fbpx

ತ್ರಿದೋಷ ವಿಜ್ಞಾನದ ರಹಸ್ಯ

ತ್ರಿದೋಷ ವಿಜ್ಞಾನದ ರಹಸ್ಯ

ayurveda
ಒಬ್ಬ ಟಿ.ವಿ ಮೆಕ್ಯಾನಿಕ್ ಯಶಸ್ವೀ ತಂತ್ರಜ್ಞನಾಗಬೇಕಾದರೆ ಆತನಿಗೆ ಟಿ. ವಿ. ನಿರ್ಮಾಣದ ಹಂತ ಹಂತಗಳ, ಅದರಲ್ಲಿ  ಜೋಡಿಸಲ್ಪಡುವ ಪ್ರತಿಯೊಂದೂ ವಸ್ತುಗಳ ವಿನ್ಯಾಸ , ರಚನೆ ಕುರಿತು ಆಮೂಲಾಗ್ರ ಜ್ಞಾನವಿರಬೇಕಾಗುತ್ತದೆ. ಅದೇ ರೀತಿ ಸೃಷ್ಟಿಕರ್ತನ ರಚನೆಯಾದ ಈ ಆಯುಸ್ಸಿನ ( ಶರೀರ, ಇಂದ್ರಿಯ, ಮನಸ್ಸು ಹಾಗೂ ಆತ್ಮಗಳ ಸಂಯೋಗ) ರಚನೆಯ ಹಂತ ಹಂತಗಳ, ಇದರಲ್ಲಿ ಜೋಡಿಸಲ್ಪಟ್ಟ ಪ್ರತಿಯೊಂದು ಅಂಗಾಂಗಗಳ ವಿನ್ಯಾಸ, ರಚನೆಯ ಕುರಿತು ಆಮೂಲಾಗ್ರ ಜ್ಞಾನವಿದ್ದಾಗ ಮಾತ್ರ ಈ ಆಯುಸ್ಸಿನ ಮೆಕ್ಯಾನಿಕ್ ಆದ ವೈದ್ಯ ಯಶಸ್ವಿಯಾಗಬಲ್ಲ ಹಾಗೂ ಆ ವೈದ್ಯ ತಂತ್ರ ಆಯುಸ್ಸಿಗುಂಟಾಗುವ ಎಲ್ಲಾ ರೀತಿಯ ಸಮಸ್ಯೆಗಳನ್ನು ಮೂಲಭೂತವಾಗಿ ನಿವಾರಿಸುವಲ್ಲಿ ಯಶಸ್ವಿಯಾಗಬಲ್ಲರು.
ಆಯುರ್ವಿಜ್ಞಾನಕಾರರು ದರ್ಶನಶಾಸ್ತ್ರಗಳ ಆಧಾರದಿಂದ ಸೃಷ್ಟಿತತ್ವದ ಅನ್ವೇಷಣೆ ಮಾಡಿದರು. ಮಾನವ ನಿರ್ಮಿತಿಯ ಮೂಲತತ್ವವನ್ನು ಅರಿಯಲು ಸೃಷ್ಟಿಗೂ, ಮಾನವನಿಗೂ ಇರುವ ಸಾಮ್ಯತೆಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದರು. ವೇದ ಉಪನಿಷತ್ ಜ್ಞಾನಗಳನ್ನು ಆಧರಿಸಿ ನಡೆದ  ಈ ಅನ್ವೇಷಣೆಯ ಅಂತ್ಯದಲ್ಲಿ ಅನೇಕ ಸಿದ್ಧಾಂತಗಳನ್ನು ಗುರುತಿಸಿದರು.
ಅವೆಂದರೆ:
              ೧. ಲೋಕ ಪುರುಷ ಸಾಮ್ಯವಾದ
             ೨. ಸಾಮ್ಯ ವಿಶೇಷ ಸಿದ್ಧಾಂತ
             ೩. ಕಾರಣ ಕಾರ್ಯ ಸತ್ಕಾರ್ಯವಾದ ಸಂಬಂಧ.
ಉಪನಿಷತ್ತಿನಲ್ಲಿ ವಿವರಿಸಿದಂತೆ-
” ಅನ್ನಂ ಬ್ರಹ್ಮ ಇತಿ ವ್ಯಜಾನಾತ್ । ಅನ್ನಾದ್ಯೇವ ಖಲ್ವಿಮಾನಿ ಭೂತಾನಿ ಜಾಯಂತೇ ।
ಅನ್ನೇನ ಜಾತಾನಿ ಜೀವಂತಿ । ಅನ್ನಂ ಪ್ರಯಂತ್ಯಭಿ ಸಂ ವಿಶಂತಿ ॥”  (ತೈತ್ತಿರೀಯ ಉಪನಿಷತ್)
ಅನ್ನವೇ ಬ್ರಹ್ಮ. ಅನ್ನದಿಂದಲೇ ಸೃಷ್ಟಿ, ಅನ್ನದಿಂದಲೇ ಸ್ಥಿತಿ  ಹಾಗೂ ಅನ್ನದಿಂದಲೇ ನಾಶ. ಚರಕ ಸಂಹಿತೆಯನ್ನು ನೋಡಿ. “ಆಹಾರ ಸಂಭವಂ ವಸ್ತು ರೋಗಶ್ಚ ಆಹಾರ ಸಂಭವಾಃ ॥”  (ಚರಕ ಸೂತ್ರ) ಆಹಾರದಿಂದಲೇ ಶರೀರದ ನಿರ್ಮಿತಿ ಹಾಗೂ ರೋಗಗಳ ಉತ್ಪತ್ತಿಯೂ ಆಹಾರದಿಂದಲೇ ಆಗಬೇಕಲ್ಲವೇ?
ಹೀಗೆ ಅನ್ನದಲ್ಲೂ, ಪುರುಷನಲ್ಲೂ ಸಾಮ್ಯತೆ ಗುರುತಿಸಿದ ಋಷಿಗಳು ಇವೆರಡರಲ್ಲೂ ಸಾಮಾನ್ಯವಾದ ಮೂಲವಸ್ತುವನ್ನು ಸಾಂಖ್ಯ ಶಾಸ್ತ್ರಜ್ಞರ ದೃಷ್ಟಿಕೋನದಿಂದ ಗುರುತಿಸಿದರು. ಅವೇ ಪಂಚಮಹಾಭೂತಗಳು.
೧. ಅವ್ಯಕ್ತ
             ⇓         
೨. ಮಹಾನ್
            ⇓      
೩. ಅಹಂಕಾರ
⇓                                       ⇓                               ⇓
                         ಸಾತ್ವಿಕ (ವೈಚಾರಿಕ)           ರಾಜಸಿಕ ( ತೈಜಸ)             ತಾಮಸಿಕ ( ಭೂತಾದಿ)
               ⇓                                       ⇓                               ⇓
              ೪. ಶ್ರೋತ್ರೇಂದ್ರಿಯ
              ೫. ಚಕ್ಷುರಿಂದ್ರಿಯ
              ೬. ಜಿಹ್ವೇಂದ್ರಿಯ
              ೭. ಘ್ರಾಣೇಂದ್ರಿಯ
              ೮. ತ್ವಗೀಂದ್ರಿಯ
              ೯.ವಾಗೀಂದ್ರಿಯ
             ೧೦. ಹಸ್ತ ಇಂದ್ರಿಯ
             ೧೧. ಉಪಸ್ಥ
             ೧೨. ಪಾಯು
             ೧೩. ಪಾದ
             ೧೪. ಮನ
             ೧೫. ಶಬ್ದ
             ೧೬. ಸ್ಪರ್ಶ
             ೧೭. ರೂಪ
             ೧೮. ರಸ
             ೧೯. ಗಂಧ
            ೨೦. ಆಕಾಶ
            ೨೧. ವಾಯು
            ೨೨. ತೇಜಸ
            ೨೩. ಆಪ್
           ೨೪. ಪೃಥ್ವಿ
ಹೀಗೆ ೨೪ ತತ್ವಗಳಿಂದ ಉಂಟಾಗುವ ಸೃಷ್ಟಿ ವಿಧಾನದಲ್ಲಿ ಸ್ಥೂಲರೂಪದಲ್ಲಿ ಕಂಡುಬರುವ ಅಂತಿಮ ಪರಿಣಾಮಗಳೇ ಪಂಚಮಹಾಭೂತಗಳು.
ಈ ಪಂಚಮಹಾಭೂತಗಳೇ ಪಂಚೀಕೃತವಾಗಿ ಶರೀರ ನಿರ್ಮಾಣದ ಆಧಾರವಾಗಿರುವಲ್ಲಿ ಅವುಗಳ ಕಾರ್ಯವನ್ನು ಪ್ರಯೋಜನ ದೃಷ್ಟಿಯಿಂದ ಗುರುತಿಸಿ ಅಂತಿಮವಾಗಿ ೩ ದೋಷಗಳನ್ನು ಕಂಡರು.
atom
ಅವುಗಳೇ ವಾತ, ಪಿತ್ತ, ಕಫಗಳೆಂಬ ತ್ರಿದೋಷಗಳು.
ಆಕಾಶ ವಾಯುಗಳಿಂದ ‘ವಾತ‘ವೂ, ತೇಜಸ್ಸಿನಿಂದ ‘ಪಿತ್ತ‘ವೂ, ಪೃಥ್ವಿ ಆಪ್ ಗಳಿಂದ ‘ಕಫ‘ವೂ ಉಂಟಾಗಿರುವುದನ್ನು ಶರೀರದಲ್ಲಿ ಗುರುತಿಸಬಹುದಾಗಿದೆ. ಶರೀರದಲ್ಲಿ ನಡೆವ ಕಾರ್ಯಗಳನ್ನು ಪುನಃ ೩ ರೀತಿಯಲ್ಲಿ ವಿಭಜಿಸಬಹುದು.
೧. ಹೊಸ ಜೀವಕೋಶಗಳ ಸೇರ್ಪಡೆ, ಪುನನಿರ್ಮಾಣ,
೨. ಹಳೆಯ ಸತ್ತ ಜೀವಕೋಶಗಳು, ಬೇಡದ ಪದಾರ್ಥಗಳನ್ನು ಹೊರಹಾಕುವಿಕೆ. ಹಾಗೂ
೩. ಮೇಲಿನ ಎರಡೂ ಸಂದರ್ಭಗಳಲ್ಲಿ ನಡೆವ ಬದಲಾವಣೆಯ ಪ್ರಕ್ರಿಯೆ.
ಹೀಗೆ ನಡೆವ ಮೂರು ಕಾರ್ಯಗಳನ್ನು ಲೋಕದಲ್ಲಿಯೂ ಸೋಮ, ಸೂರ್ಯ ಹಾಗೂ ಅನಿಲಗಳು ನಡೆಸುವುದನ್ನು ನಾವು ಕಾಣುತ್ತೇವೆ. ಅದೇ ರೀತಿ ದೇಹದಲ್ಲಿ ನಡೆಯುವ ಪಾಂಚಭೊವ್ತಿಕ ಕಾರ್ಯವನ್ನು ವಾತ ಪಿತ್ತ- ಕಫಗಳು ನಡೆಸುತ್ತವೆ ಎಂಬುದು ಸುಶ್ರುತರ ಮಾತು.
  “ವಿಸರ್ಗಾದಾನ ವಿಕ್ಷೇಪೈಃ ಸೋಮ ಸೂರ್ಯಾನಿಲ ಯಥಾ। ಧಾರಯಂತಿ ಜಗದ್ದೇಹಂ ಕಫಪಿತ್ತಾನಿಲಾಸ್ತಥಾ॥”
 
ಸೋಮ – ವಿಸರ್ಗ -ಕಫ
ಸೂರ್ಯ -ಆದಾನ – ಪಿತ್ತ
ಅನಿಲ – ವಿಕ್ಷೇಪ  – ಅನಿಲಗಳ ಕಾರ್ಯದಲ್ಲಿ ಸಮಾನತೆ ಕಂಡುಬರುತ್ತದೆ.
ಈ ವಿಸರ್ಗ ಅಥವಾ ‘ವೃದ್ಧಿ’ ಅತಿಯಾದಾಗ, ಕಫ ಸಂಚಯ ಜಾಸ್ತಿಯಾದಾಗ ಸ್ರೋತಸ್ಸುಗಳಲ್ಲಿ ತಡೆಯುಂಟಾಗಿ (Obstructive Pathology) ಕಫಜ ವ್ಯಾಧಿಗಳಿಗೆ ನಾಂದಿಯಾಗುತ್ತದೆ. ‘ಆದಾನ’ ಕಾರ್ಯ ಅತಿಯಾದಲ್ಲಿ ಶರೀರದಲ್ಲಿ ಸ್ರಾವ ಹೆಚ್ಚಾಗಿ (Inflammatory Pathology) ಕಡೆಗೆ ಒಣಗಿ (Degenerative Pathology) ಶರೀರ ಕೃಶವಾಗಿ, ಕ್ರಮವಾಗಿ ಪಿತ್ತ, ವಾತಗಳ ತೊಂದರೆಯುಂಟಾಗುತ್ತದೆ. ‘ವಿಕ್ಷೇಪ ಕಾರ್ಯವಾತ’ ದಿಂದಾಗಿ ಅತಿಯಾದಲ್ಲಿ ನೇರವಾಗಿ ಕರ್ಷಣ ಉಂಟಾಗಿ ವಾತ ವ್ಯಾಧಿಗಳು ಕಂಡುಬರುತ್ತವೆ.
    ಆಧುನಿಕ ವಿಜ್ಞಾನದ ದೃಷ್ಟಿಯಿಂದಲೂ ಕಂಡುಬರುವ ಎಲ್ಲಾ ವ್ಯಾಧಿಗಳನ್ನು ಈ ೩ ಗುಂಪುಗಳಲ್ಲಿಯೇ ಕಾಣಬಹುದಾಗಿದೆ.
  • Degenerative Pathology
  • Inflammatory Pathology
  • Obstructive Pathology

ಹೀಗೆ ‘ವ್ಯಾಧಿ’ ಹಾಗೂ ‘ಸ್ವಾಸ್ಥ್ಯ’ವೆಂಬ ಎರಡೂ ಸ್ಥಿತಿಗಳಲ್ಲಿಯೂ ತ್ರಿದೋಷಗಳ ಪಾತ್ರವನ್ನು ವಿವರಿಸುತ್ತಾ ವಾಗ್ಭಟರು

     “ವಾಯುಃ ಪಿತ್ತಂ ಕಫಶ್ಚೇತಿ ತ್ರಯೋ ದೋಷಾಃ ಸಮಾಸತಃ।
      ವಿಕೃತಾವಿಕೃತಂ ದೇಹಂ ಘ್ನಂತಿ ತೇ ವರ್ತಯಂತಿ ಚ॥”
ಅವಿಕೃತವಾದ ( ಸಾಮ್ಯಸ್ಥಿತಿಯಲ್ಲಿರುವ ತ್ರಿದೋಷಗಳು ದೇಹಧಾರಣೆಯನ್ನು ವಿಕೃತಾವಸ್ಥೆಯಲ್ಲಿ ದೇಹನಾಶವನ್ನೂ ಉಂಟುಮಾಡುವ ದೋಷಗಳು. ಒಟ್ಟಾರೆ ‘ಮೂರೇ!’ (ಸಂಕ್ಷಿಪ್ತವಾಗಿ) ವಾಯು, ಪಿತ್ತ, ಕಫಗಳು ಇದಕ್ಕೂ ಕಡಿಮೆ ಮಾಡಲು ಬರದು.
Vata, Pitta, Kapha
ಒಂದು (Atom) ಪರಮಾಣುವನ್ನು ಗಮನಿಸಿದರೂ ಅದರಲ್ಲಿರುವ ಸಂಕ್ಷಿಪ್ತ ಶಕ್ತಿಗಳು ಮೂರೇ ಆಗಿವೆ.
Electron-ಸದಾಗತಿಯುಕ್ತವಾದದ್ದು (ವಾತ), Proton-Positive  Energy(ಕಫ), Negative Energy (ಪಿತ್ತ) ಹೀಗೆ ಶರೀರದಲ್ಲಿ ನಡೆಯುವ ಎಲ್ಲಾ ಕಾರ್ಯಗಳ ಸೂಕ್ಷ್ಮ ಅವಲೋಕನ ಮಾಡಿದ ಋಷಿಗಳು ಈ ತ್ರಿದೋಷ ಸಿದ್ಧ್ಹಾಂತಗಳ ದರ್ಶನ ಹೊಂದಿ ಇವುಗಳ ಪ್ರಮಾಣ (Quantity) ಗುಣ (Quality) ಹಾಗೂ ಕರ್ಮ (Action)ಗಳನ್ನು ಗುರುತಿಸಿ ಸ್ಪಷ್ಟವಾಗಿ ಚಿತ್ರಿಸಿದ್ದಾರೆ. ಅಲ್ಲದೇ
“ವೃದ್ಧಿಃ ಸಮಾನೈಃ ಸರ್ವೇಷಾಂ ವಿಪರೀತೈಃ ವಿಪರ್ಯಯಃ॥”
ಎಂಬ ಸಾಮ್ಯ ವಿಶೇಷ ಸಿದ್ಧಾಂತದಿಂದ ಹಾಗೂ ಕಾರಣದಿಂದಲೇ ಕಾರ್ಯ, ಕಾರಣಕ್ಕನುಸರಿಸಿಯೇ ಕಾರ್ಯ ಎಂಬ ಸತ್ಕಾರ್ಯವಾದದ ಸಹಾಯದಿಂದ ದೋಷಗಳ ವೃದ್ಧಿ ಕ್ಷಯಕ್ಕೆ ಕಾರಣವಾಗುವ ಆಹಾರ, ವಿಹಾರಗಳ ಸಂಬಂಧವನ್ನು ಸ್ಥಾಪಿಸಿ ಶರೀರದಲ್ಲಿ ನಡೆಯುವ ಋಣಾತ್ಮಕ ಹಾಗೂ ಧನಾತ್ಮಕ ಕಾರ್ಯಗಳನ್ನು ಅರ್ಥಮಾಡಿಕೊಳ್ಳಲು ಸುಲಭತೆ ಉಂಟುಮಾಡಿದ್ದಾರೆ. ಇವೇ ತ್ರಿದೋಷಗಳ ವೈಷಮ್ಯ ವೈಪರೀತ್ಯವೇ ಹೇಗೆ ವಿವಿಧ ವ್ಯಾಧಿಗಳ ಜನನಕ್ಕೆ ಕಾರಣ ಎಂಬುದನ್ನು ಸ್ಪಷ್ಟವಾಗಿ ಚಿತ್ರಿಸಿ ವ್ಯಾಧಿ ಜ್ಞಾನದ ಪರಿಪೂರ್ಣತೆಗೆ ಅಡಿಗಲ್ಲನ್ನು ಹಾಕಿದ್ದಾರೆ.    

Share With Your Friends

Leave a Comment