿ ನಡೆಸುವುದೇ ಕಾಲ. ಈ ಕಾಲದ ಗತಿ ನಿರಂತರವಾಗಿ ನಡೆಯುತ್ತಿದೆ. ಇದರ ಆರಂಭ ಕೊನೆ ತಿಳಿದಿಲ್ಲ. ವರ್ತಮಾನವನ್ನು ಹಿಡಿಯಲಾಗದು. ಏಕೆಂದರೆ ಅದು ನಿಲ್ಲದು, ಹಿಡಿಯುವಷ್ಟರಲ್ಲಿ ಅದು ಭವಿಷ್ಯ !! ಹಿಡಿಯುತ್ತಿಂದ್ದಂತೆಯೇ ಅದು ಭೂತ !! ಸೃಷ್ಟಿಯ ಗತಿಗೆ ಕಾಲವೇ ಕಾರಣವೆನ್ನುವವರು ಅನೇಕ. ಕಾಲವೇ ಆತನಿಗೆ ಪಾಠ ಕಲಿಸುತ್ತದೆ……. ವಯಸ್ಸಾದಂತೆ ಹುಡುಗು ಬುದ್ಧಿ ಬಿಡುತ್ತದೆ…..ಅವ ಇನ್ನೂ ಎಳಸು……. ಈತ ಬಲಿತ ನರೆಗೂದಲಿನವ……ನುರಿತವ…….ಎನ್ನುತ್ತೇವೆ. ನಮ್ಮ ನಿತ್ಯ ಬದುಕಿನಲ್ಲಿ ಎಲ್ಲೆಡೆ ಕಾಲಗಣನೆ ಹಾಸುಹೊಕ್ಕಾಗಿದೆ.!
      ಈ ಕಾಲಕ್ಕೆ ಸಾಮಾನ್ಯವಾಗಿ ಮೂರು ಬಣ್ಣಗಳು. ಸುಡುವ ಬೇಸಗೆ, ಸುರಿಯುವ ಮಳೆ, ನಡುಗಿಸುವ ಛಳಿ! ಇವನ್ನೇ ಇನ್ನೂ ಸೂಕ್ಷ್ಮವಾಗಿ ಆರು ಋತುಗಳನ್ನಾಗಿ ವಿಂಗಡಿಸಿದ್ದಾರೆ. ವಸಂತ, ಗ್ರೀಷ್ಮ,ಶಿಶಿರ, ಶರತ್ , ವರ್ಷಾ, ಹೇಮಂತಗಳೆಂದು. ಕಾಲ ಬದಲಾವಣೆಗೆ ಪ್ರಾಣಿ, ಪಕ್ಷಿ ಸಂಕುಲಗಳು ಸ್ಪಂದಿಸುತ್ತವೆ. ಮಳೆಗಾಲದಲ್ಲಿ ಗೂಡು ಸೇರುವವು ಕೆಲವಾದರೆ, ಬೇಸಿಗೆಯಲ್ಲಿ ನೀರು ಬಯಸಿ ದೂರ ದೂರಕ್ಕೆ ವಲಸೆ ಹೋಗುವವು ಹಲವು!! ಮಾನವನೂ ಸಹ ನಿಸರ್ಗದ ಶಿಶು. ಆತನೂ ಸಹ ಈ ಋತು ಬದಲಾವಣೆಗೆ ಸ್ಪಂದಿಸಲೇಬೇಕಾಗುತ್ತದೆ. ಕಾಲಕ್ಕೆ ತಕ್ಕಂತೆ ತನ್ನ ದಿನಚರಿಯಲ್ಲಿ ಸೂಕ್ತ ಮಾರ್ಪಾಡುಗಳನ್ನು ಮಾಡಿಕೊಳ್ಳಲೇಬೇಕಾಗುತ್ತದೆ. ಅಂತಹ ಅವಶ್ಯಕ ಬದಲಾವಣೆಗಳನ್ನು ಅತ್ಯಂತ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದರೆ ಬದುಕಿನ ವಿಜ್ಞಾನವಾದ “ಆಯುರ್ವೇದ”.
     ಈ ಮಾಲಿಕೆಯಲ್ಲಿ ಋತುಗಳ ವಿಭಾಗ, ಋತು ಲಕ್ಷಣಗಳು, ಆಯಾ ಋತುವಿನಲ್ಲಿ ಉಂಟಾಗಬಹುದಾದ ರೋಗ ಲಕ್ಷಣಗಳು, ಅವು ಬಾರದಂತೆ ಮಾಡಬೇಕಾದ ಆಹಾರ- ವಿಹಾರಗಳು. ಬಂದಾಗ ಮಾಡಬೇಕಾದ ಚಿಕಿತ್ಸೆ, ಮುಂತಾದ ವಿಷಯಗಳ ಕುರಿತು ‘ಆಯುರ್ವಿಜ್ಞಾನ’ದ ಬೆಳಕಿನಲ್ಲಿ ತಮ್ಮೆದುರು ಮಂಡಿಸಲಾಗುತ್ತದೆ.

ಋತು ವಿಭಾಗ :

     ‘ವರ್ಷ’ ವೆಂದರೆ ಎರಡು ಆಯನಗಳು. ಉತ್ತರಾಯಣ, ದಕ್ಷಿಣಾಯನವೆಂದು ಎರಡು ವಿಭಾಗ. ಪೂರ್ವದಿಂದ ಪಶ್ಚಿಮದೆಡೆಗೆ ಸದಾ ಗತಿಶೀಲನಾದರೂ ಈ ಸೂರ್ಯ ಮೂಢಣ ದಿಕ್ಕಿನಲ್ಲಿಯೇ ಉತ್ತರ ದಿಕ್ಕಿನೆಡೆಗೆ ದಿನೇ ದಿನೇ ಮೂಡುವನು. ಉತ್ತರಾಯಣದ ಕೊನೆಯಲ್ಲಿ ಈ ಸೂರ್ಯ ಉತ್ತರದ ಒಂದು ಕೊನೆ ಸೇರುವನು. ಆಗ ದಕ್ಷಿಣಾಯನಾ ಆರಂಭ….. ಪುನಃ ದಕ್ಷಿಣದೆಡೆಗೆ ಮೂಡಲಾರಂಭಿಸುವ ಸೂರ್ಯ ಈ ಪಯಣದ ಕೊನೆಗೆ ದಕ್ಷಿಣದ ಒಂದು ತುದಿ ತಲುಪುವನು. ಈ ಎರಡೂ ಆಯನಗಳ ಮಧ್ಯಕಾಲದಲ್ಲಿ ಸೂರ್ಯನು ನೇರವಾಗಿ ಪೂರ್ಣ ಪೂರ್ವ ದಿಕ್ಕಿನಲ್ಲಿಯೇ ಮೂಡುವನು. ಆಗ ಹಗಲು-ರಾತ್ರಿಗಳು ಸಮ-ಸಮನಾಗಿರುವ ಕಾಲ.

ಉತ್ತರಾಯಣ :

    ಈ ಉತ್ತರಾಯಣದಲ್ಲಿ ಶಿಶಿರ, ವಸಂತ, ಗ್ರೀಷ್ಮಗಳೆಂಬ ಮೂರು ಋತುಗಳು. ಇದನ್ನು “ಆದಾನ”ಕಾಲ ಎನ್ನುವರು. ಒಣಗಿಸುವ ಛಳಿ, ಉರಿಯುವ ಬಿಸಿಲಿನ ಕಾರಣ ಇಲ್ಲಿ ಪ್ರಾಣಿ, ಪಕ್ಷಿ, ಗಿಡ, ಮರಗಳು ಒಣಗಿ ಕ್ಷೀಣಿಸುವವು. ಈ ಋತುವಿನ ಆರಂಭವಾದ ಶಿಶಿರದಲ್ಲಿ ಉತ್ತಮ ದೇಹಬಲ ಹೊಂದಿದ ಪ್ರಾಣಿಗಳು ಕ್ರಮೇಣ ವಸಂತದಲ್ಲಿ ಬಲ ಮಧ್ಯಮವಾಗಿ ಗ್ರೀಷ್ಮದ ಕೊನೆಯಲ್ಲಿ ಅತ್ಯಂತ ಕಡಿಮೆ ಶಕ್ತಿ ಇರುವಂತಹವುಗಳಾಗಿರುತ್ತವೆ. ಆದ್ದರಿಂದಲೇ ಈ  ಋತುವನ್ನು “ಆದಾನ” ಕಾಲ ಅಂದರೆ ಶಕ್ತಿಯನ್ನು ಹೀರುವ ಕಾಲ ಎಂಬ ಅನ್ವರ್ಥದ ಹೆಸರನ್ನಿಟ್ಟಿದ್ದಾರೆ. ಈ ಋತುವಿನಲ್ಲಿ ‘ಸೂರ್ಯ’ನಿಗೆ ಪ್ರಾಬಲ್ಯ ಹೆಚ್ಚು.

ದಕ್ಷಿಣಾಯನ :

     ವರ್ಷಾ, ಶರದ್, ಹೇಮಂತ ಋತುಗಳು ಸೇರಿ ‘ದಕ್ಷಿಣಾಯನ’. ಮಳೆ, ಅಲ್ಪ ಬಿಸಿಲು ಹಾಗೂ ಛಳಿಯಿಂದ ಕೂಡಿದ ಕಾಲ. ಆರಂಭದ ‘ವರ್ಷಾ’ ಋತುವಿನಲ್ಲಿ ಅತ್ಯಂತ ಕಡಿಮೆ ಬಲವಿರುವ ಜೀವಿಗಳಿಗೆ ಕ್ರಮೇಣ ಬಲ ಹೆಚ್ಚುತ್ತಾ ಹೋಗಿ ಶರದ್ ನಲ್ಲಿ ಮಧ್ಯಮವಾಗಿ ಹೇಮಂತದಲ್ಲಿ ಉತ್ಕೃಷ್ಟ ಬಲವಿರುತ್ತದೆ. ಹೀಗೆ ‘ಬಲ’ವನ್ನು ಕೊಡುವ ಕಾಲವಾದ್ದರಿಂದ ಇದಕ್ಕೆ ‘ವಿಸರ್ಗ’ ಕಾಲವೆನ್ನುವರು. ‘ಸೌಮ್ಯ’ ಕಾಲವೆಂದು ಕರೆಯಲ್ಪಡುವ ಈ ದಕ್ಷಿಣಾಯನದಲ್ಲಿ ‘ಚಂದ್ರ’ನಿಗೆ ಬಲ.

ಅತಿ ಕಡಿಮೆ, ಅತಿ ಹೆಚ್ಚು ಬಲವಿರುವ ಸಮಯ

  “ಶೀತೇ ಗ್ರ್ಯಂ ವೃಷ್ಟಿ ಘಮೇ ಲ್ಪಂ ಬಲಂ ಮಧ್ಯಂ ತು ಶೇಷಯೋಃ ॥”
   ವರ್ಷವೊಂದರಲ್ಲಿ ಬೇಸಿಗೆಯ  (ಗ್ರೀಷ್ಮ) ಕೊನೆಗೆ ಅತ್ಯಂತ ಕ್ಷೀಣಬಲವೂ, ಛಳಿಗಾಲದ ನಡುವೆ ( ಹೇಮಂತದ ಕೊನೆಗೆ) ಅತ್ಯಂತ ಉತ್ತಮ ಬಲವೂ ಇರುವುದು ಕಂಡುಬರುತ್ತದೆ. ಸಾಮಾನ್ಯವಾಗಿ ಛಳಿಗಾಲದ ನಡುವೆ ಎಲ್ಲರ ಆರೋಗ್ಯ ಸಾಮಾನ್ಯವಾಗಿ ಚೆನ್ನಾಗಿರುವುದು, ರೋಗ ಲಕ್ಷಣಗಳ ಉಲ್ಬಣದಂತೆ ಬೇಸಿಗೆಯ ಕೊನೆಯಲ್ಲಿ ಅತಿ ಹೆಚ್ಚಾಗುವುದು ಇದೇ ಕಾರಣಕ್ಕಾಗಿ.

ಋತುವಿಗೂ ಶರೀರಕ್ಕೂ ಇರುವ ಸಂಬಂಧ

   ಸಕಲ ಜಗತ್ತು ಭೂಮಿ, ನೀರು, ಅಗ್ನಿ, ವಾಯು, ಆಕಾಶಗಳೆಂಬ ಪಂಚ ಮಹಾಭೂತಗಳಿಂದ ಉಂಟಾಗಿದೆ ಎಂಬುದು ಎಲ್ಲರೂ ಒಪ್ಪುವ ಮಾತು. ಈ ೫ ಮಹಾಭೂತಗಳ ವಿಶೇಷ ರೀತಿಯ ಸೇರ್ಪಡೆಗೆ ‘ಪಂಚೀಕರಣ’ವೆಂದು ಹೆಸರು. ವಿವಿಧ ರೀತಿಯಲ್ಲಿ  (ವಿವಿಧ ಪ್ರಮಾಣದಲ್ಲಿ ) ಉಂಟಾಗುವ ಪಂಚೀಕರಣದ ವೈಶಿಷ್ಟ್ಯದಿಂದಲೇ ಕೋಟಿಗಟ್ಟಲೆ ಕಂಡುಬರುವ ಜೀವ- ನಿರ್ಜೀವ ವಸ್ತುಗಳಲ್ಲಿ ವೈವಿಧ್ಯತೆ ಕಂಡುಬರುವುದು.
 ‘ವ್ಯಕ್ತಿ’ ವಿವಿಧ ರೀತಿಯ ಆಹಾರ- ವಿಹಾರಗಳ ಸೇವನೆ ಮಾಡುವುದರಿಂದ ಆತನಲ್ಲೂ ಉಂಟಾಗುವ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಲು ‘ತ್ರಿದೋಷ’ ವಿಜ್ಞಾನವನ್ನು ಆಯುರ್ವೇದದಲ್ಲಿ ಕೊಡಲಾಗಿದೆ.
   ವಾಯು, ಆಕಾಶಗಳಿಂದ- ವಾತದೋಷವೂ, ಅಗ್ನಿಯಿಂದ – ಪಿತ್ತದೋಷವೂ, ಪೃಥ್ವಿ, ಜಲಗಳಿಂದ – ಕಫದೋಷವೂ ಉಂಟಾಗಿದೆ. ಈ ದೋಷಗಳು ಶರೀರದ ಪ್ರಾಕೃತ ಹಾಗೂ ವಿಕೃತ ಕಾರ್ಯಗಳನ್ನು ಮಾಡುತ್ತಿರುತ್ತವೆ ಎಂಬುದು ಆಯುರ್ವಿಜ್ಞಾನಿಗಳ ಸಿದ್ಧಾಂತ.
  ಈ ದೋಷಗಳ ಗುಣ, ಕರ್ಮಗಳನ್ನು ವರ್ಣಿಸಿ ಅವುಗಳ ಪ್ರಾಕೃತ ಲಕ್ಷಣಗಳು ಹಾಗೂ ಅವು ವಿಕೃತವಾಗಿ ದೇಹದ ಸಮತೋಲನ ತಪ್ಪಿದಾಗ ಉಂಟಾಗುವ ಲಕ್ಷಣಗಳನ್ನು ವಿಸ್ತೃತವಾಗಿ ವಿವೇಚಿಸಲಾಗಿದೆ. ವಾತಾವರಣದಲ್ಲಿ ಉಂಟಾಗುವ ಬದಲಾವಣೆಗಳಿಂದ ಶರೀರದಲ್ಲಿ ದೋಷಗಳ ಸಮತೋಲನದಲ್ಲಿ ವ್ಯತ್ಯಾಸವಾಗುತ್ತದೆ.
  ಹೇಮಂತ, ಶಿಶಿರಗಳಲ್ಲಿ – ಕಫ ಸಂಚಯ, ವಸಂತದಲ್ಲಿ – ಕಫ ಪ್ರಕೋಪ, ಗ್ರೀಷ್ಮದಲ್ಲಿ – ಕಫ ಶಮನ,ಗ್ರೀಷ್ಮದಲ್ಲಿ – ವಾತ ಸಂಚಯ, ವರ್ಷಾದಲ್ಲಿ – ವಾತ ಪ್ರಕೋಪ, ಶರತ್  ನಲ್ಲಿ – ವಾತ ಶಮನ, ವರ್ಷಾದಲ್ಲಿ – ಪಿತ್ತ ಸಂಚಯ, ಶರತ್ ನಲ್ಲಿ – ಪಿತ್ತ ಪ್ರಕೋಪ, ಹೇಮಂತದಲ್ಲಿ – ಪಿತ್ತ ಶಮನ.

ಲೋಕ – ಪುರುಷರಲ್ಲಿ ಸಾಮ್ಯತೆ

     ಆಯುರ್ವೇದೋಕ್ತ ಇನ್ನೊಂದು ಸಿದ್ದಾಂತವೆಂದರೆ ಲೋಕಪುರುಷ ಸಾಮ್ಯವಾದ. ಜಗತ್ತಿನಲ್ಲಿರುವುದೆಲ್ಲಾ ವ್ಯಕ್ತಿಯಲ್ಲಿದೆ. ಹಾಗೂ ವ್ಯಕ್ತಿಯಲ್ಲಿರುವುದು ಜಗತ್ತಿನಲ್ಲಿ ಎಂಬುದೇ ಸಿದ್ಧಾಂತ. ಸುಶ್ರುತ, ಚಂದ್ರ, ವಾಯುಗಳನ್ನು ಹೋಲಿಸಲಾಗಿದೆ.
  “ವಿಸರ್ಗಾದಾನ ವಿಕ್ಷೇಪ್ಯೆಃ ಸೋಮ ಸೂರ್ಯಾನಿಲಾಸ್ತಥಾ। ಧಾರಯಂತಿ ಜಗದ್ದೇಹಂ ಕಫ ಪಿತ್ತಾ ನಿಲಾಸ್ತಥಾ॥” (ಸು. ಸೂ )
ಸೋಮ (ಚಂದ್ರ),ಸೂರ್ಯ, ಅನಿಲಗಳು ಕ್ರಮವಾಗಿ ವಿಸರ್ಗಾದಾನ ವಿಕ್ಷೇಪ ಕರ್ಮಗಳಿಂದ ಜಗತ್ತನ್ನು ನಡೆಸುವಂತೆ ಕಫ ಪಿತ್ತಾನಿಲಗಳು ಶರೀರವನ್ನು ಧಾರಣೆ ಮಾಡುತ್ತದೆ. ಈ ಉಲ್ಲೇಖದಿಂದ ಋತುಗಳಿಗೂ ಶರೀರಕ್ಕೂ ಇರುವ ನಂಟು ದೃಢವಾಗಿ ವ್ಯಕ್ತವಾಗುತ್ತದೆ.

ಋತುವಿನ ಗುರುತು

    ಸೂರ್ಯ, ಚಂದ್ರರಿಂದಲೇ ಕಾಲಚಕ್ರ ಘಟಿಸುವುದರಿಂದ ನಭೋ ಮಂಡಲದಲ್ಲಿ ಸೂರ್ಯ ಚಂದ್ರರ  ಗತಿಯನ್ನನುಸರಿಸಿ ಕಾಲಗಣನೆ ಮಾಡಲಾಗುತ್ತದೆ. ಇದನ್ನು ಸೌರಮಾನ ಹಾಗೂ ಚಾಂದ್ರಮಾನ ಕಾಲಗಣನೆ ಎನ್ನಲಾಗುತ್ತದೆ. ಇಡೀ ನಭೋ ಮಂಡಲವನ್ನು ೧೨ ರಾಶಿಗಳಾಗಿ ವಿಭಜಿಸಲಾಗಿದ್ದು, ಮೇಷ, ವೃಷಭಾದಿ ರಾಶಿಗಳಲ್ಲಿ ರವಿಯ ಗತಿಯನ್ನು ಅನುಸರಿಸಿ ಸೌರಮಾನದ ನಿಗದಿಯಾಗಿದೆ. ಈ ಕ್ರಮದಲ್ಲಿ ರವಿಯ ಸಂಕ್ರಮಣ ಮೀನದಲ್ಲಿ ಆಗುತ್ತಿಂದ್ದಂತೆಯೇ  ವಸಂತ ಋತುವಿನ ಆರಂಭ. ಎರಡೆರಡು ರಾಶಿಗಳ ಚಲನೆಯನ್ನು ಒಂದೊಂದು ಋತುವಾಗಿ ಗಣಿಸಲಾಗಿದೆ.
   ಮೀನ- ಮೇಷ, ವಸಂತ, ವೃಷಭ – ಮಿಥುನ : ಗ್ರೀಷ್ಮ, ಕರ್ಕ- ಸಿಂಹ : ವರ್ಷಾ, ಕನ್ಯಾ-ತುಲಾ : ಶರತ್, ವೃಶ್ಚಿಕ-ಧನು : ಹೇಮಂತ ಹಾಗೂ ಮಕರ-ಕುಂಭ : ಶಿಶಿರ.
 
   ಚಂದ್ರ ಪ್ರತಿ ತಿಂಗಳಿಗೊಮ್ಮೆ ಪೂರ್ತಿ ನಭೋಮಂಡಲವನ್ನು ಕ್ರಮಿಸುತ್ತಾನೆ. ವರ್ಷವೊಂದರಲ್ಲಿ ಚಂದ್ರ ೧೨ ಬಾರಿ ಹೀಗೆ ಸುತ್ತುತ್ತಾನೆ. ಪ್ರತಿಯೊಂದು ಸುತ್ತಿಗೂ ಒಂದು ಮಾಸವೆಂದು ಹೆಸರಿಸಲಾಗಿದೆ. ಈ ರೀತಿಯ ಎರಡೆರಡು ಮಾಸಗಳು ಸೇರಿ ಒಂದೊಂದು ಋತುವಾಗುತ್ತದೆ.
   ಚೈತ್ರ – ವೈಶಾಖ : ವಸಂತ, ಜ್ಯೇಷ್ಠ – ಆಷಾಢ : ಗ್ರೀಷ್ಮ, ಶ್ರಾವಣ-ಭಾದ್ರಪದ : ವರ್ಷಾ, ಅಶ್ವೀನ-ಕಾರ್ತಿಕ: ಶರತ್, ಮಾರ್ಗಾಶೀರ್ಷ- ಪುಷ್ಯ : ಹೇಮಂತ, ಮಾಘ- ಫಾಲ್ಗುಣ : ಶಿಶಿರ.
    ಈ ಸೌರಮಾನ- ಚಾಂದ್ರಮಾನಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಸೌರಮಾನಕ್ಕೇ ಪ್ರಾಮುಖ್ಯತೆ. ಆದರೆ ಇವೆರಡಲ್ಲದೇ ಋತುವನ್ನು ಲಕ್ಷಣಗಳಿಂದ ಗುರುತಿಸುವ ವಿಧಾನವೊಂದಿದೆ. ಇದು ಪ್ರತ್ಯಕ್ಷ ಪ್ರಮಾಣವಾದ್ದರಿಂದ ಈ ವಿಧಾನವೇ ಉಳಿದೆರಡು ವಿಧಾನಗಳಿಂದ ಶ್ರೇಷ್ಠ ಎಂಬುದು ವಿಜ್ಞಾನಿಗಳ ಅಭಿಪ್ರಾಯ. 
     “ಮಾಸರಾಶಿಸ್ವರೂಪಾಖ್ಯಂ ಋತೋರ್ಯಲ್ಲಕ್ಷಣತ್ರಯಂ । ಯಥೋತ್ತರಂ ಭಜೇಚ್ಚರ್ಯಾಂ ತತ್ರ ತಸ್ಯ ಬಲಾದಿತಿ ॥” (ಅ. ಸಂಗ್ರಹ. ಸೂ.೪ )
    ಆಯಾ ಋತುವಿನ ಲಕ್ಷಣಗಳು ಸ್ಪಷ್ಟವಾಗಿ ವಾತಾವರಣದಲ್ಲಿ ಕಂಡುಬರುತ್ತವೆ. ಇವುಗಳನ್ನು ಗುರುತಿಸಿ ಆಯಾ ಋತುಚರ್ಯೆಯನ್ನು ಜೀವನದಲ್ಲಿ ಅಳವಡಿಸುವುದೇ ಹೆಚ್ಚು ಶ್ರೇಯಸ್ಕರವಾದದ್ದು.
ಸಾಮಾನ್ಯವಾಗಿ ಕೆಳಕಂಡ ರೀತಿಯಲ್ಲಿ ಋತು ಲಕ್ಷಣಗಳು ಕಂಡುಬರುತ್ತವೆ
  1. ಫೆಬ್ರುವರಿ ೧೫ ರಿಂದ – ಎಪ್ರಿಲ್ ೧೫ ಅ ವರೆಗೆ: ವಸಂತ,
  2. ಏಪ್ರಿಲ್ ೧೫ ರಿಂದ – ಜೂನ್ ೧೫ ರ್ ವರೆಗೆ : ಗ್ರೀಷ್ಮ,
  3. ಜೂನ್ ೧೫ ರಿಂದ – ಆಗಸ್ಟ್ ೧೫ ಅ ವರೆಗೆ : ವರ್ಷಾ,
  4. ಆಗಸ್ಟ್ ೧೫ ರಿಂದ – ಅಕ್ಟೋಬರ್ ೧೫ ಅ ವರೆಗೆ : ಶರತ್,
  5. ಅಕ್ಟೋಬರ್ ೧೫ ರಿಂದ – ಡಿಸೆಂಬರ್ ೧೫ ರ ವರೆಗೆ : ಹೇಮಂತ,
  6. ಡಿಸೆಂಬರ್ ೧೫ ರಿಂದ – ಫೆಬ್ರುವರಿ ೧೫ ರ ವರೆಗೆ : ಶಿಶಿರ.

ಆದರೆ ಮಲೆನಾಡಿನಲ್ಲಿ ಮಳೆಗಾಲ ಹೆಚ್ಚು, ಛಳಿಗಾಲ ಕಡಿಮೆ ಎಂಬುದೇ ವೈಶಿಷ್ಟ್ಯ.

Share With Your Friends

Leave a Comment