fbpx
+919945850945

ಶರೀರದೊಳಗಿನ ಸೂರ್ಯ ‘ಪಿತ್ತ’

ಶರೀರದೊಳಗಿನ ಸೂರ್ಯ ‘ಪಿತ್ತ’

sun

“ನ ಖಲು ಪಿತ್ತವ್ಯತಿರೇಕಾದನೋsಗ್ನಿರುಪಲಭ್ಯತೇ॥”
                                                                           (ಸುಶ್ರುತ)
“ಪಿತ್ತಾದೃತೇ ನ ಪಾಕಃ॥”
                       (ಸುಶ್ರುತ)
ಪಿತ್ತವಲ್ಲದ ಇನ್ನಾವುದೇ ಅಗ್ನಿ (ಉಷ್ಣತೆ) ದೇಹದಲ್ಲಿ ದೊರಕದು. ಪಿತ್ತವಿಲ್ಲದೇ ದೇಹದ ಯಾವುದೇ ಪಾಕಕ್ರಿಯೆ ನಡೆಯದು. ಶ್ರೀಕೃಷ್ಣನೇ ಅಗ್ನಿಯ ಸ್ವರೂಪದಲ್ಲಿ ದೇಹದಲ್ಲಿದ್ದು ಅನ್ನಪಾಕ ಕ್ರಿಯೆಯನ್ನು ಮಾಡುತ್ತಾನಂತೆ.
“ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂದೇಹ ಮಾಶ್ರಿತಃ।
ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ ॥” 
ವೈಶ್ವಾನರನಾಗಿ ಪ್ರಾಣಿಗಳ ದೇಹದಲ್ಲಿದ್ದು ಪಾನ- ಅಪಾನಗಳೊಂದಿಗೆ ಕೂಡಿ ನಾನೇ ಚತುರ್ವಿಧ ಅನ್ನವನ್ನು ಪಾಕ ಮಾಡುತ್ತೇನೆ. (ಭಕ್ಷ್ಯ, ಭೋಜ್ಯ, ಲೇಹ್ಯ,ಪೇಯಗಳೆಂಬ ಚತುರ್ವಿಧವಾದ ಅನ್ನ). ಈ ಅಗ್ನಿ ಒಟ್ಟು ೧೩ ಪ್ರಕಾರದಲ್ಲಿರುತ್ತದೆ.
  • ಪಾಚಕಾಗ್ನಿ ೧,
  • ಧಾತ್ವಗ್ನಿ ೭, (ರಸ, ರಕ್ತ, ಮಾಂಸ, ಮೇದಸ, ಅಸ್ಥಿ, ಮಜ್ಜಾ, ಶುಕ್ರ ಅಗ್ನಿಗಳು)
  • ಭೂತಾಗ್ನಿ ೫ ( ಪೃಥ್ವಿ, ಆಪ, ವಾಯು, ತೇಜಸ, ಆಕಾಶ ಅಗ್ನಿಗಳು) ಹೀಗಿರುವ ಅಗ್ನಿಗೆ ಆಧಾರವೇ ಶರೀರ ಸ್ಥಿತ ಪಿತ್ತ, ಪಿತ್ತಂ ‘ತಪ ಸಂತಾಪೇ’ ಎಂಬ ಶಬ್ದೋತ್ಪತ್ತಿ ಹೊಂದಿದ ಈ ದೋಷ ಶರೀರದ ಉಷ್ಣತೆಯ ಮೂಲ ಕಾರಣವಾಗಿದೆ ಎಂಬರ್ಥವನ್ನು ಸೂಚಿಸುತ್ತದೆ.

ಪಿತ್ತದ ಕರ್ಮ ಗುಣಗಳು :

“ಪಿತ್ತಂ ಸಸ್ನೇಹ ತೀಕ್ಷ್ಣೋಷ್ಣಂ ಲಘು ವಿಸ್ರಂ ಸರಂ ದ್ರವಂ।”
                                                        (ಅ. ಹೃ. ಸೂ.೧)
ಕಿಂಚಿತ್ ಸ್ನಿಗ್ಧ ಗುಣ, ತೀಕ್ಣ, ಉಷ್ಣ, ಲಘು, ದುರ್ಗಂಧ, ದ್ರವ, ಹರಿಯುವ ಗುಣ ಇವು ಪಿತ್ತದ ಗುಣಗಳಾದರೆ ಪಿತ್ತದ ಕಾರ್ಯಗಳು
“…………..ಪಿತ್ತಂ ಪ್ರಕ್ತ್ಯೂಷ್ಮದರ್ಶನೈಃ ॥೩॥
ಕ್ಷುತ್ರ್ಯಡ್ ರುಚಿಪ್ರಭಾ ಮೇಧಾ ಧೀ ಶೌರ್ಯತನು ಮಾರ್ದವೈಃ।”
                                                                (ಅ. ಹೃ. ಸೂ.೧೧)
ಪಾಕಕ್ರಿಯೆ, ಉಷ್ಣತೆ, ದೃಷ್ಟಿ, ಹಸಿವೆ,ನೀರಡಿಕೆಗಳು, ರುಚಿ, ಕಾಂತಿ, ಬುದ್ಧಿಶಕ್ತಿ, ಜ್ಞಾನಧಾರಣೆ, ಪೌರುಷ ಹಾಗೂ ಶರೀರ ಮಾರ್ದವತೆ ಇವು.
ವಿವಿಧ ಪಾಕ ಕ್ರಿಯೆಗಳಿಗೆ ಕಾರಣವಾದ ದ್ರವ ಸ್ವರೂಪದ, ಉಷ್ಣ, ತೀಕ್ಷ್ಣ, ಲಘು,ಸ್ನಿಗ್ಧಗುಣಗಳೊಂದಿಗೆ ಶರೀರದ ಸರ್ವ ಸ್ರಾವಗಳೂ ಸಾಮಾನ್ಯವಾಗಿ ಪಿತ್ತದ ಪ್ರಕಾರಗಳೆನ್ನಬಹುದಾಗಿದೆ.
ಪಿತ್ತದ ಸ್ಥಾನಃ “ಪಿತ್ತಂ ತು ಸ್ವೇದ ರಕ್ತಯೋಃ॥”  ಧಾತು, ಮಲಗಳಲ್ಲಿ ಪಿತ್ತದ ಸ್ಥಾನ ಸ್ವೇದ ರಕ್ತಗಳು. ಇತರ ಸ್ಥಾನಗಳನ್ನು ಹೀಗೆ ವರ್ಣಿಸಿದ್ದಾರೆ-
” ನಾಭಿರಾಮಾಶಯಃ ಸ್ವೇದೋ ಲಸೀಕಾ ರುಧಿರಂ ರಸಃ।
ದೃಕ್ ಸ್ಪರ್ಶನಂ ಪಿತ್ತಸ್ಯ ನಾಭಿರತ್ರ ವಿಶೇಷತಃ।”
ನಾಭಿ, ಜಠರ, ಬೆವರು, ಲಸೀಕಾ, ರಕ್ತ, ರಸಧಾತು, ದೃಷ್ಟಿ, ತ್ವಚೆ ಇವು ಪಿತ್ತದ ಸ್ಥಾನಗಳಾದರೆ ವಿಶೇಷ ಸ್ಥಾನ ನಾಭಿಯೇ ಆಗಿದೆ.
stomach

ಪಿತ್ತವೃದ್ಧಿ ಲಕ್ಷಣಗಳು:

“ಪೀತ ವಿಣ್ಮೂತ್ರ ನೇತ್ರ ತ್ವಕ್ಕ ಕ್ಷುತ ತೃಡ್ ದಾಹಾಲ್ಪನಿದ್ರತಾಃ॥”
ದೇಹದಲ್ಲಿ ಪಿತ್ತ ಹೆಚ್ಚಾದಲ್ಲಿ ಮಲ, ಮೂತ್ರಗಳು ಹಳದಿಯಾಗುವಿಕೆ, ನೇತ್ರ, ಚರ್ಮಗಳು ಹಳದಿಯಾಗುವಿಕೆ, ಹಸಿವೆ, ನೀರಡಿಕೆ, ಉರಿ ಹೆಚ್ಚಾಗಿ ನಿದ್ರೆ ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತವೆ.
 

ಪಿತ್ತಕ್ಷಯವಾದಾಗ:

“ಪಿತ್ತೇ ಮಂದೋsನಲಃ ಶೀತಂ ಪ್ರಭಾಹಾನಿಃ॥”

ಪಿತ್ತಕ್ಷೀಣವಾದರೆ, ಹಸಿವೆ ಕಡಿಮೆ, ಚಳಿ ಹಾಗೂ ದೇಹದ ಕಾಂತಿ ಹೀನತೆ ಇವು ಪರಿಣಾಮ.

ಪಿತ್ತದ ಕರ್ಮಗಳು: (ದೋಷಾವಸ್ಥೆಯಲ್ಲಿ)

“……………….ಪಿತ್ತಸ್ಯದಾಹರಾಗೋಷ್ಣಪಾಕಿತಾಃ ॥೫೧॥

ಸ್ವೇದ ಕ್ಲೇದಃ ಸ್ರುತಿಃ ಕೋಥಃ ಸದನಂ ಮೂರ್ಧನಂ ಮದಃ ಕಟುಕಾಮ್ಲೌರಸೌ ವರ್ಣಃ ಪಾಂಡುರಾರುಣವರ್ಜಿತಃ ॥೫೨॥”

  • ಉರಿ,
  • ಕೆಂಪುಬಣ್ಣ,
  • ಉಷ್ಣತ್ವ,
  • ಪಾಕಕ್ರಿಯೆ,
  • ಬೆವರು,
  • ಕ್ಲೇದವೃದ್ಧಿ,
  • ಸ್ರಾವ,
  • ಕೊಳೆಯುವಿಕೆ,
  • ದೇಹಶೈಥಿಲ್ಯ,
  • ಮೂರ್ಛೆ,
  • ಮದ,
  • ಖಾರ, ಹುಳಿ ರುಚಿಗಳು,
  • ಪಾಂಡು, ಅರುಣವರ್ಣ ಬಿಟ್ಟು ಉಳಿದ ಎಲ್ಲಾ ವರ್ಣಗಳು ಪಿತ್ತದಿಂದಲೇ ಉಂಟಾಗುವ ಕರ್ಮಗಳು.

ಈ ಮೇಲ್ಕಂಡ ಪರಿಣಾಮಗಳನ್ನು ಕಂಡು ಇದು ದೋಷರೂಪೀ ಪಿತ್ತದ ಕಾರ್ಯವೆಂದು ಗುರುತಿಸಬಹುದಾಗಿದೆ.

fire

ಪಿತ್ತದ ೫ ಪ್ರಕಾರಗಳು:

 
೧) ಪಾಚಕ ಪಿತ್ತ:
            “ತತ್ರ ಪಕ್ವಾಮಾಶಯ ಮಧ್ಯಗಂ
             ಪಂಚಭೂತಾತ್ಮಕತ್ವೇsಪಿ ಯತ್ತೈಜಸ ಗುಣೋದಯಾತ್ ॥೨೦॥
             ತ್ಯಕ್ತದ್ರವತ್ವಂ ಪಾಕಾದಿ ಕರ್ಮಣಾsನಲಶಬ್ದಿತಂ।
             ಪಚತ್ಯನ್ನಂ ವಿಭಜತೇ ಸಾರಕಿಟ್ಟೌಪೃಥಕ್ ತಥಾ ॥೨೨॥
             ತತ್ರಸ್ಥಮೇವ ಪಿತ್ತಾನಾಂ ಶೇಷಾಣಾಮಪ್ಯನುಗ್ರಹಂ ।
             ಕರೋತಿ ಬಲದಾನೇನ ಪಾಚಕಂ ನಾಮತತ್ ಸ್ಮೃತಂ ॥೨೩॥” (ಅ. ಹೃ. ಸೂ. ೧೨)
  • ಪಕ್ವಾಶಯ, ಆಮಾಶಯಗಳ ನಡುವೆ ಸ್ಥಿತವಾದದ್ದು.
  • ಪಂಚಭೂತಾತ್ಮಕವಾದರೂ ತೇಜೋಗುಣ ಅಧಿಕವಾದ್ದರಿಂದ ದ್ರವಗುಣಗಳನ್ನು ಬಿಟ್ಟು ಪಾಕಕರ್ಮವನ್ನು ಮಾಡುವುದರಿಂದ  “ಅಗ್ನಿ” ಎಂದು ಕರೆಸಿಕೊಂಡಿದೆ.
  • ಅನ್ನದ ಪಾಚನ ಕಾರ್ಯದೊಂದಿಗೆ ಅದನ್ನು ಸಾರಭಾಗ , ಮಲಭಾಗ  ವಿಭಜಿಸುವ ಕಾರ್ಯವೂ ಪಿತ್ತದ್ದೇ ಆಗಿದೆ.
  • ಇನ್ನಿತರ ಪಿತ್ತಗಳಿಗೆ ಬಲವನ್ನು ಕೊಡುವುದು ಇದೇ ಪಿತ್ತ.
  • ಕಾರ್ಯವನ್ನು ಗಮನಿಸಿ ಇದಕ್ಕೆ ಬಂದ ಹೆಸರು ಪಾಚಕ ಪಿತ್ತ.
 

೨) ರಂಜಕ ಪಿತ್ತ:

“ಅಮಾಶಯಾಶ್ರಯಂ ಪಿತ್ತಂ ರಂಜಕಂ ರಸರಂಜನಾಥ್।” (ಅ. ಹೃ.ಸೂ.೧೨) 

ಅಮಾಶಯವನ್ನು ಆಶ್ರಯಿಸಿರುವ  ಈ ಪಿತ್ತ ರಸಕ್ಕೆ ಬಣ್ಣವನ್ನು ಕೊಡುವುದರಿಂದ ರಂಜಕ ಪಿತ್ತವೆಂದು ಹೆಸರು.

 

೩) ಸಾಧಕ ಪಿತ್ತ:

“ಬುದ್ಧಿಮೇಧಾಭಿಮಾನಾದ್ಯೈರಭಿಪ್ರೇತಾರ್ಥಸಾಧನಾತ್” ॥೧೩॥ ( ಅ. ಹೃ. ಸೂ. ೧೩)

‘ಸಾಧಕಂ ಹೃದ್ಗತಂ ಪಿತ್ತಂ’

  • ಹೃದಯದಲ್ಲಿ  ಸ್ಥಿತವಾದ ಪಿತ್ತ,
  • ಬುದ್ಧಿ, ಮೇಧಾ, ಅಭಿಮಾನಾದಿಗಳಿಂದ ಅಭಿಪ್ರಾಯ ಅರಿಯುವಲ್ಲಿ ಸಾಧಕವಾದ ಪಿತ್ತ.
 

೪) ಆಲೋಚಕ ಪಿತ್ತ:

” ರೂಪಾ ಲೋಚನತಃ ಸ್ಮೃತಂ । ದೃಕ್ಸ್ಥಂ ಆಲೋಚಕಂ ॥”
ರೂಪಗ್ರಹಣ ಶಕ್ತಿಗೆ ಕಾರಣವಾಗುವ ಪಿತ್ತಕ್ಕೆ ಆಲೋಚಕ ಪಿತ್ತ ಎಂದು ಹೆಸರು.
 

೫) ಭ್ರಾಜಕ ಪಿತ್ತ: 

“ತ್ವಕ್ ಸ್ಥಂ ಭ್ರಾಜಕಂ ಭ್ರಾಜನಾತ್ತ್ವಚಃ ॥೧೪॥” (ಅ. ಹೃ. ಸೂ.೧೨)
ತ್ವಚೆಯ ಕಾಂತಿ ವರ್ಧಕವಾದ ಕಾರಣ ಇದಕ್ಕೆ ಭ್ರಾಜಕ ಪಿತ್ತವೆಂದು ಹೆಸರು.
 

ಪಿತ್ತವೃದ್ಧಿಗೆ ಚಿಕಿತ್ಸೆ:

       “ಪಿತ್ತಸ್ಯ ಸರ್ಪಿಷಃ ಪಾನಂ ಸ್ವಾದು ಶೀತೈರ್ವಿರೇಚನಂ।
         ಸ್ವಾಸುತಿಕ್ತಕಷಾಯಾಣಿ ಭೋಜನಾನ್ಯೌಷಧಾನಿ ಚ ॥೪॥
         ಸುಗಂಧಿಶೀತ ಹೃದ್ಯಾನಾಂ ಗಂಧಾನಾಮುಪಸೇವನಂ।
         ಕಂಟೇ ಗುಣಾನಾಂ ಹಾರಾಣಾಂ ಮಾಣೀನಾ ಮುರಸಾಧೃತಿಃ॥೫॥
          ಕರ್ಪೂರ ಚಂದನೋ ಶೀರೈರನುಲೇಪಃ ಕ್ಷಣೇ ಕ್ಷಣೇ।
         ಪ್ರದೋಷಶ್ಚಂದ್ರಮಾಃ ಸೌಧಂ ಹಾರಿಗೀತ  ಹಿಮೋನಿಲಃ॥೬॥
         ಆಯಂತ್ರಣ ಸುಖಂ ಮಿತ್ರಂ ಪುತ್ರಃ ಸಂಧಿಗ್ಧಮುಗ್ಧವಾಕ್।
         ಛಂದಾನುವರ್ತಿನೋ ದಾರಾ: ಪ್ರಿಯಾ: ಶೀಲವಿಭೂಷಿತಾಃ॥೭॥
         ಶೀತಾಂಬುಧಾರಾ ಗರ್ಭಾಣಿ ಗೃಹಾಣ್ಯುದ್ಯಾನ ದೀರ್ಘಿಕಾಃ।
         ಸುತೀರ್ಥ ವಿಫುಲಸ್ವಚ್ಛಸಲಿಲಾಶಯ ಸೈಕತೇ॥೮॥
         ಸಾಂಭೋಜ ಜಲತೀರಾಂತೇ  ಕಯಮಾನೇದ್ರುಮಾಕುಲೇ।
         ಸೌಮ್ಯಭಾವಾಃ ಪಯಃ ಸರ್ಪಿರ್ವಿರೇಕಶ್ಚವಿಶೇಷತಃ॥೯॥”
                                          (ದೋಷೋಪಕ್ರಮಣೀಯಾಧ್ಯಾಯಃ) (ಅ. ಹೃ. ಸೂ.೧೩)
 
  • ಪಿತ್ತಕ್ಕೆ ಘೃತವಾದ ಹಾಗೂ ಮಧುರ ಶೀತದ್ರವ್ಯಗಳಿಂದ ವಿರೇಚನ ಕರ್ಮ,
  • ಸಿಹಿ, ಕಹಿ, ಒಗರು ರುಚಿಯ ಭೋಜನ ಹಾಗೂ ಔಷಧಗಳು,
  • ಸುಗಂಧಿ, ಶೀತ, ಹೃದ್ಯ ಗುಣಗಳುಳ್ಳ ಗಂಧಗಳ ಸೇವನೆ,
  • ಗುಣಯುಕ್ತಹಾರ, ಮಣಿಗಳ ಧಾರಣೆ,
  • ಕರ್ಪೂರ, ಶ್ರೀಗಂಧ, ಲಾವಂಚಗಳ ಪುನಃ ಪುನಃ ಲೇಪ,
  • ಪ್ರದೋಷಕಾಲದಲ್ಲಿ ಅಟ್ಟದ ಮೇಲೆ ತಣ್ಣನೆ ಗಾಳಿ, ಸುಮಧುರ ಸಂಗೀತ ಶ್ರವಣ,
  • ಮನಸ್ಸಿಗೆ ಹಿತಕೊಡುವ ಮಿತ್ರರ ಸಹವಾಸ,
  • ಮುಗ್ಧ, ಸಂದಿಗ್ಧ ಶಬ್ಧಗಳಿಂದ ಮುದಕೊಡುವ ಚಿಕ್ಕ ಮಕ್ಕಳ ಸಾಮೀಪ್ಯ,
  • ಶೀಲವಂತರಾದ, ಮನೋನುಕೂಲರಾದ ಹೆಂಡತಿಯರ ಸಾನ್ನಿಧ್ಯ,
  • ತಣ್ಣೀರಿನ ಜಲಧಾರೆ ಹರಿಸುವ ಯಂತ್ರಗಳ ಉಪಸ್ಥಿತಿ,
  • ಕಾಲುವೆ, ಉದ್ಯಾನಗಳ ನಡುವೆ ಇರುವ ಮನೆಗಳಲ್ಲಿ ವಾಸ,
  • ಒಳ್ಳೆಯ, ಸ್ವಚ್ಛ ವಿಫುಲವಾದ ನೀರುಳ್ಳ ಜಲಾಶಯ, ಉಸುಕುಳ್ಳ ಪ್ರದೇಶಗಳಲ್ಲಿ ಕಮಲಗಳು ಕಂಡುಬರುವ ಸರೋವರದ ತೀರದಲ್ಲಿ ಹುಲ್ಲಿನಿಂದ ರಚಿತವಾದ ಕುಟೀರದಲ್ಲಿ ನಿವಾಸ,
  • ಹೀಗೆ ಅನೇಕ ರೀತಿಯ ಸೌಮ್ಯ ಭಾವಗಳು ಪಿತ್ತಕ್ಕೆ ಉತ್ತಮ ಚಿಕಿತ್ಸೆ,
  • ವಿಶೇಷವಾಗಿ ಘೃತ ಸೇವನೆ ಹಾಗೂ ವಿರೇಚನ ಕರ್ಮ ಮುಖ್ಯವಾದ ಚಿಕಿತ್ಸೆ.
 “ಪಿತ್ತ” ಬುದ್ಧಿ, ಮೇಧಾ, ಶೌರ್ಯ, ಅಭಿಮಾನಗಳಿಗೆ ಕಾರಣವಾದ್ದರಿಂದ ಪಿತ್ತ ಪ್ರಕೋಪದಲ್ಲಿ ಮನಸ್ಸಿಗೆ ಉಲ್ಲಾಸಕರವೆನಿಸುವ ಎಲ್ಲಾ ಕ್ರಮಗಳು ಪಿತ್ತ ಶಾಮಕವೆಂಬುದು ಇಲ್ಲಿಯ ತಾತ್ಪರ್ಯ.
ಪಿತ್ತ ಪ್ರಧಾನವಾದ ವ್ಯಾಧಿಗಳಾದ ಜ್ವರ, ರಕ್ತಸ್ರಾವ, ಸರ್ಪಸುತ್ತು, ರಕ್ತಾರ್ಶಸ್,ಭ್ರಮ, ಮೂರ್ಛಾ, ವಾತರಕ್ತ ಮುಂತಾದ ವ್ಯಾಧಿಗಳಲ್ಲಿ ಮನಸ್ಸಿಗೆ ಅನುಕೂಲಕರವಾದ ವಾತವರಣ ಅತ್ಯವಶ್ಯಕ ಎಂಬುದು ಇಲ್ಲಿ ವಿದಿತವಾಗುತ್ತದೆ. ಪಿತ್ತ ಶಾಮಕವಾದ ಮೇಲಿನ ವಾಗ್ಭಟೋಕ್ತ ಉಪಾಯಗಳು ಉತ್ತಮವಾದ ಬೇಸಿಗೆ ಆರೋಗ್ಯ ಕೇಂದ್ರಗಳಿಗೆ (Summer Health Resort) ಮಾರ್ಗದರ್ಶಕವೋ ಎಂಬಂತಿದೆ. ಬೇಸಿಗೆಯ ಋತುಚರ್ಯೆಯ ವರ್ಣನೆಯಲ್ಲಿಯೂ ಮೇಲಿನಂತೆಯೇ ಅತ್ಯುಪಯುಕ್ತವಾದ ಮಾಹಿತಿ ಲಭ್ಯ.

Share With Your Friends

Leave a Comment