fbpx
+919945850945

ಬಾಲ್ಯದ ಅಥವಾ ಮಕ್ಕಳ ಆಸ್ತಮದ ಚಿಕಿತ್ಸೆ

ಆಸ್ತಮಾ ತೊಂದರೆಯು ಬಾಲ್ಯದಿಂದಲೇ ಪ್ರಾರಂಭವಾಗಬಹುದು, ಇದನ್ನು ಬಾಲ್ಯದ ಅಥವಾ ಮಕ್ಕಳ ಆಸ್ತಮಾ ಎಂದು ಕರೆಯಲಾಗುತ್ತದೆ. ಅಸ್ತಮವು ಉಬ್ಬಸ, ಕೆಮ್ಮು, ಉಸಿರಾಟದ ತೊಂದರೆ ಮತ್ತು ಎದೆಯ ಬಿಗಿತದೊಂದಿಗೆ ದೀರ್ಘಕಾಲ ಬಾಧಿಸುವ ಉಸಿರಾಟದ ತೊಂದರೆಯಾಗಿದೆ.

ಮಕ್ಕಳಲ್ಲಿ ಶ್ವಾಸಕೋಶಕ್ಕೆ ಮುಕ್ತವಾಗಿ ಗಾಳಿಯ ಹರಿವಿಕೆಯಲ್ಲಿ ಅಡಚಣೆಯುಂಟದಾಗ ಉಂಟಾದಾಗ ಬಾಲ್ಯದ ಆಸ್ತಮಾ ಉಂಟಾಗುತ್ತದೆ. ಈ ಅಡಚಣೆಯು ಮುಖ್ಯವಾಗಿ ಶ್ವಾಸ ನಳಿಕೆಯ ಸ್ನಾಯುಗಳ ಹಿಂಡುವಿಕೆ, ಊತ ಅಥವಾ ಅತಿಯಾದ  ಲೋಳೆಯ ಸ್ರವಿಕೆಯಿಂದ ಉಂಟಾಗುತ್ತದೆ. ವಿವಿಧ ಪ್ರಚೋದಕ ಅಂಶಗಳಿಂದಾಗಿ, ವ್ಯಕ್ತಿಯ ವಾಯುಮಾರ್ಗವು ಕಿರಿದಾಗುತ್ತಾ ಹೋಗಿ ಉರಿಯೂತವನ್ನು ಉಂಟುಮಾಡಿ ಉಬ್ಬಸ, ಕೆಮ್ಮು ಮತ್ತು ಎದೆಯಲ್ಲಿ ಬಿಗಿತಕ್ಕೆ ಕಾರಣವಾಗುತ್ತದೆ.

Ayurveda treatment for Childhood Asthma

ಆಸ್ತಮಾದ ಕೆಲವು ಕಾರಣಗಳು

 • ದೀರ್ಘಕಾಲದ ವಾಯುಮಾರ್ಗದ ಉರಿಯೂತ ಮತ್ತು ವಿವಿಧ ಪ್ರಚೋದಕಗಳಿಗೆ ವಾಯುಮಾರ್ಗದ ಅತಿಯಾದ ಸ್ಪಂದಿಸುವಿಕೆ.
 • ತಂಪಾದ ವಾತಾವರಣವು ಆಸ್ತಮದ ತೀವ್ರತೆಯನ್ನು ಹೆಚ್ಚಿಸುತ್ತದೆ.
 • ಪ್ರಚೋದಕಗಳಿಗೆ ಅಲರ್ಜಿಯ ಪ್ರತಿಕ್ರಿಯೆ.
 • ರೋಗನಿರೋಧಕ ಶಕ್ತಿಯ ಕುಂದುವಿಕೆ.
 • ಅಲರ್ಜಿಯಿಂದುಂಟಾಗುವ ನೆಗಡಿ.
 • ತಂಬಾಕು ಹೊಗೆಯಂತಹ ಕಲುಷಿತ ಗಾಳಿ.
 • ಹೊಗೆ, ಧೂಳು, ಪರಾಗಗಳಂತಹ ವಾಯುಮಾರ್ಗದ ಉದ್ರೇಕಕಾರಿಗಳು.
 • ಶೀತ, ಜ್ವರ, ಸೈನುಸೈಟಿಸ್ ನಂತಹ ಪುನರಾವರ್ತಿತ ಮೇಲ್ಭಾಗದ ಶ್ವಾಸೇಂದ್ರಿಯ ಸೋಂಕು
 • ಆನುವಂಶಿಕ
 • ನೆಗಡಿಯಂತಹ ವೈರಲ್ ಸೋಂಕು
 • ಹವಾಮಾನ ಬದಲಾವಣೆಗಳು
 • ಆಸ್ತಮಾ ಮತ್ತು ಅಲರ್ಜಿಯ ಕುಟುಂಬದ ಇತಿಹಾಸ
Ayurveda treatment for Childhood Asthma

ಆಸ್ತಮಾದ ಆರಂಭಿಕ ರೋಗ ಚಿಹ್ನೆ ಮತ್ತು ಲಕ್ಷಣಗಳು:

 1. ಪದೇ ಪದೇ ಕಾಡುವ ಶೀತ,
 2. ನೆಗಡಿ,
 3. ನಿರಂತರವಾದ ಕೆಮ್ಮು,
 4. ಉಸಿರಾಟದ ತೊಂದರೆ,
 5. ಮೇಲ್ಭಾಗದ ವಾಯುಮಾರ್ಗದ ತೊಂದರೆಗಳು,
 6. ಜ್ವರ,
 7. ಸೀನುವಿಕೆ,
 8. ಉಬ್ಬಸ.
Ayurveda treatment for Childhood Asthma

ಅಸ್ತಮಾಕ್ಕೆ ಕಾರಣವಾಗುವ ಅಂಶಗಳು ಅಥವಾ ಪ್ರಚೋದಿಸುವ ಅಂಶಗಳು:

 1. ಧೂಳು,
 2. ಧೂಳಿನ ಗಾಳಿ,
 3. ತಂಪಾದ ಆಹಾರ ಹಾಗು ದ್ರವಗಳನ್ನು  ಸೇವಿಸುವುದು,
 4. ಚಳಿಯ ವಾತಾವರಣ,
 5. ಅನುಚಿತ ಆಹಾರ,
 6. ಅಜೀರ್ಣ,
 7. ಅತಿಯಾದ ಪೋಷಣೆ,
 8. ದೇಹದ ದೋಶಗಳ ಪ್ರಕೋಪ,
 9. ಮರ್ಮ ಸ್ಥಾನಗಳಿಗುಂಟಾಗುವ ಆಘಾತ,
 10. ಹೊಗೆ,
 11. ಪರಾಗಗಳು,
 12. ಕೂದಲು,
 13. ಪ್ರಾಣಿಗಳು,
 14. ಸುಗಂಧ ದ್ರವ್ಯಗಳು ಮತ್ತು
 15. ಉದ್ರೇಕಕಾರಿಗಳು.

ಆಸ್ತಮಾದ ರೋಗನಿರ್ಣಯ ಹೇಗೆ?

ವೈದ್ಯರು ರೋಗಿಗಳಲ್ಲಿ ಆಸ್ತಮಾ ಪರೀಕ್ಷೆಗೆ ವಿಭಿನ್ನ ವಿಧಾನಗಳನ್ನು ಬಳಸುತ್ತಾರೆ. ಅವುಗಳಲ್ಲಿ ಮುಖ್ಯವಾದುವು ಈ ಕೆಳಗಿನಂತಿವೆ

 • ದೈಹಿಕ ಪರೀಕ್ಷೆ
 • ರೋಗದ ಇತಿಹಾಸ
 • ಶ್ವಾಸಕೋಶದ ಕಾರ್ಯ ಪರೀಕ್ಷೆ
 • ಎದೆಯ ಕ್ಷ – ಕಿರಣ
 • ಅಲರ್ಜಿ ಪರೀಕ್ಷೆಗಳು
 • ಸೈನಸ್ ಎಕ್ಸರೆ

ಆಸ್ತಮಾದ ವಿಧಗಳು

ಆಸ್ತಮಾವನ್ನು ತೀವ್ರತೆಯ ಆಧಾರದ ಮೇಲೆ ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳು ಈ ಕೆಳಗಿನಂತಿವೆ

 1. ಮಧ್ಯಂತರ ಆಸ್ತಮಾ – ಅಸ್ತಮಾದ ತೊಂದರೆಯು ವಾರಕ್ಕೆ ಎರಡು ಬಾರಿ ಅಥವಾ ಅದಕ್ಕಿಂತ ಕಡಿಮೆ ಮತ್ತು ವಾರದಲ್ಲಿ ಎರಡು ರಾತ್ರಿಗಳಿಗಿಂತ ಕಡಿಮೆ ಅಸ್ತಮಾದಿಂದ ಎಚ್ಚರಗೊಳ್ಳುವಿಕೆ.
 2. ಕಡಿಮೆ ನಿರಂತರ ಆಸ್ತಮಾ: ವಾರದಲ್ಲಿ ಎರಡು ಅಥವಾ ಹೆಚ್ಚಿನ ದಿನ ರೋಗಲಕ್ಷಣಗಳನ್ನು ಹೊಂದಿರುವುದು ಮತ್ತು ತಿಂಗಳಿಗೆ ಮೂರರಿಂದ ನಾಲ್ಕು ರಾತ್ರಿ ಆಸ್ತಮಾ ತೊಂದರೆಯಿಂದ ಎಚ್ಚರಗೊಳ್ಳುವುದು.
 3. ಮಧ್ಯಮ ನಿರಂತರ ಆಸ್ತಮಾ – ಆಸ್ತಮಾದ ರೋಗಲಕ್ಷಣಗಳು ಪ್ರತಿದಿನವೂ ಇದ್ದು ವಾರದಲ್ಲಿ ಒಂದು ಅಥವಾ ಹೆಚ್ಚಿನ ರಾತ್ರಿಗಳಲ್ಲಿ  ಎಚ್ಚರಗೊಳಿಸುತ್ತದೆ.
 4. ತೀವ್ರವಾದ ನಿರಂತರ ಆಸ್ತಮಾ: ಪ್ರತಿದಿನ ಹಗಲಿನಲ್ಲಿ ರೋಗಲಕ್ಷಣಗಳನ್ನು ಹೊಂದಿರುವುದು ಮತ್ತು ಆಸ್ತಮಾದಿಂದ ಪ್ರತಿ ರಾತ್ರಿ ಎಚ್ಚರಗೊಳ್ಳುವುದು.

ಆಸ್ತಮಾಕ್ಕೆ ಔಷಧಿ ಮತ್ತು ಚಿಕಿತ್ಸೆಗಳು

Ayurveda treatment for Childhood Asthma

ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಯು ಆಸ್ತಮಾಗೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲ ಎಂದು ಹೇಳುತ್ತದೆ, ಆದರೆ ಇದನ್ನು ಸೂಕ್ತ ಚಿಕಿತ್ಸೆಯ ಯೋಜನೆಯೊಂದಿಗೆ ನಿಯಂತ್ರಿಸಬಹುದು ಮತ್ತು ನಿರ್ವಹಿಸಬಹುದು. ಮೊದಲ ಹಂತದ ಚಿಕಿತ್ಸೆಯಲ್ಲಿ ಆಸ್ತಮಾದ ಪ್ರಚೋದಕಗಳನ್ನು ತಪ್ಪಿಸಿ ನಂತರ ರೋಗಲಕ್ಷಣದ ತೀವ್ರತೆಯನ್ನು ಅವಲಂಬಿಸಿ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಆಸ್ತಮಾವನ್ನು ನಿಯಂತ್ರಿಸಬಹುದು.

ಆಸ್ತಮಾಗೆ ಆಯುರ್ವೇದ ಚಿಕಿತ್ಸೆ

ಆಸ್ತಮಾವನ್ನು ಆಯುರ್ವೇದದಲ್ಲಿನ ತಮಾಕ ಶ್ವಾಸಕ್ಕೆ ಹೋಲಿಸಲಾಗುತ್ತದೆ, ಮತ್ತು ಇದು ಪ್ರಾಣವಹ ಸ್ರೋತಸ್ಗಳ (ಪ್ರಾಣವಾಯುವನ್ನು ಕೊಂಡೊಯ್ಯುವ ವಾಹಕಗಳು)  ಮೇಲೆ ಪರಿಣಾಮ ಬೀರುವ ಇತರ ಉಸಿರಾಟದ ಕಾಯಿಲೆಗಳಲ್ಲಿ ಒಂದಾಗಿದೆ. ತಮಕ ಎಂದರೆ ಕತ್ತಲು ಎಂದರ್ಥ. ಮತ್ತು ಶ್ವಾಸವೆಂದರೆ ಉಸಿರಾಟದ ತೊಂದರೆ. ತಮಕ ಶ್ವಾಸವು ರಾತ್ರಿಯ ಸಮಯದಲ್ಲಿ ಉಲ್ಬಣಗೊಂಡು ತೀವ್ರ ಸ್ಥಿತಿಯಲ್ಲಿ, ರೋಗಿಯು ಅಂಧಕಾರದಲ್ಲಿ ಪ್ರವೇಶಿಸಿದೆನೆಂದು ಬಾವಿಸುತ್ತಾನೆ. ಇದು ಉಸಿರಾಟದ ಪ್ರಕ್ರಿಯೆಯನ್ನು ದೀರ್ಘವಾಗಿಸಿ ಉಬ್ಬಸ, ಏದುಸಿರುನಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ.

ಆಯುರ್ವೇದವು ದೇಹದಲ್ಲಿ ಕಫ ದೋಷವು ಹೆಚ್ಚಾಗಿ ಪ್ರಾಣ ವಾಯುವನ್ನು ಕೊಂಡೊಯ್ಯುವ ವಾಹಕಗಳನ್ನು  ಆವರಿಸಿ ಉಸಿರಾಟದ ಕ್ರಿಯೆಗೆ ಅಡಚಣೆಯುಂಟುಮಾಡಿ ತಮಕ ಶ್ವಾಸವೆಂಬ ರೋಗವನ್ನುಂಟುಮಾಡುತ್ತದೆ. ಆದ್ದರಿಂದ ತಮಕ ಶ್ವಾಸದ ಚಿಕಿತ್ಸೆಯು ಹೆಚ್ಚಾದ ಕಫ ದೋಷವನ್ನು ನಿವಾರಿಸಿ ವಾಯುವಿನ ಸರಾಗ ಹರಿಯುವಿಕೆಗೆ ಅನುಕೂಲ ಮಾಡುವುದೇ ಆಗಿರುತ್ತದೆ.

ಆಯುರ್ವೇದದ ಪ್ರಕಾರ, ತಮಕ ಶ್ವಾಸಕ್ಕೆ ಕಾರಣಗಳು ಈ ಕೆಳಗಿನಂತಿವೆ

 • ಶುಷ್ಕತೆಯಿಂದ ಕೂಡಿದ, ಶೀತ ಗುಣಯುಕ್ತವಾದ, ಜೀರ್ಣಿಸಲು ಕಷ್ಟಸಾಧ್ಯವಾಗಿರುವ, ದೇಹಕ್ಕೆ ಹೊಂದಾಣಿಕೆಯಾಗದ ಆಹಾರ ಮತ್ತು ದ್ರವಗಳ ಸೇವನೆ ಹಾಗು ಅಕಾಲದಲ್ಲಿ ಆಹಾರ ಸೇವನೆ.
 • ಉದ್ದಿನ ಬೇಳೆ, ಎಳ್ಳು ಮತ್ತು ಜವುಗು ಪ್ರದೇಶದಲ್ಲಿನ ಪ್ರಾಣಿಗಳ ಮಾಂಸದ ಅತಿಯಾದ ಸೇವನೆ
 • ಶೀತ ಪದಾರ್ಥಗಳ ಸೇವನೆ ಮತ್ತು ಶೀತ ಹವಾಮಾನಕ್ಕೆ ಒಡ್ಡಿಕೊಳ್ಳುವುದು.
 • ಧೂಳು, ಹೊಗೆ ಮತ್ತು ಗಾಳಿಗೆ ಒಡ್ಡಿಕೊಳ್ಳುವುದು
 • ಅತಿಯಾದ ಲೈಂಗಿಕ ಚಟುವಟಿಕೆಗಳಲ್ಲಿ ಮತ್ತು ಅತಿಯಾದ ವ್ಯಾಯಾಮ
 • ಗಂಟಲು, ಎದೆ ಮತ್ತು ಇತರೆ ಮರ್ಮ ಸ್ಥಾನಗಳಿಗುಂಟಾಗುವ ಆಘಾತ.
 • ದೇಹದ ನೈಸರ್ಗಿಕ ಕ್ರಿಯೆಗಳ ನಿಗ್ರಹ.

ತಮಕ ಶ್ವಾಸವನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ ಪ್ರತಮಕ ಶ್ವಾಸ, ಇದು ಜ್ವರ, ಮೂರ್ಚೆ, ಹೊಟ್ಟೆಯ ಉಬ್ಬರ, ಮತ್ತು ಅಜೀರ್ಣಕ್ಕೆ ಸಂಬಂಧಿಸಿದೆ ಲಕ್ಷಣಗಳನ್ನು ಹೊಂದಿದೆ. ಪ್ರತಮಕ ಶ್ವಾಸ ಹೊಂದಿರುವ ವ್ಯಕ್ತಿಯು ತಾನು ಕತ್ತಲೆಯಲ್ಲಿ ಮುಳುಗಿದೆಯೆಂದು ಭಾವಿಸಿದಾಗ, ಇದನ್ನು ಸಂತಮಕ ಶ್ವಾಸ ಎಂದು ಕರೆಯಲಾಗುತ್ತದೆ, ಶೀತಲ ಚಿಕಿತ್ಸಾ ಕ್ರಮವು ಇದರ ನಿವಾರಣಾ ಉಪಾಯವಾಗಿದೆ.

ಆಯುರ್ವೇದದಲ್ಲಿ ಆಸ್ತಮಾ ಚಿಕಿತ್ಸೆ

ಆಸ್ತಮಾಗೆ ಆಯುರ್ವೇದ ಚಿಕಿತ್ಸೆಯನ್ನು ಶುದ್ಧೀಕರಣ ಚಿಕಿತ್ಸೆ ಮತ್ತು ಉಪಶಾಮಕ ಚಿಕಿತ್ಸೆಯಾಗಿ ವರ್ಗೀಕರಿಸಲಾಗಿದೆ, ಜೊತೆಗೆ ಆಸ್ತಮಾಕ್ಕೆ  ಕಾರಣವಾಗುವ ಅಂಶಗಳನ್ನು ತಪ್ಪಿಸುವುದು, ಪ್ರಚೋದಕಗಳನ್ನು ನಿವಾರಿಸುವುದು ಮತ್ತು ಸೂಕ್ತವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತದೆ.

 1. ಉಪಶಮನ ಚಿಕಿತ್ಸೆಗಳು ಅಥವಾ ಶಮನ ಚಿಕಿತ್ಸೆ – ಆರಂಭಿಕ ಹಂತದಲ್ಲಿ ಆಸ್ತಮಾವನ್ನು ತಡೆಗಟ್ಟಲು ಔಷಧಿಗಳನ್ನು ನೀಡಲಾಗುತ್ತದೆ. ಆಸ್ತಮಾದ ಆರಂಭಿಕ ಹಂತಗಳಲ್ಲಿ, ಸರಿಯಾದ ಆಹಾರ ಪದ್ಧತಿ, ಆರೋಗ್ಯಕರ ದಿನಚರಿಯನ್ನು ಅನುಸರಿಸುವುದು, ಪ್ರಚೋದಿಸುವ ಅಂಶಗಳನ್ನು ತಪ್ಪಿಸುವುದು ಮತ್ತು ಕೆಲವು ಔಷಧಿಗಳ ಸೇವನೆಯು ಆಸ್ತಮಾವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
 2. ಶೋಧನಾ ಚಿಕಿತ್ಸೆ ಅಥವಾ ದೇಹ ಶುದ್ದೀಕರಣದ ಚಿಕಿತ್ಸೆ : ದೇಹದಲ್ಲಿ ಹೆಚ್ಚಿದ ದೋಶಗಳನ್ನು ಹೊರಹಾಕಲು ಮತ್ತು ದೇಹವನ್ನು ಔಷಧಗಳ ಸೇವನೆಗೆ ಮೊದಲು ವಮನ ಮತ್ತು ವಿರೇಚನಗಳಂತಹ ಶುದ್ಧೀಕರಣ ಚಿಕಿತ್ಸೆಯನ್ನು ನೀಡಲಾಗುತ್ತದೆ. ದೀರ್ಘಕಾಲದವರೆಗೆ ಬಳಲುತ್ತಿರುವ ಅಸ್ತಮಾ ರೋಗಿಗಳಿಗೆ ಇದು ಅತ್ಯಗತ್ಯ ಮತ್ತು ಅತ್ಯುತ್ತಮವಾದ ಫಲಿತಾಂಶವನ್ನು ನೀಡುತ್ತದೆ.

ಆಸ್ತಮಾಗೆ ರೋಗದಲ್ಲಿ ಸೂಕ್ತವಾದ ಆಹಾರ ಪದ್ಧತಿ :

ಆರೋಗ್ಯಕರವಾಗಿರಲು ಒಬ್ಬರು ಉತ್ತಮ ಆಹಾರ ಪದ್ಧತಿಯನ್ನು ಅನುಸರಿಸಬೇಕು, ವಿಶೇಷವಾಗಿ ಆಸ್ತಮಾದಲ್ಲಿ ರೋಗದ ಮರುಕಳಿಕೆಯನ್ನು  ತಪ್ಪಿಸಲು ಸೂಕ್ತವಾದ ಆಹಾರದ ಸೇವನೆ ಪ್ರಮುಖ ಪಾತ್ರ ವಹಿಸುತ್ತದೆ.

 • ದಿನದಲ್ಲಿ ಕೇವಲ ಮೂರು ಬಾರಿ ಆಹಾರವನ್ನು ತೆಗೆದುಕೊಳ್ಳಿ.
 • ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ.
 • ಪ್ರತಿನಿತ್ಯ ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡಿ.
 • ನಿತ್ಯ ವ್ಯಾಯಾಮ ಅಥವಾ ಯೋಗಾಸನಗಳ ಅಭ್ಯಾಸ ಮಾಡಿ.
 • ಕುಡಿಯಲು ಬಿಸಿನೀರನ್ನು ಉಪಯೋಗಿಸಿ ಮತ್ತು ಬೆಚ್ಚಗಿರುವಾಗ ಆಹಾರವನ್ನು ಸೇವಿಸಿ.
 • ಹಸಿವೆಯು ಅತ್ಯುತ್ತಮವಾಗಿರುವಂತೆ ಕಾಪಾಡಿಕೊಳ್ಳಿ.
 • ಶಾಲಿ ಅಕ್ಕಿ (ಕೆಂಪು ಅಕ್ಕಿ), ಷಷ್ಟಿಕಾ ಅಕ್ಕಿ(60 ದಿನಗಳಲ್ಲಿ ಬೆಳೆಯುವ ಅಕ್ಕಿಯ ವಿಧ), ಹಳೆಯ ಗೋಧಿ, ಹೆಸರು ಕಾಳು, ಹುರುಳಿ ಕಾಳು, ಬಾರ್ಲಿ, ಹಿಂಗು, ತುಪ್ಪ, ಉಪ್ಪು, ದಾಳಿಂಬೆ, ಶುಂಠಿ, ಕರಿಮೆಣಸಿನ ಬಳಕೆಯನ್ನು ಪದೇ ಪದೇ ಆಹಾರದಲ್ಲಿ ಬಳಸಬೇಕು.

ಆಸ್ತಮಾದಲ್ಲಿ ಏನನ್ನು ಮಾಡಬಾರದು?

ಕೆಳಗಿನವುಗಳನ್ನು ಆಸ್ತಮಾ ರೋಗಿಗಳು ಸೇವಿಸಬಾರದು.

 • ಜೀರ್ಣಿಸಲು ಕಷ್ಟವಾಗಿರುವ, ಅಕಾಲ ಮತ್ತು ಅಪ್ರಮಾಣದ ಆಹಾರ ಸೇವನೆ.
 • ಬೇಯಿಸಿದ ಮತ್ತು ಬೇಯಿಸದ ಆಹಾರವನ್ನು ಮಿಶ್ರಣ ಮಾಡುವುದು.
 • ಪ್ರಾಣಿ ಉತ್ಪನ್ನಗಳಾದ ಮಾಂಸ, ಮೀನು, ಡೈರಿ ಉತ್ಪನ್ನಗಳ ಸೇವನೆ.
 • ಹಳೆಯ ಆಹಾರ.
 • ಅತಿಯಾದ ಎಣ್ಣೆಯುಕ್ತ ಮತ್ತು ಸಿದ್ದಆಹಾರಗಳ ಬಳಕೆ.
 • ಹಗಲಿನ ಸಮಯ ನಿದ್ರೆ ಮುಖ್ಯವಾಗಿ ಆಹಾರಸೇವನೆಯ ಬಳಿಕ.
 • ದೇಹದಲ್ಲಿ ಕಫ ದೋಷವನ್ನು ಹೆಚ್ಚಿಸುವ ಆಹಾರ ಸೇವನೆ.
 • ತಣ್ಣನೆಯ ಆಹಾರ ಮತ್ತು ಪಾನೀಯಗಳ ಬಳಕೆ.
 • ಶೀತ ಹವಾಮಾನಕ್ಕೆ ಒಡ್ಡಿಕೊಳ್ಳುವುದು
 • ಪ್ರಚೋದಕಗಳ ಸೇವನೆ.

ಆಸ್ತಮಾವನ್ನು  ತಡೆಯುವುದು ಮತ್ತು ನಿಯಂತ್ರಿಸುವುದು ಹೇಗೆ?

 1. ಆಸ್ತಮಾ ಪ್ರಚೋದಕಗಳನ್ನು ನಿವಾರಿಸಿ:
  ಪ್ರಚೋದಕಗಳನ್ನು ತಪ್ಪಿಸುವುದು ಆಸ್ತಮದ ತೀವ್ರತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇದು ಧೂಳು, ಹೊಗೆ ಆಗಿರಬಹುದು ಅಥವಾ  ಆಹಾರ, ಪಾನೀಯಗಳಿಂದಲೂ ಇರಬಹುದು. ನೀವು ಇಂತಹ ಪ್ರಚೋದಕಗಳನ್ನು ಅನುಭವಿಸಿದಾಗ ಅಥವಾ ಗುರುತಿಸಿದಾಗಲೆಲ್ಲಾ ಅವುಗಳನ್ನು ನೆನೆಪಿನಲ್ಲಿಟ್ಟುಕೊಂಡು ಇವುಗಳಿಂದ ದೂರವಿರಿ.
 2. ಆಸ್ತಮಾ ಔಷಧಿಗಳು:
  ನಿಗದಿತ ಪ್ರಮಾಣದಲ್ಲಿ ಅಸ್ತಮಾಕ್ಕೆ ನೀಡಿರುವ ಔಷಧಿಗಳನ್ನು ಮುಂದುವರಿಸಿ. ಇದು ಆಸ್ತಮಾದ ಮರುಕಳಿಕೆಯನ್ನು ತಡೆಯಲು ಸಹಾಯ ಮಾಡುತ್ತವೆ.

ನಿಮ್ಮ ಆಸ್ತಮಾವನ್ನು ಗಮನಿಸಿ:
ಕೆಮ್ಮು, ಎದೆಯ ಬಿಗಿತ ಮುಂತಾದ ರೋಗಲಕ್ಷಣಗಳನ್ನು ಆರಂಭದಲ್ಲಿ ಗುರುತಿಸಬಹುದು. ರೋಗಲಕ್ಷಣಗಳ ಪ್ರಗತಿಯು ಸಾಮಾನ್ಯವಾಗಿ ನಿಧಾನವಾಗಿರುತ್ತದೆ ಮತ್ತು ಜನರು ತೀವ್ರವಾಗುವವರೆಗೆ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆರಂಭಿಕ ರೋಗ ಲಕ್ಷಣಗಳನ್ನು ಗುರುತಿಸುವುದು ಹಾಗು ಸೂಕ್ತ ಮುನ್ನೆಚ್ಚರಿಕೆ ಮತ್ತು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಆಸ್ತಮಾವನ್ನು ತಡೆಯಬಹುದು.

ಆಸ್ತಮಾ ಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಬಳಸುವ ಗಿಡಮೂಲಿಕೆಗಳು

 1. ಕಂಟಕಾರಿ  (Solanum xanthocarpum)
 2. ಆಡುಸೋಗೆ (Adhatoda vasica)
 3. ಶುಂಠಿ (Zingiber officinalis)
 4. ಭಾರಂಗಿ (Clerodendrum serratum)
 5. ಪುಷ್ಕರಮೂಲ (Innula racemosa)
 6. ಕರ್ಕಾಟಕ ಶೃಂಗಿ (Pistacia inergerrima)
 7. ಅರಶಿನ (Curcuma longa)

ಗಮನಿಸಿ: ಈ ಎಲ್ಲಾ ಔಷಧಿಗಳನ್ನು ಅರ್ಹ ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ತೆಗೆದುಕೊಳ್ಳಬೇಕು.

ಆಸ್ತಮಾಗೆ ಮನೆಮದ್ದು

ಸಾಸಿವೆ ಎಣ್ಣೆಯನ್ನು ಸ್ವಲ್ಪ ಉಪ್ಪಿನೊಂದಿಗೆ ಬಿಸಿ ಮಾಡಿ ಎದೆ ಮತ್ತು ಬೆನ್ನಿನ ಬಾಗಕ್ಕೆ ಹಚ್ಚಿ ಮೃದುವಾಗಿ ಈ ಎರಡೂ ಪ್ರದೇಶಗಳನ್ನು ಮೃದುವಾಗು ಮರ್ಧಿಸಿ. ನಂತರ ಹಬೆ ಯಂತ್ರದ ಮೂಲಕ ಮೃದುವಾಗಿ ಬೆವರುವ ತನಕ ನೀರಿನ ಹಬೆಯನ್ನು ನೀಡಿ. ಇದು ಶ್ವಾಸಕೋಶದಲ್ಲಿನ ಲೋಳೆಯ ದ್ರವೀಕರಣಕ್ಕೆ ಸಹಾಯ ಮಾಡಿ ಅವುಗಳನ್ನು ಹೊರಹಾಕಲು ಅನುವು ಮಾಡಿಕೊಡುತ್ತದೆ. ಹಬೆಯ ಸೇವೇಯು ಉಸಿರಾಟದ ತೊಂದರೆ ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

ವಿಶೇಷ ಸೂಚನೆ : ಮಕ್ಕಳ ಅಸ್ತಮಾವನ್ನು ತಜ್ಞ ವೈದ್ಯರ ಸಲಹೆ ಸೂಚನೆಗಳಂತೆ ನೀಡತಕ್ಕದ್ದು. ಮನೆ ಮದ್ದುಗಳ ಪ್ರಯೋಗಕ್ಕೆ ಮೊದಲು ವೈದ್ಯರೊಂದಿಗೆ ಸಮಾಲೋಚಿಸಿ ನಂತರ ಅವರ ಸಲಹೆಯಂತೆ ಮುಂದುವರೆಯಿರಿ.

ಹೆಚ್ಚಿನ ಮಾಹಿತಿಗಾಗಿ ಮತ್ತು ವೈದ್ಯರ ಭೇಟಿಗಾಗಿ ಕರೆಮಾಡಿ 9945850945

Share With Your Friends