ಸದ್ವೃತ್ತದಿಂದ ಆರೋಗ್ಯ ಇಂದ್ರಿಯ ವಿಜಯ!
ನಾಗೇಶ್ವರ ನಾಯಕರಿಗೆ ಅನೇಕ ವರ್ಷಗಳಿಂದ ಆಸಿಡಿಟಿ. ಎಷ್ಟೇ ಚಿಕಿತ್ಸೆ ಮಾಡಿದರೂ ಕಡಿಮೆಯಾಗುತ್ತಿಲ್ಲ.ಕೆಲವೊಮ್ಮೆ ತಾತ್ಕಾಲಿಕ ಉಪಶಮನವಾದರೂ ಪುನಃ ಮೊದಲಿನಂತೆಯೇ ! ಅವರ ನಿತ್ಯ ಜೀವನದಲ್ಲಿಯೂ ಸಹ ರೋಗೋತ್ಪತ್ತಿಗೆ ಕಾರಣವಾದ ಆಹಾರ ಸೇವನೆಯೂ ಈಗ ಅನೇಕ ವರ್ಷಗಳಿಂದಲೂ ಇಲ್ಲ. ಮತ್ತೆ ಏಕೆ ರೋಗ ಗುಣವಾಗುತ್ತಿಲ್ಲ? ಕೊನೆಗೊಮ್ಮೆ ವೃದ್ಧ ವೈದ್ಯರೊಬ್ಬರ ಬಳಿ ಹೋದ ನಾಯಕರ ರೋಗದ ಮೂಲ ಸಿಕ್ಕೇಬಿಟ್ಟಿತು. ನಾಯಕರಿಗೆ ಸದಾ ಏನೋ ಅತೃಪ್ತಿ.ಇದರಿಂದ ಕ್ಷೋಭೆಗೊಳಗಾದ ಮನಸ್ಸು ತಿಂದ ಆಹಾರವೂ ವಿದಗ್ಧಪಾಕವಾಗಿ ಅಧಿಕ ಪಿತ್ತ ಸಂಚಯ ಪುನಃ ಪುನಃ ಆಸಿಡಿಟಿ ಕಿರಿಕಿರಿ. ಕಾರಣ ತಿಳಿದು ನಿರ್ಲಿಪ್ತವಾಗಿ ವೃತ್ತಿ ನಡೆಸುವ ಅಭ್ಯಾಸವಾದ ಮೇಲೆ ಕ್ರಮೇಣ ಆಸಿಡಿಟಿ ಕಡಿಮೆಯಾಗುತ್ತಾ ಹೊರಟು ಹೋಯಿತು. ಸ್ನೇಹಿತರೊಬ್ಬರ ಪ್ರಶ್ನೆ ”ಡಾಕ್ಟ್ರೇ ತಂದೆ ತಾಯಿ ಬಿಪಿ, ಡಯಾಬಿಟಿಸ್, ಹಾರ್ಟು ಪ್ರಾಬ್ಲೆಮ್ ನಿಂದ ಸತ್ತರು. ನಮಗೆ ಈಗ ಯಾವ ಖಾಯಿಲೆಯೂ ಇಲ್ಲ. ಆದರೆ, ಅವರ ನರಳಾಟವನ್ನು ಕಣ್ಣಿಂದ ಕಂಡ ನಮಗೆ ಕೆಲವೊಮ್ಮೆ ಹೆದರಿಕೆಯಿಂದ ನಿದ್ರೆಯೂ ಬಾರದು. ನಮಗೆ ಯಾವುದೇ ರೋಗ ಬರದಂತೆ ನಿಶ್ಚಿತವಾದ ರಕ್ಷಣೆಯ ಮಾರ್ಗವೇನಾದರೂ ಇದೆಯೇ?” ಕೆಲವೊಮ್ಮೆ ನಮ್ಮ ಆಹಾರ ವಿಧಾನಗಳು ಸರಿಯೇ ಇದ್ದರೂ ನಮ್ಮ ಪೂರ್ವಕರ್ಮಗಳಿಂದ ಬರುವ ರೋಗಗಳನ್ನು ತಪ್ಪಿಸಿಕೊಳ್ಳಲಾರೆವಲ್ಲವೇ?
ಹೌದು! ನಮ್ಮ ಪ್ರಾಣಮಯ, ಮನೋಮಯ ಕೋಶಗಳಲ್ಲಿರುವ ನಮ್ಮ ಪೂರ್ವ ಕರ್ಮಗಳು ವ್ಯಾಧಿರೂಪದಲ್ಲಿ ಸೂಕ್ತ ಸಮಯದಲ್ಲಿ ಪ್ರಕಟವಾಗಬಲ್ಲವು. ಆದರೆ ಅವುಗಳ ಉತ್ಪತ್ತಿಗೆ ನಿರ್ದಿಷ್ಟವಾದ ನಿಮಿತ್ತ ಕಾರಣ ಬೇಕೇ ಬೇಕು. ಅಲ್ಲದೆ, ಈ ಪೂರ್ವ ಕರ್ಮಗಳು ೩ ರೀತಿಯವು.
೧) ಸಂಚಿತ,
೨) ಆಗಾಮಿ,
೩) ಪ್ರಾರಬ್ಧ.
ಪ್ರಾರಬ್ಧ ಕರ್ಮಗಳನ್ನು ಅನುಭವಿಸಲೇಬೇಕು. ಆದರೆ ‘ಸಂಚಿತ’ ಮತ್ತು ‘ಆಗಾಮಿ’ ಕರ್ಮಗಳನ್ನು ಕೆಲವು ಉತ್ತಮ ನಡವಳಿಕೆಯ ವಿಧಾನಗಳಿಂದ ನಾವು ತಡೆಯಬಹುದಾಗಿದೆ. ಚರಕ ಸಂಹಿತೆಯಲ್ಲಿ ಈ ನಡವಳಿಕೆಯ ಕುರಿತು ಚರಕರು – ” ಹಾಳಾಗದೇ ಇರುವ ಶರೀರ, ಇಂದ್ರಿಯ- ಮನಸ್ಸುಗಳನ್ನು ಸುಸ್ಥಿತಿಯಲ್ಲಿಡಲು ನಾವು ಕೆಲವು ಪ್ರಯತ್ನಗಳನ್ನು ಮಾಡಲೇಬೇಕು. ಅವೆಂದರೆ, ಇಂದ್ರಿಯಾರ್ಥಗಳನ್ನು ಹಿತಮಿತವಾಗಿ ಉಪಯೋಗಿಸುವುದು, ಯಾವುದೇ ಕಾರ್ಯಗಳನ್ನು ಮಾಡುವಾಗ ಚೆನ್ನಾಗಿ ವಿಮರ್ಶಿಸಿ ಮಾಡುವುದು ಹಾಗೂ ದೇಶ-ಕಾಲ-ಪ್ರಕೃತಿ ವಿರುದ್ಧವಾದ ಆಹಾರ -ವಿಹಾರಗಳನ್ನು ಆಚರಿಸದಿರುವುದು. ಹೀಗೆ ಆತ್ಮ ಹಿತವನ್ನು ಬಯಸುವ ಪ್ರತಿಯೊಬ್ಬರೂ ಯಾವಾಗಲೂ ಚೆನ್ನಾಗಿ ನೆನಪಿಟ್ಟು ಸದ್ವೃತ್ತಗಳನ್ನು ಆಚರಿಸಬೇಕು. ಇಂತಹ ಸದ್ವೃತ್ತಗಳನ್ನು ಹತ್ತು ಗುಂಪುಗಳಾಗಿ ವಿಂಗಡಿಸಬಹುದಾಗಿದೆ.
೧) ಸಾಮಾನ್ಯ ಸಕಾರಾತ್ಮಕ ವರ್ತನೆಗಳು
೨) ಸಾಮಾನ್ಯ ನಕಾರಾತ್ಮಕ ವರ್ತನೆಗಳು
೩) ಆಹಾರ ಸೇವನಾ ವಿಧಿ
೪) ಜೈವಿಕ ಸಮಯ ಪರಿಪಾಲನೆ
೫) ಬ್ರಹ್ಮಚರ್ಯ- ಮೈಥುನದ ವಿಧಿನಿಯಮಗಳು
೬) ಗುರು ಹಿರಿಯರೊಂದಿಗೆ ನಡವಳಿಕೆ
೭) ಸಮ್ಯಕ್ ಅಧ್ಯಯನದ ವಿಧಿ
೮) ಸಾಮಾಜಿಕ ವಿಶೇಷ ಸದ್ವೃತ್ತ ಹಾಗೂ
೯) ಸಂಕ್ಷಿಪ್ತ ಸದ್ವೃತ್ತಸಾರ
ಈ ಸದ್ವೃತ್ತ ಆಚರಣೆಗಳು ಮನುಷ್ಯನನ್ನು ಸ್ವಾರ್ಥ ತೊರೆದು ಸಮಾಜಹಿತಕ್ಕೆ ಪೂರಕವಾಗಿ ಬದುಕುವಂತೆ ಮಾಡುತ್ತದೆ. ‘ತ್ಯಾಗ’ ವನ್ನು ಕಲಿಸುತ್ತದೆ. ‘ದಾನ’ ಬುದ್ಧಿ ಉಂಟಾಗುತ್ತದೆ. ಶರೀರ- ಮನಸ್ಸು-ಇಂದ್ರಿಯಗಳ ನಿಯಂತ್ರಣ ಸಾಧ್ಯವಾಗುತ್ತದೆ. ಮನಸ್ಸು ಸದಾ ಪರಹಿತ ಚಿಂತನೆಯಲ್ಲಿ ತೊಡಗುತ್ತದೆ. ಹೀಗೆ ಪರೋಪಕಾರಿಯಾದ ವ್ಯಕ್ತಿಗೆ ಎಲ್ಲರ ಶುಭ ಹಾರೈಕೆ ಸೇರುತ್ತಾ ಕ್ರಮೇಣ ಆತನ ಪೂರ್ವ ಕರ್ಮಗಳು ಕ್ಷೀಣವಾಗುತ್ತದೆ. ಅಲ್ಲದೇ ರೋಗೋತ್ಪತ್ತಿಗೆ ಬೇಕಾದ ನಿಮಿತ್ತ ಕಾರಣಗಳೂ ಸಿಗದೆ ”ಕರ್ಮ” ಶುಷ್ಕವಾಗಿ ಕ್ರಮೇಣ ಇಲ್ಲವಾಗುತ್ತದೆ.
ಆದ್ದರಿಂದಲೇ ಸದ್ವೃತ್ತವನ್ನು ಚೆನ್ನಾಗಿ ಅಳವಡಿಸುವ ವ್ಯಕ್ತಿಗೆ ಸಿಗುವ ಲಾಭದ ಕುರಿತು ಚರಕರು ಹೀಗೆ ಹೇಳುತ್ತಾರೆ.”ತದ್ ಹಿ ಆನುತಿಷ್ಠನ್ ಯುಗಪತ್ ಸಂಪಾದಯತ್ಯರ್ಥದ್ವಯಂ ಆರೋಗ್ಯಂ ಇಂದ್ರಿಯವಿಜಯಂ ಚೇತಿ।” ಸದ್ವೃತ್ತವನ್ನು ಅನುಷ್ಠಾನದಲ್ಲಿ ತರುವ ವ್ಯಕ್ತಿಗೆ ಒಮ್ಮೆಲೇ ೨ ಲಾಭಗಳು ಉಂಟಾಗುತ್ತವೆ.
೧. ಆರೋಗ್ಯ.
೨. ಇಂದ್ರಿಯ ವಿಜಯ.
ಇದನ್ನು ಡಿವಿಜಿ ಸೂತ್ರದಲ್ಲಿ ಹೀಗೆ ಹೇಳಿದ್ದಾರೆ-
‘ಆರೋಗ್ಯ ಭಾಗ್ಯವನು ಮನಕೆ ತನುಗೆಂತಂತೆ।
ಹಾರಯಿಸುವೊಡೆ ಹಲವು ಸರಳ ನೀತಿಗಳ॥
ಧಾರಯಿಸು ನೆನಸಿನಲಿ ನುಡಿಯಲ್ಲಿ ನಡೆಯಲ್ಲಿ।
ಪಾರಾಗು ಸುಳಿಯಿಂದ ಮಂಕುತಿಮ್ಮ॥’