fbpx
+919945850945

ಆರೋಗ್ಯಕ್ಕಾಗಿ ಹೀಗಿರಲಿ ನಮ್ಮ ನಡವಳಿಕೆ – ೩

Agni

ಅಗ್ನಿಮುಪಚರೇತ

ಋಗ್ವೇದದ ಆರಂಭಿಕ ಮಂತ್ರ ಅಗ್ನಿ ಕುರಿತದ್ದು ! ಅಗ್ನಿದೇವ ನಾವು ಕೊಡುವ ಹವಿಸ್ಸನ್ನು ತಾನೂ ಸ್ವೀಕರಿಸಿ ಇತರರಿಗೆ ತಲುಪಿಸುವನು. ಸೃಷ್ಟಿಕರ್ತನ ವ್ಯವಸ್ಥೆ ಇದು.
” ಸಹಯಜ್ಞಾಃ ಪ್ರಜಾಃ ಸೃಷ್ಟ್ವಾಪುರೋವಾಚ ಪ್ರಜಾಪತಿಃ ।
ಆನೇನ ಪ್ರಸವಿಷ್ಯಧ್ವೇಮೇಷವೋಽಸ್ತ್ವಿಷ್ಟಕಾಮಧುಕ್ ॥೧೦॥
ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ ।
ಪರಸ್ಪರಂ ಭಾವಯಂತಃ ಶೇಯಃ ಪರಮವಾಪ್ಸ್ಯಥ ॥೧೧॥
ಇಷ್ಟಾನ್ ಭೋಗಾನ್ ಹಿ ವೋ ದೇವಾಃ ದಾಸ್ಯಂತೇ ಯಜ್ಞಭಾವಿತಾಃ ।
ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ್ತೇ ಸ್ತೇನ ಏವ ಸಃ ॥೧೨॥” (ಗೀತೆ- ೩ )
ಪ್ರಜಾಪತಿ ಬ್ರಹ್ಮನು ಸೃಷ್ಟಿಯ ಆದಿಯಲ್ಲಿ ಯಜ್ಞದೊಂದಿಗೆ ಪ್ರಜೆಗಳನ್ನು ಸೃಷ್ಟಿಸಿ , ‘ ಈ ಯಜ್ಞ ನಿಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತದೆ. ಯಜ್ಞಗಳ ಮೂಲಕ ನೀವು ದೇವತೆಗಳನ್ನು ತೃಪ್ತಿಪಡಿಸಿ ಅವರು ಸಕಾಲದಲ್ಲಿ ಮಳೆ, ಗಾಳಿ, ಬೆಳೆಗಳ ಮೂಲಕ ನಿಮ್ಮನ್ನು ತೃಪ್ತಿಪಡಿಸುವರು. ಹೀಗೆ ನೀವಿಬ್ಬರೂ ಪರಸ್ಪರ ಶ್ರೇಯಸ್ಸನ್ನು ಹೊಂದಿ ! ಯಜ್ಞ ತೃಪ್ತರಾದ ದೇವತೆಗಳು ನಿಮಗೆ ಇಷ್ಟವಾದ ಭೋಗಗಳನ್ನು ನೀಡುತ್ತಾರೆ. ಅವರು ನೀಡಿದ್ದನ್ನು ಅವರಿಗೆ ಕೊಡದೆ ಹಾಗೆ ಸ್ವೀಕರಿಸುವವನು ಕಳ್ಳನೇ ಸರಿ!’ ಎಂದಿದ್ದಾನೆ.
         ಆಯುರ್ವೇದದಲ್ಲಿ “ಅಗ್ನಿಮುಪಚರೇತ್” ಎಂಬ ಮಾತನ್ನು ಚರಕರು ಹೇಳುತ್ತಾರೆ. ಪ್ರತಿನಿತ್ಯ ಅಗ್ನಿಹೋತ್ರವನ್ನು ಆಚರಿಸಬೇಕು. ” ಯಷ್ಟಾ” “ಹೋತಾ” (ಯಜ್ಞಮಾಡುವವನಾಗಬೇಕು, ಹೋಮ ಮಾಡುವವನಾಗಬೇಕು) ಎಂಬ ಮಾತು ನಿಜಕ್ಕೂ ಅರ್ಥಪೂರ್ಣವಾದದ್ದು. ಯಜ್ಞ ನಡೆದ ಸ್ಥಳದಲ್ಲಿ ಆಗುವ ಬದಲಾವಣೆಗಳ ಕುರಿತು ಸಾಕಷ್ಟು ಸಂಶೋಧನೆಗಳಾಗಿವೆ. ಆ ವಾತಾವರಣದಲ್ಲಿ ರೋಗಾಣುಗಳ ಪ್ರವೇಷವಿರದು, ಸಂಪೂರ್ಣ ದೇಹಬಲ ವೃದ್ಧಿ, ಆ ಭಸ್ಮ ಹಾಕಿದ ಸಸ್ಯಗಳ ಬೆಳವಣಿಗೆ ದುಪ್ಪಟ್ಟ್ಟು ಎಂಬುದು ಸಂಶೋಧನೆಯ  ಪರಿಣಾಮವಾಗಿದೆ.
ಇಂದು ಡೆಂಗ್ಯೂ, ಚಿಕನ್ ಗುನ್ಯಾ, ಎಚ್ ೧ಎನ್೧, ಎಚ್ ಐ ವಿ , ಹೆಪ್.ಬಿ. ವೈರಸ್ ಮುಂತಾದ ಖಾಯಿಲೆಗಳು ಹರಡಲು ಏನು ಕಾರಣ ? ದೇವತೆಗಳಿಂದ ಸಕಲ ಸಮೃದ್ಧಿಯನ್ನೂ ಪಡೆದ ನಾವು ನಿತ್ಯಕರ್ಮಗಳನ್ನೂ ಮರೆತು ಕಳ್ಳರಾಗಿದ್ದೇವೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕುಗ್ಗಿ ಹೋಗಿದೆ. ಸಣ್ಣಪುಟ್ಟ ಕಾರಣಕ್ಕೂ ನಾವು ಹೊಸ ಹೊಸ ರೋಗಾಣುಗಳಿಗೆ  (ರಾಕ್ಷಸರಿಗೆ) ಬಲಿಯಾಗುತ್ತಿದ್ದೇವೆ. ಈ ಅಶ್ವಿನಿ ಸೂಕ್ತದ ಮಂತ್ರವೊಂದನ್ನು ಗಮನಿಸಿ.
“ಸಮಾನೇ ಅಹನ್ತ್ರಿರವದ್ಯಗೋಹನಾತ್ರಿರದ್ಯ ಯಜ್ಞಂ ಮಧುನಾ ಮಿಮಿಕ್ಷತಂ ।
ತ್ರಿರ್ವಾಜವತೀರಿಷೋಅಶ್ವಿನಾಯುದಂದೋಷಾ ಅಸ್ಮಭ್ಯಮುಷಸಶ್ಚಪಿನ್ವತಮ್ ॥೩॥”
                                                                                         (ಋ – ೧-೩೪ -೩)
 ಎಲೈ ಅಶ್ವಿನಿ ದೇವತೆಗಳೇ, ನೀವೇ ದೊಡ್ಡ ಮನಸ್ಸುಳ್ಳವರು. ನೀವು ಒಂದೇ ದಿನದಲ್ಲಿ ಮೂರಾವೃತ್ತಿ ನಮ್ಮ  ದೋಷಗಳನ್ನು ಮುಚ್ಚುವವರಾಗಿ ನಮ್ಮ ಯಜ್ಞದ ಹವಿಸ್ಸನ್ನು ದಿನಕ್ಕೆ ಮೂರು ಸಲ ಸೇವಿಸಿ ನಮಗೆ ಹಗಲು- ರಾತ್ರಿಯೂ ಪುಷ್ಟಿಕರವಾದ ಅನ್ನಗಳನ್ನು ಒದಗಿಸಿಕೊಡಿ.
ಈ ಮಂತ್ರದಲ್ಲಿ ದೇವತೆಗಳಿಗೂ- ಮಾನವರಿಗೂ ಇರುವ ಪರಸ್ಪರ ಕರ್ತವ್ಯಗಳ ಸೂಚನೆ ಇದೆ.
      ಈಗ ನಮಗೆ ಪುಷ್ಟಿಕರವಾದ ಅನ್ನದ ಬದಲು ರಾಸಾಯನಿಕ ಭರಿತ  ಅನ್ನ-ಹಾಲು ಏಕೆ ದೊರೆಯುತ್ತಿದೆಯೆಂಬುದು ಇದರಿಂದ ನಮಗೆ ಅರ್ಥವಾಗಬಲ್ಲದು. ಕೆಲವರಂತೂ ಪಿತೃಕಾರ್ಯವನ್ನೂ ಸಹ ಮಾಡದೆ ಉದಾಸೀನರಾಗಿದ್ದೇವೆ. ” ಪಿತೃಭ್ಯಃ ಪಿಂಡದಃ ” ( ಪಿತೃಗಳಿಗೆ ಪಿಂಡ ಪ್ರದಾನಮಾಡುವವರಾಗಿರಬೇಕು) ಎಂಬಿದು ಚರಕರ ಮಾತು. ಎಷ್ಟೋ ಜನ ನಿತ್ಯಪೂಜೆಯನ್ನು ಮರೆತವರುಂಟು. ” ದೇವತಾಗೋಬ್ರಾಹ್ಮಣಗುರುವೃದ್ಧ ಸಿದ್ಧಾಚಾರ್ಯನರ್ಚಯೇತ ” “ಅತಿಥೀನಾಂ ಪೂಜಕಃ “ ( ದೇವತೆಗಳು , ಆಕಳು , ಬ್ರಾಹ್ಮಣ, ಗುರು, ವೃದ್ಧರು, ಅತಿಥಿಗಳನ್ನು ಪೂಜಿಸಬೇಕು.) ಎಂಬ ಕಿವಿಮಾತು ನಮಗೀಗ  ರುಚಿಕರವಾಗುವುದಿಲ್ಲ. ಹೀಗಿರುವಾಗ ರೋಗರುಜಿನಗಳು ಜನಪದವನ್ನೇ ನಾಶಮಾಡುತ್ತಿರುವಾಗ ನಾವು ಸರ್ಕಾರವನ್ನು, ವೈದ್ಯರನ್ನು ದೂಷಿಸುವುದೇಕೆ? ಇದು ನಾವು  ಒಟ್ಟಾರೆ ಪ್ರಾಪ್ತಿ ಹೊಂದಿದ ಅಧಃಪತನದ ಪರಿಣಾಮವನ್ನಲ್ಲವೇ ಈಗ ಅನುಭವಿಸುತ್ತಿರುವುದು.
ಯಜ್ಞವೆಂದರೆ ಕೇವಲ ಅಗ್ನಿಗೆ ಹಾಕುವ  ಆಹುತಿ ಮಾತ್ರವಲ್ಲ. ಇದು ದ್ರವ್ಯ ಯಜ್ಞವಾದರೆ, ತಪೋಯಜ್ಞ, ಯೋಗಯಜ್ಞ, ಸ್ವಾದ್ಯಾಯ ಜ್ಞಾನ ಯಜ್ಞಗಳೆಂಬ  ಅನೇಕ ಯಜ್ಞಗಳಿವೆ. ಹೀಗೆ ನಿತ್ಯ  ಯಜ್ಞಮಾಡುವುದರಿಂದ  ಪಾಪಗಳು ಕಳೆದು ಈ ಜನ್ಮಗಳಲ್ಲೂ  ಸ್ವಸ್ಥರಾಗಿ  ಶ್ರೇಯಸ್ಸನ್ನು ಗಳಿಸಿಕೊಳ್ಳಬಲ್ಲೆವೆಂದು  ಚರಕರು ಹೇಳುತ್ತಾರೆ.

Share With Your Friends

Leave a Comment