ಯಶಸ್ಸಿನ ಹಲವು ಸೂತ್ರಗಳಿವು !
ಜೀವನ ಸಂಗ್ರಾಮದಲ್ಲಿ ಪ್ರತಿ ಹೆಜ್ಜೆಯಲ್ಲೂ ಮಾನವನಿಗೆ ಹೊಸ ಹೊಸ ಪರೀಕ್ಷೆ ! ಯಾವ ರೀತಿಯ ಜೀವನ ಶೈಲಿ ನಮಗೆ ಭೌತಿಕ ಪ್ರಪಂಚದಲ್ಲಿ ಯಶಸ್ಸು ಜೊತೆ ಜೊತೆಗೆ ಆಧ್ಯಾತ್ಮಿಕವಾಗಿ ಶ್ರೇಯಸ್ಸು ಎರಡನ್ನೂ ಒದಗಿಸಬಹುದು ಎಂಬ ಕುರಿತು ಚರಕರ ಕಿವಿ ಮಾತುಗಳು ನಿಜಕ್ಕೂ ಆಳವಾದ ಚಿಂತನೆಯಿಂದ ಕೂಡಿದ್ದು !
೧. ನ ಕಾರ್ಯಕಾಲಮತಿಪಾತಯೇತ್:
ಆಗಬೇಕಾದ ಕೆಲಸವನ್ನು ಸಕಾಲಕ್ಕೆ ಮುಗಿಸಬೇಕು. ಗರ್ಭಾಷ್ಟಮಕ್ಕೆ ಉಪನಯನ ಎಂಬುದು ಶಾಸ್ತ್ರವಿಧಿ ಎಂದ ಮೇಲೆ ಆಗಲೇ ಮುಗಿಸಬೇಕು.ಇಲ್ಲದಿದ್ದರೆ, ಎಷ್ಟೋ ವರ್ಷಗಳು ಆಗದಿರುವುದು ನಮ್ಮಲ್ಲಿ ಅನೇಕರ ಅನುಭವ. ಕ್ರಿಯಾಕಾಲವನ್ನು ಎಂದಿಗೂ ತಪ್ಪಿಸದೆ ಪಾಲಿಸುವುದು ಕರ್ತವ್ಯ. ಇಂದಿನ ಕೆಲಸ ಇಂದೇ! ಎಂಬ ಸೂತ್ರ ಅತೀ ಮುಖ್ಯ.
೨. ನಾಪರೀಕ್ಷಿತಮಭಿನಿವಿಶೇತ್:
ಸಂಪೂರ್ಣ ಕೂಲಂಕುಷ ವಿಮರ್ಶಿಸದೆ ಕಾರ್ಯ ಮಾಡಬಾರದು. ವರನ ಪರೀಕ್ಷೆ ಸರಿಯಾಗಿ ಮಾಡದೇ ಹೆಣ್ಣು ಕೊಟ್ಟು ಮೋಸ ಹೋದವರು ಅನೇಕ. ಅನೇಕ ವಿಧಗಳಿಂದ ಸತ್ಯಾಸತ್ಯತೆ ಪರೀಕ್ಷೆ ಮಾಡುವುದು ಅನಿವಾರ್ಯ.ಇದೇ ರೀತಿ, ಪ್ರತಿಯೊಂದು ವಸ್ತುವನ್ನು ಖರೀದಿಸುವಾಗಲೂ ಇನ್ನೊಬ್ಬರ ಮಾತಿಗೆ ಕಿವಿಕೊಡುವಾಗಲೂ ಈ ವಿಚಾರವನ್ನು ಗಮನಿಸಲೇಬೇಕು.
೩. ನೇಂದ್ರಿಯವಶಗಃ ಸ್ಯಾತ್:
ಇಂದ್ರುಯಗಲ ವಶಕ್ಕೆ ಸಿಲುಕಿರುವವರು ರೋಗಕ್ಕೆ ಮಾತ್ರವಲ್ಲ ಅಪಯಶಸ್ಸಿಗೂ ಒಳಗಾಗುವರು. ತಂಬಾಕು- ಗುಟ್ಕಾ ಬಿಡಲಾಗದೇ, ಸಿಹಿ ಬಿಡಲಾಗದೆ ತೊಂದರೆ ಅನುಭವಿಸುವ ಸಾಕಷ್ಟು ಜನರು ನಮ್ಮಲ್ಲೇ ಇರುವರಲ್ಲ! ಇಂದ್ರಿಯಗಳು ನಿಯಂತ್ರಣದಲ್ಲಿದ್ದರೆ, ಅವು ಕಾರ್ಯಸಿದ್ಧಿಕಾರಕವಾಗುತ್ತವೆ.
೪. ನ ಚಂಚಲಂ ಮನೋsನುಭ್ರಾಯಯೇತ್:
ಏಕಾಗ್ರತೆಯಿಲ್ಲದಿದ್ದರೆ, ಎಲ್ಲೆಂದರಲ್ಲಿ ಓಡುವ ಮನಸ್ಸಿದ್ದರೂ ಕಾರ್ಯಹಾನಿ ಶರಸಿದ್ಧ. ಪ್ರಾಣಾಯಾಮ, ಧ್ಯಾನ, ಗಾಯತ್ರೀಮಂತ್ರ ಇತ್ಯಾದಿ ಮಾರ್ಗಗಳಿಂದ ಪ್ರತಿನಿತ್ಯ ಏಕಾಗ್ರತೆಗಾಗಿ ಪ್ರಯತ್ನ ಪಡಬೇಕು.
೫. ನ ಬುದ್ಧೀಂದ್ರಿಯಾಣಾಮತಿಭಾರ ಮಾದದ್ಯಾತ್:
ನಮ್ಮ ಬುದ್ಧಿಶಕ್ತಿಗೆ ಮೀರಿದ ಕೆಲಸಗಳನ್ನು ಕೈಗೊಳ್ಳಬಾರದು. ಒತ್ತಾಯದಲ್ಲಿ ಇಚ್ಛೆಯಿಲ್ಲದ, ಬಾರದ ಶಿಕ್ಷಣಕ್ಕೆ ತಳ್ಳಲ್ಪಡುವ ಎಷ್ಟೋ ವಿದ್ಯಾರ್ಥಿಗಳು ರೋಗಕ್ಕೊಳಗಾಗುತ್ತಾರೆ. ೧೨ ಘಂಟೆಗಿಂತಲೂ ಹೆಚ್ಚು ಹೊತ್ತು ಕಂಪ್ಯೂಟರ್ ಮುಂದೆ ಒತ್ತಡದ ಕೆಲಸ ಮಾಡುವವರನೇಕರು ವಿವಿಧ ವಿಕಾರಗಳಿಗೊಳಗಾಗುತ್ತಾರೆ.
೬. ನ ಚಾತಿದೀರ್ಘಸೂತ್ರಿಸ್ಯಾತ್:
ಅತಿ ನಿಧಾನವಾಗಿ ಕೆಲಸ ಮಾಡಿದರೆ ಕೆಲಸದ ಫಲ ಸಿಕ್ಕರೂ ಕೆಲವೊಮ್ಮೆ ಪ್ರಯೋಜನವಾಗುವುದಿಲ್ಲ. ಇಂಥವರು ಎಲ್ಲಿಯೂಸಲ್ಲರು.
೭. ನ ಕ್ರೋಧಹರ್ಷಾವನುವಿದಧ್ಯಾತ್:
ಸಿಟ್ಟು, ಸಂತೋಷ ಕಾರ್ಯ ಹಾಳು ಮಾಡುತ್ತದೆ.ಸಿಟ್ಟು ಒಮ್ಮೆಲೇ ವ್ಯಕ್ತಿ ಸಂಬಧವನ್ನು ಹಾಳುಮಾಡಿ ಅನೇಕ ರೀತಿಯ ಹಾನಿಗೆ ಕಾರಣವಾಗುತ್ತದೆ. ಅತೀ ಸಂತೋಷವು ನಮ್ಮನ್ನು ಮೈ ಮರೆಯುವಂತೆ ಮಾಡುತ್ತದೆ.
೮. ನ ಶೋಕಮನುಸೇತ್:
ದುಃಖ ನಿರಂತರವಾಗಿ ಉಳಿಯುವಂತೆ ಮಾಡಬಾರದು. ಶೋಕ- ಕಾರ್ಯದಲ್ಲಿ ಉದಾಸೀನತೆಗೆ ಕಾರಣವಾಗುತ್ತದೆ. ಆದಷ್ಟು ಬೇಗ ಮರೆತು ಹೊಸ ಉತ್ಸಾಹ ತುಂಬಿಕೊಳ್ಳುವುದು ಕಾರ್ಯದ ದೃಷ್ಟಿಯಿಂದ ಅನಿವಾರ್ಯ.
೯. ನ ಸಿದ್ಧಾವುತ್ಸೇಕಂ ಯಚ್ಛೇನ್ನಾಸಿದ್ಧೌ ದೈನ್ಯಂ:
ಕಾರ್ಯಸಿದ್ಧಿಯಾದಾಗ ಉತ್ಸಾಹ, ಆಗದಿದ್ದಾಗ ದೈನ್ಯ ಎರಡೂ ಒಳ್ಳೆಯದಲ್ಲ. ಹರ್ಷ- ಶೋಕಗಳನ್ನು ಸಮನಾಗಿ ನೋಡುವುದು ಒಳ್ಳೆಯದು. “ಸ್ಥಿತ ಪ್ರಜ್ಞತೆ” ಸದಾ ಕಾರ್ಯಸಿದ್ಧಿಕರವು.
೧೦. ಪ್ರಕೃತಿಮಭೀಕ್ಷ್ಣಂಸ್ಮರೇತ್:
ವ್ಯಕ್ತಿಗಳ ಪ್ರಕೃತಿ ಸ್ವಭಾವಗಳನ್ನು ಸದಾ ಸ್ಮರಿಸಬೇಕು. ಇದರಿಂದ ವ್ಯವಹಾರ ಸುಲಭವಾಗುವುದು. ವ್ಯಕ್ತಿಗಳ ವಿಪರೀತ ವ್ಯವಹಾರದಿಂದ ತೊಂದರೆಯಾಗುವುದಿಲ್ಲ.
೧೧. ಹೇತು ಪ್ರಭಾವನಿಶ್ಚಿತಃಸ್ಯಾದ್ಧೇತ್ವಾರಂ ಭನಿತ್ಯಶ್ಚ:
ಕಾರ್ಯಕ್ಕೆ ಕಾರಣವಿದ್ದೇ ಇರುತ್ತದೆ. ಹಾಗೂ ಕಾರ್ಯಕ್ಕನುಗುಣವಾದ ಪ್ರಭಾವ ಮಾತ್ರ ಕಾರ್ಯದಲ್ಲಿ ಕಾಣುತ್ತದೆ. ಕಾರ್ಯಕಾರಣಗಳ ಸಮವಾಯಸಂಬಂಧ ಇಲ್ಲಿ ವಿವರಿಸಲ್ಪಟ್ಟಿದೆ. ಕಾರ್ಯದಲ್ಲಿ ಸಫಲತೆ ಅಥವಾ ವಿಫಲತೆ ಕಂಡುಬಂದಾಗ ಕಾರಣವನ್ನು ಕಂಡುಹಿಡಿಯುವುದು ಅತ್ಯಂತ ಅನಿವಾರ್ಯ. ಕಾರಣವನ್ನು ಸರಿಯಾಗಿ ಅರಿತಾಗ ಮಾತ್ರ ತಕ್ಕ ಪ್ರತಿಕ್ರಿಯೆ ನೀಡಲು ಸಾಧ್ಯ.
೧೨. ನ ಕೃತಮಿತ್ಯಾಶ್ವಾಸಯೇತ್:
ನೂರಕ್ಕೆ ನೂರರಷ್ಟು ಆಶ್ವಾಸನೆ ಕೊಟ್ಟು ಕೆಲಸ ಆರಂಭಿಸಬಾರದು. ಯಾವಾಗ ಯಾವ ಮೂಲೆಯಿಂದ ಯಾವ ರೀತಿಯ ವಿಘ್ನ ಬರುವುದೋ ತಿಳಿಯುವುದಿಲ್ಲ. ಹೆಚ್ಚು ಮಾತನಾಡದೇ ಕ್ರಿಯೆ ಮುಗಿಸಿಕೊಡುವುದು ಯಾವಗಲೂ ಶ್ರೇಯಸ್ಕರ.
೧೩.ನ ವೀರ್ಯಂ ಜಹ್ಯಾತ್:
ಶಕ್ತಿ ಹ್ರಾಸಮಾಡಿಕೊಳ್ಳಬಾರದು. ಅತಿಯಾದ ಸಾಹಸಕ್ಕೆ ಕೈ ಹಾಕದೇ ಶಕ್ತಿ ಕಾಪಾಡಿಕೊಂಡು ಕೆಲಸ ಸಾಧಿಸಬೇಕು.
೧೪. ನಾಪವಾದಮನುಸ್ಮರೇತ್:
ಬಂದಂತಹ ಅಪವಾದವನ್ನು ಪುನಃ ಪುನಃ ಸ್ಮರಿಸಬಾರದು. ಅದು ಮುಂದಿನ ಕಾರ್ಯವನ್ನು ಹಾಳುಮಾಡುತ್ತದೆ. ಆದಂತಹ ತಪ್ಪನ್ನು ಸರಿಪಡಿಸಿಕೊಂಡು ನವೋತ್ಸಾಹದಿಂದ ಮುಂದುವರೆಯಬೇಕು.
ಈ ೧೪ ಸೂತ್ರಗಳು ಚರಕರಿಂದ ಸೂತ್ರಸ್ಥಾನ ೮ ರ ೨೭ ನೇ ಸೂತ್ರದಲ್ಲಿ ವಿವರಿಸಲ್ಪಟ್ಟಿದ್ದು ಯಾವುದೇ ಕಾರ್ಯ ಕೈಗೊಳ್ಳುವಾಗ ನೆನಪಿಟ್ಟು ನಡೆದರೆ ಇಹಪರಗಳಲ್ಲೂ ಶ್ರೇಯಸ್ಸು ಸುನಿಶ್ಚಿತವೇ ಸರಿ !