ಆರೋಗ್ಯ ಪ್ರಾಪ್ತಿಯ ಒಳಗುಟ್ಟು
ಮನುಷ್ಯ ಸುಖಿಯಾದರೆ ಮಾತ್ರ ಸಾಲದು. ಇತರರ ಹಿತೈಷಿಯೂ ಆಗಬೇಕು. ಆರೋಗ್ಯ ಪ್ರಾಪ್ತಿಯ ನಿಯಮಗಳನ್ನು ನಿಯಮಿತವಾಗಿ ತನ್ನ ಜೀವನದಲ್ಲಿ ಅಳವಡಿಸುವುದರಿಂದ ತಾನು ಸುಖಿಯಾಗಬಲ್ಲ. ಆದರೆ, ತನ್ನಿಂದಾಗಿ ತನ್ನ ಬಂಧು ಬಳಗ, ಮಿತ್ರರು, ಗ್ರಾಮ-ನಗರ, ರಾಜ್ಯ, ದೇಶಗಳ ಹಿತಕ್ಕಾಗಿಯೂ ಪ್ರಯತ್ನ ಪಡಬೇಕು. ಹೀಗೆ ಸುಖಿಯೂ, ಹಿತೈಷಿಯೂ ಆದ ಮನುಷ್ಯ ಇಹಪರಗಳ ಹಿತಕ್ಕಾಗಿ ತನ್ನ ಬದುಕನ್ನು ಸರಿಯಾಗಿ ನಡೆಸಿದಂತಾಗುತ್ತದೆ. ಹೀಗೆ ಬದುಕುವ ಒಳಗುಟ್ಟನ್ನೇ ಆಯುರ್ವೇದ ಜಗತ್ತಿನ ಒಳಿತಿಗಾಗಿ ತೆರೆದಿಡುತ್ತದೆ.
೧. ನಿತ್ಯ ಹಿತಾಹಾರ ಸೇವೀ:
- ಹಳಸಿದ, ತಣ್ಣಗಾದ, ಹಿಂದಿನ ದಿನದ ಆಹಾರ, ಕರಿದ ತಿಂಡಿ, ವಿರುದ್ಧ ಸ್ವಭಾವದ ಆಹಾರ ಮುಂತಾದವುಗಳು ‘ಅಹಿತ’ ಆಹಾರಗಳೆನ್ನಬಹುದು.
- ಬಿಸಿ ಬಿಸಿಯಾದ ಮನೆಯೂಟ, ತಲೆತಲಾಂತರಗಳಿಂದ ಅಭ್ಯಾಸವಿರುವ ಆಹಾರದ ಸೇವನೆ ಮಿತವಾದ ಪ್ರಮಾಣದಲ್ಲಿ ಮಾಡುವುದು ‘ಹಿತಾಹಾರ’ವೆನ್ನಬಹುದು.
- ಇಂತಹ ಆಹಾರವನ್ನು ಹಸಿವೆಯಿದ್ದಷ್ಟೇ ಸಕಾಲದಲ್ಲಿ ಸೇವಿಸುವುದರಿಂದ ಅದು ಯಾವುದೇ ರೋಗಕ್ಕೆ ಕಾರಣವಾಗದು.
೨. ನಿತ್ಯ ಹಿತವಿಹಾರ ಸೇವೀ:
- ಪ್ರತಿನಿತ್ಯ ಪ್ರಾತಃಕಾಲದಲ್ಲಿ ಸೂರ್ಯೋದಯಕ್ಕೆ ಮೊದಲೇ ಏಳುವುದು.
- ನಿತ್ಯ ಅಭ್ಯಂಗ, ಕರ್ಣಪೂರಣ , ನಸ್ಯ, ಗಂಡೂಷ, ವ್ಯಾಯಾಮ ವಿದ್ವರ್ತನ, ಸ್ನಾನಗಳನ್ನು ಸಕಾಲದಲ್ಲಿ ಮಾಡುವುದು.
- ಪ್ರಯಾಣದಲ್ಲಿ ಸರಿಯಾದ ನಿಯಮಗಳ ಪಾಲನೆ.
- ಮಲ, ಮೂತ್ರ, ಹಸಿವು, ನೀರಡಿಕೆ, ನಿದ್ರೆಯ ಸಹಜ ಪ್ರವೃತ್ತಿಗಳನ್ನು ತಡೆಯದಿರುವುದು.
ಇವುಗಳನ್ನು ಸರಿಯಾಗಿ ಪಾಲಿಸುವುದರಿಂದ ಆರೋಗ್ಯ ಪಾಲನೆ ಸರಿಯಾಗಿ ಉಂಟಾಗುತ್ತದೆ. ‘ನಿತ್ಯ ಹಿತಾಹಾರ ವಿಹಾರ ಸೇವೀ’ ಈ ಸೂತ್ರದ ಸರಿಯಾದ ಪಾಲನೆಯಿಂದ ‘ಶರೀರ’ ಮತ್ತು ‘ಇಂದ್ರಿಯ’ಗಳ ಸ್ವಾಸ್ಥ್ಯಕ್ಕೆ ಕಾರಣವಾಗುತ್ತದೆ.
೩. ಸಮೀಕ್ಷ್ಯಕಾರೀ:
೪.ವಿಷಯೇಷ್ವಸಕ್ತಃ :
ಇಂದ್ರಿಯ ವಿಷಯಗಳಲ್ಲಿ ಅತಿಯಾದ ಆಸಕ್ತಿ ತೋರದೇ ಅವುಗಳನ್ನು ಸೇವಿಸಬೇಕು. ರಂಗುರಂಗಿನ ಜಗತ್ತಿನಲ್ಲಿ ಇಂದ್ರಿಯಗಳು ನಮ್ಮನ್ನು ಎಲ್ಲೆಡೆಗೆ ಸೆಳೆಯುತ್ತವೆ.ಪತ್ರಿಕೆಯ ಪುಟಗಳಲ್ಲಿ, ಟಿ. ವಿ ಧಾರವಾಹಿಗಳಲ್ಲಿ ಕಣ್ಣು, ಕಿವಿ, ಮನಸ್ಸುಗಳನ್ನು ಕೊಡುವುದು, ಜಗಮಗಿಸುವ ಹೋಟೆಲುಗಳಲ್ಲಿ ರುಚಿ, ರುಚಿಯ ತಿಂಡಿಗಳಲ್ಲಿ ಮನವಿಟ್ಟು ಹೊಟ್ಟೆ ಭಾರವಾಗಿಸಿಕೊಳ್ಳುವುದು ಇತ್ಯಾದಿಗಳಿಂದ ಜೀವನದ ಉದ್ದೇಶವನ್ನೇ ಮೈ ಮರೆಯುತ್ತೇವೆ. ಹಾಗಾಗದಂತೆ ತನ್ನ ಉದ್ದೇಶದ ಕಡೆಗೆ ಲಕ್ಷ್ಯವಿರಿಸಿ, ಆಸಕ್ತನಾಗಿ ವಿಷಯಗಳನ್ನು ಸೇವಿಸಿದಾಗ ಅದು ಅರೋಗ್ಯಕ್ಕೆ ಕಾರಣವಾಗುತ್ತದೆ.ಈ ಎರಡನೇ ಪಾದದ ಅರ್ಥವನ್ನು ಅನುಸರಿಸಿದಾಗ ‘ಶರೀರ’ದ ಆರೋಗ್ಯವೂ ಸಹ ಉಂಟಾಗುತ್ತದೆ.
೫. ದಾತಾ:
ಇತರರಿಗೆ ಕೊಟ್ಟಿದ್ದು ಹತ್ತಾಗಿ, ನೂರಾಗಿ ನಮಗೆ ಹಿಂತಿರುಗುತ್ತವೆ ಎಂಬುದು ಹಿರಿಯರ ಮಾತು. ‘ತ್ಯಾಗ’ವೊಂದರಿಂದಲೇ ನಿಜವಾದ ಅಮೃತತ್ವದ ಪ್ರಾಪ್ತಿ ಎಂಬುದು ಋಷಿಗಳ ಅಂಬೋಣ. ಈ ದಾನವೆಂಬುದು ಸತ್ಪಾತ್ರರಿಗೆ ಮಾತ್ರ ಮಾಡಬೇಕು. ಕೇವಲ ‘ಹಣವೊಂದನ್ನೇ ‘ದಾನ’ ಮಾಡಬೇಕೆಂದಿಲ್ಲ. ‘ದ್ರವ್ಯ’ ದಾನ ‘ಜ್ಞಾನ’ ದಾನ, ಸಕಾಲದಲ್ಲಿ ಮಾಡುವ ಯಾವುದೇ ರೀತಿಯ ಸಹಾಯವೂ ದಾನವೇ ಸರಿ.