fbpx

ಆರೋಗ್ಯಕ್ಕಾಗಿ ಹೀಗಿರಲಿ ನಮ್ಮ ನಡವಳಿಕೆ – ೪

food

ಭಿಕ್ಷಾಂ ದೇಹಿ !

ಎಲೈ ಅಶ್ವಿನಿ ದೇವತೆಗಳೇ, ಯಾವ ನಿಮ್ಮ ರಕ್ಷಣೆಗಳಿಂದ ನೀವು ನಿಮ್ಮ ಹವಿರ್ದಾತನಾದ  ಯಜಮಾನನಿಗೆ ಸುಖವನ್ನುಂಟುಮಾಡುವವರಾಗಿರುತ್ತಿರೋ, ಯಾವ ನಿಮ್ಮ ಬೆಂಬಲಗಳಿಂದ ಭುಜ್ಯವನ್ನು ರಕ್ಷಿಸಿ, ಅಧ್ರಿಗೂ ಮತ್ತು ಋತುಸ್ತುಭನೆಂಬ ಋಷಿಗೂ ಸುಖದಿಂದ ಕೂಡಿದುದೂ ಮತ್ತು ಪೋಷಕವಾದುದೂ ಆದ ಅನ್ನವನ್ನು ಹೊಂದಿಸಿದಿರೋ ಆ ನಿಮ್ಮ ರಕ್ಷಣೆಗಳೊಂದಿಗೆ ಆದರದಿಂದ ದಯಮಾಡಿರಿ.
   ಈ ಮಂತ್ರದಲ್ಲಿ ಅನ್ನ ಸೇವಿಸಲು  ಸುಖಕರವೂ ಹಾಗೂ ಪೋಷಕವೂ ಆಗಿರಬೇಕು ಎಂಬ ಧ್ವನಿತಾರ್ಥವಿದೆ. ಆಹಾರ ಸೇವನೆಯ ಕುರಿತು ಚರಕರ ಸದ್ವೃತ್ತ ಹೀಗಿದೆ –
” ನಾರತ್ನ ಪಾಣಿರ್ನಾಸ್ನಾತೋ ನೋಪಹತವಾಸಾನಪಿತ್ವಾ
ನಾಹುತ್ವಾ ದೇವತಾಭ್ಯೋ ನಾನಿರೂಪ್ಯ ಪಿತೃಭ್ಯೋ ನಾದತ್ವಾ
ಗುರುಭ್ಯೋ ನಾತಿಥಿಭ್ಯೋ ನೋಪಾಶ್ರೀತೇಭ್ಯೋ ನಾಪುಣ್ಯ-
ಗಂಧೋ ನಾಮಾಲೀ ನಾಪ್ರಕ್ಷಾಲಿತಪಾಣಿಪಾದವದನೋ
ನಾಶುದ್ಧಮುಖೋ ನೋದನ್ಮುಖೋ ನ ವಿಮನಾ
ನಾಭಕ್ತಾಶಿಷ್ಟಾಶುಕ್ಷುಧಿತ ಪರಿಚರೋ ನಾಪಾತ್ರಿಷು
ಅಮೇಧ್ಯಸು ನಾದೇಶೇ ನಾಕಾಲೇ ನಾಕೀರ್ಣೇ
ನಾದಾತ್ವಾಽಗ್ರಮಗ್ನಯೇ ನಾಪೋಕ್ಷಿತಂ
ಪ್ರೋಕ್ಷಣೋದಕೈಃ ನಮಂತ್ರೈರನಭಿಮಂತ್ರಿತಂ
ನ ಕುತ್ಸಯನ್ನ ಕುತ್ಸಿತಂ ನ ಪ್ರತಿಕೂಲೋಪಹಿತಂ ಅನ್ನಂ
ಆದದೀತ, ನ ಪರ್ಯುಷಿತಮನ್ಯತ್ರ ಮಾಂಸಹರಿತಕ
ಶುಷ್ಕ ಶಾಖಫಲಭಕ್ಷ್ಯೇಭ್ಯಾಃ ನ ನಕ್ತಂ ದಧಿ ಭುಂಜೀತ
ನ ಸಕ್ತೂನೇಕಾನಶ್ನೀಯಾನ್ನ ನಿಶಿ ನ ಭುಕ್ತ್ಯಾ ನ ಬಹೂನ್ನ
ದ್ವಿರ್ನೋದಕಾಂತರಿತಾತ ನ ಧಿಧಿತ್ವಾದ್ವಿಜೈರ್ಭಕ್ಷಯೇತ್ ॥೨೦॥” ( ಚ. ಸೂ.೮-೨೦)
 
ಸಾರರೂಪದಲ್ಲಿ ಈ ಸದ್ವೃತ್ತವನ್ನು ಹೀಗೆ ಹೇಳಬಹುದು-
 • ಆಹಾರ ಸೇವಿಸುವಾಗ ಕೈಯಲ್ಲಿ ಯಾವುದಾದರೂ ರತ್ನ, ಕೊರಳಲ್ಲಿ ಹಾರ ( ಜಪಮಣಿ ಇತ್ಯಾದಿ ) ಇರಬೇಕು.
 • ಸ್ನಾನಮಾಡಿ  ಹೊಸ ಬಟ್ಟೆ ಧರಿಸಿರಬೇಕು.
 • ನಿತ್ಯಪೂಜೆ ಮಾಡಿರಬೇಕು. ‘ಅಗ್ನಿ’ ಕರ್ಮ ಆಚರಿಸಿರಬೇಕು.
 • ಅಗ್ನಿಗೆ, ದೇವತೆಗಳಿಗೆ, ಪಿತೃಗಳಿಗೆ, ಗುರುಗಳಿಗೆ, ಅತಿಥಿಗಳಿಗೆ, ಆಶ್ರಿತರಾದ ಎಲ್ಲರಿಗೆ ಮೊದಲು ಸಮರ್ಪಿಸಿ ನಂತರ ಸೇವಿಸಬೇಕು.
 • ಕೈಕಾಲು ಮುಖ ತೊಳೆದು ಉತ್ತಮ ವಾತಾವರಣದಲ್ಲಿ ಸೇವಿಸಬೇಕು.
 • ಅಡುಗೆ ಮಾಡುವ, ಬಡಿಸುವ ಪರಿಚಾರಕ ಜನರು ಶುಚಿಯುಳ್ಳವರೂ ಪ್ರೀತಿಯಿಂದ ಕೂಡಿರಬೇಕು. ಅವರು ಹಸಿದಿರಬಾರದು.
 • ಅಕಾಲದಲ್ಲಿ, ಸರಿಯಿಲ್ಲದ ಸ್ಥಳದಲ್ಲಿ ಭೋಜನ ಮಾಡಬಾರದು.
 • ಸ್ಥಳ ವಿಶಾಲವಾಗಿರಬೇಕು. ಮನಸ್ಸು ಪ್ರಸನ್ನವಾಗಿರಬೇಕು.
 • ಮಂತ್ರಜಲದಿಂದ ಪ್ರೋಕ್ಷಣೆ ಮಾಡಿಯೇ ಅಹಾರ ಸೇವಿಸಬೇಕು.
 • ಯಾರಿಗೂ ಬೈಯ್ಯದೆ, ಬೈಸಿಕೊಳ್ಳದೆ ಆಹಾರ ಸೇವಿಸಬೇಕು.
 • ಹಾಳಾದ ಇಷ್ಟವಿಲ್ಲದ ಆಹಾರವನ್ನು ಸೇವಿಸಬಾರದು.
 • ಹಣ್ಣು, ಸೊಪ್ಪು, ಭಕ್ಷಗಳನ್ನು ಹೊರತುಪಡಿಸಿ ಉಳಿದ ಆಹಾರ ರಾತ್ರಿ ಕಳೆದಿರಬಾರದು (ಹಳಸಿರಬಾರದು)
 • ಮೊಸರು, ಉಪ್ಪು, ಜೇನು, ಹಿಟ್ಟು, ತುಪ್ಪ ಇವುಗಳನ್ನು ಹೊರತುಪಡಿಸಿ ಇತರ ಆಹಾರವನ್ನು ಸಂಪೂರ್ಣವಾಗಿ ಭುಜಿಸಬೇಕು.
 • ಆಹಾರ ದ್ರವ್ಯಗಳು ಪಚನಕ್ಕೆ ಜಡವೂ, ಹೆಚ್ಚಿನ ವೀರ್ಯದಿಂದ ಕೂಡಿರುವುದರಿಂದ ಹೆಚ್ಚಾದರೆ ಸೇವಿಸಿ ಅರೋಗ್ಯ ಹಾಳುಮಾಡಿಕೊಳ್ಳುವುದಕ್ಕಿಂತ ಬಿಡುವುದು ಒಳ್ಳೆಯದು.
 • ರಾತ್ರಿ ಮೊಸರು ಸೇವಿಸಬಾರದು.
 • ಹಿಟ್ಟನ್ನು ಒಂದನ್ನೇ ತಿನ್ನಬಾರದು, ರಾತ್ರಿ ಸೇವಿಸಬಾರದು. ತಿಂದು  ಹೆಚ್ಚು ನೀರು ಸೇವಿಸಬಾರದು. ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ಹಲ್ಲಿನಿಂದ ಕಚ್ಚಿ ಎಳೆದುತಿನ್ನಬಾರದು.
ಆಹಾರ ಸೇವನೆ ”ಯಜ್ಞ’ವಿದ್ದಂತೆ. ಅದಕ್ಕೂ ನಿಯಮವಿದೆ. ನಿಯಮಸಹಿತವಾಗಿ ಅನ್ನ ಸೇವಿಸಿದಾಗ ರೋಗ ಬಾರದು. ಇಲ್ಲದಿದ್ದರೆ ರೋಗ ಶತಃಸಿದ್ಧ. ಅಂತೆಯೇ ”ಅನ್ನದಾನ” ಶ್ರೇಷ್ಠದಾನ. ನಮ್ಮ ಊರಿನಲ್ಲಿ ಜನ ಹಸಿವೆಯಿಂದ ಸಾಯುತ್ತಿದ್ದರೆ, ನಾನು ಸುಖವಾಗಿ ಅನ್ನ ಸೇವಿಸುವುದು ಹೇಗೆ ಸಾಧ್ಯ? ಅದರಲ್ಲೂ ಅನ್ನ ಸಂಗ್ರಹ ಮಾಡುವುದು ಪಾಪವೇ ಸರಿ.
 
ಪ್ರತಿನಿತ್ಯ ಜಗತ್ತಿನಲ್ಲಿ ೨೦-೪೦ ಸಾವಿರ ಜನ ಹೊಟ್ಟೆಗಿಲ್ಲದೆ ಹಸಿವಿನಿಂದ ಸಾಯುತ್ತಿದ್ದಾರೆ, ಗೊತ್ತೇ? ಹೆಚ್ಚು ಜನ ಸಾಯುವುದು ಆಫ್ರಿಕಾ ಹಾಗೂ ಭಾರತದಲ್ಲಂತೆ!!! ೧೭ ಮಿಲಿಯನ್ ಜನ ಇಲ್ಲಿ ಒಂದು ಹೊತ್ತು ಊಟಕ್ಕೂ ಕಷ್ಟಪಡುತ್ತಾರೆ. ಹೀಗಿದ್ದಾಗ ಇದ್ದವರು ಇಲ್ಲದಿದ್ದವರಿಗೆ ದಾನ ಮಾಡಿದರೆ ಈ ಸಮಸ್ಯೆ ಇರಬಲ್ಲದೇ? ಅನ್ನ ಭಗವಂತ ನೀಡುವ ಭಿಕ್ಷೆಯಲ್ಲವೇ? ಈ ತಿಂದ ಅನ್ನ ಜ್ಞಾನ ಹಾಗೂ ವೈರಾಗ್ಯ ನೀಡಲೆಂದು ನಾವು ಪ್ರಾರ್ಥಿಸಬೇಕಲ್ಲವೇ?
 
” ಅನ್ನಪೂರ್ಣೇ ಸದಾಪೂರ್ಣೇ ಶಂಕರಃಪ್ರಾಣವಲ್ಲಭೇ।
ಜ್ಞಾನವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತಿ॥ “

Share With Your Friends

Leave a Comment