fbpx

ರೋಗಕ್ಕೆ ಆಸೆಯೇ ಮೂಲ ಕಾರಣ – ೨

ರೋಗಕ್ಕೆ ಆಸೆಯೇ ಮೂಲ ಕಾರಣ – ೨

medical health

ಧೀಭ್ರಂಶ:

“ವಿಷಮಾಭಿನಿವೇಶೋ ಯೋ ನಿತ್ಯಾನಿತ್ಯೇ ಹಿತಾಹಿತೇ।
ಜ್ಞೇಯಃ ಸ ಬುದ್ಧಿವಿಭ್ರಂಶಃ ಸಮಂ ಬುದ್ಧಿರ್ಹಿ ಪಶ್ಯತಿ॥೯೯॥” (ಚ. ಶಾ.೧)
ನಿತ್ಯ-ಅನಿತ್ಯ ವಸ್ತುಗಳಲ್ಲಿ ಹಿತಾ-ಹಿತಗಳ ವಿವೇಚನೆಯಲ್ಲಿ ವಿಷಮರೀತಿಯ ಜ್ಞಾನ ಎಲ್ಲಿ ಉಂಟಾಗುವುದೋ ಅದನ್ನು “ಬುದ್ಧಿ ವಿಭ್ರಂಶ” ಎನ್ನುವರು. ಸಮಬುದ್ಧಿಯುಳ್ಳವರು ಸರಿಯಾದದ್ದನ್ನೇ ಗ್ರಹಿಸುತ್ತಾರೆ.
 

ಧೃತಿ ಭ್ರಂಶ:

“ವಿಷಯಪ್ರವಣಂ ಸತ್ವಂ ಧೃತಿಭ್ರಂಶಾನ್ನ ಶಕ್ಯತೇ।
ನಿಯಂತುಮಹಿತಾದರ್ಥಾತ್ ಧೃತಿರ್ಹಿ ನಿಯಮಾತ್ಮಿಕಾ ॥೧೦೦॥” (ಚ. ಶಾ. ೧ )
ವಿಷಯಾಸಕ್ತವಾದ ಮನಸ್ಸುಳ್ಳವನು ಧೃತಿ ಇಲ್ಲದಿರುವುದರಿಂದ ಅಹಿತವಾದ ವಿಷಯಗಳಿಂದ ಮನಸ್ಸನ್ನು ನಿಯಂತ್ರಿಸಲು ಶಕ್ತನಾಗುವುದಿಲ್ಲ. ತಿಳಿದೂ ಕೃತಿಯಲ್ಲಿ ತರಲಾಗದು. ಇದನ್ನೇ “ಧೃತಿಭ್ರಂಶ” ಎನ್ನುತ್ತಾರೆ. ಧೃತಿಯಾದರೋ ಬದುಕನ್ನು ನಿಯಮಕ್ಕೆ ಒಳಪಡಿಸುತ್ತದೆ ಮಾತ್ರವಲ್ಲ, ಬುದ್ಧಿಯಿಂದ ತಿಳಿದ ಜ್ಞಾನವನ್ನು ಸುಲಭವಾಗಿ ಕಾರ್ಯರೂಪಕ್ಕೆ ತರುತ್ತದೆ.

ಸ್ಮೃತಿ ಭ್ರಂಶ:

” ತತ್ತ್ವ ಜ್ಞಾನೇ ಸ್ನೃತಿರ್ಯಸ್ಯ ರಜೋಮೋಹಾವೃತಾತ್ಮನಃ।
ಭ್ರಶ್ಯತೇ ಸ ಸ್ಮೃತಿಭ್ರಂಶಃ ಸ್ಮರ್ತವ್ಯಂ ಹಿ ಸ್ಮೃತೌ ಸ್ಥಿತಮ್ ॥೧೦೧॥” ( ಚ. ಶಾ. ೧)
ರಜೋಮೋಹಗಳಿಂದಾವೃತನಾದವನ ಸ್ಮೃತಿಯು ತತ್ವಜ್ಞಾನದಿಂದ ಭ್ರಷ್ಟವಾಗುತ್ತದೆ. ಇದನ್ನೇ ” ಸ್ಮೃತಿಭ್ರಂಶ” ಎನ್ನುತ್ತಾರೆ.
ತಾನು ಯಾರು? ತನ್ನ ಉದ್ದೇಶವೇನು? ಕರ್ತವ್ಯಗಳೇನು? ಎಂಬ ಸ್ಮೃತಿಯು ಸದಾ ಇರತಕ್ಕದ್ದು.

ಕೆಲವು ಪ್ರಜ್ಞಾಪರಾಧಗಳು:

 • ದೇಹದ ಸಹಜ (ವೇಗ) ಪ್ರವೃತ್ತಿಗಳಾದ ಹಸಿವೆ, ನೀರಡಿಕೆ, ನಿದ್ರೆ, ಮಲ-ಮೂತ್ರ ಪ್ರವೃತ್ತಿ, ತೇಕು, ಆಕಳಿಕೆ, ಕೆಮ್ಮು, ಉಬ್ಬಸ, ವೀರ್ಯ ಪ್ರವೃತ್ತಿ ಮುಂತಾದುವುಗಳನ್ನು ತಡೆಯುವುದು ಅಥವಾ ಒತ್ತಾಯದಿಂದ ಪ್ರವೃತ್ತಗೊಳಿಸುವುದು. ಅದು ಅನೇಕ ರೋಗಗಳ ಉತ್ಪತ್ತಿಗೆ ಮೂಲ ಕಾರಣ.
 • ಅತಿಯಾದ ಸಾಹಸ ಪ್ರವೃತ್ತಿ ,
 • ಅಹಿತಾಹಾರ ಸೇವನೆ,
 • ಅತಿ ಮೈಥುನ,
 • ಅಹಂಕಾರ,
 • ರಾಗಾದಿರೋಗಗಳು,
 • ಪೂಜ್ಯರ ಅವಮಾನ,
 • ಸದ್ವೃತ್ತದ ಪಾಲನೆಯಿಲ್ಲದಿರುವುದು,
 • ಪಾಪಿಗಳೊಂದಿಗೆ ಸ್ನೇಹ,
 • ರಜೋಮೋಹಾವೃತವಾದ ಕಾರಣ ಮಾಡುವ ಎಲ್ಲಾ ತಪ್ಪು ಕೆಲಸಗಳು.

ಬ. ಕಾಲಕರ್ಮವಶಾತ್ ವ್ಯಾಧಿಗಳ ಉತ್ಪತ್ತಿ : (ಪರಿಣಾಮ

 • ಅತಿವೃಷ್ಟಿ, ಅನಾವೃಷ್ಟಿ, ಅತಿಬಿಸಿಲು, ಅತಿಯಾದ ಗಾಳಿ, ಅಕಾಲವೃಷ್ಟಿ ಇತ್ಯಾದಿ ಕಾಲಪರಿಣಾಮವಾಗಿಯೂ ವ್ಯಾಧಿಗಳ ಉತ್ಪತ್ತಿ ಉಂಟಾಗುವುದು.
 • ಸ್ವಾಭಾವಿಕವಾದ ಹಸಿವು, ನೀರಡಿಕೆ, ಮುಪ್ಪು, ಮರಣ ಮುಂತಾದ ಸ್ವಾಭಾವಿಕ ವ್ಯಾಧಿಗಳು ಕಾಲ ಪರಿಣಾಮದಿಂದಲೇ ಉಂಟಾಗುತ್ತದೆ.
 • ಪೌರ್ವದೈಹಿಕ ಕರ್ಮಗಳ ಫಲದಿಂದಾಗಿ ಉಂಟಾಗುವ ವ್ಯಾಧಿಗಳು. ಇಂತಹ ವ್ಯಾಧಿಗಳು ಔಷಧ ಚಿಕಿತ್ಸೆಯಿಂದ ಬಗ್ಗುವುದಿಲ್ಲ. ಕರ್ಮಕ್ಷಯವಾದರೆ ತಕ್ಷಣ ಗುಣವಾಗುತ್ತದೆ.

ಕ. ಅಸಾತ್ಮೇಂದ್ರಿಯಾರ್ಥ ಸಂಯೋಗ

ಇಂದ್ರಿಯ- ಇಂದ್ರಿಯಾರ್ಥಗಳ ಸಂಯೋಗ ವಿಕೃತ ರೂಪದಲ್ಲಾದರೆ, ಅದರಿಂದಲೂ ವ್ಯಾಧಿಗಳ ಪ್ರಾದುರ್ಭಾವವುಂಟಾಗುತ್ತದೆ. ಇದು ೩ ರೀತಿಯಲ್ಲಾಗುತ್ತದೆ.
೧) ಅಯೋಗ,
೨) ಅತಿಯೋಗ,
೩) ಮಿಥ್ಯಾಯೋಗ.
ಎ)   ೧) ಶಬ್ದದ ಆಯೋಗ: ಸರ್ವಥಾ ಶಬ್ದ ರಹಿತ ಪ್ರದೇಶದಲ್ಲಿರುವುದು.
       ೨) ಶಬ್ದದ ಅತಿಯೋಗ: ೧೨೦ ಡೆಸಿಬಲ್ ಗಿಂತಲೂ ಹೆಚ್ಚಾದ ಶಬ್ದಗಳ ನಿರಂತರ ಶ್ರವಣ.
       ೩) ಶಬ್ದದ ಮಿಥ್ಯಾಯೋಗ: ಒರಟು, ಸುಳ್ಳು, ಕೆಟ್ಟ, ಅಪ್ರಿಯವಾದ ಶಬ್ದಗಳ ಶ್ರವಣ.
ಬಿ)   ೧) ಸ್ಪರ್ಶದ ಅಯೋಗ: ಸ್ಪರ್ಶ ರಹಿತ ವಾತಾವರಣ.
       ೨) ಸ್ಪರ್ಶದ ಅತಿಯೋಗ: ಅತಿಯಾದ ವಸ್ತುಸಂಸ್ಪರ್ಶ.
       ೩) ಸ್ಪರ್ಶದ ಮಿಥ್ಯಾಯೋಗ: ವಿಷ, ಕ್ರಿಮಿ, ಕೆಟ್ಟ ಗಾಳಿ, ವಿಷ/ಶೀತ ಅತಿ ಸಂಸ್ಪರ್ಶನ
ಸಿ)   ೧) ರೂಪದ ಅಯೋಗ: ಸರ್ವಥಾ ಆದರ್ಶನ, ಅತಿ ಸೂಕ್ಷ್ಮ ದರ್ಶನ
       ೨) ರೂಪದ ಅತಿಯೋಗ: ಕಣ್ಣು ಕುಕ್ಕುವ ವಸ್ತುಗಳ ದರ್ಶನ, ಪ್ರಖರ ಸೂರ್ಯ/ ಅಗ್ನಿ ದರ್ಶನ.
       ೩) ರೂಪದ ಮಿಥ್ಯಾಯೋಗ: ನೋಡಲಾಗದ ಕೆಟ್ಟ ದೃಶ್ಯಗಳ ಬೀಭತ್ಸ ದರ್ಶನ, ತಾಮಸ (ರಾಕ್ಷಸಾದಿ) ರೂಪಗಳ ದರ್ಶನ.
ಡಿ)    ೧) ರುಚಿಯ ಅಯೋಗ: ರುಚಿಯೇ ಇಲ್ಲದ ಆಹಾರದ ನಿರಂತರ್ ಸೇವನೆ.
        ೨) ರುಚಿಯ ಅತಿಯೋಗ: ಒಂದೇ ರುಚಿಯುಳ್ಳ ಆಹಾರದ ಅತಿಯಾದ ಸೇವನೆ.
        ೩) ರುಚಿಯ ಮಿಥ್ಯಾಯೋಗ: ವಿಕೃತ, ಹಳಸಿದ, ಕೆಟ್ಟ ಆಹಾರದ ಸೇವನೆ.
ಇ)    ೧) ಗಂಧದ ಅಯೋಗ: ಸರ್ವಥಾ ಗಂಧ ರಹಿತ ವಾತಾವರಣದಲ್ಲಿರುವುದು.
        ೨) ಗಂಧದ ಅತಿಯೋಗ: ತೀಕ್ಷ್ಣ ಗಂಧಗಳ ಅತಿಯಾದ ಸೇವನೆ.
        ೩) ಗಂಧದ ಮಿಥ್ಯಾಯೋಗ: ಕೊಳೆತ, ವಿಷಯುಕ್ತ, ವಿಚಿತ್ರ ವಾಸನೆಗಳ ಸೇವನೆ.
 
ಹೀಗೆ ಅಸಾತ್ಮೇಂದ್ರಿಯಾರ್ಥ ಸಂಯೋಗ, ಪರಿಣಾಮ ಹಾಗೂ ಪ್ರಜ್ಞಾಪರಾಧಗಳ ಮೂಲಕ ಶರೀರೇಂದ್ರಿಯ ಮನಸ್ಸುಗಳನ್ನು  ಒಳಗೊಂಡಂಥ ವ್ಯಾಧಿಗಳು ಉತ್ಪನ್ನವಾಗುತ್ತದೆ.
ಶರೀರಕ್ಕೆ- ಕೆಮ್ಮು, ಉಬ್ಬಸ, ಜ್ವರ, ಮಧುಮೇಹ ಮುಂತಾದ ವ್ಯಾಧಿಗಳುಂಟಾದರೆ, ಮನಸ್ಸಿಗೆ ಉನ್ಮಾದ, ಅಪಸ್ಮಾರಗಳು.
ಇಂದ್ರಿಯಗಳಿಗೆ- ಕುರುಡು, ಕಿವುಡು, ಮೂಕತ್ವ ಮುಂತಾದ ವ್ಯಾಧಿಗಳೂ ಉಂಟಾಗುತ್ತದೆ. ಹಾಗಾದರೆ ಬದುಕಿನ ಪ್ರಥಮ ಕೊಂಡಿಯಾದ ಆತ್ಮಕ್ಕೆ ಬರುವ ವ್ಯಾಧಿಗಳಾವುವು? ‘ಜನ್ಮ ಮರಣ’ ಗಳೇ ಆತ್ಮಕ್ಕೆ ಉಂಟಾಗುವ ರೋಗಗಳು.
ಅನೇಕ ಜನ್ಮಗಳು ವ್ಯಕ್ತಿಯ ಪೂರ್ವಕರ್ಮಗಳಿಂದಾಗಿ ಉಂಟಾಗುತ್ತದೆ. ಕರ್ಮಗಳನ್ನು ಅನುಭವಿಸುತ್ತಾ ಕಲಿಯಬೇಕಾದ ಪಾಠಗಳನ್ನು ವ್ಯಕ್ತಿಯ ಆಂತರಿಕ ವಿಕಸನವಾಗುತ್ತಾ ಹೋಗಿ ಬ್ರಹ್ಮನನ್ನು ಸೇರುವುದೇ ಬೃಹತ್ ದೈವಿಕ ಯೋಜನೆ.
ಆದರೆ ಸಜ್ಜನರ, ಮಹಾತ್ಮರ ಸಂಪರ್ಕದಿಂದ, ಸದ್ಗ್ರಂಥಗಳ ಅಧ್ಯಯನದಿಂದ, ಕಲಿಯಬೇಕಾದ್ದನ್ನು ಬೇಗ ಕಲಿತು ಜೀವಾತ್ಮ ಪರಮಾತ್ಮ ಸಂಯೋಗದ ಈ ಯೋಜನೆ ಶೀಘ್ರವೂ ಆಗಬಹುದಾಗಿದೆ. ಪುನಃ ಪುನಃ ಜನ್ಮಕ್ಕೆ “ಮೋಹ,ಇಚ್ಷಾ, ದ್ವೇಷ”ಗಳೇ ಮೂಲ ಕಾರಣ.
“ಪುರುಷೋ ರಾಶಿಸಂಜ್ಞಸ್ತು ಮೋಹೇಚ್ಛಾದ್ವೇಷಕರ್ಮಜಃ ।” (ಚ. ಶಾ.೧-೫೫)
ರಜಮಸ್ತಗಳ ಆವರಣದಿಂದ  ಮುಕ್ತನಾದರೆ, ಶುದ್ಧಜ್ಞಾನ ತಾನೇ ತಾನಾಗಿ ಪ್ರಕಾಶಿಸುತ್ತದೆ!!
 
“ಆಸೆಯೇ ದುಃಖಕ್ಕೆ ಮೂಲ ಕಾರಣ!”
“ಉಪಧಾ ಹಿ ಪರೋ ಹೇತುರ್ದುಃಖ ದುಃಖಾಶ್ರಯ ಪ್ರದಃ ।
ತ್ಯಾಗಃ ಸರ್ವೋಪಧಾನಾಂ ಚ ಸರ್ವದುಃಖವ್ಯಪೋಹಕಃ ॥೯೯॥
ಕೋಷಕಾರೋ ಯಥಾ ಹ್ಯಂಶೂನುಪಾದತ್ತೇ ವಧಪ್ರಧಾನ್।
ಉಪಾದತ್ತೇ ತಥಾರ್ಥೇ ಭ್ಯಸ್ತೃಷ್ಣಾಮಜ್ಞಃ ಸದಾತುರಃ ॥೯೬॥
ಯಸ್ತು ಅಗ್ನಿ ಕಲ್ಪಾನರ್ಥಾನ್ ಜ್ಞೋ ಜ್ಞಾತ್ವಾ ತೇಭ್ಯೋ ನಿವರ್ತತೇ।
ಅನಾರಂಭಾದಸಂಯೋಗಾತ್ತಂ ದುಃಖಂ ನೋಪತಿಷ್ಠತೇ ॥೯೭॥” (ಚ. ಶಾ. ೧)
 • ದುಃಖಕ್ಕೂ, ದುಃಖಾಶ್ರಯವಾದ  ಶರೀರ ಪ್ರಾಪ್ತಿಗೂ ” ಉಪದಾ” “ತೃಷ್ಣಾ” ಅಥವಾ ಬೇಕೇಬೇಕೆಂಬ  ಆಸೆಯೇ ಮೂಲ ಕಾರಣ.
 • ಎಲ್ಲಾ ರೀತಿಯ ಆಸೆಗಳನ್ನು  ತ್ಯಾಗ ಮಾಡುವುದೇ ಎಲ್ಲಾ ರೀತಿಯ ದುಃಖಗಳನ್ನೂ ನಾಶ ಮಾಡುವುದು.
 • ಹೇಗೆ ರೇಷ್ಮೆ ಹುಳು ತನ್ನ ನಾಶಕ್ಕೆ ಕಾರಣವಾಗುವ ರೇಷ್ಮೆ ಗೂಡನ್ನು ತನ್ನ ಜೊಲ್ಲಿನಿಂದಲೇ ತಾನೇ ತನ್ನ ಸುತ್ತಲೂ ಹೆಣೆದುಕೊಳ್ಳುವುದೋ  ಅದೇ ರೀತಿ ಅಜ್ಞನು ( ತಿಳಿಯದವನು) ಇಂದ್ರಿಯಾರ್ಥಗಳ ಆಸೆಯಿಂದ ರೋಗಕ್ಕೂ ನಾಶಕ್ಕೂ ಕಾರಣ ಸಂಗ್ರಹವನ್ನು ತನ್ನ  ಸುತ್ತಲೂ ತಾನೇ ಹೆಣೆದುಕೊಳ್ಳುತ್ತಾನೆ.
 • ಯಾವ ಜ್ಞಾನಿಯೂ “ಬೆಂಕಿ”ಗೆ ಸಮಾನವೆಂದು ಶಬ್ದ, ಸ್ಪರ್ಶ, ರೂಪ,ರಸ, ಗಂಧಗಳೆಂಬ ವಿಷಯಗಳನ್ನು ತನ್ನ ಜ್ಞಾನದಿಂದ ತಿಳಿದು ಪ್ರವೃತ್ತಿಯನ್ನೇ ಮಾಡುವುದಿಲ್ಲವೋ ವಿಷಯಗಳೊದಿಗೆ ಸಓಯೋಗವಿಲ್ಲದ ಕಾರಣ ಆತನು ದುಃಖಿಯಾಗುವುದಿಲ್ಲ.
 

“ನೈಷ್ಠಿಕೀ ಚಿಕಿತ್ಸಾ”

“ನೈಷ್ಠಿಕೀ ಚಿಕಿತ್ಸೆ” ಎಂದರೆ, ಅಧ್ಯಾತ್ಮಿಕ ಚಿಕಿತ್ಸೆ. ಸತ್ಯವನ್ನು ತಿಳಿದು ಆಸೆಯಿಂದ ಹೊರಬರಲು ಸಹಾಯಮಾಡುವ ಚಿಕಿತ್ಸೆ ನೈಷ್ಠಿಕೀ ಚಿಕಿತ್ಸೆ.
 “ನಿಷ್ಠಾ” ಅತ್ಯಂತ ದುಃಖಮೋಕ್ಷೋ ಮೋಕ್ಷರೂಪಃ ತದರ್ಥಂ ಭೂತಾ ನೈಷ್ಠಕೀ
ಅತ್ಯಂತ ದುಃಖ ಮೋಕ್ಷವೇ ‘ ನಿಷ್ಠಾ’ ಅದಕ್ಕಗಿ ಮಾಡುವ ಕಾರ್ಯವೇ ನೈಷ್ಠಿಕೀ. ‘ನೈಷ್ಠಿಕೀಯಾವಿನೋಪಧಾಮ್’ ಉಪಧಾರಹಿತನನ್ನಾಗಿಸಲು ಮಾಡುವ ಜ್ಞಾನ ಮಾರ್ಗದ ಪ್ರವೃತ್ತಿಯೇ “ನೈಷ್ಠಿಕೀ ಚಿಕಿತ್ಸಾ”.
ರೋಗೋತ್ಪತ್ತಿಯ ಕಾರಣಗಳ ಮೀಮಾಂಸೆಯನ್ನು ಹೀಗೆ ಆಯುರ್ವಿಜ್ಞಾನ ಗ್ರಂಥದಲ್ಲಿ ಮಾಡಲಾಗಿದೆ.

Share With Your Friends

Leave a Comment