fbpx

ಆರೋಗ್ಯದ ತಳಹದಿ – ಸುಖಮಲಪ್ರವೃತ್ತಿ

Toilet

ಆರೋಗ್ಯದ ತಳಹದಿ  – ಸುಖಮಲಪ್ರವೃತ್ತಿ

ಬೈಲಕಡೆಗೆ ಹೇಗಾಗುತ್ತದೆ? ತಂಬಿಗೆ ತಕೊಂಡು ಹೋಗುತ್ತಿದ್ದೀರಾ? ಸಂಡಾಸು ಪ್ರತಿನಿತ್ಯ ಆಗುತ್ತದೆಯೇ? ಹೊರಕಡೆಗೆ ಸರಿಹೋಗುತ್ತದೆಯೇ?  ಗುಡ್ಡೆಗೆ ಹೋಗುತ್ತೀಯೋ? ಇತ್ಯಾದಿ ಬೇರೆ ಬೇರೆ ಪ್ರದೇಶಗಳಲ್ಲಿ ಯಾವುದೇ ವೈದ್ಯರು ರೋಗಿಗಳನ್ನು ಕೇಳುವ ತಪ್ಪದ ಮೊಟ್ಟಮೊದಲನೇ ಪ್ರಶ್ನೆ. ಹೌದಲ್ಲವೇ?!  ಇದರಿಂದ ದೇಹದ ಜೀರ್ಣಪ್ರಕ್ರಿಯೆ ಅರ್ಥವಾಗುವಷ್ಟು ಇನ್ನಾವ ಲಕ್ಷಣಗಳಿಂದಲೂ ಆಗುವುದಿಲ್ಲ. ಯಾವ ವ್ಯಕ್ತಿಗೆ ರೋಗ ಗುಣವಾಗಿದೆ ಎನ್ನಬಹುದು? ಅಥವಾ ರೋಗವಿಲ್ಲದೆ ವ್ಯಕ್ತಿಯ ಗುಣಲಕ್ಷಣಗಳೇನು ? ಎಂದು ಕೇಳಿದಾಗ ಚರಕಾಚಾರ್ಯರ ಉತ್ತರ ಹೀಗಿದೆ –  “ ( ಔಷಧಗಳ್ಯಾವವೂ ಇಲ್ಲದೆಯೇ) ದೇಹದಲ್ಲಿ ಯಾವುದೇ ನೋವು ಇಲ್ಲದಿರುವುದು, ಉತ್ತಮ ಮೈಕಾಂತಿ, ಸುಸ್ವರ, ಶರೀರ ವೃದ್ಧಿ, ಬಲವೃದ್ಧಿ, ಆಹಾರ ಸೇವಿಸುವ ಅಭಿಲಾಷೆ, ಆಹಾರ ಸೇವನೆಯ ಸಮಯದಲ್ಲಿ ಬಾಯಿ ರುಚಿ, ತಿಂದಂತಹ ಆಹಾರ ಸಕಾಲದಲ್ಲಿ ಸಮ್ಯಕ್ ಪರಿಪಾಕ, ಸಕಾಲದಲ್ಲಿ ಸರಿಯಾದ ನಿದ್ರೆ, ದುಃಸ್ವಪ್ನಗಳಿಲ್ಲದ ನಿದ್ರೆ, ಮೈಹಗುರವೆನಿಸಿ ಸುಖವಾಗಿ ಎಚ್ಚರ, ಎದ್ದ ಮೇಲೆ ವಾತ – ಮೂತ್ರ- ಮಲಗಳ ಸಮ್ಯಕ್ ಪ್ರವೃತ್ತಿ. ಎಲ್ಲ ರೀತಿಯಿಂದಲೂ ಮನಸ್ಸು, ಬುದ್ಧಿ, ಇಂದ್ರಿಯಗಳ ಸುಸ್ಥಿತಿ. ಇವು ಆರೋಗ್ಯವಂತನ ಲಕ್ಷಣಗಳು. ” ಎಂದಿದ್ದಾರೆ. ಬೆಳಗಿನ ಸುಖವಾದ ಮಲ ಪ್ರವೃತ್ತಿ ಇಡೀ ದಿನದ ಉಲ್ಲಸಿತ ಬದುಕಿನ ಬುನಾದಿ ಎಂಬುದು ಹಲವರ ಅನುಭವ. ಮಲ ಗಟ್ಟಿಯಾಗಿ ಆಗುವಿಕೆ. ತೆಳ್ಳಗೆ, ಹಿಟ್ಟಿನಂತೆ, ಅತಿ ಹಸಿರು, ಹಳದಿ, ಕಪ್ಪು, ಬಿಳುಪು ಬಣ್ಣ, ಅತೀ ದುರ್ಗಂಧ, ನೊರೆ ನೊರೆಯಾಗಿ ಆಮದೊಂದಿಗೆ, ಅಂಟು ಅಂಟಾಗಿ ಸಿಂಬಳದೊಂದಿಗೆ, ರಕ್ತದೊಂದಿಗೆ, ಉರಿ, ನೋವಿನೊಂದಿಗೆ, ಪ್ರವೃತ್ತಿ ನಂತರ ಸುಸ್ತು, ಅತಿಯಾಗಿ ವಾಯುವಿನೊಂದಿಗೆ ಮಲ ಪ್ರವೃತ್ತಿ ಇತ್ಯಾದಿಗಳು ವಿಕೃತ ಮಲ ಪ್ರವೃತ್ತಿಯ ಲಕ್ಷಣಗಳು. ಸಾಮಾನ್ಯವಾಗಿ ಇವುಗಳನ್ನು ಈ ಕೆಳಗಿನಂತೆ ಅರ್ಥೈಸಬಹುದು.

೧. ವಾತವೃದ್ಧಿ :

ಮಲ ಒಣಗಿ, ಗಟ್ಟಿಯಾಗಿ, ಕಪ್ಪಾಗಿ, ಹಿಕ್ಕೆ ಹಿಕ್ಕೆಯಾಗಿ, ವಾಯುವಿನೊಂದಿಗೆ ಹೆಚ್ಚು ಹೊತ್ತಿನಲ್ಲಿ ಪ್ರವೃತ್ತಿ- ಪಕ್ವಾಶಯ ಒಣಗಿದೆ, ಉದರ ಶೂಲ, ಜಿಡ್ಡು ಕಡಿಮೆ, ಸೊಂಟ ನೋವು, ತಲೆ ನೋವು, ಅನಿದ್ರೆ, ಮೈ ಕೈ ನೋವು ಇರಬಹುದು.

೨. ಪಿತ್ತ ವೃದ್ಧಿ :

ತೀವ್ರ ಹಳದಿ / ಹಸಿರು ದ್ರವಯುಕ್ತ ಮಲಪ್ರವೃತ್ತಿ, ದುರ್ಗಂಧಿತ – ಪಕ್ವಾಶಯ ಶೈಥಿಲ್ಯ, ಪಿತ್ತ ವೃದ್ಧಿ, ಹೊಟ್ಟೆಯುರಿ, ನೋವು, ಉಬ್ಬರ, ಹುಳಿವಾಂತಿ, ತಲೆನೋವು, ಹೃದ್ರೋಗ, ಅರೆ ನಿದ್ರೆ, ಮಾನಸಿಕ ಅಶಾಂತಿ, ಕೋಷ್ಠಶಾಖಾಶ್ರಿತ ಕಾಮಾಲೆ ರೋಗ.

೩. ಕಫ ವೃದ್ಧಿ :

ಬಿಳಿಯಾದ ಅಂಟು ಅಂಟಾದ ಮಲ ಪ್ರವೃತ್ತಿ, ಹಿಟ್ಟು, ಹಿಟ್ಟಿನಂತೆ- ಅಗ್ನಿಮಾಂದ್ಯ, ಅರುಚಿ, ಶುಷ್ಕಾರ್ಶಸ್, ಅಜೀರ್ಣ, ತಲೆನೋವು, ಶಾಖಾಶ್ರಿತ ಕಾಮಾಲೆ ( ಭಿಳಿ ಕಾಮಾಲೆ )

೪. ತ್ರಿದೋಷ ವೃದ್ಧಿ :

ಒಮ್ಮೊಮ್ಮೆ ಅಂಟು ಅಂಟಾಗಿ, ಕಪ್ಪಾಗಿ, ತಡೆ ತಡೆದು ಹಿಕ್ಕೆ ಹಿಕ್ಕೆಯಾಗಿ ವಿವಿಧ ಬಣ್ಣ ಮಿಶ್ರಿತ, ದುರ್ಗಂಧಿತ – ಜಲೋಧರ, ಅರ್ಬುದ ತ್ರಿದೋಷಜ ಅರ್ಶಸ್, ಯಕೃತ್ ವೃದ್ಧಿ, ಹೃದ್ರೋಗ ಮುಂತಾದ ಮಹಾವ್ಯಾಧಿಗಳು.

೫. ರಕ್ತದುಷ್ಟಿ :

ರಕ್ತಯುಕ್ತ ದೋಷಯುಕ್ತ ಮಲಪ್ರವೃತ್ತಿ – ರಕ್ತಾರ್ಶಸ್(Bleeding Piles), ಪರಿಕರ್ತಿಕಾ(Anal Fissures), ರಕ್ತಾತಿಸಾರ, ಪ್ರವಾಹಿಕಾ, ಪಕ್ವಾಶಯವ್ರಣ ಇತ್ಯಾದಿ.
 
ಮೇಲಿನ ಎರಡೆರಡು ದೋಷಗಳ ಲಕ್ಷಣಗಳು ಕಂಡುಬಂದಲ್ಲಿ ದ್ವಂದ್ವಜ ದೋಷಜನ್ಯ ವ್ಯಾಧಿಗಳೆಂದು ಅರ್ಥೈಸಬೇಕಾಗುತ್ತದೆ. ದೇಹದಲ್ಲಿ ‘ಮಲ’ದೇಹಧಾರಣೆಯ ಕಾರ್ಯಮಾಡುತ್ತದೆ. ಮಲವೃದ್ಧಿಗಿಂತ ಕ್ಷಯ ಹೆಚ್ಚು ಪೀಡಾಕಾರಕ. ” ಮಲೋಚಿತ ತ್ವಾತ್ ದೇಹಸ್ಯ ಕ್ಷಯೋ ವೃದ್ಧೇಸ್ತು ಪೀಡನಃ ॥”(ಅ. ಹೃ.೧೧)
ಮಲವೃದ್ದಿಯಿಂದ ‘ಹೊಟ್ಟೆಯುಬ್ಬರ, ಗುಡುಗುಡಾಯನ, ದೇಹಭಾರ ಮತ್ತು ನೋವು ಕಂಡರೆ, ಮಲಕ್ಷಯದಿಂದ ವಾಯು ಅತೀವೇಗದಿಂದ ಕರುಳಿನಲ್ಲಿ ಸುತ್ತುತ್ತಾ ಹೃದಯದಲ್ಲಿ ನೋವು, ಉಭಯ ಪಾರ್ಶ್ವಗಳಲ್ಲಿ ತೀವ್ರವಾದ ನೋವನ್ನುಂಟುಮಾಡುತ್ತದೆ. ಮಲಕ್ಷಯದಿಂದಾಗುವ ತೀವ್ರವಾದ ವೇದನೆಗೆ ಮಲಹೆಚ್ಚಿಸುವ ಆಹಾರ ಕೊಡಬೇಕು. ಉದಾ : ಉದ್ದು, ಕಡಲೆ, ಬಾರ್ಲಿ, ಅಲಸಂದೆ ಇತ್ಯಾದಿ. 
ಸರಿಯಾದ ಮಲಪ್ರವೃತ್ತಿಯೆಂದರೆ ‘ ಕೊಂಚ ಸ್ನಿಗ್ಧಾಂಶದಿಂದ ಕೂಡಿ ಹಳದಿ, ಸಾಧಾರಣ ಗಟ್ಟಿಯಾದ, ಸರಿಯಾಗಿ ನಿರ್ಮಿತವಾದ, ಹೆಚ್ಚು ವಾಸನೆಯಿಲ್ಲದ, ಬೇಗನೇ ಯಾವುದೇ ನೋವಿಲ್ಲದೇ ಹೊರಬೀಳುವ ಮಲ.’
ಯಾವುದೇ ವ್ಯಾಧಿಗಳಲ್ಲಿ ಅನೇಕ ರೀತಿಯಲ್ಲಿ ಕಂಡುಬರುವುದಾದರೂ ಸಹ ಮುಖ್ಯವಾಗಿ ಈ ಸ್ರೋತಸ್ಸು ಹಾಳಾಗಲು ಇರುವ ಕಾರಣ ಆರು.
೧. ಮಲ ಹಾಗೂ ಅಪಾನ ವಾಯುವಿನ ತಡೆಯುವಿಕೆ.
೨. ಅತಿ ಆಹಾರ ಸೇವನೆ.
೩. ಅಜೀರ್ಣ
೪. ಅಧ್ಯಶನ
೫. ಅಗ್ನಿಮಾಂಧ್ಯ ಹಾಗೂ
೬ ದೇಹ ಕೃಶತೆ

 

೧. ಮಲಮೂತ್ರ ಅಪಾನವಾಯುಗಳನ್ನು ತಡೆಯುವುದು:

ಹೀಗೆ ಮಲಾವರೋಧದಿಂದ ಪಕ್ವಾಶಯದಲ್ಲಿ ಮಲ ಒಣಗಿ ಗಟ್ಟಿಯಾಗಿ ಪ್ರವೃತ್ತಿಯಾಗಲು  ಕಷ್ಟಕರವಾಗುವುದು. ಮಲಪ್ರವೃತ್ತಿ ಹಾಗೂ ಅಪಾನವಾಯುವಿನ ತಡೆಯಿಂದಾಗಿ ಕರುಳಿನಲ್ಲಿ ಮಾತ್ರವಲ್ಲದೆ ಶಿರಃಶೂಲ, ಹೃದ್ರೋಗ, ದೃಷ್ಟಿಮಾಂದ್ಯದಂತಹ ವಿಕಾರಗಳ ಉತ್ಪತ್ತಿಗೆ ಕಾರಣವಾಗುವುದು. ಯಾವುದೇ ಸಂಕೋಚವಿಲ್ಲದೆಯೇ ಅವುಗಳ ಸಹಜ ಪ್ರವೃತ್ತಿಗೆ ಕರೆ ಬಂದಾಗ ತಕ್ಷಣ ಓಗೊಡುವುದು ಸುಖ ಮಲಪ್ರವೃತ್ತಿಯ ಮೂಲಭೂತ ಅವಶ್ಯಕತೆ. ಈ ರೀತಿಯ ತಡೆಯುವಿಕೆಯಿಂದ ಮಲಾವರೋಧವಿದ್ದಲ್ಲಿ, ಕೊಂಚ ಜಿಡ್ಡಿನಿಂದ ಕೂಡಿದ ಆಹಾರ ಸೇವನೆ, ಆಹಾರ ಸೇವನೆಗೆ ಮೊದಲು ೧ ಚಮಚ ತುಪ್ಪ ಅಥವಾ ಎಣ್ಣೆಯನ್ನು ಬಿಸಿ ನೀರಿನಲ್ಲಿ ಅಥವಾ ತಿಳಿಸಾರಿನೊಂದಿಗೆ ಆಹಾರದ ಮೊದಲು ಸೇವಿಸುವುದು. ಕಿಬ್ಬೊಟ್ಟೆ ಹಾಗೂ ಬೆನ್ನಿಗೆ ಬಿಸಿಯೆಣ್ಣೆ ಹಚ್ಚಿ ಬಿಸಿ ನೀರಿನ ಸ್ನಾನ ಹಿತಕರ.
 

೨. ಅತಿಯಾಗಿ ಆಹಾರ ಸೇವನೆ:

ಆಹಾರದ ಪ್ರಮಾಣ ಅತಿಯಾದಾಗಲೂ ಆಹಾರದ ಗತಿಗೆ ಅವಕಾಶವಿಲ್ಲದೆ ಆಹಾರದ ಅಸಮಪಾಕ, ಮಲಾಧಿಕ್ಯವಾಗಿ  ಹೊರಬರಲು ಕಷ್ಟವಾಗಿ ಕಟ್ಟುವುದು. ಹೊಟ್ಟೆ ಭಾರವಾಗಿ ಅನುತ್ಸಾಹ,ಅಗ್ನಿಮಾಂದ್ಯವಾಗುವುದು. ಇಂತಹ ಸಂದರ್ಭದಲ್ಲಿ ಒಂದು ಹೊತ್ತು ಆಹಾರ ಸೇವಿಸುವುದನ್ನು ನಿಲ್ಲಿಸಿ ಬಿಸಿ ನೀರಿನಲ್ಲಿ ಹರಳೆಣ್ಣೆ (೨ ರಿಂದ ೪ ಚಮಚ ) ಅಥವಾ ಅಳಲೆ ಕಾಯಿ ಪುಡಿ ಹಾಗೂ ಸೈಂಧವ ಲವಣ ( ೫ ಗ್ರಾಂ + ೧ ಗ್ರಾಂ) ಬಿಸಿ ನೀರಿನಲ್ಲಿ ಅಥವಾ ಮುರುಗಲು ಜೀರಿಗೆ ಸಾರಿ ಸೇವಿಸುವುದು ಉತ್ತಮ. ಇದರಿಂದ ಸುಖವಾಗಿ ಮಲಪ್ರವೃತ್ತಿಯಾಗಿ ಅತಿ ಸಂಚಿತ ಮಲದ ಹ್ರಾಸವಾಗಿ ಸುಖವೆನಿಸುವುದು.
 

೩. ಅಜೀರ್ಣ :

ಆಹಾರ ಜೀರ್ಣವಾಗದಿರುವಿಕೆ. ಇದು ಸ್ನೇಹಾಂಶದ ಏರಿಳಿತ, ಉಷ್ಣಾಂಶದ ವ್ಯತ್ಯಯ, ವಾಯು, ಜಲ, ಆಹಾರದ ಪ್ರಮಾಣಗಳ ಏರಿಳಿತದಿಂದಾಗಿ ಆಗುವುದು. ಪ್ರತಿಯೊಂದು ಅವಸ್ಥೆಯಲ್ಲಿಯೂ ಬೇರೆ ಬೇರೆ ಚಿಕಿತ್ಸೆಯಾಗಬೇಕಾದ್ದಾಗ್ಯೂ ಸಾಮಾನ್ಯವಾಗಿ ಹಿಂಗ್ವಷ್ಟಕ ಚೂರ್ಣವನ್ನು ೨ ಚಿಟಿಕೆ ಕೊಂಚ ತುಪ್ಪದೊಂದಿಗೆ ಕಲಸಿ ಸೇವಿಸುವುದರಿಂದಲೂ, ಶುಂಠೀ ಬೆಲ್ಲವನ್ನು ತುಪ್ಪದೊಂದಿಗೆ ತಿನ್ನುವುದರಿಂದಲೂ, ಬಿಸಿಬಿಸಿಯಾದ ಮಿತವಾದ ಪ್ರಮಾಣದ ( ಬಿಸಿನೀರಿನೊಂದಿಗೆ) ಆಹಾರದ ಸೇವನೆ ಗುಣಪಡಿಸಬಲ್ಲದು.
 

೪. ಅಧ್ಯಶನ:

ಪುನಃ ಪುನಃ ತಿನ್ನುವುದು. ಇದರಿಂದ ಅಗ್ನಿದುಷ್ಟೀ ಅಜೀರ್ಣಜನ್ಯ ವಿಕಾರಗಳು, ಹೊಟ್ಟೆಯುಬ್ಬರ, ಆಹಾರದ ವಿಕೃತ ಪಾಕ ಗ್ರಹಣೀ ರೋಗ ( ಜೀರ್ಣಾಂಗವೇ ಹಾಳಾಗುವಿಕೆ) ತಲೆ ನೋವು ಇತ್ಯಾದಿ  ತೊಂದರೆಗಳು ಹಾಗೂ ಪದೇ ಪದೇ ಅಲ್ಪಾಲ್ಪ ಮಲಪ್ರವೃತ್ತಿಯಾಗುವುದು ಮುಖ್ಯ ಪರಿಣಾಮ. Irritable Bowel Syndrome ಎನ್ನುವ ಆಹಾರ ಸೇವಿಸಿದ ಕೂಡಲೇ ಮಲಪ್ರವೃತ್ತಿಗೆ ಹೋಗಬೇಕಾದ ಕಿರಿಕಿರಿಗೆ ಮುಖ್ಯ ಕಾರಣವಿದು. ಇದಕ್ಕೆ ಪರಿಹಾರ ರೂಪದಲ್ಲಿ ಹಸಿವೆ ಹೆಚ್ಚಿಸುವ ಔಷಧಗಳನ್ನು ವೈದ್ಯರ ಸಲಹೆಯೊಂದಿಗೆ ಜಿಡ್ಡಿನೊಂದಿಗೆ ಸೇವಿಸಬೇಕು. ಈ ಕಾರಣವನ್ನು ನಿಲ್ಲಿಸಬೇಕು. ಕೆಲವು ದಿನ ಒಂದು ಹೊತ್ತು ಆಹಾರ ಕಡಿಮೆ ಮಾಡಿ ಬಿಸಿ ನೀರು ಕುಡಿದು ಮಲಗಬೇಕು. ಅಳಲೇಕಾಯಿ ಸೈಂಧವ ಲವಣದ ಉಪಯೋಗದಿಂದಲೂ ಈ ತೊಂದರೆ ಸರಿಯಾಗುತ್ತದೆ.
 

೫. ಅಗ್ನಿಮಾಂದ್ಯ:

ಅಜೀರ್ಣದಂತೆ ಕಾರಣವರಿತು ಚಿಕಿತ್ಸಿಸಬೇಕು.
 

೬.  ಕೃಶತೆ:

ಕೃಶ ಶರೀರದಲ್ಲಿ ಮೇದಸ್ಸಿನ ಕೊರತೆಯಿಂದ ಜಿಡ್ಡಿರದೆ ಮಲ ಒಣಗಿ ತುಂಬಾ ತಡವಾಗಿ ಗಟ್ಟಿಯಾಗಿ ಸ್ವಲ್ಪಸ್ವಲ್ಪವೇ ಮಲದ ಪ್ರವೃತ್ತಿಯಾಗುತ್ತದೆ. ಸ್ನೇಹ ಹಾಗೂ ದೇಹವರ್ಧನಕ್ಕೆ ಬೇಕಾಗುವ ಕೆಲವು ರಸಾಯನಗಳನ್ನು ವೈದ್ಯರ ಸಲಹೆಯಂತೆ ಸ್ವೀಕರಿಸಿ, ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬೇಕು. ಒಟ್ಟಿನಲ್ಲಿ- 
  • ಸಕಾಲದಲ್ಲಿ ಹಿತಮಿತವಾದ ಬಿಸಿಯಾದ ಆಹಾರ
  • ಬಿಸಿನೀರಿನೊಂದಿಗೆ ಕೊಂಚ ಜಿಡ್ಡಿನಿಂದ ಕೂಡಿದ ಆಹಾರ
  • ಹಸಿವೆಯನ್ನು ಕಾಪಾಡಿಕೊಂಡು, ಅಜೀರ್ಣವಾಗದಂತೆ ಆಹಾರ ಸೇವನೆ
  • ನಿತ್ಯ ಅಭ್ಯಂಗ, ವ್ಯಾಯಾಮ, ನಿಯಮಿತ ಜೀವನದಿಂದ ಸುಖ ಮಲ ಪ್ರವೃತ್ತಿಗಾಗಿ ಆರೋಗ್ಯವಂತನಾದರೂ ಪ್ರಯತ್ನಿಸಬೇಕೆಂಬುದು ಸತ್ಯ.

ರಾಜಯಕ್ಷ್ಮಾದಲ್ಲಿ ಎಲ್ಲ ಧಾತುಗಳೂ ಕ್ಷೀಣವಾಗಿರುವ ಪರಿಸ್ಥಿತಿಯಲ್ಲಿ, ಸಂಚಿತ ಮಲವೇ ಆತನ ಪ್ರಾಣ ರಕ್ಷಣೆ ಮಾಡುವುದೆಂಬ  ಮಾತು ಈ ಮಲಪ್ರವೃತ್ತಿಯ ಮಹತ್ವವನ್ನು ಹೇಳುತ್ತದೆ.

” ಸರ್ವಧಾತುಕ್ಷಯಾರ್ತಸ್ಯ ಬಲಂ ತಸ್ಯ ಹಿವಿಡ್ಬಲಂ॥”

Share With Your Friends

Leave a Comment