fbpx

ಒಂದೇ ಸ್ವಭಾವದ ಆಹಾರದ ನಿತ್ಯ ಸೇವನೆ ಬೇಡ

ಒಂದೇ ಸ್ವಭಾವದ ಆಹಾರದ ನಿತ್ಯ ಸೇವನೆ ಬೇಡ!

ಜಿಹ್ವಾ ಚಾಪಲ್ಯದಿಂದಲೋ, ಅನಿವಾರ್ಯತೆಯಿಂದಲೋ, ಅಜ್ಞಾನದಿಂದಲೋ ಕೆಲವೊಮ್ಮೆ ಒಂದೇ ಸ್ವಭಾವದ ಆಹಾರವನ್ನು ಅನೇಕ ದಿನ ನಿರಂತರ ಸೇವಿಸಿ ತೊಂದರೆ ಅನುಭವಿಸುವವರುಂಟು.
ಮಿತ್ರರೊಬ್ಬರು, ೩ ವರ್ಷ ಪ್ರತಿನಿತ್ಯ ‘ಬದನೆಕಾಯಿ’ ಸೇವಿಸಿದರು, ಅದು ಬಹಳ ರುಚಿಯೆಂದು. ಬದನೆಕಾಯಿ ಕ್ಷಾರಗುಣಗಳಿಂದ ಕೂಡಿದ್ದು, ಹೆಚ್ಚಾಗಿ ಸೇವಿಸಿದರೆ ಅದು ಪಿತ್ತವನ್ನು ಹೆಚ್ಚಿಸಿ ಕ್ಷಾರ ಲವಣ ಗುಣದಿಂದ ಮೂತ್ರಾಶ್ಮರೀ, ಉಷ್ಣತೆ, ಬಾವು, ಪಿತ್ತಜ, ಮೇಹ ಮುಂತಾದುವುಗಳನ್ನು ಉಂಟುಮಾಡಬಹುದು. ಈ ಅತೀ ಚಿಕ್ಕ ವಯಸ್ಸಿನಲ್ಲಿಯೇ ಮೂತ್ರಾಶ್ಮರೀ ಹಾಗೂ ಪಿತ್ತಜ ಮೇಹಗಳಿಂದ ಅವರು ಈಗ ಬಳಲುತ್ತಿದ್ದಾರೆ.
ಉತ್ತರ ಕರ್ನಾಟಕದ ರೋಗಿಯೊಬ್ಬರು ನಿತ್ಯ ಮಿರ್ಚಿಬಜೆ ಈ ತೀವ್ರವಾದ ಶಿರಃಶೂಲ, ಹೊಟ್ಟೆನೋವು, ಆಗ್ಗಾಗ್ಗೆ ಬೇಧಿಯಿಂದ ಬಳಲುತ್ತಿದ್ದಾರೆ.
ಮನೆಯಲ್ಲಿ ಬೀನ್ಸ್ ಬೆಳೆಯುತ್ತೇವೆ.ತುಂಬಾ ಆಗಿದೆ. ಬೇರೆ ತರಕಾರಿಯಿಲ್ಲ ಎಂದು ತಿಂಗಳುಗಟ್ಟಲೇ ಅದನೇ ತಿಂದರೆ ಮೈ ಕೈ ನೋವು, ಸಂಧಿಶೂಲ ಉಂಟಾಗುವುದು ಖಂಡಿತ. ಹಾಗಲಕಾಯಿ ಬೆಳೆದವರೊಬ್ಬರು ನಿತ್ಯ ಹಾಗಲಕಾಯಿ ತಿಂದು ದೇಹ ಕೃಶವಾಗಿ, ನಿದ್ರೆ ಕಡಿಮೆಯಾಗಿ ಚಿಕೆತ್ಸೆಗೆ ಬಂದದ್ದುಂಟು. ‘ಸುವರ್ಣಗೆಡ್ಡೆ’ ಅಧಿಕವಾಗಿ ಸೇವಿಸಿದರೆ, ಶುಷ್ಕಾರ್ಶಸ್ ಇದ್ದರೆ ಚಿಕಿತ್ಸೆ, ಅಧಿಕವಾದರೆ ರಕ್ತಾರ್ಶಸ, ರಕ್ತಾತಿಸಾರ ನಿಶ್ಚಯ. ಇದೇ ರೀತಿ ಟೊಮೇಟೋ ನಿತ್ಯ ಸೇವಿಸುವ ಹವ್ಯಾಸ ನಮ್ಮಲ್ಲಿ ಅನೇಕರಿಗಿದೆ. ಟೊಮೇಟೋ ಕ್ಲೇದ ಗುಣದಿಂದ ಕೂಡಿದ್ದು ಹುಳಿ. ಪಿತ್ತ ಕಫಗಳನ್ನು ಹೆಚ್ಚಿಸುತ್ತದೆ. ಆಮ್ಲಪಿತ್ತ ಪಿತ್ತದ ಜ್ವರ, ರಕ್ತಪಿತ್ತ, ಮಧುಮೇಹಗಳನ್ನು ಉಂಟುಮಾಡಬಲ್ಲದು.
ಅಕ್ಕಿ, ಗೋಧಿ, ಹೆಸರುಬೇಳೆ, ಬೆಲ್ಲ, ತುಪ್ಪ, ಜೇನುತುಪ್ಪ, ಎಣ್ಣೆ ಇಂತಹ ಮುಖ್ಯ ಆಹಾರ ದ್ರವ್ಯಗಳನ್ನು ನಿತ್ಯ ಸೇವಿಸುವುದರಿಂದ ವಿಶೇಷ ತೊಂದರೆಯಾಗುವುದಿಲ್ಲ. ಇವುಗಳನ್ನು ಸದಾ ಪಥ್ಯ ಆಹಾರಗಲು ಎನ್ನುತ್ತಾರೆ. ಆದರೆ ತರಕಾರಿ, ಭಕ್ಷ್ಯ – ಬೋಜ್ಯಗಳು, ಕರಿದ ತಿಂಡಿ ಜಿಹ್ವಾ ಚಾಪಲ್ಯಕ್ಕೆ ತಿನ್ನುವ ಹೊರಗಿನ ತಿಂಡಿ ತಿನಿಸುಗಳು ಇಂತಹ ಪರಿಣಾಮವನ್ನು ಕೊಡುತ್ತದೆ.
ಉತ್ತರ ಕರ್ನಾಟಕದಲ್ಲಿ ಪ್ರತಿನಿತ್ಯ ಊಟದೊಂದಿಗೆ ಏನಾದರೂ ಸಿಹಿ ತಿಂಡಿ ತಿನ್ನುವ ಅಭ್ಯಾಸವಿದೆ. ವ್ಯಾಯಾಮವಿರದಿದ್ದರೆ ಇದು ಸ್ಥೌಲ್ಯ ಹಾಗೂ ಮಧುಮೇಹವನ್ನು ಉಂಟುಮಾಡಬಹುದು. ಸ್ತ್ರೀಯರಲ್ಲಿ ಅಲ್ಪಾರ್ತವ ( ಮುಟ್ಟಿನ ಪ್ರಮಾಣದ ಕಡಿಮೆಯಾಗುವಿಕೆ) ಅಥವಾ ಅನಾರ್ತವ ( ಮುಟ್ಟಾಗದೇ ಇರುವುದು) ಉಂಟಾಗಬಹುದು.
ನಿತ್ಯ ಸಂಜೆ ಕರಿದ ತಿಂಡಿ ತಿಂದವರು ಚರ್ಮದ ಖಾಯಿಲೆ, ರಕ್ತಪಿತ್ತ, ಆಮ್ಲಪಿತ್ತ, ತೀವ್ರ ಶಿರಃಶೂಲಗಳಿಂದ ಬಳಲುತ್ತಾರೆ. ಕೆಲವರು ಪ್ರತಿನಿತ್ಯ ಹಸಿಮೆಣಸಿನಕಾಯಿ ಜಗಿದು ತಿನ್ನುತ್ತಾ ಊಟ ಮಾಡುವವರಿದ್ದಾರೆ. ಜೊತೆಗೆ ನಿತ್ಯ ಉಪ್ಪಿನಕಾಯಿ ಹೆಚ್ಚು ಹೆಚ್ಚು ತಿನ್ನುವವರಿದ್ದಾರೆ. ಇಂತವರಿಗೆ ಕರುಳಿನಲ್ಲಿ ರಕ್ತಸ್ರಾವ, ತಲೆನೋವು, ಮೂರ್ಛೆ, ರಕ್ತವಾಂತಿ, ಆಮ್ಲಪಿತ್ತ ಜೊತೆಗೆ ಕೊನೆಗೆ ಕ್ಯಾನ್ಸರ್ ನಂತಹ ತೊಂದರೆಯೂ ಬರಬಹುದು. ಏಕೆಂದರೆ ‘ಖಾರ’ವೆಂಬ ರುಚಿ ಶರೀರದಲ್ಲಿ ವಾತ – ಪಿತ್ತಗಳನ್ನು ಹೆಚ್ಚು ಮಾಡುತ್ತದೆ.
    “ನಿತ್ಯಂ ಏಕರಸಾಭ್ಯಾಸೋ ದೌರ್ಬಲ್ಯಕರಾಣಾಂ ಶ್ರೇಷ್ಠಃ ।
     ನಿತ್ಯಂ ಸರ್ವರಸಾಭ್ಯಾಸೋ ಬಲಕರಾಣಾಂ ಶ್ರೇಷ್ಠಃ ॥”
ನಿತ್ಯ ‘ವಠಾಣಿ’ ತಿಂದು ಇಡೀ ವಂಶದ ಎಲ್ಲರೂ ಸಂಧಿವಾತದಿಂದ ಬಳಲುತ್ತಿರುವ ಕುಟುಂಬವೊಂದು ಕೆಲವರ್ಷದ ಹಿಂದೆ ಕಂಡುಬಂದಿತ್ತು. ” ಕಲಾಯಸ್ತು ಅತಿವಾತಲಃ” ಈ ವಠಾಣಿ ಅತೀ ವಾತಕರ ಎಂಬ ಜ್ಞಾನವಿಲ್ಲದೇ ಅತಿಯಾಗಿ ಅನೇಕ ವರ್ಷಗಳು ವಠಾಣಿ ತಿಂದು ಇವರು ತೊಂದರೆ ಅನುಭವಿಸಿದವರು. “ಆಹಾರಸಂಭವಂ ವಸ್ತು ರೋಗಾಶ್ಚ ಆಹಾರಸಂಭಾವಾಃ” (ಚರಕ ಸೂತ್ರ)  ಈ ಆಹಾರ ಶರೀರದಿಂದಲೇ ಉಂಟಾದದ್ದು. ಇಲ್ಲಿ ಬರುವ ರೋಗಗಳೂ ಆಹಾರದಿಂದಲೇ ಬರುತ್ತವೆ.
* ಒಂದು ವಾರದಲ್ಲಿ ಒಂದೇ ತರಕಾರಿಯನ್ನು ಎರಡನೇ ಸಲ ಸೇವಿಸದಿರುವುದು ಒಳ್ಳೆಯದು.
* ಆಹಾರ ಷಡ್ರಸಗಳಿಂದ ಕೂಡಿರಬೇಕು. ಒಂದೇ ರಸದ ನಿತ್ಯ ಸೇವನೆ ಒಳಿತಲ್ಲ.
“ನ ರಾಗಾನ್ನಾಪ್ಯವಿಜ್ಞಾನಾತ್ ಆಹಾರಮುಪಯೋಜಯೇತ್। 
ಪರೀಕ್ಷ್ಯ ಹಿತಮಶ್ನೀಯಾದ್ ದೇಹೋ ಹಿ ಆಹಾರಸಂಭವಃ ॥” ( ಚ. ಸೂ. ೨೬)
ಬಾಯಿ ಚಪಲಕ್ಕೋ, ಅಜ್ಞಾನದಿಂದಲೋ ಆಹಾರ ಸೇವಿಸಬಾರದು. ಚೆನ್ನಾಗಿ ಪರೀಕ್ಷಿಸಿ ಹಿತವಾದದ್ದನ್ನು ಮಾತ್ರ ಸೇವಿಸಬೇಕು. ಏಕೆಂದರೆ ಈ ದೇಹ ಆಹಾರದಿಂದಲೇ ಉಂಟಾದದ್ದು. ಚರಕರ ಈ ಮಾತು ನಿಜಕ್ಕೂ ಸತ್ಯವಲ್ಲವೇ?

Share With Your Friends

Leave a Comment