ನಾವೂ ನಿದ್ರೆಯನ್ನು ಗೆಲ್ಲಬಹುದೇ?
ಅರ್ಜುನನಿಗೆ ” ಗುಡಾಕೇಶ” ಎಂಬ ಹೆಸರಿದೆ. ” ನಿದ್ರೆಯನ್ನು ಗೆದ್ದವನು” ಎಂದರ್ಥದಂತೆ. ಹಾಗೆಂದರೇನು? ನಿದ್ದೆಯಿಲ್ಲದೆ, ಯಾವುದೇ ತೊಂದರೆಯೂ ಇಲ್ಲದೆ ಸುಖವಾಗಿರಬಲ್ಲವನು ಎಂದರ್ಥ. ಅನೇಕ ಯೋಗಿಗಳು ಇಂತಹ ಸಿದ್ಧಿಯನ್ನು ಪಡೆದಿದ್ದರು ಎಂಬುದನ್ನು ಕೇಳಿದ್ದೇವೆ. ಇದನ್ನು ಎಲ್ಲರೂ ಸಾಧಿಸಬಹುದೇ? ಎಂಬುದೀಗ ಯಕ್ಷಪ್ರಶ್ನೆ. ವಸ್ತುತಃ ಪ್ರಾಣಿಗಳಿಗೆ ನಿದ್ರೆಯ ಅವಶ್ಯಕತೆಯೇನು? ಅದರಿಂದಾಗುವ ಪ್ರಯೋಜನವೇನು? ಇತ್ಯಾದಿ ನಿದ್ರೆಯ ಸ್ವರೂಪವನ್ನು ಮೊದಲು ಅರಿಯೋಣ.
ನಿದ್ರೆ ಎಂದರೇನು?
ವಾಸ್ತವವಾಗಿ ಶರೀರ, ಇಂದ್ರಿಯ ಹಾಗೂ ಮನಸ್ಸುಗಳಿಗೆ ದಣಿವಾದಾಗ ಶ್ರಮ ಪರಿಹಾರಕ್ಕಾಗಿ ದೇಹ ಇಂದ್ರಿಯ ಮನಸ್ಸುಗಳಿಗೆ ಸಂಪೂರ್ಣ ವಿಶ್ರಾಂತಿ ನೀಡುವುದೇ ‘ ನಿದ್ರೆ’. ಕರ್ಮೇಂದ್ರಿಯಗಳಾದ ಎರಡು ಕೈ-ಕಾಲು, ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಹಾಗೂ ಚರ್ಮಗಳಿಗೂ ವಿಶ್ರಾಂತಿ ಕೊಡುವುದು ನಿದ್ರೆ.
” ದ್ರಾ – ಕುತ್ಸಾಯಾಮ್” ಎಂಬ ಧಾತುವಿನಿಂದ ಉತ್ಪತ್ತಿಯಾದ ನಿದ್ರೆ ನಿಂದಿತವಾದದ್ದು. ಹೀಗಾಗಿ ಅತಿನಿದ್ರೆ ಮಾಡುವವನನ್ನು ನಾವು ನಿಂದಿಸುತ್ತೇವೆ. ನಿದ್ರೆಗೆ ” ವೈಷ್ಣವಿಪಾಪ್ಮಾ” ಎಂದು ಹೆಸರುಂಟು. ಸರ್ವಪ್ರಾಣಿಗಳನ್ನು ವ್ಯಾಪಕವಾಗಿ ಆವರಿಸುವುದರಿಂದ ಇದಕ್ಕೆ “ವೈಷ್ಣವೀ” ಎಂತಲೂ, ನಮ್ಮ ನಿತ್ಯ ಕರ್ಮಗಳ ಸಾಧನೆಗೆ ತಡೆವೊಡ್ಡುವುದರಿಂದ “ಪಾಪ್ಮಾ” ಎಂತಲೂ ಕರೆಯುತ್ತೇವೆ. “ಬುಧಃ ಸ್ವಪ್ನಂ ಮಿತಂ ಚರೇತ್” ಎಂಬ ಸುಶ್ರಿತರ ಮಾತಿನಂತೆ ನಿದ್ರೆ ಮಿತವಾಗಿಯೇ ಇರಬೇಕು ಎಂಬರ್ಥ ಬರುತ್ತದೆ. ಆದರೆ, ನಿದ್ರೆ- ಕಡಿಮೆ ಸಾಕಾಗುವಷ್ಟು ಶಾರೀರಿಕ ಮಾನಸಿಕ ಶ್ರಮಗಳೂ ಅಲ್ಪವಿರಬೇಕು ಎಂಬುದನ್ನು ನೆನಪಿಡಬೇಕು.
ನಿದ್ರೆ ಹೇಗೆ ಉಂಟಾಗುತ್ತದೆ?
ಸೂಕ್ಷ್ಮ ಶರೀರ, ಮನಸ್ಸು, ಇಂದ್ರಿಯ, ಇಂದ್ರಿಯಾರ್ಥಗಳಿಗೆ ಆಯತನವು “ಹೃದಯ”. ಇದು “ಚೇತನಾಸ್ಥಾನ”. ಈ ಚೇತನಾಸ್ಥಾನವನ್ನು ತಮಸ್ಸು ಆವರಿಸಿದಾಗ ‘ಜೀವಿ’ಗೆ ನಿದ್ರೆ ಉಂಟಾಗುತ್ತದೆ. ಇದು ‘ರಾತ್ರಿ ಸ್ವಭಾವ’ ದಿಂದಲೇ ಸಹಜವಾಗಿ ಎಲ್ಲರಿಗೂ ಬರುತ್ತದೆ.
‘ಸತ್ವ’, ‘ರಜ’, ‘ತಮ’ಗಳೆಂಬ ತ್ರಿಗುಣಗಳು ‘ನಿದ್ರೆ’ಯ ಕಾರ್ಯದಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ‘ತಮಸ್ಸು’ ನಿದ್ರೆಗೆ ಕಾರಣವಾದರೆ, ‘ಸತ್ವ’ ಎಚ್ಚರವಾಗಲು ಕಾರಣ. ‘ರಜಸ್ಸು’ ಕನಸ್ಸುಗಳಿಗೆ ಕಾರಣ. ಇಂದ್ರಿಯಗಳು ವಿಶ್ರಾಂತಿಯಲ್ಲಿದ್ದರೂ ಮನಸ್ಸು ಕ್ರಿಯಾಶೀಲವಾದಾಗ ಹಳೆಯ “ಸ್ಮೃತಿ”ಗಳು ನೆನಪಾಗಿ ಕನಸುಗಳು ಕಾಣುತ್ತವೆ. ಈ ತ್ರಿಗುಣಗಳಲ್ಲಿ ಒಂದೊಂದು ಅಧಿಕವಾದಾಗ ವಿಭಿನ್ನ ರೀತಿಯ ‘ನಿದ್ರೆ’ಗಳು ಉಂಟಾಗುತ್ತವೆ.
- ‘ತಮೋಗುಣ’ ಜಾಸ್ತಿಯಾದಾಗ ನಿದ್ದೆಯ ಪ್ರಮಾಣ ಹೆಚ್ಚು. ಹಗಲೂ ರಾತ್ರಿಯೂ ಮಲಗುತ್ತರೆ.
- ‘ರಜೋಗುಣ’ ಹೆಚ್ಚಾದಾಗ ನಿದ್ರೆ ‘ವಿಷಮ’ ಕೆಲವೊಮ್ಮೆ ಹೆಚ್ಚು, ಕೆಲವೊಮ್ಮೆ ಕಡಿಮೆ.
- ‘ಸತ್ವಗುಣ’ ಹೆಚ್ಚಾದಾಗ ನಿದ್ರೆ ಕಡಿಮೆ ಸಾಕಾಗುತ್ತದೆ. ಮಧ್ಯರಾತ್ರಿ ಮಲಗಿಯೂ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ವ್ಯಕ್ತಿ ಏಳಬಹುದಾಗಿದೆ.
‘ಸತ್ವ’ ಹೆಚ್ಚಾದಾಗ………….
“ರಜಸ್ತಮೋಭ್ಯಾಂ ಯುಕ್ತಸ್ಯ ಸಂಯೋಗೋಽಯಮನಂತವಾನ್।
ತಾಭ್ಯಾಂ ನಿರಾಕೃತಾಭ್ಯಾಂ ತು ಸತ್ವವೃದ್ಧ್ಯಾನಿವರ್ತತೇ॥”
ರಜಸ್ಸು ತಮಸ್ಸುಗಳು ಸೇರಿದಾಗ ಅನಂತ ರೀತಿಯ ಸಂಯೋಗಗಳಾಗುತ್ತವೆ. ಅವೆರಡೂ ಇಲ್ಲವಾದಾಗ ಸತ್ವವೃದ್ಧಿಯಾಗಿ ನಿವೃತ್ತಿ ಸಾಧ್ಯ.
” ತ್ರಿಗುಣ”ಗಳ ಸ್ವಭಾವ:
- ‘ತಮಸ್ಸು” “ಅಜ್ಞಾನ”ದಿಂದ ಹುಟ್ಟುವುದು. ಜನರನ್ನು ‘ಮೋಹ’ಕ್ಕೆ ಒಳಗಾಗಿಸುತ್ತದೆ.’ಆಲಸ್ಯ’ ‘ನಿದ್ರೆ’ ‘ಪ್ರಮಾದ’ಗಳ ಮೂಲಕ ಬಂಧಿಸುತ್ತದೆ.
- ‘ರಜಸ್ಸು’, ರಾಗ’ ಪ್ರಧಾನ. ಆಸೆಯಿಂದ ಉತ್ಪತ್ತಿಯಾಗುವುದು. ಕರ್ಮ ಹಾಗೂ ಕರ್ಮ ಫಲಗಳಿಂದ ಬಂಧಿಸುತ್ತದೆ.
- ‘ಸತ್ವ’ವಾದರೋ ನಿರ್ಮಲವಾದದ್ದು. ‘ಪ್ರಕಾಶ’ಕರವೂ ರೋಗರಹಿತವೂ ಆದರೆ, ‘ಸುಖ’ ಹಗೂ ‘ಜ್ಞಾನ’ಗಳಿಂದ ಬಂಧಿಸುತ್ತದೆ.
ಇವುಗಳನ್ನು ಗುರುತಿಸುವುದು ಹೇಗೆ?
- ‘ಅಜ್ಞಾನ’, ಸೋಮಾರಿತನ’, ಪ್ರಮಾದ’ ಹಾಗೂ ‘ಮೋಹ’ ಇವು ತಮಸ್ಸು ಹೆಚ್ಚಾದ ಕುರುಹುಗಳು.
- ‘ಲೋಭ’ “ಪ್ರವೃತ್ತಿ” ಹೊಸ ಕಾರ್ಯಗಳ ಆರಂಭ ಹೊಸ ಹೊಸ ಆಸೆಗಳು ರಜಸ್ಸು ಹೆಚ್ಚಾದ ಚಿಹ್ನೆಗಳು.
- ಇಡೀ ದೇಹದಲ್ಲಿ ‘ಪ್ರಕಾಶ’ ಆವರಿಸಿ ‘ಜ್ಞಾನ’ ಉತ್ಪತ್ತಿಯಾಗುವುದು ‘ಸತ್ವ’ ಹೆಚ್ಚಾದ ಲಕ್ಷಣಗಳು.
ನಿದ್ರೆ ಅಧಿಕವಾಗುವುದು ಯಾವಾಗ?
ಮನಸ್ಸು ‘ರಜಸ್ಸು’ ತಮಸ್ಸು’ಗಳಿಂದ ಕೂಡಿದಾಗ ಶರೀರ- ಇಂದ್ರಿಯ ಇಂದ್ರಿಯಾರ್ಥಗಳ ಸಂಯೋಗದಿಂದ ಶಾರೀರಿಕ, ಮಾನಸಿಕ ಶ್ರಮ ಹೆಚ್ಚು. ಹೀಗೆ ಶ್ರಮ ಹೆಚ್ಚಾದಾಗ ಪರಿಹಾರಕ್ಕಾಗಿ ಅತಿ ಹೆಚ್ಚು ನಿದ್ರೆ ಬೇಕಾಗುತ್ತದೆ.
ನಿದ್ರೆ ಕಡಿಮಯಾಗುವುದು ಹೇಗೆ?
ಮನುಷ್ಯನ ಬಾಹ್ಯ ವೃತ್ತಿಗಳು ಕಡಿಮಯಾಗಬೇಕು. ಇಂದ್ರಿಯಾಸಕ್ತಿ ಇಲ್ಲವಾಗಬೇಕು. ಬಾಹ್ಯ ಚಟುವಟಿಕೆಗಳು ಕಡಿಮೆಯಾಗಬೇಕು. ಸಾಮಾನ್ಯ ವ್ಯಕ್ತಿಗೆ ಸದಾ ‘ಆತ್ಮ’ ಮನಸ್ಸಿನಲ್ಲಿಯೂ ‘ಮನಸ್ಸು’ ಇಂದ್ರಿಯಗಳಲ್ಲಿಯೂ , ಇಂದ್ರಿಯಗಳು ಇಂದ್ರಿಯಾರ್ಥಗಳಲ್ಲಿಯೂ ಸದಾ ತೊಡಗಿರುತ್ತದೆ. ಇದರಿಂದ ಸದಾ ರಜಸ್ತಮಗಳ ಚಟುವಟಿಕೆ ನಡೆಯುವ ಕಾರಣ ಶ್ರಮ ಅಧಿಕವಾಗಿ ಅಧಿಕ ನಿದ್ರೆಯ ಅವಶ್ಯಕತೆ ಇರುತ್ತದೆ. ಆದರೆ ಯೋಗದ ದಾರಿಯಲ್ಲಿ ಹೆಜ್ಜೆಯಿಡುವ ವ್ಯಕ್ತಿ ‘ಇಂದ್ರಿಯ’ಗಳನ್ನು ಇಂದ್ರಿಯಾರ್ಥಗಳಿಂದ ತಿರುಗಿಸಿ ಮನಸ್ಸಿನಲ್ಲಿಯೇ ಮನಸ್ಸನ್ನು ಆತ್ಮನಲ್ಲಿಯೂ ಸ್ಥಿರವಾಗಿ ನಿಲ್ಲಿಸಬೇಕು. ಆಗ ‘ಬಾಹ್ಯ’ ವ್ಯಾಪಾರ ಇಲ್ಲದ ಕಾರಣ ಶ್ರಮ ಕಡಿಮೆಯಾಗುತ್ತಾ ಹೋಗಿ ಹೆಚ್ಚಿನ ವಿಶ್ರಾಂತಿ ಅನವಶ್ಯಕವಾಗುವ ಮೂಲಕ ನಿದ್ರೆ ಕಡಿಮೆಯಾಗುತ್ತಾ ಹೋಗುತ್ತದೆ. ಇದಕ್ಕಾಗಿ ಈ ಕೆಳಗಿನಂತೆ ಪ್ರಯತ್ನಿಸಬೇಕು.
- ಸಜ್ಜನರ ಸಹವಾಸ
- ಭೌತಿಕ ವಿಷಯಗಳಲ್ಲಿ ಅನಾಸಕ್ತಿ
- ಅಹಂಕಾರ ರಹಿತತೆ
- ಹೊಸ ಕೆಲಸಗಳ ಅನಾರಂಭ
- ಹಿಡಿದ ಕೆಲಸಗಳ ಪೂರೈಕೆ
- ಮುನ್ನಡೆಯ ಹೆಸರು, ಕೇರ್ತಿಗಳ ದಾಹ ಇಲ್ಲವಾಗುವಿಕೆ
- ತಾನು ಯಾರು? ತನ್ನ ಜೀವನದ ಉದ್ದೇಶವೇನು? ಎಂಬುದನ್ನು ಸದಾ ಪರೀಕ್ಷಿಸುವುದು.
ಶರೀರದಲ್ಲಿ, ಇಂದ್ರಿಯಗಳಲ್ಲಿ, ಮನಸ್ಸಲ್ಲಿ, ತಾನು ಕೇವಲ ಆತ್ಮ ಎಂಬ ಜ್ಞಾನದಲ್ಲಿ ಸದಾ ನೆಲೆ ನಿಲ್ಲಬೇಕು.
ಹೀಗೆ ಪ್ರಯತ್ನದ ಮೂಲಕ ಯಾರೇ ಆಗಲಿ, ನಿಧಾನವಾಗಿ ನಿದ್ರೆಯನ್ನು ಗೆಲ್ಲಬಹುದು. ಆದರೆ, ಇದು ಸುಲಭದ ಮಾತಲ್ಲ, ಒಂದು ದೊಡ್ಡ ತಪಸ್ಸೇ ಸರಿ.