fbpx
+919945850945

ಆರೋಗ್ಯಕ್ಕಾಗಿ ಹೀಗಿರಲಿ ನಮ್ಮ ನಡವಳಿಕೆ – ೨

ಸರ್ವ ಪ್ರಾಣಿಷು ಬಂಧುಭೂತಃ ಸ್ಯಾತ್

help

ಗುಬ್ಬಿಯೊಂದು ತೋಳದ ಬಾಯಲ್ಲಿ ಸಿಕ್ಕಿಹಾಕಿಕೊಂಡಿತು. ಸಹಾಯಕ್ಕಾಗಿ ಮೊರೆಯಿಟ್ಟಿತು. ಧಾವಿಸಿಬಂದ ಅಶ್ವಿನಿದೇವತೆಗಳು  ಗುಬ್ಬಿಯನ್ನು ತೋಳದ ಬಾಯಿಯಿಂದ ಬಿಡಿಸಿದರು ಎನ್ನುತ್ತದೆ ಋಗ್ವೇದದ ಅಶ್ವಿನಿಸೂಕ್ತದ ಮಂತ್ರವೊಂದು.

”ಯಾಭಿರ್ವರ್ತಿಕಾಂ ಗ್ರಸಿತಾಮಮುಂಚತಂ

ತಾಭಿರೂಷು ಊತಿಭಿರಶ್ವಿನಾ ಗತಂ॥” (ಋ-೧=೧೧೨-೮)

ಇದು ನಮಗೆಲ್ಲರಿಗೂ ಇರುವ ಆದರ್ಶದ ಗುರಿ. ಇಲ್ಲ ಪ್ರಾಣಿಗಳ ಬಗ್ಗೂ  ನಮಗೆ ಸಮಾನವಾದ ಪ್ರೀತಿ ಇರಲಿ ಎಂಬುದು ಆರ್ಷವಿಚಾರ.

“ಶಂ ನೋ ಅಸ್ತು ದ್ವಿಪದೇ ಶಂ ಚತುಷ್ಪದೇ॥”

ಎಲ್ಲಾ ಮಾನವರಿಗೂ ಎಲ್ಲಾ ಪ್ರಾಣಿಗಳಿಗೂ  ಹಿತವಾಗಲಿ ಎಂಬುದು ಉಪನಿಷತ್ತಿನ  ಕಿವಿಮಾತು.

” ಆತ್ಮವತ್ ಸತತಮ್ ಪಶ್ಯೇತ್ ಅಪಿ ಕೀಟ ಪಿಪೀಲಿಕಮ್”

ಅದು ಇರುವೆಯೇ ಆಗಿರಲಿ, ಹುಳುವೇ ಆಗಿರಲಿ, ತನ್ನಂತೆಯೇ ಕಾಣು ಎಂಬುದು ವಾಗ್ಭಟಾಚಾರ್ಯರ ಸಂದೇಶ. ನಮ್ಮ ನಡವಳಿಕೆ ಸಮಾಜದಲ್ಲಿ  ಶಾಂತಿಯನ್ನು ಕಾಪಾಡುತ್ತಾ ಇರಬೇಕೇ ಹೊರತು ಜಗಳ ಹುಟ್ಟಿಸುವದರತ್ತಲ್ಲ!
ಸಿಟ್ಟಿಗೆದ್ದವರನ್ನು ಸಮಾಧಾನಗೊಳಿಸಿ ( ಕ್ರುದ್ಧಾನಾಂ ಅನುನೇತಾ), ಹೆದರಿದವರಿಗೆ ಧೈರ್ಯಕೊಡಿ( ಭೀತಾನಾಂ ಆಶ್ವಾಸಯಿತಾ), ದೀನರಿಗೆ ಸಹಾಯಮಾಡಿ(ದೀನಾನಾಂ ಅಭ್ಯುಪಪತ್ತಾ) ಹೀಗೆ ನಡೆವ ಜನರು  ಸಮಾಜದಲ್ಲಿ ಹೆಚ್ಚಾದರೆ ಕ್ಷೋಭೆ ತಂತಾನೇ ಕಡಿಮೆಯಾಗುವುದಲ್ಲವೇ? ಸಾಮ, ದಾನ, ಭೇದ, ದಂಡ ಎಂಬ ೪ ವಿಧದ ಕಾರ್ಯ ಸಾಧನೆಯ ಉಪಾಯಗಳನ್ನು ಶಾಸ್ತ್ರಕಾರರು ಹೇಳುತ್ತಾರೆ. ಆದರೆ ಚರಕರು ಹೇಳುವಂತೆ  ಯಾವತ್ತೂ ನಾವು ಸಾಮಪ್ರಧಾನವಾಗಿಯೇ ವರ್ತಿಸಬೇಕು.( ಸಾಮ ಪ್ರಧಾನಃ)
ಶತ್ರುವೇ ಆದರೂ, ಆತನು ತಪ್ಪೇ ಮಾಡಿದ್ದರೂ ಅವರನ್ನು ಕ್ಷಮೆ ಮಾಡುವುದೇ ಒಳ್ಳೆಯದು. ಸಿಟ್ಟು ಅಥವಾ ದ್ವೇಷ ಇಟ್ಟುಕೊಂಡರೆ ಅದು ನಮ್ಮನ್ನೇ ಸುಡುತ್ತದೆ. ಯಾವಾಗಲೂ ರಾಗ ದ್ವೇಷಗಳು ಉತ್ಪತ್ತಿಯಾಗುವ ಕಾರಣಗಳನ್ನು ಇಲ್ಲದಂತಾಗಿಸಬೇಕು.( ರಾಗದ್ವೇಷಹೇತೂನಾಂ ಹಂತಾ) ಸದಾ ಎಲ್ಲೆಡೆ ಶಾಂತಿ ನೆಲೆಸುವಂತೆ ನಮ್ಮ ನಡವಳಿಕೆ ಇರಬೇಕು. ಎಂಬುದು ಇಲ್ಲಿ ಅಭಿಪ್ರಾಯವಾಗಿದೆ.(ಪ್ರಶಮ ಗುಣದರ್ಶೀ)
ಪ್ರಪಂಚದಲ್ಲಿ ನಾವು ಮಾಡುವ ವಿಚಾರಗಳು, ಆಡುವ ಮಾತು, ನಡೆಯುವ ರೀತಿಗಳು ನಮ್ಮ ಶ್ರೇಯಸ್ಸಿಗೆ ಕಾರಣವಾಗುತ್ತದೆ. ಇತರರಿಗೆ ನಾವು ಹೀಯಾಳಿಸಿದರೆ, ನಮ್ಮನ್ನು ಅನೇಕರು ಹೀಯಾಳಿಸುತ್ತಾರೆ. ಇತರರನ್ನು ಹಿಂಸೆ ಮಾಡಿ ನಾವೂ ಅನೇಕರಿಂದ ಪೆಟ್ಟು ತಿನ್ನಬೇಕಾಗುತ್ತದೆ.
ಮತ್ತೊಬ್ಬರಿಗೆ ಮೋಸ ಮಾಡುವ ಯೋಜನೆಯನ್ನು  ನಾವು ಹಾಕಿದರೆ ನಮಗೂ ಮೋಸ ಮಾಡುವವರು ಹುಟ್ಟುತ್ತಾರೆ. ಹಾಗೆ ಇನ್ನೊಬ್ಬರ ಕಷ್ಟದಲ್ಲಿ ನಾವು ಸಹಾಯ ಮಾಡಿದರೆ, ನಮ್ಮ ತೊಂದರೆಗೆ ಸ್ಪಂದಿಸುವ ಜನರೂ ಅನೇಕರು ದೊರಕುತ್ತಾರೆ.

”ವನೇ ಜಲೇ ಶತ್ರು ಜಲಾಗ್ನಿಮಧ್ಯೇ….

ರಕ್ಷಂತಿ ಪುಣ್ಯಾನಿ ಪುರಾಕೃತಾನಿ”

ನಾವು ಮಾಡಿದ ಪುಣ್ಯ ಕರ್ಮಗಳು ನಮ್ಮ ಕಷ್ಟದಲ್ಲಿ ಸಹಾಯಕ್ಕೆ ಬರುತ್ತವೆ. ಅಶ್ವಿನೀ ದೇವತೆಗಳು ಇಂತಹ ಉನ್ನತ ಆದರ್ಶದಿಂದ ಕೂಡಿದ ದೇವತೆಗಳು. ವಿವಿಧ ರೀತಿಯ ತೊಂದರೆಗೆ ಒಳಗಾದ ಜನರನ್ನುಕರೆದ ತಕ್ಷಣ ಧಾವಿಸಿ ಸಹಾಯ ಮಾಡುವ ಸ್ವಭಾವದವರು.

”ಯಾಭಿರಂತಕಂ ಜಸಮಾನ ಮಾರಣೇ

ಭುಜ್ಯಂ ಯಾಭಿರವ್ಯಥಿಭಿರ್ಜಿಜಿನ್ವಥುಃ।

ಯಾಭಿಃ ಕರ್ಕಂಧುಂ ವಯ್ಯಂ ಚ

ಜಿನ್ವಥಸ್ತಾಭಿರೂಷು ಊತಿಭಿರಶ್ವಿನಾಗತಮ್॥” (ಋ-೧-೧೧೨-೬)

ಎಲೈ ಅಶ್ವಿನಿ ದೇವತೆಗಳೇ, ಅಗಾಧವಾದ ಖಾವಿಯಲ್ಲಿ ಎಸೆಯಲ್ಪಟ್ಟ ಅಸುರರಿಂದ ಹಿಂಸಿತನಾಗುತ್ತಿದ್ದ ಅಂತಕನೆಂಬ ರಾಜರ್ಷಿಯನ್ನು ಯಾವ ರಕ್ಷಣೆಗಳಿಂದ ರಕ್ಷಿಸಿದಿರೋ, ಕರ್ಕಂಧು ಮತ್ತು ವಯ್ಯನೆಂಬುವವರನ್ನು ಅಸುರ ಪೀಡೆಯಿಂದ ರಕ್ಷಿಸಿದರೋ ಆ ಎಲ್ಲಾ ರಕ್ಷಣೆಗಳೊಂದಿಗೆ ನಮ್ಮಲ್ಲಿಗೆ ಆದರದಿಂದ ಬನ್ನಿರಿ. ದೇವ ವೈದ್ಯರಾದ ಅಶ್ವಿನಿ ದೇವತೆಗಳ ಈ ನಡತೆ  ನಮಗೆಲ್ಲರಿಗೂ ಆದರ್ಶವಲ್ಲವೇ? ಚರಕರು ಹೇಳುವಂತೆ ‘ಸರ್ವಭೂತೇಷು ಬಂಧುಭೂತಃಸ್ಯಾತ್’ ಎಂಬ ಮಾತಿಗೆ ಅಕ್ಷರಶಃ ಪ್ರತ್ಯಕ್ಷ ಉದಾಹರಣೆ ಈ ಅಶ್ವಿನೀ ದೇವತೆಗಳು ಎಂಬುದಕ್ಕೆ ಇನ್ನೂ ನೂರಾರು  ಉಲ್ಲೇಖಗಳು ಋಗ್ವೇದದಲ್ಲಿ ದೊರಕುತ್ತವೆ.

Share With Your Friends

Leave a Comment