ದೇಹ ಕಟ್ಟುವ ಶ್ಲೇಷ್ಮಾ
ಸೂರ್ಯ, ಚಂದ್ರ, ವಾಯುಗಳಲ್ಲಿ ದಿಗ್ದೆಸೆಗಳಲ್ಲಿ ತಂಪೆರೆದು ವೃದ್ಧಿಗೆ ಕಾರಣವಾಗುವುದು ಚಂದ್ರ. ಅದೇ ರೀತಿ ಶರೀರದಲ್ಲಿ ಶೀತಗುಣದಿಂದ ವೃದ್ಧಿಗೆ ಕಾರಣವಾಗುವುದು ಮೂರನೆಯ ದೋಷ “ಕಫ“. ಶ್ಲಿಷ್ ಆಲಿಂಗನೇ ಎಂಬ ಧಾತುವಿನಿಂದ ಉತ್ಪತ್ತಿ ಹೊಂದಿದ ಶ್ಲೇಷ್ಮಾ ವಿವಿಧ ಜೀವಕೋಶಗಳನ್ನು ಪರಸ್ಪರ ಹೊಂದಿಸುವ, ಶರೀರದ ಕಾರ್ಯ ಸುಗಮವಾಗಿ ನಡೆಸುವ ಕಾರ್ಯ ಮಾಡುತ್ತದೆ.“ಕೇನ ಜಲೇನ ಫಲತಿ ಇತಿ ಕಫಃ” ಎಂಬ ವ್ಯುತ್ಪತ್ತಿ ಹೊಂದಿದ ಕಫ ದ್ರವಾಧಿಕ ಸೇವನೆಯಿಂದ ಈ ಕಫ ವೃದ್ಧಿಯ ಸೂಚಕ.
ಕಫದ ಕಾರ್ಯ:
“ಶ್ಲೇಷ್ಮಾಸ್ಥಿರತ್ವ ಸ್ನಿಗ್ಧತ್ವ ಸಂಧಿಬಂಧ ಕ್ಷಮಾದಿಭಿಃ॥” (ಅ. ಹೃ.ಸೂ.)
ಆರೋಗ್ಯಪೂರ್ಣ(ಸಮ) ಸ್ಥಿತಿಯಲ್ಲಿರುವ ಕಫ, ದೇಹದ ಸ್ಥಿರತೆ, ಸ್ನಿಗ್ಧತೆ, ಸಂಧಿಗಳ ಕೂಡಿಸುವಿಕೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಕೊಡಬಲ್ಲದು.
ಬಾಯಿಯಲ್ಲಿ ಇರುವ ಜೊಲ್ಲಿನಿಂದ ಹಿಡಿದು ಮೂಗು, ಅನ್ನನಾಳ, ಜಠರ, ಆಂತ್ರಗಳಲ್ಲಿ ವ್ಯಾಪಕವಾಗಿ ಹರಡಿಕೊಂಡ ಈ ಕಫ ಅತ್ಯಂತ ಮೃದುವಾದ ಶರೀರದ ಒಳಭಾಗಗಳನ್ನು ಬಾಹ್ಯ ರೋಗಾಣುಗಳಿಂದಲೂ, ಉರಿಯುಂಟು ಮಾಡಬಲ್ಲ ತೀಕ್ಷ್ಣ ಆಹಾರ, ವಾಯು ಮುಂತಾದವುಗಳಿಂದಲೂ ರಕ್ಷಿಸುತ್ತದೆ. ಇಂದ್ರಿಯಗಳಲ್ಲಿ ತುಂಬಿದ ದ್ರವ ರೂಪಕ ಕಫವು ಪೆಟ್ಟು ಬೀಳದಂತೆ, ನರವ್ಯೂಹ ಒಣಗಿ ಕಾರ್ಯರಹಿತವಾಗದಂತೆ ರಕ್ಷಿಸುತ್ತದೆ. ಅಲ್ಲದೇ, ಅನ್ನ, ಮಲ ಹಾಗೂ ಉದರಗತ ಸ್ರಾವಗಳ ಸುಲಭಗತಿಗೆ ಸಹಾಯ ಮಾಡುತ್ತದೆ. ವಿವಿಧ ಅಸ್ಥಿಸಂಧಿಗಳಲ್ಲಿ ಗ್ರೀಸಿಂಗ್ ಎಫೆಕ್ಟ್ ನ್ನು ನಿರ್ಮಾಣ ಮಾಡುವ ಮೂಲಕ ಜೀವಿಯ ಸುಲಭವಾದ ಗತಿಗೆ ಸ್ಥಿರವಾದ ಬದುಕಿಗೆ ಆಧಾರ ಒದಗಿಸುತ್ತದೆ.
ಕಫದ ಗುಣಗಳು:
“ಸ್ನಿಗ್ಧಃ ಶೀತೋ ಗುರುರ್ಮಂದಃ ಶ್ಲಕ್ಷ್ಣೋಮೃತ್ಸ್ನಃ ಸ್ಥಿರಃ ಕಫಃ ॥” (ಅ. ಹೃ. ಸೂ.)
ಜಿಡ್ಡಿನ ಗುಣ , ತಂಪು, ಭಾರ, ಮಂದಗತಿ, ನುಣುಪು, ಅಂಟು ಹಾಗೂ ಸ್ಥಿರ ಗುಣದಿಂದ ಕೂಡಿದ್ದು ಕಫ. ಇವು ಕಫದ ಸಹಜ ಗುಣಗಳು. ಈ ಗುಣಗಳಿಂದ ಕೂಡಿದ ಶರೀರದ ಯಾವುದೇ ಕಾರ್ಯಕಾರೀ ಅಂಶ ಕಫವೆನ್ನಬಹುದು. ಈ ಗುಣಯುಕ್ತವಾದ ಯಾವುದೇ ಆಹಾರ ದ್ರವ್ಯಗಳ ಸೇವನೆಯಿಂದ ಈ ಕಫಕ ವೃದ್ಧಿ ನಿಶ್ಚಿತ. ಉದಾ: ಮೊಸರು, ಹಾಲು, ತುಪ್ಪ, ಎಣ್ಣೆ, ಹಣ್ಣಿನ ರಸ, ಸಿಹಿ, ಹುಳಿ, ಉಪ್ಪು ರುಚಿಯುಳ್ಳ ಜಿಡ್ಡಿನಂಶವುಳ್ಳ ಯಾವುದೇ ಆಹಾರ. ಕಫ ಕಡಿಮೆಯಾದಲ್ಲಿ ಈ ಆಹಾರಗಳ ಸೇವನೆಯಿಂದ ಕಫ ಹೆಚ್ಚಾಗುತ್ತದೆ.
ಕಫ ವೃದ್ಧಿಯಾದಾಗ:
“ಶ್ಲೇಷ್ಮಾಽಗ್ನಿಸದನಪ್ರಸೇಕಾಲಸ್ಯ ಗೌರವಂ ॥೭॥
ಶ್ವೈತ್ಯಶೈತ್ಯ ಶ್ಲತಾಂಗತ್ವ ಶ್ವಾಸಕಾಸಾತಿ ನಿದ್ರತಾಃ ।”
- ಹಸಿವೆ ಕಡಿಮೆಯಾಗುವಿಕೆ,
- ಆಲಸ್ಯ,
- ಶ್ವೇತವರ್ಣತಾ,
- ಬಾಯಲ್ಲಿ ಜೊಲ್ಲು ಹೆಚ್ಚಾಗುವುದು,
- ಶರೀರ ಜಾಡ್ಯ,
- ಶೀತತೆ,
- ಶಿಥಿಲತೆ (ಮಾಂಸಪೇಶಿಗಳಲ್ಲಿ, ಅಸ್ಥಿಸಂಧಿಗಳಲ್ಲಿ),
- ಉಬ್ಬಸ,
- ಕೆಮ್ಮು ಹಾಗೂ
- ಅತಿ ನಿದ್ರೆ ಇವು ಕಫ ಹೆಚ್ಚಾದಾಗ ಕಂಡುಬರುವ ಲಕ್ಷಣಗಳು.
ಕಫ ಕಡಿಮೆಯಾದಾಗ:
ಕಫ ಅವಶ್ಯಕತೆಗಿಂತ ಕಡಿಮೆಯಾದಾಗಲೂ ತೊಂದರೆಯುಂಟು ಮಾಡುತ್ತದೆ. * ತಲೆ ತಿರುಗುವಿಕೆ, *ಕಫದ ವಿಶೇಷ ಆಶ್ರಯ ಸ್ಥಾನಗಳಾದ ಎದೆ, ಗಂಟಲು, ಶಿರಸ್ಸು, ಪರ್ವಗಳು ಆಮಾಶಯ, ರಸ, ಮೇದಸ್ಸು, ಮೂಗು, ನಾಲಿಗೆಗಳಲ್ಲಿ ಶೂನ್ಯತೆ, (ಖಾಲಿ ಖಾಲಿಯಾದಂತೆ ಅನಿಸಿಕೆ), ಹೃದ್ರವ (Palpitation) ಹೃದಯ ಬಡಿತ ಹೆಚ್ಚಾಗುವಿಕೆ ಹಾಗೂ ಸಂಧಿ ಶೈಥಿಲ್ಯ ಇವು ಕ್ಷೀಣ ಕಫದ ಲಕ್ಷಣಗಳು.
“ಕಫೇ ಭ್ರಮಃ ಶ್ಲೇಷ್ಮಾಶಯಾನಾಂ ಶೂನ್ಯತ್ವಂ ಹೃದ್ಧ್ರವಶ್ಲಥಸಂಥಿತಃ।”
ಕಫದ ಕರ್ಮಗಳು:
“ಶ್ಲೇಷ್ಮಣಃ ಸ್ನೇಹ ಕಾಠಿಣ್ಯ ಕಂಡೂಶಿತತ್ವ ಗೌರವಂ ।
ಬಂಧೋಪಲೇಪಸ್ತೈಮಿತ್ಯ ಶೋಫಾಪಕ್ತ್ಯತಿ ನಿದ್ರತಾಃ ॥೫೨॥
ವರ್ಣಃ ಶ್ವೇತೋ ರಸೌಸ್ವಾದುಲವಣೌಚಿರಕಾರಿತಾ” (ಅ. ಹೃ. ಸೂ.೧೩)
- ಶರೀರ ಸ್ನಿಗ್ಧತೆ,
- ಕಾಠಿಣ್ಯ,
- ತುರಿಕೆ,
- ಛಳಿ,
- ಭಾರ,
- ಸ್ರೋತೋ ವಿಬಂಧ,
- ಉಪಲೇಪ (ಸ್ರೋತಸ್ಸುಗಳಲ್ಲಿ),
- ಸ್ತಿಮಿತತೆ, (ಕಾರ್ಯ ರಹಿತತ್ವ),
- ಬಾವು,
- ಅಜೀರ್ಣ ಹಾಗೂ
- ಅತಿನಿದ್ರೆ,
- ಬಿಳಿವರ್ಣ,
- ಸಿಹಿ,
- ಉಪ್ಪುರುಚಿ ಹಾಗೂ ನಿಧಾನವಾಗಿಮಾರಕವೆನಿಸುತ್ತದೆ.
ಒಟ್ಟಿನಲ್ಲಿ ಅಜೀರ್ಣ, ಅಗ್ನಿಮಾಂದ್ಯ ವಿವಿಧ ಸ್ರೋತಸ್ಸುಗಳಲ್ಲಿ ತಡೆಹಾಕುವಲ್ಲಿ ಈ ಕಫದ್ದು ಎತ್ತಿದ ಕೈ.
ಕಫದ ಸ್ಥಾನಗಳು:
“ಉರಃ ಕಂಠಃ ಶಿರಃ ಕ್ಲೋಮ ಪರ್ವಾಣ್ಯಾ ಮಾಶಯೋರಸ ।
ಮೇದೋಘ್ರಾಣಂ ಚ ಜಿಹ್ವಾ ಚ ಕಪಸ್ಯ ಸುತರಾಮುರಃ ॥”
- ಎದೆ,
- ಶಿರಸ್ಸು,
- ಅಸ್ಥಿಪರ್ವಗಳು,
- ರಸಧಾತು,
- ಮೂಗು,
- ಗಂಟಲು,
- ಕ್ಲೋಮ, *
- ಜಠರ,
- ಮೇದಸ್ಸು,
- ನಾಲಿಗೆ ಇವು ಕಫದ ವಿಶೇಷ ಸ್ಥಾನಗಳಾದರೂ ಇದು ಸರ್ವಶರೀರ ವ್ಯಾಪಕವಾಗಿದೆ ಎಂಬುದನ್ನು ಮರೆಯಬಾರದು.
ಕಪವನ್ನು ಪುನಃ ೫ ಪ್ರಕಾರವಾಗಿ ವಿಭಜಿಸಿದ್ದಾರೆ.
೧) ಅವಲಂಬಕ ಕಫ:
“ಉರಸ್ಥಃ ಸ ತ್ರಿಕಸ್ಯ ಸ್ವವೀರ್ಯತಃ ।
ಹೃದಯಸ್ನಾನ್ನ ವೀರ್ಯಾಚ್ಛ ತತ್ ಸ್ಥ ಏವಾಂಬುಕರ್ಮಣಾ ॥೫೪॥
ಕಫ ದಾಮ್ನಾಂ ಚ ಶೇಷಾಣಾಂ ಯತ್ಕರೋತಿ ಅವ ಲಂಬನಂ।
ಅತೋಽವಲಂಬಕಃ ಶ್ಲೇಷ್ಮಾ॥” (ಅ. ಹೃ. ಸೂ.೧೨)
ಉರಸ್ಸಿನಲ್ಲಿ ಸ್ಥಿತವಾಗಿ ಸ್ವಶಕ್ತಿಯಿಂದ ತ್ರಿಕ ಸಂಧಿಗೆ ಆಧಾರವಾಗಿ, ಅನ್ನದ ವೀರ್ಯ ( ಸಾರಭಾಗ)ದಿಂದಾಗಿ ಸರ್ವದೇಹಾಶ್ರಿತ ಕಫಾಶಯಗಳಿಗೆ ಆಶ್ರಯವನ್ನು ನೀಡುತ್ತಾ ದೇಹ ಬಲವನ್ನುಂಟುಮಾಡುವ ಕಾರಣ ಇದಕ್ಕೆ ಅವಲಂಬಕ ಶ್ಲೇಷ್ಮಾ ಎಂಬ ಹೆಸರು.
೨) ಕ್ಲೇದಕ ಕಫ:
“ಯಸ್ತು ಆಮಾಶಯ ಸಂಸ್ಥಿತಃ॥೧೬॥
ಕ್ಲೇದಕಃ ಸೋಽನ್ನಸಂಘಾತ ಕ್ಲೇದನಾತ್ “
ಜಠರದಲ್ಲಿದ್ದು ಅನ್ನವನ್ನು ಆರ್ದ್ರವಾಗಿಸಿ ಮೃದುಗೊಳಿಸುವ ಕಾರ್ಯ ಮಾಡುತ್ತದೆ.
೩) ಬೋಧಕ ಕಫ :
” ರಸಬೋಧನಾತ್ । ಬೋಧಕೋ ರಸನಾಸ್ಥಾಯೀ।”
ನಾಲಿಗೆಯಲ್ಲಿದ್ದು ರುಚಿ ಬೋಧಕವಾಗಿದೆ.
೪) ತರ್ಪಕ ಕಫ :
” ಶಿರಃ ಸಂಸ್ಥೋಽಕ್ಷ ತರ್ಪಣಾತ್ ॥೧೭॥ ತರ್ಪಕಃ “
ತಲೆಯಲ್ಲಿದ್ದು ಇಂದ್ರಿಯಗಳಿಗೆ ತೃಪ್ತಿಯನ್ನುಂಟು ಮಾಡುತ್ತದೆ.
೫) ಶ್ಲೇಷಕ ಕಫ :
” ಸಂಧಿ ಸಂಶ್ಲೇಷಾಚ್ಛ್ಲೇಷಕಃ ಸಂಧಿಷು ಸ್ಥಿತಃ ।”
ಸಂಧಿಗಳಲ್ಲಿ ಸಂಶ್ಲೇಷಣವನ್ನುಂಟುಮಾಡುತ್ತಾ ಸಂಧಿಗಳಲ್ಲಿ ಸ್ಥಿತವಾಗಿರುತ್ತದೆ.
ಚಿಕಿತ್ಸೆ:
“ಶ್ಲೇಷ್ಮಣೋ ವಿಧಿನಾ ಯುಕ್ತಂ ತೀಕ್ಷ್ಣಂ ವಮನ ರೇಚನಂ ।
ಅನ್ನಂ ರೂಕ್ಷಾಲ್ಪತೀಕ್ಷ್ಣೋಷ್ಣಂ ಕಟುತಿಕ್ತ ಕಷಾಯಕಂ ॥೨೦॥
ದೀರ್ಘಕಾಲಸ್ಥಿತಂ ಮದ್ಯಂ ರತಿಪ್ರೀತಿಃ ಪ್ರಜಾಗರಃ ।
ಅನೇಕ ರೂಪೋ ವ್ಯಾಯಾಮಶ್ಚಿಂತ ರೂಕ್ಷಂ ವಿಮರ್ದನಂ ॥
ವಿಶೇಷಾದ್ವಮನಂ ಯೂಷಃ ಕ್ಷೌದ್ರಂ ಮೇದೋಘ್ನ ಮೌಷದಂ ।
ಧೋಮೋಪವಾಸ ಗಂಡೂಷ ನಿಃಸುಖತ್ವಂ ಸುಖಾಯಚ ॥೧೨॥” (ಅ. ಹೃ. ಚ )
- ವಿಧಿವತ್ತಾಗಿ ಮಾಡುವ ವಮನ, ವಿರೇಚನಗಳೆಂಬ ಶೋಧನ ವಿಧಾನ,
- ಅಲ್ಪ ಅಹಾರ, ಒಣ ಸ್ವಭಾವದ ಆಹಾರ, ತೀಕ್ಷ್ಣೋಷ್ಣ ಸ್ವಭಾವದ ಆಹಾರ,
- ಖಾರ, ಕಹಿ, ಒಗರು ರುಚಿಯುಳ್ಳ ಆಹಾರ ಪದಾರ್ಥಗಳು,
- ಹಳೆಯ ಮದ್ಯಪಾನ,
- ಮೈಥುನ ಕರ್ಮ,
- ರಾತ್ರಿ ಜಾಗರಣೆ,
- ಅನೇಕ ರೀತಿಯ ವ್ಯಾಯಾಮಗಳು,
- ಚಿಂತೆ,
- ಒಣಚೂರ್ಣಗಳಿಂದ ಮರ್ದನ ,
- ವಿಶೇಷ ಚಿಕಿತ್ಸೆಯೆಂದರೆ ವಮನ,
- ಬೇಳೆ ಸಾರು,
- ಜೇನು ತುಪ್ಪ,
- ಮೇದಸ್ಸನ್ನು ಕರಗಿಸುವ ಔಷಧಿ,
- ಉಪಯುಕ್ತ ಧೂಮಪಾನ,
- ಉಪವಾಸ,
- ಗಂಡೂಷ (ಬಾಯಿ ಮುಕ್ಕಳಿಸುವುದು),
- ಸುಖರಹಿತತೆ ಇವು ಹೆಚ್ಚಾದ ಕಫವನ್ನು ಕಡಿಮೆ ಮಾಡಲು ಇರುವ ಉಪಾಯಗಳು.