fbpx

ಜ್ವರಕ್ಕೆ ಮನೆ ಮದ್ದು

ನಮ್ಮ ದೇಹದ ಉಷ್ಣತೆಯು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾದರೆ ಅದನ್ನು ಜ್ವರವೆಂದು ಕರೆಯುತ್ತಾರೆ. ಜ್ವರವು ಸಾಮಾನ್ಯವಾಗಿ ಸೋಂಕಿನ ಲಕ್ಷಣವಾಗಿರುತ್ತದೆ. ಆರಂಭದ ಹಂತದಲ್ಲಿರುವ ಜ್ವರವನ್ನು ಮನೆ ಮದ್ದು ಬಳಸಿ ಯಶಸ್ವಿಯಾಗಿ ನಿಯಂತ್ರಿಸಬಹುದು.  ದೇಹದ ಉಷ್ಣತೆಯು ಹೆಚ್ಚಾದಲ್ಲಿ ಜನರು ತೀವ್ರವಾದ ಚಳಿಯನ್ನು ಅನುಭವಿಸುತ್ತಾರೆ. ಇದನ್ನು ಚಳಿ ಜ್ವರವೆಂದೂ (chills) ಕರೆಯುತ್ತಾರೆ.ನಾವು ಸೇವಿಸುವ ಆಹಾರ, ವ್ಯಾಯಾಮ, ನಿದ್ರೆ, ದಿನದ ಸಮಯ ಮತ್ತು ಇನ್ನಿತರ ಅಂಶಗಳು ದೇಹದ ಉಷ್ಣತೆಯ ಮೇಲೆ ಪರಿಣಾಮ ಬೀರಬಲ್ಲವು.ದೇಹಕ್ಕೆ ಸೋಂಕು ತಗಲಿದಾಗ ದೇಹದ ರಕ್ಷಣಾ ವ್ಯವಸ್ಥೆ (immune system) ಸೋಂಕು ಕಾರಕಗಳ ಮೇಲೆ ಧಾಳಿಮಾಡಿ ಸೋಂಕನ್ನು ನಿವಾರಿಸುತ್ತದೆ. ಈ ಪ್ರಕ್ರಿಯೆಯಲ್ಲಿ ದೇಹದ ಉಷ್ಣತೆಯ ಹೆಚ್ಚುವಿಕೆ ಒಂದು ಸಾಮಾನ್ಯ ಪ್ರಕ್ರಿಯೆಯಾಗಿರುತ್ತದೆ.ಜ್ವರವು ಸಾಮಾನ್ಯವಾಗಿ ಕೆಲ ದಿನಗಳಲ್ಲಿ ತನ್ನಿಂದ ತಾನಾಗಿ ವಾಸಿಯಾಗುತ್ತದೆ. ಅದಲ್ಲದೆ ದೇಹದ ಉಷ್ಣತೆಯು ಅತಿಯಾಗಿ ಹೆಚ್ಚಿದಲ್ಲಿ ಇದು ತೀವ್ರ ಸೋಂಕಿನ ಲಕ್ಷಣವಾಗಿದ್ದು ಇದಕ್ಕೆ ವೈದ್ಯಕೀಯ ಚಿಕಿತ್ಸೆಯು ಅನಿವಾರ್ಯವಾಗುತ್ತದೆ. ಇಂತಹ ಸಂದರ್ಭದಲ್ಲಿ ವೈದ್ಯರು ಜ್ವರದ ಮೂಲಕಾರಣಕ್ಕೆ ಅನುಗುಣವಾಗಿ ಮತ್ತು ಜ್ವರದ ತೀವ್ರತೆ ಕಡಿಮೆ ಮಾಡಲು ಔಷಧಿಗಳ ಸೇವನೆಗೆ ನಿರ್ದೇಶಿಸಬಹುದು.        

ಜ್ವರದಲ್ಲಿ ಕಂಡುಬರುವ ಲಕ್ಷಣಗಳು 

fever symptoms

ಸಾಮಾನ್ಯವಾಗಿ ಜ್ವರದಲ್ಲಿ ಕೆಳಗಿನ ಲಕ್ಷಣಗಳನ್ನು ಕಾಣಬಹುದಾಗಿದೆ 

 1. ಚಳಿ ಹಾಗು ನಡುಕದ ಅನುಭವ (ಇತರರಿಗೆ ಈ ಅನುಭವ ಇಲ್ಲದಾಗ )
 2. ಬೆವರುವಿಕೆ 
 3. ಹಸಿವೆ ಕಡಿಮೆಯಾಗುವಿಕೆ 
 4. ದೇಹದಲ್ಲಿನ ಜಲಾಂಶದ ಕೊರತೆ 
 5. ನೋವಿನ ತೀವ್ರವಾದ ಅನುಭವ 
 6. ದೇಹದ ಶಕ್ತಿಯ ಕುಂದುವಿಕೆ 
 7. ಆಲಸ್ಯ ಮತ್ತು ನಿದ್ರಾಸಕ್ತಿ 
 8. ಏಕಾಗ್ರತೆಯ ಕೊರತೆ 

ಮಕ್ಕಳ ಜ್ವರದಲ್ಲಿ 

 1. ಮಕ್ಕಳ ಮೈ ಮುಟ್ಟಿದರೆ ಬಿಸಿಯಾಗಿರುವಿಕೆಯ ಅನುಭವ 
 2. ಕೆಂಪೇರಿದ ಕೆನ್ನೆಗಳು 
 3. ಬೆವರುವಿಕೆ ಮತ್ತು ಮೈ ತಣ್ಣಗಿರುವಿಕೆ 

ಜ್ವರದ ತೀವ್ರತೆ ಹೆಚ್ಚಿದಲ್ಲಿ ಮಕ್ಕಳು ಮುಂಗೋಪಿಗಳಾಗಿ, ಗೊಂದಲದಿಂದ ಕೂಡಿದ ಅರ್ಥವಿಲ್ಲದ ಮಾತು, ಕೆಲವೊಮ್ಮೆ ದೇಹದ ಅನಿಯಂತ್ರಿತ ಚಲನೆಯನ್ನು (seizures ) ತೋರಬಹುದು. 

ದೇಹದ ಉಷ್ಣತೆಯನ್ನು ಅಳೆಯುವುದು ಹೇಗೆ ? 

ದೇಹದ ಉಷ್ಣತೆಯನ್ನು ತಿಳಿಯಲು ಇತ್ತೀಚೆಗೆ ಹೆಚ್ಚಾಗಿ ಡಿಜಿಟಲ್ ಥರ್ಮೋಮೀಟರನ್ನು ಬಳಸುತ್ತಾರೆ. ತಜ್ಞರು ಗಾಜಿನ ಥರ್ಮೋಮೀಟರನ್ನು ಅದರ ಅಪಾಯದ ಕಾರಣದಿಂದ ಬಳಕೆಯನ್ನು ಮಾಡುತ್ತಿಲ್ಲ. ದೇಹದ ಉಷ್ಣತೆಯನ್ನು ಅಳೆಯಲು ಹಣೆಪಟ್ಟಿ ಎಂಬ ಸಾಧನವನ್ನೂ ಬಳಸುತ್ತಾರೆ ಆದರೆ ಇದರಲ್ಲಿ ಉಷ್ಣತೆಯ ನಿಖರತೆಯ ಕೊರತೆಯಿಂದ ಕೇವಲ ತುರ್ತು ಸಂಧರ್ಭಗಳಲ್ಲಿ ಬಳಸಬಹುದು.ಡಿಜಿಟಲ್ ಥರ್ಮೋಮೀಟರನ್ನು ಬಾಯಿಯಲ್ಲಿ ಅಥವಾ ಕಂಕುಳ ಅಡಿಯಲ್ಲಿ ಇಟ್ಟು ದೇಹದ ಉಷ್ಣತೆಯನ್ನು ಅರಿಯಬಹುದು. 

digital thermometer 

ಡಿಜಿಟಲ್ ಥರ್ಮೋಮೀಟರನ್ನು ಉಪಯೋಗಿಸುವ ರೀತಿ    

 1. ಮೊದಲಿಗೆ ಸಾಬೂನು ಬಳಸಿ ಥರ್ಮೋಮೀಟರ್ ತುದಿಯನ್ನು ಸ್ವಚ್ಛಗೊಳಿಸಿ ತಣ್ಣೀರಿನಿಂದ ತೊಳೆಯಬೇಕು.
 2. ಸ್ವಚ್ಛಗೊಳಿಸಿದ ಥರ್ಮೋಮೀಟರನ್ನು  ‘ಆನ್’ ಮಾಡಿರಿ.
 3. ನಂತರ ಥರ್ಮೋಮೀಟರನ್ನು ನಾಲಿಗೆಯ ಕೆಳಗೆ ಹಿಂಬಾಗದಲ್ಲಿ ಇಟ್ಟು ಬಾಯಿಯನ್ನು ಮುಚ್ಚಿ ಅಥವಾ ಥರ್ಮೋಮೀಟರನ್ನು ಕಂಕುಳ ಮಧ್ಯದಲ್ಲಿ ದೇಹಕ್ಕೆ ತಾಗುವಂತೆ ಇಡಿ.
 4. ಥರ್ಮೋಮೀಟರ್ ದೇಹದ ಉಷ್ಣತೆಯನ್ನು ಗುರುತಿಸಿದ ಕೂಡಲೇ ಸಣ್ಣ ಶಬ್ದ (beep) ಅಥವಾ ಬೆಳಕಿನ ಸಂಕೇತದ ಮೂಲಕ ತಿಳಿಸುತ್ತದೆ.
 5. ಈಗ ಥರ್ಮೋಮೀಟರನ್ನು ತೆಗೆದು ಉಷ್ಣತೆಯನ್ನು ತಿಳಿಯಿರಿ.

ಕಂಕುಳ ಉಷ್ಣತೆಯು ಬಾಯಿಯ ಉಷ್ಣತೆಗಿಂತ 0.5 – 0.9°F (0.3-0.5°C) ಕಡಿಮೆಯಿರುತ್ತದೆ. ದೇಹದ ಉಷ್ಣತೆಯು 100.4°F (38°C ) ಗಿಂತ ಹೆಚ್ಚಾಗಿದ್ದಲ್ಲಿ ಜ್ವರವಿದೆಯೆಂದು ತಿಳಿಯಬೇಕು.

 ಡಿಜಿಟಲ್ ಥರ್ಮಾಮೀಟರ್ ಆನ್ಲೈನ್ನಲ್ಲಿ ದೊರೆಯುತ್ತದೆ 

ಜ್ವರವು ಯಾವಾಗ ಚಿಂತೆಯ ವಿಷಯ ?      

ತಜ್ಞರು ಜ್ವರವನ್ನು ಅದರ ತೀವ್ರತೆ, ಅವಧಿ, ಮತ್ತು ಮರುಕಳಿಸುವಿಕೆಯ ಮೇಲೆ ವಿಭಾಗಿಸುತ್ತಾರೆ.

 1. ತೀವ್ರತೆ – ನಮ್ಮ ದೇಹದ ಒಳ ಉಷ್ಣತೆಯು (core temperature) ಪ್ರತಿಯೊಬ್ಬರಲ್ಲಿ ಬೇರೆ ಬೇರೆಯಾಗಿರುತ್ತದೆ. ತಜ್ಞರು 100.4°F (38°C) ಗಿಂತ ದೇಹದ ಉಷ್ಣತೆಯು ಹೆಚ್ಚಿದಲ್ಲಿ ಜ್ವರವೆಂದು ಕರೆಯುತ್ತಾರೆ. ಮಕ್ಕಳಲ್ಲಿ 99.5°F (37.8°C) ಕ್ಕಿಂತ ದೇಹದ ಉಷ್ಣತೆಯು ಹೆಚ್ಚಿದಲ್ಲಿ ಜ್ವರವೆಂದು ತಿಳಿಯಲಾಗುತ್ತದೆ.
  ದೇಹದ ಉಷ್ಣತೆಯು 106°F (41.7°C) ಕ್ಕಿಂತ ಹೆಚ್ಚಾದಲ್ಲಿ ಇದನ್ನು ತೀವ್ರವಾದ ಜ್ವರ ಅಥವಾ ಹೈಪರ್ ಪೈರೆಕ್ಸಿಯಾ (hyperpyrexia) ಎಂದು ಕರೆಯುತ್ತಾರೆ. ಇಂತಹ ಸಂಧರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಇದು ಇತರೆ ತೊಂದರೆಗಳಿಗೆ ಕಾರಣವಾಗಬಲ್ಲದು.
 2. ಅವಧಿ – ಹಠಾತ್ತಾದ ಜ್ವರವು ಸಾಮಾನ್ಯವಾಗಿ 7 ದಿನಗಳ ಒಳಗೆ ವಾಸಿಯಾಗುತ್ತದೆ.
          – ಮಧ್ಯಮ ಅವಧಿಯ ಜ್ವರವು ಸಾಮಾನ್ಯವಾಗಿ 14 ದಿನಗಳ ಒಳಗೆ ವಾಸಿಯಾಗುತ್ತದೆ.
          – ಧೀರ್ಘಕಾಲದ ಜ್ವರವು  ಸಾಮಾನ್ಯವಾಗಿ 14 ದಿನಗಳಿಗಿಂತ ಹೆಚ್ಚಾಗಿ ಇರುತ್ತದೆ.

ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಕೆಲದಿನಗಳಿಂದ  ವಾರಗಳ ವರೆಗೆ ಇರುವ ಜ್ವರವನ್ನು ‘ಫೀವರ್ ಆಫ್ ಅನ್ನೋನ್ ಓರಿಜಿನ್‘ (Fever of unknown origin – FUO) ಎಂದು ಕರೆಯುತ್ತಾರೆ.

ಜ್ವರದ ಸಾಮಾನ್ಯ ಚಿಕಿತ್ಸೆ  

ಜ್ವರವು ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯ ಒಂದು ಪ್ರತಿರೋಧವಾಗಿರುತ್ತದೆ. ಇದು ದೇಹಕ್ಕೆ ಸೇರುವ ಬ್ಯಾಕ್ಟಿರಿಯಾ, ವೈರಸ್ ಹಾಗು ಇತರ ರೋಗಕಾರಕಗಳ ವಿರುದ್ಧ ಹೋರಾಡಿ ಅವುಗಳನ್ನು ನಾಶಪಡಿಸಿ ದೇಹವನ್ನು ಯಾವುದೇ ರೋಗ ಬಾರದಂತೆ ಕಾಪಾಡುವ ಒಂದು ಪ್ರಕ್ರಿಯೆಯ ಭಾಗವಾಗಿರುತ್ತದೆ. ಹೆಚ್ಚಿನ ಜ್ವರಗಳು ನಮಗೆ ಅಹಿತಕರವಾದ ಅನುಭವವನ್ನು ನೀಡಿ ಜ್ವರದ ತೀವ್ರತೆ ಹೆಚ್ಚಾದಲ್ಲಿ ಇರುವ ಆರೋಗ್ಯ ತೊಂದರೆಯನ್ನು ಮತ್ತಷ್ಟು ಉಲ್ಬಣಗೊಳಿಸಿ ಜಟಿಲತೆಗೆ ಕಾರಣವಾಗಬಲ್ಲುದು.        ಈ ಕಾರಣಕ್ಕಾಗಿ ವೈದ್ಯರು ಕೆಲವೊಮ್ಮೆ ಜ್ವರ ಶಾಮಕ ಔಷಧಿಗಳನ್ನ ನೀಡಿ ದೇಹದ ತಾಪಮಾನವನ್ನು ಕಡಿಮೆ ಮಾಡುತ್ತಾರೆ. ಜ್ವರದಲ್ಲಿ ರೋಗಿಯು ತೀವ್ರವಾಗಿ ಬೆವರುತ್ತಿದ್ದರೆ ಕೆಲವೊಮ್ಮೆ ದೇಹದಲ್ಲಿನ ಜಲಾಂಶದ ಕೊರತೆಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದರಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸಲು ಹೆಚ್ಚಿನ ನೀರಿನ ಸೇವನೆಯು ಅತ್ಯಗತ್ಯ.

ಜ್ವರದ ಕಾರಣಕ್ಕೆ ಚಿಕಿತ್ಸೆ 

ಜ್ವರವು ಕೇವಲ ಲಕ್ಷಣವಾಗಿದ್ದು ರೋಗವಲ್ಲ. ವೈದ್ಯಕೀಯ ಪರೀಕ್ಷೆಗಳ ಮೂಲಕ ರೋಗದ ಕಾರಣಗಳನ್ನು ತಿಳಿದು ಕಾರಣಕ್ಕೆ ಚಿಕಿತ್ಸೆ ಮಾಡುವುದರಿಂದ ಜ್ವರವು ವಾಸಿಯಾಗುತ್ತದೆ.ಜ್ವರದ ಕಾರಣಗಳು   

 • ಸೋಂಕುಗಳು –  ಫ್ಲೂ, ಚಿಕನ್ ಪಾಕ್ಸ್, ನ್ಯೂಮೋನಿಯಾ, ಗಂಟಲ ಸೋಂಕು, ಕೋವಿಡ್-19
 • ರುಮಟಾಯ್ಡ್ ಆರ್ಥರೈಟಿಸ್ 
 • ಕೆಲವೊಂದು ಔಷಧಿಗಳು 
 • ಸೂರ್ಯನ ಬೆಳಕಿಗೆ ಚರ್ಮದ ಅತಿಯಾದ ಒಡ್ಡುವಿಕೆ ಅಥವಾ ಸನ್ಬರ್ನ್      
 • ಹೀಟ್ ಸ್ಟ್ರೋಕ್, ಅತಿಯಾದ ಉಷ್ಣತೆಯಲ್ಲಿರುವಿಕೆ ಅಥವಾ ತೀವ್ರವಾದ ಹೆಚ್ಚಿನ ಕಾಲದ ವ್ಯಾಯಾಮ 
 • ದೇಹದ ಜಲಾಂಶದ ಕಡಿಮೆಯಾಗುವಿಕೆ 
 • ಸಿಲಿಕೋಸಿಸ್ – ದೀರ್ಘಕಾಲದ ಸಿಲಿಕಾ ಧೂಳಿಗೆ ಉಂಟಾಗುವ ಒಂದು ವಿಧವಾದ ಶ್ವಾಸಕೋಶದ ತೊಂದರೆ
 • ಆಂಫೆಟಮೈನ್  ಔಷಧಿಯ ದುರ್ಬಳಕೆ 
 • ಮದ್ಯವ್ಯಸನ ಮುಕ್ತತೆ   

ಮಕ್ಕಳಲ್ಲಿ ಜ್ವರ 

ಚಿಕ್ಕ ಮಕ್ಕಳು ಜ್ವರದ ತಾಪಮಾನ ಹೆಚ್ಚಾದಾಗ  ದೇಹದಲ್ಲಿ ಅನಿಯಂತ್ರಿತ ಕಂಪನ/ಚಲನೆಯ (febrile seizures) ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದು ಹೆಚ್ಚಾಗಿ 12 ರಿಂದ 18 ತಿಂಗಳ ಮಕ್ಕಳಲ್ಲಿ ಕಂಡುಬರುತ್ತದೆ. ಇದು ಕಿವಿಯ ಸೋಂಕು, ಜಠರ ಹಾಗು ಕರಳುಗಳ ಉರಿಯೂತ, ಶ್ವಾಸಾಂಗದ ವೈರಸ್ ಮುಂತಾದುವುಗಳ ಕಾರಣದಿಂದ ಸಂಭವಿಸಬಹುದು ಆದರೆ ಇವು ಹೆಚ್ಚಾಗಿ ಅಪಾಯಕಾರಿಯಲ್ಲ. ಮೆನಿಂಜೈಟಿಸ್, ಮೂತ್ರಪಿಂಡದ ಸೋಂಕು, ನ್ಯೂಮೋನಿಯಾದಂತಹ ಗಂಭೀರ ರೋಗಗಳ ಕಾರಣದಿಂದ ದೇಹದಲ್ಲಿ ಅನಿಯಂತ್ರಿತ ಕಂಪನ/ಚಲನೆಯ (febrile seizures) ಲಕ್ಷಣಗಳು ಕಾಣಿಸಿಕೊಳ್ಳಬಹುದು.    ದೇಹದಲ್ಲಿ ಅನಿಯಂತ್ರಿತ ಕಂಪನ/ಚಲನೆಯ (febrile seizures) ಲಕ್ಷಣಗಳು ದೇಹದ ತಾಪಮಾನವು ತ್ವರಿತವಾಗಿ ಹೆಚ್ಚಾದಾಗ ಕಾಣಿಸಿಕೊಳ್ಳುತ್ತದೆ    

ಯಾವಾಗ ವೈದ್ಯರನ್ನು ಭೇಟಿಮಾಡಬೇಕು ?

ಯಾವುದೇ ಜ್ವರಯುಕ್ತವಾದ ಅನಿಯಂತ್ರಿತ ಚಲನೆಯು ಕಾಣಿಸಿಕೊಳ್ಳುವುದೋ ತಕ್ಷಣವೇ ವೈದ್ಯರನ್ನು ಭೇಟಿಮಾಡಬೇಕು. ವೈದ್ಯರು ಸೂಕ್ತ ತಪಾಸಣೆಯ ನಂತರ ದೇಹದ ತಾಪಮಾನ ಕಡಿಮೆ ಮಾಡುವ ಔಷದೋಪಚಾರಗಳನ್ನು ನಿರ್ದೇಶಿಸುತ್ತಾರೆ. ದೇಹದ ಜಲಾಂಶವು ಕಡಿಮೆಯಾದಲ್ಲಿ ದೇಹಕ್ಕೆ ಅಗತ್ಯವಿರುವಷ್ಟು ನೀರಿನ ಸೇವನೆ ಮಾಡಬೇಕು.ದೇಹದ ಅನಿಯಂತ್ರಿತ ಚಲನೆಯನ್ನು ನಿಯಂತ್ರಿಸಲು ವೈದ್ಯರು ಅಗತ್ಯವಿದ್ದರೆ ಔಷಧಿಗಳನ್ನು ನೀಡಬಹುದು.  

ಜ್ವರದಲ್ಲಿ ರೋಗನಿರ್ಣಯ 

ಇಂದಿನ ವೈದ್ಯ ವಿಜ್ಞಾನವು ಜ್ವರವನ್ನು ಒಂದು ಲಕ್ಷಣವಾಗಿ ಗುರುತಿಸಿದೆಯೇ ಹೊರತು ರೋಗವೆಂದು ಅಲ್ಲ. ವೈದ್ಯರು ದೇಹದ ಉಷ್ಣತೆಯನ್ನು ಅಳೆಯುವ ಮೂಲಕ ಜ್ವರವನ್ನು ಅರಿತರೂ ಜ್ವರಕ್ಕೆ ಮೂಲ ಕಾರಣವೇನೆಂಬುದೂ ವೈದ್ಯರು ಪತ್ತೆ ಮಾಡುತ್ತಾರೆ. ಜ್ವರದ ಮೂಲಕಾರಣವನ್ನು ತಿಳಿಯಲು ವೈದ್ಯರು ರೋಗಿಯ ಸಂಪೂರ್ಣ ತಪಾಸಣೆ ನಡೆಸಿ, ರೋಗದ ಪೂರ್ವ ವೃತ್ತಾಂತವನ್ನು ಅರಿತು ಹಾಗು ಇನ್ನಿತರ ಲಕ್ಷಣಗಳ ಬಗ್ಗೆ ಕೇಳಿ ತಿಳಿಯುತ್ತಾರೆ. ರೋಗಿಯು ಇತ್ತೀಚೆಗೆ ಯಾವುದಾದರೂ ಸೋಂಕಿಗೊಳಗಾಗಿದ್ದರೆ, ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಲ್ಲಿ  ಅಥವಾ ದೇಹದ ಯಾವುದೇ ಭಾಗದಲ್ಲಿ ನೋವು ಹಾಗು ಊತವಿದ್ದರೆ ರೋಗಿಯು ಯಾವ ಸೋಂಕಿನಿಂದ ಬಳಲುತ್ತಿದ್ದಾರೆಂದು ಊಹಿಸಬಹುದು. ಇದರ ಕರಾರುವಕ್ಕಾದ ನಿರ್ಣಯಕ್ಕೆ ವೈದ್ಯರು ಈ ಕೆಳಗಿನ ಪರೀಕ್ಷೆಗಳನ್ನು ಸೂಚಿಸಬಹುದು.

 1. ರಕ್ತ ಪರೀಕ್ಷೆ
 2. ಮೂತ್ರ ಪರೀಕ್ಷೆ 
 3. ಸ್ಕ್ಯಾನಿಂಗ್ ನಂತಹ ಇಮೇಜಿಂಗ್ ಪರೀಕ್ಷೆ    

ಇದರ ವರದಿಗಳ ಆಧಾರದ ಮೇಲೆ ವೈದ್ಯರು ಜ್ವರಕ್ಕೆ ಕಾರಣವಾಗುವ ಅಂಶಕ್ಕನುಗುಣವಾಗಿ ತಕ್ಕ ಔಷಧಿಯನ್ನು ನೀಡುತ್ತಾರೆ. 

ಜ್ವರವನ್ನು ತಡೆಯುವುದು ಹೇಗೆ ?

ಜ್ವರವು ಬರದಂತೆ ಇರಲು ಜನರು ಯಾವುದೇ ಸೋಂಕು ದೇಹಕ್ಕೆ ಬರದಂತೆ ತಡೆಯುವ ಮಾರ್ಗಗಳನ್ನು ಅನುಸರಿಸಬೇಕು.

ನಾವು ನಮ್ಮ ದೇಹದ ಶುಚಿತ್ವದ ಕಡೆ ಹೆಚ್ಚು ಗಮನವಿಟ್ಟು ರೋಗಿಗಳಿಂದ ದೂರವಿರಬೇಕು.  

ಕೋವಿಡ್ -19 ಬರದಂತೆ ತಡೆಯುವುದು ಹೇಗೆ ? 

hand wash to prevent covid-19

ಕೋವಿಡ್ -19 ಬರದಂತೆ ಮತ್ತು ಹರಡದಂತೆ ತಡೆಯಲು WHO ಈ ಕೆಳಗಿನ ಮಾರ್ಗಸೂಚಿಗಳನ್ನು ತಿಳಿಸಿದೆ.

 • ಕೈಗಳನ್ನು ಪದೇ ಪದೇ ಸಾಬೂನು ಮತ್ತು ನೀರುಬಳಸಿ ಕನಿಷ್ಠ 20 ಸೆಕುಂಡುಗಳವರೆಗೆ ಸರಿಯಾಗಿ ತೊಳಿಯಬೇಕು.
 • ಸಾಬೂನು ಹಾಗು ನೀರಿನ ಲಭ್ಯವಿಲ್ಲದಿದ್ದರೆ ಶೇಕಡ 60 ಕ್ಕಿಂತ ಹೆಚ್ಚಿನ ಮದ್ಯಸಾರವಿರುವ ಹ್ಯಾಂಡ್ ಸ್ಯಾನಿಟೈಝೆರ್ ಬಳಸಬಹುದು.
 • ತೊಳೆಯದ ಕೈಗಳಿಂದ ಮುಖಭಾಗವನ್ನು ಮುಟ್ಟಬಾರದು.
 • ಜನರ ನಡುವೆ ಹೋದಾಗ ಮುಖವನ್ನು ಮಾಸ್ಕ್ ಅಥವಾ ಇತರ ವಸ್ತ್ರಗಳಿಂದ ಮುಚ್ಚುವಿಕೆ (2 ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಹೊರತುಪಡಿಸಿ).
 • ಸೋಂಕುನಿವಾರಕಗಳನ್ನು ಬಳಸಿ ವಸ್ತುಗಳ ಶುಚಿಗೊಳಿಸುವಿಕೆ.
 • ಕೆಮ್ಮುಬಂದಾಗ ಮತ್ತು ಸೀನು ಬಂದಾಗ ಟಿಶ್ಯೂ ಪೇಪರ್ ಬಳಸಿ ನಂತರ ಅದನ್ನು ಸೂಕ್ತ ಜಾಗದಲ್ಲಿ ವಿಲೇವಾರಿ ಮಾಡಿ ಕೈಗಳ ತೊಳೆಯುಬೇಕು.
 • ಯಾವುದೇ ಅನಾರೋಗ್ಯ ಹೊಂದಿರುವ ವಕ್ತಿಗಳಿಂದ ದೂರವಿರುವಿಕೆ.     

ಆಯುರ್ವೇದದಲ್ಲಿ ಜ್ವರ ಚಿಕಿತ್ಸೆ 

ಆಧುನಿಕ ವೈದ್ಯ ವಿಜ್ಞಾನವು ಜ್ವರವನ್ನು ಒಂದು ಲಕ್ಷಣವೆಂದು ಕರೆದರೆ ಆಯುರ್ವೇದವು ಜ್ವರವನ್ನು ರೋಗಗಳ ರಾಜನೆಂದು ಹೆಸರಿಸಿ ಚಿಕಿತ್ಸೆಯಲ್ಲಿ ಪ್ರಥಮ ಅಧ್ಯಾಯವನ್ನಾಗಿ ಹೇಳಿದ್ದಾರೆ. ಆಯುರ್ವೇದದಲ್ಲಿ ಜ್ವರವು ಕೇವಲ ದೇಹದ ಉಷ್ಣತೆ ಹೆಚ್ಚುವ ಲಕ್ಷಣವಲ್ಲದೆ ದೇಹಾಲಸ್ಯ, ಅಹಿತಭಾವನೆ ಮತ್ತು ಅಸ್ವಸ್ಥತೆಯಿಂದ ಕೂಡಿದ್ದು ದೇಹ ಇಂದ್ರಿಯ ಮತ್ತು ಮನಸ್ಸನ್ನು ಬಾಧಿಸುತ್ತದೆ. ವಾತ ಪಿತ್ತ ಕಫಗಳೆಂಬ ದೋಷಗಳು ಸಾಮಾನ್ಯ ಸ್ಥಿತಿಯಲ್ಲಿದ್ದಾಗ ದೇಹದ ಉಷ್ಣತೆ, ಜೀರ್ಣಕ್ರಿಯೆ, ರಕ್ತ, ಇತರ ದ್ರವಗಳ ಚಲನೆ ಹಾಗು ಪೋಷಕಾಂಶಗಳ ತಲುಪುವಿಕೆಯು ಸರಾಗವಾಗಿ ನಿರಂತರ ನಡೆಯುತ್ತಿರುತ್ತದೆ. ದೋಷಗಳ ಏರುಪೇರಿನಿಂದ ದೇಹದಲ್ಲಿ ಅಹಿತಕರ ಭಾವನೆ, ದೇಹಾಲಸ್ಯ, ನೋವು, ಉಷ್ಣತೆಯ ಹೆಚ್ಚಾಗುವಿಕೆ ಹಾಗು ಉರಿಯೂತಕ್ಕೆ ಕಾರಣವಾಗಬಹುದು. ಜ್ವರವು ಪಿತ್ತದೋಷ ಪ್ರಧಾನವಾದ ತೊಂದರೆಯಾಗಿದ್ದು ಇದು ಪ್ರಧಾನವಾಗಿ ದೇಹದ ಜೀರ್ಣಶಕ್ತಿಯನ್ನು ಹಾಳುಗೆಡವಿ ಸೇವಿಸಿದ ಆಹಾರವು ಪಚನವಾಗದೆ ಅಪಕ್ವವಾದ ಆಹಾರ ರಸವನ್ನು ಉಂಟುಮಾಡಿ ಆಮವೆಂಬ ವಿಷರೂಪಿ ದೋಷಕ್ಕೆ ಕಾರಣವಾಗುತ್ತದೆ. ಹೀಗೆ ಉತ್ಪತ್ತಿಯಾದ ಆಮವು ಮೊದಲಿಗೆ ದೇಹದಲ್ಲಿ ಆಹಾರದಿಂದ ಉತ್ಪನ್ನವಾಗುವ ಮೊದಲ ಧಾತುವಾದ ರಸ ಧಾತುವಿನೊಂದಿಗೆ ಸೇರಿ ಸರ್ವ ದೇಹದಲ್ಲಿ ಸಂಚರಿಸುವಾಗ ಜ್ವರವು ಉಂಟಾಗುತ್ತದೆ. ಹಾಗಾಗಿ ಜ್ವರವು ರಸ ಧಾತುವಿನಲ್ಲಿ ಆಮ ದೋಷದ ಇರುವಿಕೆಯನ್ನು ಸೂಚಿಸುವ ಲಕ್ಷಣವಾಗಿದೆ.  ಆಮದೋಷವು ದೇಹದಲ್ಲಿ ಅನೇಕ ರೋಗಗಳಿಗೆ ಪ್ರಮುಖ ಕಾರಣವಾಗಿರುತ್ತದೆ ಹಾಗಾಗಿ ಆಮದೋಷದ ನಿವಾರಣೆಯು ಜ್ವರ ಚಿಕಿತ್ಸೆಯ ಪ್ರಥಮಹಂತವಾಗಿದೆ. ಜ್ವರ ಚಿಕಿತ್ಸೆಯ ಸಿದ್ಧಾಂತಗಳು ಆಯುರ್ವೇದದಲ್ಲಿ ತಿಳಿಸಿರುವ ಇತರೆ ರೋಗಗಳ ನಿವಾರಣೆಯಲ್ಲಿ ಚಿಕಿತ್ಸಾ ಕೈಪಿಡಿಗಳಂತೆ ನಿರ್ದೇಶನವನ್ನು ನೀಡುತ್ತವೆ. ಹಾಗಾಗಿ ಜ್ವರ ಚಿಕಿತ್ಸೆಯು ಎಲ್ಲಾ ರೋಗಗಳ ಚಿಕಿತ್ಸೆಯ ಮೂಲ ಬುನಾದಿಯೆನ್ನಬಹುದು.

ಆಯುರ್ವೇದದಲ್ಲಿ ಜ್ವರದ ಚಿಕಿತ್ಸೆ ಹೇಗೆ ಮಾಡುತ್ತಾರೆ?                      

ಆಯುರ್ವೇದದಲ್ಲಿ ಜ್ವರದ ಚಿಕಿತ್ಸೆಯನ್ನು ದೋಷಗಳಿಗನುಸಾರವಾಗಿ, ಕಾರಣಗಳಿಗನುಸಾರವಾಗು, ರೋಗಿಯ ಹಾಗು ರೋಗದ ಬಲ, ಕಾಲ ಮುಂತಾದ ಅಂಶಗಳಿಗನುಸಾರವಾಗಿ ವೈದ್ಯರು ನಿರ್ದೇಶಿಸುತ್ತಾರೆ. ಜ್ವರದ ಸಾಮಾನ್ಯ ಚಿಕಿತ್ಸಾ ಕ್ರಮವು ಈ ಕೆಳಗಿನಂತಿರುತ್ತದೆ.

 1. ಉಪವಾಸ – ಉಪವಾಸದಿಂದ ಹೆಚ್ಚಾಗಿರುವ ದೋಷಗಳು ಕಡಿಮೆಯಾಗುತ್ತವೆ ಮತ್ತು ಜಠರಾಗ್ನಿಯನ್ನು ವರ್ಧಿಸುತ್ತದೆ. ಕುಪಿತಗೊಂಡ ದೋಷಗಳ ಶಮನವು ಮತ್ತು ಪಚನ ಶಕ್ತಿಯ ಹೆಚ್ಚುವಿಕೆಯು ಜ್ವರವನ್ನು ವಾಸಿಮಾಡುತ್ತವೆ.
 2. ದೋಷಗಳ ಪಾಚನ – ಉಪವಾಸ, ಬೆವರಿಸುವಿಕೆ ಮುಂತಾದ ಕ್ರಮಗಳು ದೇಹದಲ್ಲಿರುವ ಅಪಕ್ವ ದೋಷಗಳನ್ನು ಪಚನ ಮಾಡಿ ಜ್ವರವನ್ನು ನಿವಾರಿಸುವಲ್ಲಿ ಸಹಕರಿಸುತ್ತವೆ.
 3. ಔಷಧಯುಕ್ತ ಗಂಜಿಯ ಸೇವನೆ – ಔಷಧಯುಕ್ತ ಗಂಜಿಯು ಜೀರ್ಣಕ್ಕೆ ಹಗುರವಾಗಿದ್ದು ದೇಹದಲ್ಲಿನ ದೋಷಗಳನ್ನು ಶಮನಮಾಡಿ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳನ್ನು ನೀಡಿ, ಕ್ಷೀಣವಾಗಿರುವ ಜಠರಾಗ್ನಿಯನ್ನು ಹೆಚ್ಚಿಸುತ್ತದೆ.
 4. ಕಹಿರಸ ಪ್ರಧಾನವುಳ್ಳ ಔಷಧಿಗಳ ಸೇವನೆ – ಕಹಿರಸವು ಜ್ವರವನ್ನು ಶಮನ ಮಾಡುವಲ್ಲಿ ಮತ್ತು ಅಗ್ನಿಯನ್ನು ಹೆಚ್ಚಿಸುವಲ್ಲಿ ಸಹಾಯಮಾಡುತ್ತವೆ.

ಮೇಲಿನ ಚಿಕಿತ್ಸಾಕ್ರಮಗಳು ಕೇವಲ ಮಾಹಿತಿಗೋಸ್ಕರ ಹೇಳಿದೆಯೇ ಹೊರತು ಜ್ವರದ ಚಿಕಿತ್ಸೆಯು ವೈದ್ಯರ ಕೂಲಂಕಶ ತಪಾಸಣೆಯಿಂದ ಮಾತ್ರವೇ ಸಾಧ್ಯ.

ಜ್ವರದಲ್ಲಿ ಸಾಮಾನ್ಯವಾಗಿ ಬಳಸುವ ಆಯುರ್ವೇದ ಔಷಧಗಳು

ಆಯುರ್ವೇದದ ಔಷಧಿಗಳ ಉಪಯೋಗವನ್ನು ಗಮನಿಸಿದರೆ ಒಂದು ಔಷಧವು ಹಲವಾರು ರೋಗಗಳಿಗೆ ಹೇಳಿರುತ್ತಾರೆ. ಉದಾಹರಣೆಗೆ ಜ್ವರದಲ್ಲಿ ಬಳಸುವ ದ್ರಾಕ್ಷಾದಿ ಎಂಬ ಕಷಾಯವು ಜ್ವರದೊಂದಿಗೆ, ಆಮ್ಲ ಪಿತ್ತದಲ್ಲಿ, ಮದತ್ಯಯ, ವಾಂತಿ, ಉರಿ, ಸುಸ್ತು, ತಲೆತಿರುಗುವಿಕೆ, ರಕ್ತಸ್ರಾವದಂತಹ ತೊಂದರೆಗಳು, ಅತಿಯಾದ ದಾಹ ಮತ್ತು ಕಾಮಾಲೆಯಂತಹ ರೋಗಗಳಲ್ಲಿ ಸೂಚಿತವಾಗಿದೆ. ಹಾಗಾಗಿ ದ್ರಾಕ್ಷಾದಿ ಕಷಾಯವು ಕೇವಲ ಜ್ವರಕ್ಕೆ ಮಾತ್ರವೇ ಬಳಸಬಹುದಾದ ಔಷಧಿಯಲ್ಲ ಬದಲಿಗೆ ರೋಗ ಮತ್ತು ರೋಗಿಯ ಸ್ಥಿತಿಗನುಸಾರವಾಗಿ ಇತರೆ ರೋಗಗಳಲ್ಲಿಯೂ ಉಪಯೋಗಿಸಬಹುದಾಗಿದೆ.             ಆದರೆ ಆಧುನಿಕ ವೈದ್ಯವಿಜ್ಞಾನದ ಔಷಧಿಗಳು ಹೆಚ್ಚಾಗಿ ಕೇವಲ ಒಂದು ರೋಗ ಅಥವಾ ರೋಗಲಕ್ಷಣಗಳಿಗೆ ನಿರ್ದಿಷ್ಟವಾಗಿರುತ್ತವೆ. ಆಯುರ್ವೇದದ ಔಷಧಿಗಳು ದೇಹದಲ್ಲಿನ ದೋಷದ ಸ್ಥಿತಿ, ರೋಗ ಮತ್ತು ರೋಗಿಯ ಅವಸ್ಥೆ ಮುಂತಾದುವುಗಳನ್ನು ತಿಳಿದು ನೀಡಲ್ಪಡುತ್ತವೆ. ಈ ಕೆಳಗೆ ಹೇಳಿರುವ ಆಯುರ್ವೇದ ಔಷಧಿಗಳನ್ನು ಸಾಮಾನ್ಯವಾಗಿ ಜ್ವರದ ವಿವಿಧ ಹಂತದ ಚಿಕಿತ್ಸೆಯಲ್ಲಿ ವೈದ್ಯರು ಬಳಸುತ್ತಾರೆ.

 1. ಅಮೃತೋತ್ತರ ಕಷಾಯ 
 2. ದ್ರಾಕ್ಷಾದಿ ಕಷಾಯ 
 3. ಗುಲುಚ್ಯಾದಿ ಕಷಾಯ 
 4. ಅಮೃತಾರಿಷ್ಠ 
 5. ಸುದರ್ಶನ ವಟಿ   

ಜ್ವರಕ್ಕೆ ಮನೆಯಲ್ಲಿ ಔಷಧ ಮಾಡಬಹುದೇ?

ಸಾಮಾನ್ಯ ಜ್ವರವು ಯಾವುದೇ ಚಿಕಿತ್ಸೆಯಿಲ್ಲದೆ ಕೆಲವು ದಿನಗಳಲ್ಲಿ ವಾಸಿಯಾದರೂ ಜ್ವರವು ತೀವ್ರಗೊಳ್ಳದಂತೆ ಮತ್ತು ಶೀಘ್ರದಲ್ಲಿ ಗುಣವಾಗಲು ನಾವು ನಮ್ಮ ಆಹಾರ ಮತ್ತು ಜೀವನಶೈಲಿಯೊಂದಿಗೆ ಮನೆಯ ಆಸುಪಾಸಿನಲ್ಲಿ ದೊರೆಯುವ ಗಿಡಮೂಲಿಕೆಗಳನ್ನು ಔಷಧಗಳಾಗಿ ಬಳಸಬಹುದು. 

 • ಕಿರುಬೆರಳ ಗಾತ್ರದ ಎರಡು ಇಂಚು ಉದ್ದದ ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ಎರಡು ಲೀಟರ್ ನೀರಿನಲ್ಲಿ ಐದು ನಿಮಿಷ ಕುದಿಸಿ ಸೋಸಿ ಈ ಔಷಧಿಯುಕ್ತ ನೀರನ್ನು ದಿನನಿತ್ಯ ಕುಡಿಯಲು ಉಪಯೋಗಿಸಿ. ಈ ಔಷಧಯುಕ್ತ ನೀರಿನ ಬಳಕೆಯುನ್ನು ತಯಾರಿಸಿದ ಹನ್ನೆರಡು ಗಂಟೆಗಳ ಒಳಗೆ ಬಳಸಬೇಕು. ನೀರು ಉಳಿದಿದ್ದಲ್ಲಿ ಅದನ್ನು ಚೆಲ್ಲಿ ನಂತರ ಬಿಸಿನೀರನ್ನು ಕುಡಿಯಲು ಉಪಯೋಗಿಸಿ. ಈ ಔಷಯುಕ್ತವಾದ ನೀರನ್ನು ಪ್ರತಿದಿನವೂ ಹೊಸದಾಗಿ ಮಾಡಬೇಕು. (ಮಕ್ಕಳ ಉಪಯೋಗಕ್ಕೆ ವೈದ್ಯರ ಸಲಹೆ ಅಗತ್ಯ)       

ಜ್ವರದಲ್ಲಿ ನಮ್ಮ ಆಹಾರ ಹೇಗಿರಬೇಕು?

 • ಜ್ವರದ ಆರಂಭಿಕ ಸೂಚನೆಗಳು ದೊರೆತಕೂಡಲೇ ಜೀರ್ಣಕ್ಕೆ ಅತ್ಯಂತ ಹಗುರವಿರುವಂತಹ ಆಹಾರದ ಸೇವನೆಯನ್ನು ಹಸಿವೆಯು ವ್ಯಕ್ತವಾದಲ್ಲಿ ಮಾತ್ರ ಸೇವಿಸಬೇಕು
 • ಕುಡಿಯಲು ಕುದಿಸಿದ ನೀರು, ಸಾಧ್ಯವಾದಲ್ಲಿ ಬಿಸಿಬಿಸಿಯಾಗಿ ನೀರನ್ನು ಕುಡಿಯಿರಿ ಅಥವಾ ಔಷಧ ಸಿದ್ಧ ನೀರನ್ನು ಕುಡಿಯಿರಿ.
 •  ಪ್ರಾಣಿಜನ್ಯ ವಸ್ತುಗಳಾದ ಮೊಟ್ಟೆ ಮಾಂಸ ಮೀನು ಹಾಲು ಮೊಸರು ಬೆಣ್ಣೆ ತುಪ್ಪ ಪನ್ನೀರ್ ಚೀಸ್ನಂತಹ ವಸ್ತುಗಳನ್ನು ಜ್ವರವು ವಾಸಿಯಾಗುವ ತನಕ ಬಳಸಬೇಡಿ.
 • ಅಡುಗೆಯಲ್ಲಿ ಎಣ್ಣೆ ಮತ್ತು ತುಪ್ಪದ ಉಪಯೋಗ ಬೇಡ.
 • ಜೀರ್ಣಕ್ಕೆ ಬಹಳ ಸಮಯ ಹಿಡಿಯುವ ಮೈದಾ, ಬ್ರೆಡ್ , ಉದ್ದಿನಿಂದ ಮಾಡಿದ ಆಹಾರವಸ್ತುಗಳು ಬೇಡ.
 • ಹಣ್ಣುಗಳು, ಹಣ್ಣಿನ ರಸ, ಎಳೆನೀರು ಮುಂತಾದುವುಗಳ ಸೇವನೆಯನ್ನು ಜ್ವರ ವಾಸಿಯಾಗುವವರೆಗೆ ನಿಲ್ಲಿಸಿ.
 • ಬೇಯಿಸಿದ ಆಹಾರವನ್ನು ಮಾತ್ರ ಸೇವಿಸಿ.
 • ಹುಳಿ ರಸ ಪ್ರಧಾನವಾದ ಆಹಾರದ ಸೇವನೆ ಬೇಡ.
 • ಒಣ ಹಣ್ಣುಗಳ ಬಳಕೆ ಬೇಡ 
 • ತಿನ್ನಲು ಆಗತಾನೆ ತಯಾರಿಸಿದ ಬಿಸಿ ಆಹಾರವನ್ನು ಬಳಸಿ.
 • ಮೊದಲೇ ಸಿದ್ಧಪಡಿಸಿದ ಆಹಾರಗಳು, ಉಪ್ಪಿನಕಾಯಿಯಂತಹ ವಸ್ತುಗಳ ಸೇವನೆ ಬೇಡ.
 • ಆಹಾರಕ್ಕೆ ಹಳೆಯ ಕೆಂಪಕ್ಕಿ, ಷಷ್ಠಿಕ ಅಕ್ಕಿ ಉತ್ತಮ.
 • ಜೀರ್ಣ ಶಕ್ತಿಯು ಅತಿ ಕಮ್ಮಿಯಿದ್ದಲ್ಲಿ ಬತ್ತದ ಅರಳಿನಿಂದ ತಯಾರಿಸಿದ ಗಂಜಿಯ ಸೇವನೆ ಹಿತಕಾರಿ.
 • ಔಷಧಯುಕ್ತ ಗಂಜಿ ಅಥವಾ ಆಹಾರವು ಜ್ವರವನ್ನು ಶೀಘ್ರವಾಗಿ ನಿವಾರಿಸುತ್ತವೆ.
 • ದೋಷಗಳ ಪಚನಕ್ಕೆ ಅನುಕೂಲವಾಗುವಂತೆ ಜೀರ್ಣಿಸಿಕೊಳ್ಳಲು ಭಾರವಾದ, ಉಷ್ಣ ವೀರ್ಯವಿರುವ ಆಹಾರ, ಜಿಡ್ಡಿನಿಂದ ಕೂಡಿದ, ಸಿಹಿ ಮತ್ತು ಕಷಾಯ ರುಚಿಯನ್ನು ಹೊಂದಿರುವ ಆಹಾರ ಪದಾರ್ಥಗಳು ನವ ಜ್ವರದಿಂದ (ಜ್ವರದ ಮೊದಲ ಹಂತದಲ್ಲಿ ) ಬಳಲುತ್ತಿರುವ ರೋಗಿಗಳಿಗೆ ನೀಡಬಾರದು.  

 ಜ್ವರದಲ್ಲಿ ದಿನಚರಿ ಹೇಗಿರಬೇಕು?

 • ಜ್ವರದಲ್ಲಿ ಹಗಲಿನ ನಿದ್ರೆ ಮಾಡಬಾರದು.
 • ಅತಿಯಾದ ದೇಹ ವಿಶ್ರಾಂತಿಯು ಜ್ವರದಲ್ಲಿ ಹಿತವಲ್ಲ.
 • ನಮ್ಮ ದೇಹ, ಮನಸ್ಸು ಮತ್ತು ಇಂದ್ರಿಯಗಳನ್ನು ಅತಿಯಾಗಿ ಪೀಡಿಸುವ ಕಾರ್ಯಗಳನ್ನು ಮಾಡಬಾರದು.                    

ಜ್ವರವು ವಾಸಿಯಾದ ನಂತರವೂ ದೇಹವು ಮೊದಲಿನ ಅರೋಗ್ಯ ಸ್ಥಿತಿಗೆ ತಲುಪುವ ತನಕವೂ ಆಹಾರ ಹಾಗು ವಿಹಾರದಲ್ಲಿ ಪಥ್ಯದ ಪಾಲನೆಯು ಅಗತ್ಯ. ಇಲ್ಲದಿದ್ದಲ್ಲಿ ಪುನಃ ಜ್ವರದ ಮರುಕಳಿಕೆಯಾಗಬಹುದು. 

ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?

ಮೇಲೆ ಹೇಳಿದ ಮನೆಔಷಧಿ, ಸೂಕ್ತವಾದ ಆಹಾರ ಜೀವನ ಶೈಲಿಯೊಂದಿಗೆ ಜ್ವರವು 24 ಗಂಟೆಗಳಲ್ಲಿ ಕಡಿಮೆಯಾಗದಿದ್ದಲ್ಲಿ ಅಥವಾ ಜ್ವರವು ಶೀಘ್ರವಾಗಿ ಹೆಚ್ಚಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು.  

ಕೊನೆಯದಾಗಿ 

ಜ್ವರವು ಸಾಮಾನ್ಯವಾಗಿ ಸೋಂಕಿನ ಒಂದು ಲಕ್ಷಣವಾಗಿರುತ್ತದೆ. ಜ್ವರವು ಒಂದು ಸಾಮಾನ್ಯ ತೊಂದರೆಯಾಗಿದ್ದು ಇದಕ್ಕೆ ಕಾರಣವಾಗಿರುವ ಅಂಶಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಅಗತ್ಯ.ಜ್ವರವು ಹೆಚ್ಚಾಗಿ ಯಾವುದೇ ವೈದ್ಯಕೀಯ ನೆರವಿಲ್ಲದೆ ವಾಸಿಯಾಗುವ ಒಂದು ಸಾಮಾನ್ಯ ತೊಂದರೆಯಾಗಿದ್ದು ಮಕ್ಕಳು ಮತ್ತು ವಯಸ್ಕರಲ್ಲಿ ಜ್ವರದ ತೀವ್ರತೆ ಹೆಚ್ಚಾದಲ್ಲಿ ಅಥವಾ ಲಕ್ಷಣಗಳು ಉಲ್ಬಣಿಸಿದ್ದಲ್ಲಿ ಅಥವಾ ದೇಹದ ರೋಗನಿರೋಧಕ ಶಕ್ತಿಯು ಕುಂದಿದಲ್ಲಿ ವೈದ್ಯಕೀಯ ನೆರವಿನ ಅಗತ್ಯವಿರುತ್ತದೆ.

ರೋಗಿಯಲ್ಲಿ ಜ್ವರದೊಂದಿಗೆ ಒಣ ಕೆಮ್ಮು ಕಾಣಿಸಿಕೊಂಡರೆ ಇದು ಕೋವಿಡ್ – 19 ರ ಲಕ್ಷಣವಾಗಿರಬಹುದು. ಇವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಶೀಘ್ರವಾಗಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯಕೀಯ ನೆರವಿನ ಸಹಾಯವಾಣಿ ಅಥವಾ ಆಸ್ಪತ್ರೆಗೆ ದಾಖಲು ಮಾಡಬೇಕು.  ಜ್ವರವನ್ನು ಆಯುರ್ವೇದದಲ್ಲಿ ಒಂದು ಪ್ರಧಾನ ರೋಗವಾಗಿ ಪರಿಗಣಿಸಿದ್ದು ಸೂಕ್ತ ಚಿಕಿತ್ಸೆ ಮಾಡದಿದ್ದಲ್ಲಿ ಇದು ಇತರ ರೋಗಗಳಿಗೆ ಕಾರಣವಾಗುತ್ತದೆ.

ಜ್ವರದ ಚಿಕಿತ್ಸೆಗೆ ಔಷಧಿಗಳೊಂದಿಗೆ, ಆಹಾರ ಹಾಗು ದಿನಚರಿಯು ಬಹು ಮುಖ್ಯ ಪಾತ್ರ ವಹಿಸುತ್ತದೆ. ಜ್ವರಕ್ಕೆ ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರಕದಿದ್ದಲ್ಲಿ ಪ್ರಾಣಕ್ಕೆ ಸಂಚಕಾರ ತರಬಹುದು. ಇಂದಿನ ಕೋವಿಡ್ನಂತಹ ಸಮಯದಲ್ಲಿ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಜ್ವರಕ್ಕೆ ಮೇಲೆ ಹೇಳಿದ ಮನೆ ಔಷಧಿಯನ್ನು ಅನುಸರಿಸಿದಲ್ಲಿ ಜ್ವರವನ್ನು ಆರಂಭದ ಹಂತದಲ್ಲೇ ವಾಸಿಮಾಡಬಹುದು.        

ವಿ.ಸೂ : ಜ್ವರಕ್ಕೆ ಕಾರಣವಾಗಿರುವ ಅಂಶಗಳನ್ನು ಅರಿತು ಸೂಕ್ತ ಚಿಕಿತ್ಸೆಯನ್ನು ನೀಡಲು ತಜ್ಞ ವೈದ್ಯರ ಅಗತ್ಯವಿದ್ದು ಮೇಲಿನ ಮಾಹಿತಿ ಕೇವಲ ನಿಮ್ಮ ತಿಳುವಳಿಕೆಗೆ ಹೊರತು ಇದು ಸೂಕ್ತ ಚಿಕಿತ್ಸೆ ಹಾಗು ವೈದ್ಯರ ಸಲಹೆಗೆ ಪರ್ಯಾಯವಲ್ಲ. ಜ್ವರದ ಚಿಕಿತ್ಸೆಗೆ ತಜ್ಞ ವೈದ್ಯರ ಭೇಟಿ ಅಗತ್ಯವಿದ್ದು ವೈದ್ಯರ ಮಾರ್ಗದರ್ಶನದಂತೆ ನಡೆಯಬೇಕು.  

ಡಾ. ಚೈತನ್ಯ ಕೆ.ಎಸ್ ಆಯುರ್ವೇದ ವೈದ್ಯರು +919945850945

Share With Your Friends