ರೋಗಕ್ಕೆ ಆಸೆಯೇ ಮೂಲ ಕಾರಣ
ಆಯಸ್ಸು ಸದಾ ಆರೋಗ್ಯಮಯವಾಗಿರಲು ಸಾಧ್ಯವೇ? ” ಡಾಕ್ಟ್ರೇ ಮತ್ತೆ ಯಾವುದೇ ಕಾಯಿಲೆ ಬಾರದಂತೆ ಗಟ್ಟಿ ಮಾಡಿ ಬಿಡಿ” ಎಂದು ಕೆಲವೊಮ್ಮೆ ಕೆಲವರು ಕೇಳುವುದುಂಟು. ಹಾಗಾದರೆ, ರೋಗ ಬರುವುದು ಏತಕ್ಕಾಗಿ, ರೋಗೋತ್ಪತ್ತಿಯ ಮೂಲ ಕಾರಣವೇನು? ಎಂದು ತಿಳಿಯುವುದು ಅತ್ಯಂತ ಅವಶ್ಯಕವಾಗುತ್ತದೆ.
ಹಿಂದೊಮ್ಮೆ ಕೃತಯುಗದ ಆರಂಭದಲ್ಲಿ ಜನರು ಅತ್ಯಂತ ದೃಢಕಾಯರೂ, ಸುಂದರರೂ, ರೋಗರಹಿತರೂ ಆಗಿದ್ದರಂತೆ! ಎಲ್ಲರೂ ಸತ್ಯವಂತರೂ, ನಿಃಸ್ವಾರ್ಥಿಗಳೂ, ಜ್ಞಾನಿಗಳು,ಅತ್ಯಂತ ಪ್ರಾಮಾಣಿಕರೂ ಆಗಿದ್ದರಂತೆ, ರಾಗದ್ವೇಷಗಳಿಲ್ಲದವರೂ, ನಿದ್ರೆ, ಶ್ರಮ, ಆಯಾಸಗಳಿಲ್ಲದವರೂ, ದುಃಖರಹಿತರೂ, ಅತ್ಯಂತ ದೀರ್ಘಾಯುಸ್ಸುಳ್ಳವರೂ ಆಗಿದ್ದರಂತೆ! ಇಂತಹ ಗುಣ ಲಕ್ಷಣಗಳುಳ್ಳ ಜನರ ಕಾರಣದಿಂದಾಗಿ ಇಡೀ ಭೂಮಿಯಲ್ಲಿ ಉತ್ತಮ ಗುಣಗಳಿಂದ ಕೂಡಿದ ಸಸ್ಯ ಸಂಪತ್ತು ರಾರಾಜಿಸುತ್ತಿತ್ತಂತೆ!!!!
ನಂತರ ಕಾಲ ಸ್ವಭಾವದಿಂದ ಕೃತಯುಗದ ಅಂತ್ಯದಲ್ಲಿ ಕೆಲವರು ಅವಶ್ಯಕತೆ ಹೆಚ್ಚು ಆಹಾರ, ಧನ ಸಂಗ್ರಹ ಮಾಡಿದರು. (‘ಕೇಚಿತ್ ಅತ್ಯಾದಾನಾತ್’) ಇದರಿಂದ ಶರೀರ ಭಾರ, ಅದರಿಂದ ಶ್ರಮ, ಶ್ರಮದಿಂದ ಆಲಸ್ಯ, ಆಲಸ್ಯದಿಂದ ಇನ್ನಷ್ಟು ಸಂಚಯ, ಸಂಚಯಕ್ಕಾಗಿ ಪರಿಗ್ರಹ, ಪರಿಗ್ರಹದಿಂದ ಲೋಭವುಂಟಾಯಿತು.
ತ್ರೇತಾಯುಗದಲ್ಲಿ ಲೋಭದಿಂದ ಅಭಿದ್ರೋಹ (ಮೋಸ), ಅಭಿದ್ರೋಹದಿಂದ ಸುಳ್ಳು (ಅನೃತ ವಚನ), ಸುಳ್ಳಿನಿಂದ ಕಾಮಕ್ರೋಧ, ಅಹಂಕಾರ, ದ್ವೇಷ, ಒರಟು ಮಾತು, ಭಯ, ತಾಪ ಶೋಕ, ಚಿಂತೆ, ಉದ್ವೇಗಗಳು ಆರಂಭವಾದವು. ಹೀಗೆ ಧರ್ಮ ಪಾದದ ಹ್ರಾಸದಿಂದ ಭೂಮಿಯಲ್ಲಿ ಪಾದಭಾಗ ಗುಣಗಳು ಕಡಿಮೆಯಾದವು. ಹೀಗೆ ಕಾಲ ಕಾಲಕ್ಕೆ ಜನರಲ್ಲೂ, ಭೂಮಿಯಲ್ಲೂ ಗುಣ, ಲಕ್ಷಣಗಳು ಕೆಳಮಟ್ಟಕ್ಕಿಳಿಯುತ್ತಾ ದೇಹಬಲ ಕುಗ್ಗುತ್ತಾ ತಪ್ಪಾದ ಆಹಾರ ಕ್ರಮಗಳು ಬರುತ್ತಾ ಜನರು ‘ ಜ್ವರಾದಿ ವ್ಯಾಧಿಗಳಿಂದ’ ಆಕ್ರಾಂತರಾದರು ಎಂಬುದು ಚರಕಸಂಹಿತೆಯ ವಿಮಾನ ಸ್ಥಾನದಲ್ಲಿಯ “ರೋಗೋತ್ಪತ್ತಿಯ ಇತಿಹಾಸ” ಜನಪದೋಧ್ವಂಸ.
“ವ್ಯಾಧಿ”ಯ ಪ್ರಕಾರಗಳು
“ತದ್ದುಃಖ ಸಂಯೋಗಾ ವ್ಯಾಧಯ ಉಚ್ಯಂತೇ ॥೨೩॥” (ಸು. ಸೂ. ೧)
“ದುಃಖಂ ಕಾಯವಜ್ಮಾನಸೀ ಪೀಡಾ” (ಡಲ್ಹಣ)
” ಶರೀರ, ವಾಕ್, ಮನಸ್ಸು” ಗಳಲ್ಲಿಯ ವೇದನೆಗಳೇ “ದುಃಖ”ವೆನ್ನಬಹುದು. ಇವು ಸಾಮಾನ್ಯವಾಗಿ ಆಗಂತು, ಶಾರೀರಜ, ಮಾನಸಿಕ ಹಾಗೂ ಸ್ವಾಭಾವಿಕಗಳೆಂಬ ನಾಲ್ಕು ಗುಂಪುಗಳಿಗೆ ಸೇರಿದವುಗಳಾದರೂ ಇವು ಎಲ್ಲವೂ ಮನಃ ಶರೀರಾಧಿಷ್ಠಾನಗಳು –
” ತ ಏತೇ ಮನಃಶರೀರಾಧಿಷ್ಠಾನಃ ॥೨೬॥” (ಸು. ಸೂ. ೧)
“ದುಃಖ” ಎಂಬುದು ಮೂರು ಪ್ರಕಾರದಲ್ಲಿರುತ್ತದೆ.
೧) ಆಧ್ಯಾತ್ಮಿಕ,
೨) ಆಧಿಭೌತಿಕ,
೩) ಆಧಿದೈವಿಕ, ಎಂದು. ಇವು ಪುನಃ
೧) ಆದಿಬಲಪ್ರವೃತ್ತಾಃ,
೨) ಜನ್ಮಬಲ ಪ್ರವೃತ್ತಾಃ,
೩) ದೋಷಬಲಪ್ರವೃತ್ತಾಃ,
೪) ಸಂಘಾತ ಬಲ ಪ್ರವೃತ್ತಾಃ,
೫) ಕಾಲಬಲ ಪ್ರವೃತ್ತಾಃ,
೬) ದೈವಬಲ ಪ್ರವೃತ್ತಾಃ ಮತ್ತು
೭) ಸ್ವಭಾವ ಬಲ ಪ್ರವೃತ್ತಾಃ ಎಂದು ೭ ರೀತಿಯ ವ್ಯಾಧಿಗಳಲ್ಲಿ ವಿಭಾಗವಾಗಿದ್ದು ಕಂಡುಬರುತ್ತದೆ.
ಅ. ಆಧ್ಯಾತ್ಮಿಕ ದುಃಖ
೧) ಆದಿಬಲ ಪ್ರವೃತ್ತ ವ್ಯಾಧಿಗಳು:
ತಂದೆ – ತಾಯಿಯರ ಶುಕ್ರಶೋಣಿತ ದೋಷಗಳಿಂದ ಉಂಟಗುವಂತವು. ಉದಾ: ಕುಷ್ಟ, ಆರ್ಶಸ್ಸು, ಮಧುಮೇಹ, ಇತ್ಯಾದಿಗಳು. ಇವು ೨ ಪ್ರಕಾರದವು.
೧) ಮಾತೃಜ- ತಾಯಿಯಿಂದ,
೨) ಪಿತೃಜ- ತಂದೆಯಿಂದ ಉಂಟಾದವು.
೨) ಜನ್ಮಬಲ ಪ್ರವೃತ್ತ ವ್ಯಾಧಿಗಳು:
ತಾಯಿ ಗರ್ಭಿಣಿ ಅವಸ್ಥೆಯಲ್ಲಿ ಮಾಡಿದ ತಪ್ಪುಗಳಿಂದ ಅಥವಾ ತಾಯಿಗೆ ಉಂಟಾದ ಅಪಚಾರಗಳಿಂದ ಹುಟ್ಟುವ ಮಗು ಮೂಕ, ಕಿವುಡ, ಕುಂಟ, ಕುರಡರಾಗುವುದು.
ಇದು ಪುನಃ ೨ ಪ್ರಕಾರದವು.
೧) ರಸಕೃತ- ತಾಯಿಯ ಆಹಾರ ಜನ್ಯ,
೨) ದ್ರೌಹೃದಾಪಚಾರಕೃತ- ಗರ್ಭಿಣಿಯ ಬಯಕೆಗಳನ್ನು ಈಡೇರಿಸದ ಪರಿಣಾಮದಿಂದ.
೩) ದೋಷಬಲ ಪ್ರವೃತ್ತ ವ್ಯಾಧಿಗಳು :
ಇವು ಸಾಮಾನ್ಯವಾಗಿ ನಮ್ಮ ಆಹಾರ-ವಿಹಾರಗಳ ತಪ್ಪಿನಿಂದ ಉಂಟಾಗುವ ವ್ಯಾಧಿಗಳು- ಕೆಮ್ಮು, ತಲೆ ನೋವು, ಸಂಧಿ ಶೂಲ, ಮಧುಮೇಹ ಇತ್ಯಾದಿ.ಇವು ೨ ಪ್ರಕಾರದವು.
೧) ಆಮಾಶಯ ಸಮುತ್ಥ- ಜಠರ ಜನ್ಯ ವಿಕಾರಗಳು.
೨) ಪಕ್ವಾಶಯ ಜನ್ಯ- ದೊಡ್ಡ ಕರುಳಿನಿಂದ ಉತ್ಪನ್ನವಾದ ವಿಕಾರಗಳು. ಪುನಃ ಇವು
೧) ಶಾರೀರಜ,
೨) ಮಾನಸಿಕ ಎಂದು ೨ ಪ್ರಕಾರಗಳು.
ಬ. ಆದಿಭೌತಿಕ ದುಃಖ
೧. ಸಂಘಾತ ಬಲ ಪ್ರವೃತ್ತ :- ದುರ್ಬಲನಾದವನು ಬಲಿಷ್ಠ ಶಕ್ತಿಯೊಂದಿಗೆ ಸಂಘರ್ಷ ಮಾಡಿದಾಗ ಉಂಟಾಗುವಂತದ್ದು. ಇದು ೨ ಪ್ರಕಾರ.
೧) ಶಸ್ತ್ರಕೃತ,
೨) ವ್ಯಾಲಕೃತ. ದುಷ್ಟ ಪ್ರಾಣಿಗಳಿಂದಾಗಿ ಉಂಟಾದ ಅಭಿಘಾತದಿಂದ.
ಕ. ಆಧಿದೈವಿಕ ದುಃಖ
೧) ಕಾಲಬಲ ಪ್ರವೃತ್ತ:
ಶೀತ- ಉಷ್ಣ, ಗಾಳಿ -ಮಳೆ ಮುಂತಾದವುಗಳಿಂದ ಉಂಟಾದ ವಾತಾವರಣಜನ್ಯ ವ್ಯಾಧಿಗಳು.
೧) ಋತು ವೈಷಮ್ಯಜನ್ಯ. ( ಅಕಾಲ ಮಳೆ, ಅತಿವೃಷ್ಠಿ- ಅನಾವೃಷ್ಠಿಜನ್ಯ),
೨) ಪ್ರಾಕೃತ ರ್ತು ವಿಶೇಷ ಜನ್ಯ ( ಅತಿ ಬಿಸಿಲು, ಛಳಿ, ಮಳೆಗಾಲಗಳಿಂದ).
೨) ದೈವಬಲ ಪ್ರವೃತ್ತ :
ದೇವದ್ರೋಹ, ಅಭಿಶಾಪ, ಅಥರ್ವಣ ಮಂತ್ರಕೃತ, ಸಾಂಸರ್ಗಿಕ ಜನ್ಯವ್ಯಾಧಿಗಳು. ಇವು ಪುನಃ ೨ ಪ್ರಕಾರಗಳು.
೧. ವಿದ್ಯುದರ್ಶನಿಕೃತ : ಮಿಂಚು, ಸಿಡಿಲು, ಬಿರುಗಾಳಿ, ಸುನಾಮಿ, ಭೂಕಂಪ ಮುಂತಾದವುಗಳಿಂದ ಉಂಟಾಗುವ ತೊಂದರೆಗಳು
೨. ಪಿಶಾಚಾದಿಕೃತ : ಬಾಹ್ಯ ಅದೃಶ್ಯ ಶಕ್ತಿಗಳಿಂದ ಉಂಟಾಗುವ ಬಾಧೆಗಳು. ಇದು ಪುನಃ ೨ ಪ್ರಕಾರದಲ್ಲಿ,
೧) ಸಂಸರ್ಗಜ- ಕೆಟ್ಟ ಶಕ್ತಿಗಳ ಸಂಪರ್ಕದಿಂದ.
೨) ಆಕಸ್ಮಿಕ- ಯಾವುದೇ ಸಂಯೋಗವಿಲ್ಲದೇ ಪೂರ್ವಕೃತ ಕರ್ಮಜನ್ಯವ್ಯಾಧಿಗಳು.
೩) ಸ್ವಭಾವಬಲ ಪ್ರವೃತ್ತ:
ಹಸಿವೆ, ನೀರಡಿಕೆ, ಮುಪ್ಪು, ಮರಣ, ನಿದ್ರೆ ಇತ್ಯಾದಿಗಳು ಇವು ೨ ಪ್ರಕಾರದವು.
೧) ಸಕಾಲಿಕ,
೨) ಅಕಾಲಿಕಗಳೆಂದು.
ನಾಸ್ತಿರೋಗೋ ವಿನಾ ದೋಷೈಃ (ಸು.ಸೂ.೩೫)
“ಸರ್ವೇಷಾಂ ಚ ವ್ಯಾಧೀನಾಂ ವಾತಪಿತ್ತಶ್ಲೇಷ್ಮಾಣ
ಏವ ಮೂಲಂ ತಾಲ್ಲಿಂಗತ್ವಾದ್ದೃಷ್ಟಫಲತ್ವಾ ದಾಗಮಾಚ್ಛ ।
ಯಥಾ ಹಿ ಕೃತ್ಸ್ನಂ ವಿಕಾರಜಾತಂ ವಿಶ್ವರೂಪೇಣಾವಸ್ಥಿತಂ
ಸತ್ವರಜಸ್ತಮಾಂಸಿ ನ ವ್ಯತಿರಿಚ್ಯತೇ, ಏವಮೇವ ಕೃತ್ಸ್ನಂ
ವಿಕಾರಜಾತಂ ವಿಶ್ವರೂಪೇಣಾವಸ್ಥಿತಂ ಅವ್ಯತಿರಿಚ್ಯ ವಾತ ಪಿತ್ತ ಶ್ಲೇಷ್ಮಾಣೋ ವರ್ತಂತೇ ।”
ಎಲ್ಲಾ ವ್ಯಾಧಿಗಳಿಗೂ ತ್ರಿದೊಷಗಳೇ ಮೂಲ. ವ್ಯಾಧಿಗಳು ತ್ರಿದೋಷಗಳ ಲಕ್ಷಣಗಳಿಂದಲೇ ಕೂಡಿದ್ದರಿಂದ, ದೋಷ ಪ್ರತಿಚಿಕಿತ್ಸೆ ದೃಷ್ಟಫಲವಾಗುವುದರಿಂದ ಹಾಗೂ ಆಪ್ತೋಪದೇಶದಿಂದ ವಿಶ್ವದ ಎಲ್ಲಾ ವಿಕಾರಗಳೂ ಸತ್ವರಜಸ್ತಮನಸ್ಸುಗಳಿಂದ ರಹಿತವಲ್ಲವೋ ಅದೇ ರೀತಿ ವಾತಪಿತ್ತ ಶ್ಲೇಷ್ಮಗಳು.
ಆದ್ದರಿಂದ ರೋಗಕ್ಕೆ ಅತಿ ಹತ್ತರವಾದ ( ಸನ್ನಿಕೃಷ್ಣನಿದಾನ) ಕಾರಣವೆಂದರೆ, ” ದೋಷಗಳೇ” ಆಗಿವೆ.
ರೋಗಗಳ ಮೂಲ ಕಾರಣಗಳು:
“ಧೀ ಧೃತಿ ಸ್ಮೃತಿ ವಿಭ್ರಂಶ ಸಂಪ್ರಾಪ್ತಿಃ ಕಾಲ ಕರ್ಮಣಾಮ್।
ಅಸಾತ್ಮ್ಯಾರ್ಥಗಮಶ್ಚೇತಿ ಜ್ಞಾತವ್ಯಾದುಃಖಹೇತವಃ ॥೮೮॥”
ಬುದ್ಧಿ, ಧಾರಣಶಕ್ತಿ ಹಾಗೂ ಸ್ಮರಣ ಶಕ್ತಿಭ್ರಂಶದಿಂದ ( ಪ್ರಜ್ಞಾಪರಾಧ) ಕಾಲಕರ್ಮಗಳು ವೃತ್ಯದಿಂದ ಹಾಗೂ ವಿಕೃತ ಇಂದ್ರಿಯಾರ್ಥಗಳ ಸಂಯೋಗದಿಂದ ರೋಗಗಳು ಉಂಟಾಗುತ್ತವೆ.
ಅ) ಪ್ರಜ್ಞಾಪರಾಧ
“ಧೀ ಧೃತಿ ಸ್ಮೃತಿ ವಿಭ್ರಷ್ಟಃ ಕರ್ಮಯತ್ ಕುರುತೇಽ ಶುಭಮ್।
ಪ್ರಜ್ಞಾಪರಾಧಂ ತಂ ವಿದ್ಯಾತ್ ಸರ್ವದೋಷಪ್ರಕೋಷಣಮ್॥”
ಧೀ, ಧೃತಿ, ಸ್ಮೃತಿ ಹಾಳಾದ ಕಾರಣ ಮಾಡಲಾದ ಅಶುಭ ಕಾರ್ಯಕ್ಕೆ “ಪ್ರಜ್ಞಾಪರಾಧ” ಎನ್ನಲಾಗುವುದು. ಇದು ಸರ್ವದೋಷಕರವಾದುದು.