fbpx
+919945850945

ರೋಗೋತ್ಪತ್ತಿಯಲ್ಲಿ ತ್ರಿದೋಷಗಳ ಪಾತ್ರ

ರೋಗೋತ್ಪತ್ತಿಯಲ್ಲಿ ತ್ರಿದೋಷಗಳ ಪಾತ್ರ

vata-pitta-kapha
ಎಲ್ಲಾ ರೋಗಗಳಿಗೂ ಕಾರಣ ಕುಪಿತವಾದ ತ್ರಿದೋಷಗಳು. ತ್ರಿದೋಷಗಳ ಪ್ರಕೋಪಕ್ಕೆ ವಿವಿಧ ರೀತಿಯ ಅಹಿತ ಸೇವನೆಯೇ ಕಾರಣ ಎನ್ನುವುದು ಆಯುರ್ವೇದದ ಸಿದ್ಧಾಂತ.
” ಸರ್ವೇಷಾಮೇವ ರೋಗಾಣಾಂ ನಿದಾನಾಂ ಕುಪಿತ ಮಾಲಾಃ ।।೧೨॥
ತತ್ಪ್ರಕೋಪಸ್ಯ ತು ಪ್ರೋಕ್ತಂ ವಿವಿಧಾಹಿತ ಸೇವನಂ ॥” (ಅ. ಹೃ. ನಿ. ೧-೧೨ )
ಇಲ್ಲಿ ದೋಷಗಳಿಗೆ  “ಮಲ” ಶಬ್ದವನ್ನು ಬಳಸಿರುವುದರಿಂದ  ಇವು ದೇಹ ಮಾಲಿನ್ಯಕಾರಕ  ಹಾಗೂ ಇವುಗಳನ್ನು ಸಂಪೂರ್ಣ ಹೊರಹಾಕುವುದೇ ಚಿಕಿತ್ಸೆ ಎಂಬ ಸೂಚ್ಯಾರ್ಥ ಇಲ್ಲಿ ಕಾಣುತ್ತದೆ. ಈ ರೀತಿಯ ಅಹಿತ ಸೇವನೆಗೆ  ಪುನಃ ೩ ಕಾರಣಗಳು.

೧) ಅಸಾತ್ಮ್ಯೇಂದ್ರಿಯಾರ್ಥ ಸಂಯೋಗ :

ಅಭ್ಯಾಸವಿರದ ಅಥವಾ ದೇಹಾರೋಗ್ಯಕ್ಕೆ ಮಾರಕವೆನಿಸುವ ಇಂದ್ರಿಯಾರ್ಥಗಳೊಂದಿಗೆ  ಇಂದ್ರಿಯಗಳ  ಸಂಯೋಗ. ಉದಾ : ಅತಿ ಸಿಹಿ, ಹುಳಿ, ಖಾರ, ಉಪ್ಪು, ಕಹಿ , ಒಗರು ರಸಗಳ ಸೇವನೆ ಅತಿಯೋಗವಾದರೆ, ಒಂದೇ ರುಚಿಯ ಆಹಾರದ ಅಧಿಕ ಸೇವನೆ. ಉಳಿದ ರಸಗಳ ವರ್ಜನೆ ಇದು ಅಯೋಗವಾಗುತ್ತದೆ. ರುಚಿಕೆಟ್ಟ, ಹಳಸಿದ , ಹಾಳಾದ , ಅಭ್ಯಾಸವಿರದ ಪದಾರ್ಥಗಳ ಸೇವನೆ ಮಿಥ್ಯಾಯೋಗವೆನಿಸುತ್ತದೆ. ಇದು ನಾಲಿಗೆ ( ರಸನೇಂದ್ರಿಯದ ) ಯಿಂದಾದ ಆಸ್ಮ್ಯಾತೇಂದ್ರಿಯಾರ್ಥ ಸಂಯೋಗ. ಇದೇ ರೀತಿ ಉಳಿದ ಇಂದ್ರಿಯಗಳ ಅತಿಯೋಗ, ಅಯೋಗ, ಮಿಥ್ಯಾಯೋಗಗಳು ಅಹಿತ ಸೇವನೆಯಿಂದ ದೋಷ ಪ್ರಕೋಪಕ್ಕೆ ಕಾರಣವಾಗುತ್ತದೆ ಹಾಗೂ ರೋಗೋತ್ಪತ್ತಿಯ ಒಂದು  ಪ್ರಕಾರವಾಗಿದೆ.

೨) ಪ್ರಜ್ಞಾಪರಾಧ :

ಬುದ್ಧಿಶಕ್ತಿ, ಧಾರಣಶಕ್ತಿ ಹಾಗೂ ಸ್ಮರಣ ಶಕ್ತಿಗಳ ಹಾಳಾಗುವಿಕೆಯಿಂದ ಉಂಟಾದ ತಪ್ಪುಗಳೇ ಪ್ರಜ್ಞಾಪರಾಧ. ಇವು ಪುನಃ ೩ ಪ್ರಕಾರ.
೧. ಹಾಲು, ಮೊಸರಿನ ಮಿಶ್ರ ಸೇವನೆ ಪ್ರಮೇಹಕಾರಕ ಎಂಬ ತಿಳುವಳಿಕೆಯಿಲ್ಲದೆ ಮಾಡಿದ ತಪ್ಪು ಧೀಭ್ರಷ್ಟತೆ (ಬುದ್ಧಿಶಕ್ತಿ ಇರದೆ) ಯಿಂದಾಗಿ ಬರುವ ತೊಂದರೆಗಳಿಗೆ ಕಾರಣ.
೨. ತಿಳಿದಿದೆ ಆದರೆ ಅದು ಎದುರಿಗಿರುವಾಗ ತಡೆಯಲಾರೆನೆಂದು ತಿನ್ನುವುದು ಧಾರಣ  ಶಕ್ತಿಯ ದೋಷ.
೩. ತಿಳಿದಿದೆ, ತಡೆಯಲೂ ಬಲ್ಲೆ . ಆದರೆ, ಮರೆತು ತಿಂದು ರೋಗ ತಂದುಕೊಳ್ಳುವುದು  ಸ್ಮರಣ ಶಕ್ತಿಯ ದೋಷದಿಂದಾಗಿ ಉಂಟಾಗುವ ತೊಂದರೆಗಳಿಗೆ ಕಾರಣ. ಹೀಗೆ, ” ಧೀಧೃತಿ ಸ್ಮೃತಿ ವಿಭ್ರಷ್ಟಃ ಕರ್ಮಯತ್ ಕುರುತೇ ಅಶುಭಂ ಪ್ರಜ್ಞಾಪರಾಧಂ ತಂ ವಿದ್ಯಾತ್ ॥” ಎಂಬುದು ಎರಡನೆಯ  ಪ್ರಧಾನ ರೋಗ ಕಾರಣವಾಗಿದೆ.

೩) ಪರಿಣಾಮ:

ವೃದ್ಧಾಪ್ಯ  ಜನ್ಯ, ಋತುವಿಕೋಪ ಜನ್ಯ, ವಿದ್ಯುದಶನಿ ಆಘಾತ ಜನ್ಯ ಕಾರಣಗಳು. ಬಾಹ್ಯ ಕಾರಣಗಳಿಂದಾಗಿ  ದೇಹದಲ್ಲಾಗುವ ತೊಂದರೆಗಳು ಇಲ್ಲಿ ಸೇರಿವೆ.
ವಾತಾದಿ ತ್ರಿದೋಷಗಳ  ಪ್ರಕೋಪಕ್ಕೆ ಕಾರಣವಾದ ಅಹಿತ ಸೇವನೆಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಅ) ವಾತದೋಷ :

“ತಿಕ್ತೋಷಣ ಕಷಾಯಾಲ್ಪರೂಕ್ಷಪ್ರಮಿತ ಭೋಜನೈಃ ।
ಧಾರಣೋದೀರಣ ನಿಶಾ ಜಾಗರೂತ್ಯುಚ್ಛ ಭಾಷಣೈಃ ॥೧೪॥
ಕ್ರಿಯಾತಿಯೋಗ ಭಿಶೋಕ ಚಿಂತಾವ್ಯಾಯಾಮಮಮೈಥುನೈಃ ।
ಗ್ರೀಷ್ಮೋಹೋರಾತ್ರಿ ಭುಕ್ತಾಂತೇ ಪ್ರಕುಪ್ಯತಿ ಸಮೀರಣಃ॥೧೫॥” 
 • ಕಹಿ, ಖಾರ, ಒಗರು, ಒಣ ಸ್ವಭಾವದ ಭೋಜನ,
 • ಅಲ್ಪಾಹಾರ ಸೇವನೆ,
 • ಶರೀರದ ಸಹಜ ಪ್ರವೃತ್ತಿಗಳ ತಡೆ ಅಥವಾ ಪ್ರೇರೇಪಣೆ,
 • ರಾತ್ರಿ ಜಾಗರಣೆ ,
 • ಅತ್ಯುಚ್ಛ ಭಾಷಣ,
 • ಪಂಚಕರ್ಮದ ಅತಿಯೋಗ,
 • ಭಯ,
 • ಶೋಕ,
 • ಚಿಂತೆ,
 • ಅತಿವ್ಯಾಯಾಮ,
 • ಅತಿ ಮೈಥುನ ಕರ್ಮ,
 • ಗ್ರೀಷ್ಮ ಕಾಲದಲ್ಲಿ ,
 • ಹಗಲು-ರಾತ್ರಿಗಳ ಕೊನೆಯ ಭಾಗ,
 • ಆಹಾರ ಜೀರ್ಣಾವಸ್ಥೆಯ ಕೊನೆಭಾಗದಲ್ಲಿ ವಾತದೋಷದ ಪ್ರಕೋಪ ಉಂಟಾಗುತ್ತದೆ.
) “ಪಿತ್ತಂ ಕಟ್ವಮ್ಲತೀಕ್ಷ್ಣೋಷ್ಣ ಪಟುಕ್ರೋಧ ವಿದಹಿಭಿಃ ।
        ಶರನ್ಮಧ್ಯಾಹ್ನ ರಾತ್ರ್ಯರ್ಧ ವಿದಾಹ ಸಮಯೇಷು ಚ ॥೧೬॥”
 • ಖಾರ, ಹುಳಿ, ತೀಕ್ಷ್ಣ, ಉಷ್ಣ ,ಲವಣ ಗುಣದಿಂದ ಕೂಡಿದ ಆಹಾರ
 • ಸಿಟ್ಟು
 • ಕರಿದ ಪದಾರ್ಥ
 • ಶರದ್ ಋತು
 • ಮಧ್ಯಾಹ್ನ ಕಾಲ
 • ರಾತ್ರಿಯ ಮಧ್ಯ ಕಾಲ
 • ಆಹಾರ ಪಾಕವಾಗುವ ಸಮಯ

ಇವು ಪಿತ್ತದ ಕಾರಣಗಳು.

ಇ) ” ಸ್ವಾದ್ವಮ್ಲ ಲವಣಸ್ನಿಗ್ಧ ಗುರ್ವಭಿಷ್ಯಂದಿ ಶೀತಲೈ।
      ಆಸ್ಯ ಸ್ವಪ್ನ ಸುಖಾಜೀರ್ಣ ದಿವಾಸ್ವಪ್ತಾತಿಬೃಂಹಣ್ಯೇಃ ॥೧೭ ॥
      ಪ್ರಚ್ಛರ್ಧನಾದ್ಯಯೋಗೇನ ಭುಕ್ತ ಮಾತ್ರವಸಂತಯೋಃ।
      ಪೂರ್ವಾಹ್ನೇ ಪೂರ್ವರಾತ್ರೇಚ ಶ್ಲೇಷ್ಮಾ”
 • ಸಿಹಿ,
 • ಹುಳಿ,
 • ಉಪ್ಪು,
 • ಜಿಡ್ಡಿನ ಪದಾರ್ಥಗಳು,
 • ಅತಿನಿದ್ರೆ,
 • ಅತಿಸುಖ,
 • ವಾಂತಿಯ ತಡೆ,
 • ಊಟವಾದ ಕೂಡಲೇ,
 • ರಾತ್ರಿಯ ಮೊದಲ ಪ್ರಹರ,
 • ಪಚನಕ್ಕೆ ಜಡವಾದ ಪದಾರ್ಥಗಳು, *
 • ಸ್ರಂಸನವನ್ನುಂಟುಮಾಡುವ ( ಕ್ಲೇದವರ್ಧಕ) ಪದಾರ್ಥಗಳು,
 • ಶೀತಲ ಆಹಾರಗಳು,
 • ಅಜೀರ್ಣವಿರುವಾಗ ಆಹಾರ ಸೇವನೆ,
 • ಹಗಲು ನಿದ್ರೆ,
 • ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರ,
 • ವಸಂತ ಋತು,
 • ಬೆಳಗಿನ ಕಾಲ.
ಇವು ಕಫ ಪ್ರಕೋಪಕ್ಕೆ ಕಾರಣಗಳು.
ಈ) “ವಾತ ಪಿತ್ತ, ವಾತಕಫ, ಕಫಪಿತ್ತ- ದ್ವಂದ್ವಂತು ಸಂಕರಾತ್ ॥೪॥”
ದ್ವಂದ್ವ ದೋಷಗಳ ಪ್ರಕೋಪಕ್ಕೆ ಆಯಾ ದೋಷಕರ ನಿದಾನಗಳ ಸಂಯುಕ್ತ ಸೇವನೆ ಮಾತ್ರವಲ್ಲದೇ ಕೆಲವು ವಿಶಿಷ್ಟ ಕಾರಣಗಳು ನೇರವಾಗಿ ತ್ರಿದೋಷ ವರ್ಧಕವಾಗಿದೆ.
“ಮಿಶ್ರೀಭಾವಾತ್ ಸಮಸ್ತಾನಾಂ ಸನ್ನಿಪಾತಸ್ತಥಾಃ ಪುನಃ ॥
ಸಂಕೀರ್ಣಾಜೀರ್ಣಾ ವಿಷಮ ವಿರುದ್ಧಾಧ್ಯಶನಾದಿಭಿಃ ॥೧೯॥
ವ್ಯಾಪನ್ನ ಮದ್ಯ ಪಾನೀಯ ಶುಷ್ಕಶಾಕಾಮಮೂಲಕೈಃ ।
ಪಿಣ್ಯಾಕಮೃದ್ಯ ವಸುರಾ ಪೂತಿ ಶುಷ್ಕ ಕೃಷಾಮಿಷೈಃ ॥೨೦॥
ದೋಷ ತ್ರಯಕರೈಸ್ತೈಸ್ತೈಥಾಽನ್ನ ಪರಿವರ್ತನಾತ್ ।
ಋತೋರ್ದುಷ್ಟಾತ್ ಪುರೋವಾತಾತ್ ಗ್ರಹಾವೇಶಾದ್ವಿಷಾದ್ಗರಾತ್ ॥೨೧॥
ದುಷ್ಟಾನಾತ್ ಪರ್ವತಾ ಶ್ಲೇಷಾದ್ಗ್ರಹೈರ್ಜನ್ಮರ್ಕ್ಷಪೀಡನಾತ್ ।
ಮಿಥ್ಯಾಯೋಗಾಚ್ಛವಿವಿಧಾತ್ಪಾಪಾನಾಂ ಚ ನಿಷೇವಣಾತ್ ॥೨೨॥
ಸ್ತ್ರೀಣಾಂ ಪ್ರಸವ ವೈಷಮ್ಯಾತ್ತ ಥಾ ಮಿಥ್ಯೋಪಚಾರತಃ ।” (ಅ. ಹೃ. ಸರ್ವರೋಗ ನಿಧಾನ-೧ )
 • ಮಲಿನವಾದ ಆಹಾರ ಸೇವನೆ,
 • ಅಜೀರ್ಣವಿರುವಾಗ ಆಹಾರ ಸೇವನೆ,
 • ವಿಷಮ (Irregular) ರೀತಿಯಲ್ಲಿ ಆಹಾರ ಸೇವನೆ,
 • ವಿರುದ್ಧವಾದ ಆಹಾರಗಳ ಸೇವನೆ ( ಜೀರ್ಣವೂ ಆಗದೇ ಹೊರಗೂ ಹೋಗದೆ ರಕ್ತಗತವಾಗಿ ವಿಕೃತಿಯುಂಟುಮಾಡುವ ಸ್ವಭಾವದ ಆಹಾರ ಸೇವನೆ.)
 • ಹಾಳಾದ ಮದ್ಯಪಾನ,
 • ಒಣಗಿದ ತರಕಾರಿ,
 • ಹಸಿ ಮೂಲಂಗಿ,
 • ಎಳ್ಳಿನ ಹಿಂಡಿ,
 • ಮಣ್ಣು,
 • ಬಾರ್ಲಿಯಿಂದ ತಯಾರಿಸಿದ ಮದ್ಯ,
 • ಕೊಳೆತ, ಒಣಗಿದ, ಕೃಶ ಪ್ರಾಣಿಯ ಮಾಂಸ,
 • ಆಹಾರದಲ್ಲಿ ಬದಲಾವಣೆ,
 • ಋತುವಿಕೋಪ,
 • ಎದುರುಗಾಳಿ,
 • ಗ್ರಹಾವೇಶ,
 • ವಿಷಸೇವನೆ,
 • ಗರವಿಷ (ಕೈ ಮಸಗು ) ಸೇವನೆ,
 • ಹಾಳಾದ ಅನ್ನ,
 • ಪರ್ವತದ ಗಾಳಿಯ
 • ಸ್ಪರ್ಶ
 • ಗ್ರಹಗಳಿಂದ ಜನ್ಮನಕ್ಷತ್ರಕ್ಕೆ ಉಂಟಾಗುವ ಪೀಡೆ,
 • ವಿವಿಧ ಪಾಪಕರ್ಮಗಳು,
 • ಒಗ್ಗದ ಆಹಾರವಲ್ಲದ ವಿಷಮ ಸ್ವರೂಪದ ಆಹಾರ,
 • ಸ್ತ್ರೀಯರಲ್ಲಿ ಪ್ರಸವ ಕಾಲದಲ್ಲಿ ಉಂಟಾಗುವ ವಿಕಾರಗಳು ಹಾಗೂ
 • ಬಾಣಂತಿಗೆ  ಮಾಡುವ ತಪ್ಪು ಚಿಕಿತ್ಸಾ ಕ್ರಮಗಳು.

ಇವುಗಳಿಂದಾಗಿ ಸನ್ನಿಪಾತಜ ವಿಕಾರಗಳು ( ಮೂರು ದೋಷಗಳ ಪ್ರಕೋಪ) ಉಂಟಾಗಬಹುದಾಗಿದೆ.

ಆದರೆ, ಹೀಗೆ ಪ್ರಕುಪಿತವಾದ ದೋಷಗಳು ಶರೀರದ ವಿವಿಧ ಸ್ರೋತಸ್ಸುಗಳಲ್ಲಿ ಸಂಚರಿಸಿ ರಸರಕ್ತಾದಿ ಸಪ್ತ ಧಾತುಗಳಲ್ಲಿ ಎಲ್ಲಿ ಅಧಿಷ್ಠಾನ ಹೊಂದುವುದೋ ಅಲ್ಲಿ ರೋಗಗಳನ್ನು ಉಂಟು ಮಾಡುತ್ತವೆ. ಹೀಗೆ ವಿವಿಧ ಅಹಿತ ಸೇವನೆಯಿಂದ ದೋಷ ಪ್ರಕೋಪವಾಗುವ ವಿಧಾನ, ಪ್ರಕುಪಿತ ದೋಷಗಳು ದೇಹದಲ್ಲಿ ಸಂಚರಿಸಿದ ಮಾರ್ಗ ಹಾಗೂ ನಿಶ್ಚಿತ ಸ್ಥಾನದಲ್ಲಿ ಸಂಚಿತ ದೋಷಗಳು ರೋಗೋತ್ಪತ್ತಿ ಮಾಡುವವರೆಗಿನ ಕ್ರಮವನ್ನು ಸಂಪ್ರಾಪ್ತಿ ಎನ್ನುತ್ತಾರೆ.

Share With Your Friends

Leave a Comment