ನಿಮ್ಮ ದಿನಚರಿ ಹೀಗಿರಲಿ !
ಪರಿಸರ ಮಾಲಿನ್ಯದಿಂದ ‘ಸ್ವ’ರಕ್ಷಣೆ ಹೇಗೆ? – ೧
”ಸ್ವಾಸ್ಥ್ಯ” ಯಾರಿಗೆ ಬೇಡ? ಆದರೆ, ಬೆಳೆಯುತ್ತಿರುವ ನಗರಗಳು, ಗಗನಚುಂಬಿ ಕಟ್ಟಡಗಳು , ಕಡಿಯಲ್ಪಡುವ ಮರಗಳು , ಹೆಚ್ಚುತ್ತಿರುವ ವಾಹನಗಳು , ಎಲೆಕ್ಟ್ರಾನಿಕ್ ಉಪಕರಣಗಳು ಇತ್ಯಾದಿಗಳಿಂದ ದಿನೇ ದಿನೇ ಎಲ್ಲೆಡೆ ಹರಡುತ್ತಿರುವ ಪರಿಸರ ಮಾಲಿನ್ಯದಿಂದ ‘ಸ್ವ’ ‘ಸ್ವಾಸ್ಥ್ಯ’ದ ರಕ್ಷಣೆ ಮಾಡಿಕೊಳ್ಳುವುದು ಹೇಗೆ? ಎಂಬುದೀಗ ಜ್ವಲಂತ ಪ್ರಶ್ನೆ. ಅದಕ್ಕೆ ಆಯುರ್ವೇದ ಅನೇಕ ರೀತಿಯ ಉಪಾಯಗಳನ್ನು ಹೇಳುತ್ತದೆ.
೧) ಸರ್ವಾಂಗ ಅಭ್ಯಂಗ ಸ್ನಾನ
೨) ಪ್ರತಿಮರ್ಶನಸ್ಯ
೩) ಕರ್ಣಪೂರಣ
೪) ಅಕ್ಷಿತರ್ಪಣ
೫) ಗಂಡೂಷ/ ಕವಲಗ್ರಹ
೬) ಪಾದಾಭ್ಯಂಗ
೭) ಶಿರಃ ಪಿಚು ಇತ್ಯಾದಿ ವಿಧಾನಗಳು
ಅಭ್ಯಂಗ ಸ್ನಾನ:
ಮೊದಲೆಲ್ಲ ದೀಪಾವಳಿಗೊಮ್ಮೆ ಮಾತ್ರ ಇದ್ದ ಅಭ್ಯಂಗ ಸ್ನಾನ ಇತ್ತೀಚೆಗೆಅದೂ ಶಾಸ್ತ್ರ ಮಾತ್ರಕ್ಕೆ ಉಳಿದಿದೆ.
ನಿತ್ಯ ಅಭ್ಯಂಗ ಸ್ನಾನ ಮಾಡುವುದರಿಂದ ಆಗುವ ಲಾಭಗಳು ಈ ಕೆಳಗಿನಂತಿದೆ.
೧) ಶರೀರ ಮೃದುವಾಗಿಯೂ, ಕಾಂತಿಯುತವಾಗಿಯೂ ಆಗುತ್ತದೆ.
೨) ೧೦ ನಿಮಿಷದಲ್ಲಿ ತೈಲಾಭ್ಯಂಗ ಮೂಳೆಗಳ ಒಳಭಾಗಕ್ಕೂ ತಲುಪುತ್ತದೆ ಎಂಬುದು ಸುಶ್ರುತರ ಅಭಿಪ್ರಾಯ. ಹೀಗೆ ನಿತ್ಯ ಅಭ್ಯಂಗ ಸ್ನಾನದಿಂದ ಧಾತುಗಳ ಪುಷ್ಟಿ ಉಂಟಾಗಿ ಶರೀರಕ್ಕೆ ಬಲವುಂಟಾಗುತ್ತದೆ.
೩) ಧಾತು ವೃದ್ಧಿಯಿಂದ ಮುಪ್ಪು ನಿಧಾನವಾಗುವುದಲ್ಲದೆ ಅಯಸ್ಸು ಹೆಚ್ಚುತ್ತದೆ.
೪) ಶರೀರದ ಆಯಾಸ ಇಲ್ಲವಾಗುತ್ತದೆ.ಸಂಜೆಯವರೆಗೂ ಉತ್ಸಾಹ ಉಲ್ಲಾಸ ನೆಲೆಗೊಳ್ಳುತ್ತದೆ.
೫) ಕಣ್ಣುಗಳು ಚುರುಕಾಗುತ್ತವೆ. ಮಾತ್ರವಲ್ಲ ಸುಖವಾದ ನಿದ್ರೆ ಬರುತ್ತದೆ.
೬) ಮೈ ಕೈ ನೋವು, ವಾತದ ತೊಂದರೆಗಳು ದೂರಾಗುತ್ತವೆ.
೭) ದೇಹದ ದಾರ್ಢ್ಯತೆ ಹೆಚ್ಚುತ್ತದೆ.
೮) ರಕ್ತಪರಿಚಲನೆ ಸುಖವಾಗಿ ಆಗುವುದರಿಂದ ರಕ್ತದೊತ್ತಡ ಮುಂತಾದ ರೋಗಗಳು ಬಾರದು.
೯) ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಬಾಹ್ಯ ರೋಗಾಣುಗಳು ನಿತ್ಯ ಅಭ್ಯಂಗ ಮಾಡುವವನ ಶರೀರವನ್ನು ಸುಲಭವಾಗಿ ಪ್ರವೇಶಿಸಲಾರವು.
೧೦) ಸಂಧಿಗಳು ದೃಢವಾಗುವ ಕಾರಣ ಅಸ್ಥಿಸಂಧಿಗಳಿಗೆ ಸಂಬಂಧಿಸಿದ ರೋಗಗಳು ಬರುವುದಿಲ್ಲ.
‘ಅಭ್ಯಂಗ’ ನಿಯಮಗಳು
- ಅಜೀರ್ಣ, ಜ್ವರ, ಕಫಜನ್ಯ ಖಾಯಿಲೆಗಳಿದ್ದಾಗ ಅಭ್ಯಂಗ ಬೇಡ.
- ಮೇಲಿನಿಂದ ಕೆಳಕ್ಕೆ ಉಜ್ಜಬೇಕು. (ಮೃದುವಾಗಿ)
- ಚಳಿಗಾಲ, ಮಳೆಗಾಲದಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳುವುದು ಒಳ್ಳೆಯದು.
- ಅಭ್ಯಂಗ ಮಾಡಿದಾಗ ಕೂಡಲೇ ಸ್ನಾನ ಮಾಡಲೇಬೇಕು.
- ವಾತಪಿತ್ತ ಪ್ರಕೃತಿಯವರಿಗೆ ಕೊಬ್ಬರಿ ಎಣ್ಣೆ. ವಾತ, ಕಫ ಪ್ರಕೃತಿಯವರಿಗೆ ಎಳ್ಳೆಣ್ಣೆ ಅಭ್ಯಂಗಕ್ಕೆ ಒಳ್ಳೆಯದು.
- ಅಭ್ಯಂಗ ಮಾಡುವಾಗ ಹೊಟ್ಟೆ ಖಾಲಿಯಿರಬೇಕು.
- ಸುಮಾರು ೬ ರಿಂದ ೧೨ ಚಮಚ (೩೦-೬೦ ಮಿಲಿ) ಒಬ್ಬರಿಗೆ ಪ್ರತಿನಿತ್ಯ ಅಭ್ಯಂಗಕ್ಕೆ ಅವರವರ ದೇಹಕ್ಕೆ ಅನುಸರಿಸಿ ಎಣ್ಣೆ ಬೇಕಾಗುತ್ತದೆ.
ಪ್ರತಿಮರ್ಶನಸ್ಯ :
ಎಣ್ಣೆ ಅಥವಾ ತುಪ್ಪವನ್ನು ಬೆಚ್ಚಗೆ ಮಾಡಿ, ಅಂಗಾತ ಮಲಗಿ ಕುತ್ತಿಗೆ ಮೇಲೆತ್ತಿ ತಲೆ ಕೆಳಗೆ ಮಾಡಿಕೊಂಡು ಮೂಗಿನಲ್ಲಿ ೨-೪ ಹನಿ ಹಾಕಿಕೊಳ್ಳುವುದು “ಪ್ರತಿಮರ್ಶ”ನಸ್ಯ. ಅರೋಗ್ಯಕ್ಕಾಗಿ ಪ್ರತಿಯೊಬ್ಬರೂ ಈ ನಸ್ಯ ಮಾಡಿಕೊಳ್ಳಬಹುದು. ವಿಶೇಷವಾಗಿ ಪರಿಸರ ಮಾಲಿನ್ಯದಿಂದ ರಕ್ಷಣೆಗೆ ‘ಪ್ರತಿಮರ್ಶ’ನಸ್ಯ ಉತ್ತಮವಾದದ್ದು. ಸುಶ್ರುತರು ಹೇಳುವಂತೆ-
- “ಗೃಹಾನ್ನಿರ್ಗಚ್ಛತಾ ಸೇವಿತೋ ನಾಸಾಸ್ರೋತಸಃ ಕ್ಲಿನ್ನತಯಾ ರಜೋ ಧೂಮೋ ವಾ ನ ಬಾಧತೇ” (ಸು. ಚಿ. ೪೦-೫೩) ಮನೆಯಿಂದ ಹೊರಗೆ ಹೋಗುವಾಗ ‘ಪ್ರತಿಮರ್ಶ’ನಸ್ಯ ಮಾಡಿಕೊಂಡರೆ ಮೂಗಿನ ರಂಧ್ರಗಳು ಸ್ನಿಗ್ಢ (ಕ್ಲಿನ್ನ) ವಾಗಿರುವುದರಿಂದ ಧೂಳು ಹೊಗೆಗಳಿಂದ ಯಾವುದೇ ತೊಂದರೆಯಾಗದು.
- ಬೆಳಗ್ಗೆ ಎದ್ದಾಗ ‘ನಸ್ಯ’ ಮಾಡುವುದರಿಂದ ರಾತ್ರಿ ಸಂಚಿತವಾದ ದೋಷಗಳು ಹೊರಬೀಳುತ್ತವೆ. ಮಾತ್ರವಲ್ಲ ಮನಸ್ಸು ಪ್ರಸನ್ನವಾಗುತ್ತದೆ.
- ಹಲ್ಲು ತಿಕ್ಕಿದ ಮೇಲೆ ನಸ್ಯ ಮಾಡಿದರೆ ಹಲ್ಲುಗಳು ದೃಢವಾಗುವವು. ಮಾತ್ರವಲ್ಲ ಮುಖ ದುರ್ಗಂಧ ದೂರವಾಗಿ ಸುಗಂಧಿತವಾಗುತ್ತದೆ
- ವ್ಯಾಯಾಮ, ಮೈಥುನ, ಆಯಾಸದ ನಂತರ ನಸ್ಯ ಮಾಡಿದರೆ ಶ್ರಮ ಪರಿಹಾರವಾಗುತ್ತದೆ.
- ಮೂತ್ರ ಪ್ರವೃತ್ತಿಯ ನಂತರ ‘ನಸ್ಯ’ ಮಾಡಿದರೆ ಜಡತೆ ದೂರವಾಗುತ್ತದೆ.
- ಕವಲಗ್ರಹ (Oil pulling) ಅಂಜನದ ನಂತರ ನಸ್ಯ ದೃಷ್ಟಿಯನ್ನು ಚುರುಕುಗೊಳಿಸುತ್ತದೆ.
- ಊಟವಾದ ಮೇಲೆ ನಸ್ಯ ಮಾಡಿದರೆ ಆಹಾರ ಸಂಚಲನದ ಮಾರ್ಗ ಶುದ್ಧಿಯಾಗಿ ಶರೀರ ಹಗುರವಾಗುತ್ತದೆ.
- ವಾಂತಿಯ ನಂತರದ ನಸ್ಯ ಗಂಟಲಲ್ಲಿ ಅಂಟಿದ ಕಫವನ್ನು ಕರಗಿಸಿ ಹಸಿವೆಯುಂಟುಮಾಡುತ್ತದೆ.
- ಆಕಸ್ಮಾತ್ ಹಗಲು ಮಲಗಿ ಎದ್ದಾಗ ಮಾಡಿದ ನಸ್ಯ ನಿದ್ರಾಶೇಷವನ್ನು ಇಲ್ಲವಾಗಿಸಿ ಶರೀರದ ಜಡತೆ, ಮಲವನ್ನು ಕರಗಿಸಿ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.
- ರಾತ್ರಿ ಮಲಗುವಾಗ ಮಾಡಿದ ನಸ್ಯ ಸುಖವಾದ ನಿದ್ರೆ ಹಾಗೂ ಬೆಳಗ್ಗೆ ಸಕಾಲದಲ್ಲಿ ಎಚ್ಚರವಾಗುವಂತೆ ನೋಡಿಕೊಳ್ಳುತ್ತದೆ.
ಒಟ್ಟಿನಲ್ಲಿ ಸಕಾಲದಲ್ಲಿ ಮಾಡಿದ ನಸ್ಯ ಕರ್ಮ ಸ್ವಾಸ್ಥ್ಯ ಪೋಷಕವೇ ಸರಿ.
” ನಸ್ಯೇನ ರೋಗಾಃ ಶಾಮ್ಯಂತಿ ನರಾಣಾಮೂರ್ಧ್ವ ಜತ್ರುಜಾಃ।
ಇಂದ್ರಿಯಾಣಾಂ ಚ ವೈಮಲ್ಯಂ ಕುರ್ಯಾದಾಸ್ಯಂ ಸುಗಂಧಿ ಚ ॥೫೪।
ಹನುದಂತ ಶಿರೋಗ್ರೀವಾ ತ್ರಿಕಬಾಹೂರಸಾಂ ಬಲಮ್॥
ವಲೀಪಲಿತ ಖಾಲಿತ್ಯ ವ್ಯಂಗಾನಾಂ ಚಾಪ್ಯಸಂಭವಂ ॥೫೫॥ (ಸು. ಚಿ. ೪೦)
ನಸ್ಯದಿಂದ ಕುತ್ತಿಗೆಯ ಮೇಲಿನ ರೋಗಗಳು ಶಮನವಾಗುತ್ತದೆ. ಇಂದ್ರಿಯಗಳು ಮಲರಹಿತವಾಗುತ್ತವೆ. ಮಾತ್ರವಲ್ಲ ಬಾಯಿ ಸುಗಂಧಿತವಾಗುತ್ತದೆ. ದವಡೆ, ದಂತ, ಶಿರಸ್ಸು, ಕುತ್ತಿಗೆ, ತ್ರಿಕಸಂಧಿ, ಬಾಹು ಹಾಗೂ ಎದೆ ಭಾಗಗಳಿಗೆ ಬಲ ಕೊಡುತ್ತದೆ. ಚರ್ಮಸುಕ್ಕುಗಟ್ಟುವಿಕೆ, ಬಕ್ಕತಲೆ, ಬಿಳಿಕೂದಲು, ಚರ್ಮದ ವರ್ಣವಿಕೃತಿ ಮುಂತಾದವು ಉಂಟಾಗುವುದಿಲ್ಲ.
ಶಬ್ಧ ಮಾಲಿನ್ಯ ತಡೆಯಲು ಕರ್ಣಪೂರಣ
೮-೧೦ ಹನಿ ಬೆಚ್ಚಗಿನ ಎಣ್ಣೆಯನ್ನು ಕಿವಿಗೆ ಹಾಕಿ ೧ ನಿಮಿಷ ತಡೆದು ನಂತರ ಹತ್ತಿ ಹಾಕಿಕೊಳ್ಳುವ ವಿಧಾನವೇ ಕರ್ಣಪೂರಣ. ಇದರಿಂದ ದವಡೆಯ ಸಂಧಿಗಳು, ಕುತ್ತಿಗೆಯ ಸಂಧಿಗಳು, ಶಿರಸ್ಸು ಹಾಗೂ ಕಿವಿಯ ನೋವುಗಳು ಶಮನವಾಗುತ್ತದೆ. ಮಾತ್ರವಲ್ಲ ಶಬ್ದ ಮಾಲಿನ್ಯ , ಹೊಗೆ, ಧೂಳು ಇತ್ಯಾದಿಗಳು ಪ್ರವೇಶಿಸಿ ಕಿವಿಯ ಪರಿಸರ ಹಾಳಾಗುವುದನ್ನು ತಪ್ಪಿಸಿ ಮುಪ್ಪಿನಲ್ಲಿಯೂ ಚೆನ್ನಾಗಿ ಕಿವಿ ಕೇಳಿಸಲು ಸಹಾಯಕವಾಗುತ್ತದೆ.