fbpx

ಆರೋಗ್ಯಕ್ಕಾಗಿ ಏಕಸೂತ್ರ – ವ್ಯಾಯಾಮ!

Exercise

ಆರೋಗ್ಯಕ್ಕಾಗಿ ಏಕಸೂತ್ರ- ವ್ಯಾಯಾಮ!

೨೬  ವರ್ಷದ ಯುವಕರೊಬ್ಬರು ಚಿಕಿತ್ಸೆಗ ಬಂದಿದ್ದರು. ಕಳೆದ ೩ ವರ್ಷಗಳಿಂದ ಅಜೀರ್ಣ, ಹಸಿವೆಯಿಲ್ಲ, ಉತ್ಸಾಹವಿಲ್ಲ. ೨-೩ ಕಿಲೋ ತೂಕ ಕಡಿಮೆಯಾಗಿದೆ. ಪರೀಕ್ಷಿಸಿ ನೋಡಿದಾಗ ವಿಶೇಷ ತೊಂದರೆಯೇನೂ ಕಂಡುಬರಲಿಲ್ಲ. ಪುನಃ ವಿವೇಚನೆ ಮಾಡಿ ನೋಡಿದಾಗ ತಿಳಿದಿದ್ದಿಷ್ಟು- ” ಡಾಕ್ಟ್ರೇ  ನಾನು ಕಲಿಕೆಗಾಗಿ ಹಾಸ್ಟೆಲ್ ನಲ್ಲಿದ್ದೇನೆ. ಇಲ್ಲಿರುವಾಗ ಮಾತ್ರ ಹೀಗೆ. ರಜೆಯಲ್ಲಿ ಮನೆಗೆ ಹೋದಾಗ ಈ ಸಮಸ್ಯೆ ಇಲ್ಲವೇ ಇಲ್ಲ. ಆಗ ಚೆನ್ನಾಗಿ ಹಸಿವು. ತೋಟದಲ್ಲಿ ಸಾಕಷ್ಟು ದಣಿವಾಗುವುದರಿಂದ ಚೆನ್ನಾಗಿ ಹಸಿವು, ಸುಖ ನಿದ್ರೆ, ಮೈ ಹಗೂರ ! ಮತ್ತೆ ಹಾಸ್ಟೆಲ್ ಸೇರಿದ ಕೂಡಲೇ ಮೊದಲಿನ ತೊಂದರೆ ಆರಂಭ !!” ಒಮ್ಮೆ ನನಗೆ ನಗು ಬಂದಿತು. ಇಷ್ಟೆಯೋ? ಎಂದು. ವಚನಾಮೃತವೊಂದರಂತೆ ಆರೋಗ್ಯದ ಸಂರಕ್ಷಣೆ ಮಾನವನ ಕರ್ತವ್ಯ, ಆದರೆ ದೈಹಿಕ ನೀತಿಯೊಂದು ಇದೆ ಎಂಬುದನ್ನು ಅರಿತವರು ವಿರಳ. ವಸ್ತುತ: ಶ್ರೀಯುತರಿಗೆ ಖಾಯಿಲೆ ಏನೂ ಇಲ್ಲ ! ಇರುವುದು ಕೇವಲ ವ್ಯಾಯಾಮದ ಕೊರತೆಯಷ್ಟೇ! ವ್ಯಾಯಾಮವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು. ಯಾವುದೇ ತೊಂದರೆಯಿರದು. ಅದನ್ನೇ ಹೇಳಿ ಕಳುಹಿಸಲಾಯಿತು. ಪ್ರಖ್ಯಾತ ವೈದ್ಯ ವಿಜ್ಞಾನಿ ಈ ವಿಷಯದಲ್ಲಿ ಹೇಳುವ ಮಾತು ನೋಡಿ – ” ದೇಹದ ಜೀವಕೋಶಗಳನ್ನು, ಮನಸ್ಸನ್ನು ನಿರಂತರವಾದ ಚಟುವಟಿಕೆಗಳಲ್ಲಿ ತಲ್ಲೀನವಾಗಿರಿಸುವುದರಿಂದ ಶರೀರದ ರಚನೆ ಮತ್ತು ಕ್ರಿಯೆಗಳ ಮೇಲೆ ಅತ್ಯಧಿಕ ಪರಿಣಾಮವಾಗುತ್ತದೆ. ಉಚಿತ ವ್ಯಾಯಾಮದಿಂದಲೂ ಅನೂಚಾನವಾಗಿ ಬಂದ ಕ್ರೀಡಾ ವಿಧಾನದಿಂದಲೂ  ಸ್ನಾಯುಬಲ ಸಂವರ್ಧನೆಯಾಗುವುದು ನಿಜ. ಆದರೆ ಶರೀರದ  ಸರ್ವತೋಮುಖ  ಬೆಳವಣಿಗೆಗಳಲ್ಲಿ  ಧಾರಣ ಶಕ್ತಿಯೂ ಉಂಟಾಗಬೇಕಾದರೆ ಮನುಷ್ಯನು ಅನಾಗರಿಕನಾಗಿದ್ದಾಗ  ಯಾವ ಓಡುವ, ಏರುವ, ಹಾರುವ, ಬಿಸಿಲು- ಮಳೆಗಳಿಗೆ ಮೈಯೊಡ್ಡುವ ವಿಧ ವಿಧವಾದ  ಕೆಲಸಗಳನ್ನು ಮಾಡುತ್ತಿದ್ದನೋ ಪುನಃ ಅದನ್ನು ಜೀವನದಲ್ಲಿ ಅಳವಡಿಸಬೇಕು. ಸ್ನಾಯು, ಅಸ್ಥಿ, ಶರೀರ ಹಾಗೂ ಚೈತನ್ಯ ಇವುಗಳ ಸಮತೋಲನಕ್ಕೆ ಇದು ಅನಿವಾರ್ಯವೇ ಸರಿ ! ಬಾಹ್ಯ ಸನ್ನಿವೇಶದೊಡನೆ  ದೇಹವು ಸಂವಿಧಾನಗೊಳ್ಳಲು ಇದರಿಂದ ಸಹಾಯವಾಗುವುದು. ವೃಕ್ಷಾರೋಹಣ, ಪರ್ವತಾರೋಹಣದ ಸಮಯ ಮನುಷ್ಯನ ರಕ್ತಪರಿಚಲನೆಯೂ, ಶ್ವಾಸೋಚ್ಛ್ವಾಸವೂ ದ್ರುತತರವಾಗಿ ರಕ್ತದ್ರವವು ಪರಿಶುದ್ಧವಾಗುವುದು. ತೃಪ್ತವಾಗದ ನೀರಡಿಕೆಯಿಂದ ಅಂಗಾಶಗಳಲ್ಲಿ  ಜಲವು ಖಾಲಿಯಾಗುವುದು. ಉಪವಾಸದಿಂದ  ಮೈಯ ಕೊಬ್ಬು, ಪ್ರೋಟೀನ್ ಗಳಲ್ಲಿ ಸಮತೋಲನವುಂಟಾಗುವುದು. ಸೆಕೆಯಿಂದ ಚಳಿಗೂ, ಚಳಿಯಿಂದ ಸೆಕೆಗೂ  ಶೀಘ್ರವಾಗಿ ಸ್ಥಳ ಪರಿವರ್ತನೆ ಮಾಡಿಕೊಳ್ಳುವುದರಿಂದ ಶರೀರದ ಉಷ್ಣ ನಿಯಾಮಕ ಅಂಶಗಳು ಸಕ್ರಿಯವಾಗುವವು. ನಿರಂತರವಾಗಿ ಕಾರ್ಯಮಗ್ನವಾಗುವ ಅವಯವಗಳಲ್ಲಿ ಚುರುಕುತನ ಮೂಡುವುದು.”
 ಸುಶ್ರುತ ಸಂಹಿತೆಯಲ್ಲಿ ಚಿಕಿತ್ಸಾ ಸ್ಥಾನ ೨೪ ರಲ್ಲಿ ವ್ಯಾಯಾಮದ ಕುರಿತು ಇರುವ  ವಿಚಾರಗಳನ್ನು ನೋಡಿ !

 ಇಡೀ ಶರೀರಕ್ಕೆ ಶ್ರಮವೆನಿಸುವ ಎಲ್ಲ ಕ್ರಿಯೆಗಳೂ ವ್ಯಾಯಾಮವೇ !

” ಶರೀರಾಯಾಸ ಜನನಂ ಕರ್ಮವ್ಯಾಯಾಮಸಂಜ್ಞಿತಂ ॥
ತತ್ ಕೃತ್ವಾತು ಸುಖಂ ದೇಹಂ ವಿಮೃದ್ಗೀಯಾತ್ ಸಮಂ ತತಃ ॥೨೮॥
ಶರೀರೋಪಚಯಃ  ಕಾಂತಿರ್ಗಾತ್ರಾಣಾಂ ಸುವಿಭಕ್ತತಾ ।
ದೀಪ್ತಾಗ್ನಿತ್ವಮನಾಲಸ್ಯ ಸ್ಥಿರತ್ವಂ ಲಾಘವಂ ಮೃಜಾ ॥ ೩೯ ॥
ಪ್ರತಿನಿತ್ಯ ಕೃಷಿ ಕೆಲಸ ಮಾಡುವವರಿಗೆ, ದಿನಗೂಲಿ ಕಾರ್ಮಿಕರಿಗೆ  ವಿಶೇಷ ವ್ಯಾಯಾಮದ ಅಗತ್ಯವಿಲ್ಲ. ” ಎಲ್ಲಾ ರೀತಿಯ ಶರೀರ ಶ್ರಮಕರ ಕೆಲಸಗಳೂ ವ್ಯಾಯಾಮವೇ !” ವ್ಯಾಯಾಮದಿಂದ ಶರೀರ ಬೆಳವಣಿಗೆ, ಮೈಕಾಂತಿ, ಮಾಂಸಖಂಡಗಳಲ್ಲಿ ಸುಸ್ಪಷ್ಟತೆ, ಹಸಿವೆ ಹೆಚ್ಚಳ,  ಸೋಮಾರಿತನದ ನಾಶ, ದೈಹಿಕ ಸ್ಥಿರತೆ ಹಾಗೂ ಹಗುರವಾಗುವಿಕೆ, ದೇಹಶುದ್ಧಿ ಇವಿಷ್ಟು ಲಾಭಗಳು.

ವ್ಯಾಯಾಮದಿಂದ ಉತ್ತಮ ಆರೋಗ್ಯ !

” ಶ್ರಮಕ್ಲಮ ಪಿಪಾಸ್ನೋಷ್ಣಶೀತಾದೀನಾಂ ಸಹಿಷ್ಣುತಾ ॥
ಆರೋಗ್ಯಾಂಚಾಪಿ ಪರಂ ವ್ಯಾಯಾಮಾದುಪಜಾಯತೇ ॥೪೦॥
ನ ಚಾಸ್ತಿ ಸದೃಶಂತೇನ ಕಿಂಚಿತ್ ಸ್ತೌಲ್ಯಾಪಕರ್ಷಣಂ।
ನ ಚ ವ್ಯಾಯಾಮಿನಂ ಮರ್ತ್ಯಂಮರ್ದಯಂತ್ಯರಯೋಬಲಾತ್ ॥೪೧॥”
ವ್ಯಾಯಾಮದಿಂದ ಹಸಿವೆ, ನೀರಡಿಕೆಗಳನ್ನು ತಡೆವ ಸಾಮರ್ಥ್ಯದ ವರ್ಧನೆ, ಉತ್ತಮವಾದ ಆರೋಗ್ಯ, ಸ್ಥೌಲ್ಯ ರಹಿತತೆ, ದೈಹಿಕ ಸಾಮರ್ಥ್ಯ ವೃದ್ಧಿ, ಯಾರೂ ಸುಲಭವಾಗಿ ಸೋಲಿಸಲಾಗದು.

ವ್ಯಾಯಾಮದಿಂದ ದೈಹಿಕ ಸೌಂದರ್ಯ !

” ನ ಚೈನಂ ಸಹಸಾsಕ್ರಮ್ಯ ಜರಾ ಸಮಧಿರೋಹತಿ ।
ಸ್ಥಿರೀಭವತಿ ಮಾಂಸಂ ಚ ವ್ಯಾಯಾಮಭಿರತಸ್ಯ ಚ ॥೪೨।।
ವಯೋ ರೂಪಗುಣೈರ್ಹೀನಮಪಿ ಕುರ್ಯಾತ್ ಸುದರ್ಶನಂ ॥
ವ್ಯಾಯಾಮಂ ಕುರ್ವತೋ ನಿತ್ಯಂ ವಿರುದ್ಧಮಪಿ ಭೋಜನಂ ॥೪೪॥”
ವಿದಗ್ಥಂ ಆವಿದಗ್ಥಂ ವಾಪಿರ್ದೋಷಂ ಪರಿಪಚ್ಯತೇ ॥”
 • ಮುಪ್ಪು ಒಮ್ಮೆಲೇ ಬಾರದು, ಮಾಂಸಗಳಲ್ಲಿ ಸ್ಥಿರತೆ ಕಂಡುಬರುವುದು.
 • ನೋಡಲು ಚಂದವಿಲ್ಲದ, ಒಳ್ಳೆಯ ಗುಣವಿಲ್ಲದ ವ್ಯಕ್ತಿಯನ್ನೂ ಸಹ ವ್ಯಾಯಾಮ ಆಕರ್ಷಕನನ್ನಾಗಿಸುವುದು.
 • ಪ್ರಕೃತಿಗೆ ವಿರುದ್ಧವಾದ ಆಹಾರ ಸೇವನೆ, ಅತಿ ಬೆಂದ, ಬೇಯದ ಆಹಾರ ಪದಾರ್ಥಗಳನ್ನೂ ಸಹ ವ್ಯಾಯಾಮ ಸುಖವಾಗಿ ಪಚನ ಮಾಡಿಸುವುದು. ರಾತ್ರಿಯ ಆಹಾರ ಅಜೀರ್ಣವಾದಾಗ ಕೆಲವರಿಗೆ ಬೆಳಗ್ಗೆ ರೋಗ ಕಂಡುಬರುವುದು. ಬೆಳಗಿನ ಆಹಾರ ಅಜೀರ್ಣವಾದಾಗ ಯಾವುದೇ ತೊಂದರೆ ಕೆಲವು ಸಲ ಕಾಣದು! ಕಾರಣ ಹಗಲಿನ ಕ್ರಿಯಶೀಲವಾದ ಜೀವನ !!

ಯಾವಾಗ ಯಾರಿಗೆ ಎಷ್ಟು  ವ್ಯಾಯಾಮ ?

” ವ್ಯಾಯಾಮೋ ಹಿ ಸದಾ ಪಥ್ಯೋಬಲಿನಾಂ ಸ್ನಿಗ್ಧ ಭೋಜಿನಾಂ ॥
ಸ ಚ ಶೀತೇವಸಂತೇ ಚ ತೇಷಾಂ ಪಥ್ಯತಮಃ ಸ್ಮೃತಃ ॥
ಸರ್ವೇಷು ಋತುಷ್ವಹರಹಃ ಪುಂಭಿರಾತ್ಮ ಹಿತೈಷಿಭಿಃ ॥೪೬॥
ಬಲಸ್ಯರ್ಧೇನ ಕರ್ತವ್ಯೋ ವ್ಯಾಯಾಮೋ ಹಂತ್ಯತೋsನ್ಯಥಾ॥
ಹೃದಿ ಸ್ಥಾನಸ್ಥಿತೋವಾಯುಃ ಯದಾವಕ್ತ್ರಂ ಪ್ರಪದ್ಯತೇ ॥೪೭॥
ವ್ಯಾಯಾಮಂ ಕುರ್ವತೋ ಜಂತೋಸ್ತದ್ಬಲಾರ್ಧಸ್ಯ ಲಕ್ಷಣಂ ॥”
 • ದೇಹಬಲ ಚೆನ್ನಾಗಿರುವವರಿಗೆ, ಚೆನ್ನಾಗಿ ಜಿಡ್ಡುಳ್ಳ ಆಹಾರ ಸೇವಿಸುವವರಿಗೆ ವ್ಯಾಯಾಮ ! ಅತಿ ಕೃಶರೂ, ದುರ್ಬಲರೂ, ಒಣ ಆಹಾರ ಸೇವಿಸುವವರೂ ವ್ಯಾಯಾಮ ಮಾಡಿದರೆ ಧಾತುಕ್ಷಯವಾಗುವ ಸಾಧ್ಯತೆ ಹೆಚ್ಚು.
 • ಚಳಿಗಾಲ ಮತ್ತು ವಸಂತ ಋತುವಿನಲ್ಲಿ ವ್ಯಾಯಾಮ ಅತ್ಯಂತ ಸೂಕ್ತ ! ಉಳಿದೆಲ್ಲ ಋತುವಿನಲ್ಲೂ ದೇಹದ ಅರ್ಧ ಶಕ್ತಿ ಖರ್ಚಾಗುವಷ್ಟು ಮಾತ್ರ ವ್ಯಾಯಾಮ ಹಿತಕರ.
 • ಬಾಯಲ್ಲಿ ಉಸಿರಾಡುವಂತೆ  ( ಶ್ರಮಶ್ವಾಸ ) ದೇಹದ ಅರ್ಧ ಶಕ್ತಿ ಖರ್ಚಾದ ಲಕ್ಷಣ.

ವ್ಯಾಯಾಮ ವಿಷಯದಲ್ಲಿ ಎಚ್ಚರಿಕೆ !

” ವಯೋಬಲ  ಶರೀರಾಣಿ ದೇಶಕಾಲಾಶನಾನಿ ಚ ॥೪೮॥
ಸಮೀಕ್ಷ್ಯ ಕುರ್ಯಾದ್ವ್ಯಾಯಾಮಮನ್ಯಥಾ ರೋಗಮಾಪ್ನುಯಾತ್ ॥
ಕ್ಷಯತೃಷ್ಣಾರುಚಿಚ್ಛರ್ದಿ ರಕ್ತ ಪಿತ್ತ ಭ್ರಮಕ್ಲಮಃ ॥೪೯ ॥
ಕಾಸಶೋಷ ಜ್ವರ ಶ್ವಾಸಾ ಅತಿ ವ್ಯಾಯಾಮ ಸಂಭವಾಃ ॥
ರಕ್ತಪಿತ್ತೇಕೃಶಃ ಶೋಪೀಶ್ವಾಸಕಾಸಕ್ಷತಾತುರಃ ॥೫೦ ॥
ಭುಕ್ತವಾನ್ ಸ್ತ್ರೀಪುಚ  ಕ್ಷೀಣಸ್ತೃಡ್ ಭ್ರಮಾರ್ತಶ್ಚ ವರ್ಜಯೇತ್ ॥”
 • ಮಕ್ಕಳಿಗೆ, ವೃದ್ಧರಿಗೆ ವ್ಯಾಯಾಮ ಅನವಶ್ಯಕ, ಗರ್ಭಿಣಿ ಅತಿ ವ್ಯಾಯಾಮ ಮಾಡಬಾರದು.
 • ಕ್ಷೀಣರು, ನಿದ್ದೆಗೆಟ್ಟವರು ಈಗಾಗಲೇ ಆಯಾಸವಿರುವವರು ವ್ಯಾಯಾಮ ಮಾಡಬಾರದು.
 • ಮರಳುಗಾಡಿನಲ್ಲೂ , ತೀವ್ರ ಸೆಕೆಯಿರುವ ಬಿಸಿಲಿನಲ್ಲೂ , ಊಟವಾದ ಮೇಲೂ ವ್ಯಾಯಾಮ ನಿಷಿದ್ಧ.
 • ಹೀಗೆ ವಯಸ್ಸು, ಬಲ, ಪ್ರಕೃತಿ, ಇರುವ ಪ್ರದೇಶ, ಕಾಲಗಳನ್ನು ಗಮನಿಸಿ ಸೂಕ್ತವಾಗಿ ವ್ಯಾಯಾಮ ಮಾಡಬೇಕು. ಇಲ್ಲದಿದ್ದರೆ ವ್ಯಾಯಾಮದಿಂದಲೇ ರೋಗವೂ ಬರಬಹುದು!
 • ರಾಜಯಕ್ಷಾ, ಬಾಯಾರಿಕೆ, ಅರುಚಿ, ವಾಂತಿ, ದೋಷಜನ್ಯ ವ್ಯಾಧಿಗಳು, ತಲೆ ತಿರುಗುವಿಕೆ, ಕೆಮ್ಮು, ಮೈ ಒಣಗುವುದು, ಉಬ್ಬಸ , ಜ್ವರ ಈ ಎಲ್ಲಾ ಖಾಯಿಲೆಗಳೂ ಹೆಚ್ಚಾದ ವ್ಯಾಯಾಮದಿಂದ ಬರಬಹುದು!!
 • ಬಾಯಿ, ಮೂಗು, ಗುದದಿಂದ ರಕ್ತಸ್ರಾವವಾಗುತ್ತಿರುವುದು, ಅತಿ ಕೃಶರು, ಒಣಗಿದ ಶರೀರವುಳ್ಳವರು, ಉಬ್ಬಸ, ಕೆಮ್ಮು, ಅಪಘಾತವಾದವರು, ತಲೆ ತಿರುಗುವಿಕೆ, ಬಾಯಾರಿಕೆ ಇರುವವರು ವ್ಯಾಯಾಮ ಮಾಡಬಾರದು !
 • ಊಟ ಮಾಡಿ ಮತ್ತು ಮೈಥುನ ಕರ್ಮದ ನಂತರ ವ್ಯಾಯಾಮ ಮಾಡಬಾರದು !

ಯಾವ ರೀತಿಯ ವ್ಯಾಯಾಮ ?

 • ಓಡುವುದು, ನಿಂತಲ್ಲಿ ಓಡುವುದು, ನಡೆಯುವುದು ವಿವಿಧ ರೀತಿಯ ಸರ್ವಾಂಗಗಳಿಗೂ  ಶ್ರಮವೆನಿಸುವ ವ್ಯಾಯಾಮ ವ್ಯಾಯಾಮ ವಿಧಾನಗಳಲ್ಲಿ ಉತ್ತಮ.
 • ಯೋಗಾಸನ, ಸೂರ್ಯನಮಸ್ಕಾರ, ಗುರು ನಮಸ್ಕಾರಗಳು ಅತ್ಯುತ್ತಮ.
 • ವ್ಯಾಯಾಮದ ನಂತರ ಚೆನ್ನಾಗಿ ಮೈ ಹಿಸುಕಬೇಕು.
 • ಕೇವಲ ಒಣ ವ್ಯಾಯಾಮ ಹಿತಕರವಲ್ಲ. ಮೈಗೆ ಎಣ್ಣೆ ಹಚ್ಚಿ  ವ್ಯಾಯಾಮ, ನಂತರ ಸ್ನಾನ ಅತ್ಯುತ್ತಮವಾದದ್ದು.
 • ನೆನಪಿರಲಿ, ಮಧುಮೇಹ, ಆಮವಾತ, ಚರ್ಮರೋಗ ಮುಂತಾದ ಖಾಯಿಲೆಗಳು ಬರದಂತೆ ವ್ಯಾಯಾಮವೊಂದೇ ನಮ್ಮನ್ನು ರಕ್ಷಿಸಬಲ್ಲದು!

Share With Your Friends

Leave a Comment