fbpx
+919945850945

ಆಯುರ್ವೇದದಲ್ಲಿ ಪುನರ್ಜನ್ಮ ಸಿದ್ಧಾಂತ

ಆಯುರ್ವೇದದಲ್ಲಿ ಪುನರ್ಜನ್ಮ ಸಿದ್ಧಾಂತ

karmic-cycle
ಪ್ರಾಣಿ’ಜನ್ಮ’ದ ಒಳಗುಟ್ಟೇನು? ಇಲ್ಲಿ ಮಾಡಬೇಕಾದ್ದೇನು? ಪ್ರತಿಯೊಬ್ಬರಿಗೂ ಉಂಟಾಗುವ ವಿಶಿಷ್ಟ ಅನುಭವಗಳ ಮೂಲ ಯಾವುದು? ಎಂಬುದು ಜನ್ಮ ತಳೆದ ಪ್ರತಿಯೊಬ್ಬರಿಗೂ  ಅನೇಕ ಬಾರಿ ಬರುವ  ಸಹಜ ಪ್ರಶ್ನೆ. ಚರಕ ಸಂಹಿತೆಯ ” ತಿಸ್ರೈಷಣೀಯಂ” ಎಂಬ ಅಧ್ಯಾಯದಲ್ಲಿ ಈ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ಪ್ರತಿಯೊಂದು ಜೀವಿಯೂ  ಇಹ ಪರಗಳ ಶ್ರೇಯಸ್ಸಿಗಾಗಿ  ತನ್ನ ಬುದ್ಧಿಶಕ್ತಿ ಪರಾಕ್ರಮಗಳಿಂದ ಮೂರು ವಿಷಯಗಳ ಪ್ರಾಪ್ತಿಗಾಗಿ ವಿಶಿಷ್ಟ ಪ್ರಯತ್ನ ಮಾಡಬೇಕಾಗಿದೆ. ಅವೆಂದರೆ,
೧) ಪ್ರಾಣೈಷಣಾ,
೨) ಧನೌಷಣಾ ಹಾಗೂ
೩)ಪರಲೋಕೈಷಣಾ

೧) ಪ್ರಾಣೈಷಣಾ :

ಸಕಲ ಕಾರ್ಯಗಳಿಗೂ ‘ಬದುಕು’ ಮೂಲ. ಬದುಕೇ ಇಲ್ಲದಿದ್ದರೆ ಏನೂ ಇಲ್ಲ. ಆದ್ದರಿಂದ ಆರೋಗ್ಯವಂತನು ಆರೋಗ್ಯ ರಕ್ಷಣೆಯಲ್ಲೂ ರೋಗಿಯ ರೋಗಮುಕ್ತಿಗಾಗಿಯೂ ವಿಶಿಷ್ಟ ಪ್ರಯತ್ನ ಮಾಡಲೇಬೇಕು.ಏಕೆಂದರೆ,
“ಸರ್ವಮನ್ಯತ್ ಪರಿತ್ಯಜ್ಯ ಶರೀರಮನುಪಾಲಯೇತ್।
ತದಭಾವೇ ಹಿ ಭಾವಾನಾಂ ಸರ್ವಾಭಾವಃ ಶರೀರಿಣಾಮ್ ॥೭॥” (ಚ. ಶಾ. ೬.೭)

೨) ಧನೈಷಣಾ : 

ಬದುಕಿಗೆ ಆಧಾರವೇ ‘ಧನ’. ಉತ್ತಮ ಬದುಕಿಗಾಗಿ ಧನಸಂಗ್ರಹ ಅತ್ಯಾವಶ್ಯಕ.
” ನ ಹಿ  ಪಾಪಾತ್ ಪಾಪಿಯೋಽಸ್ತಿ ಯದನುಪಕರಣಸ್ಯ ದೀರ್ಘಮಾಯುಃ ( ಚ. ಸೂ. ೧೧.೫)
ಬದುಕಿಗೆ ಆಧಾರವಿಲ್ಲದ ದೀರ್ಘ ಬದುಕು ಪಡೆದವನು ಪಾಪಿಗಳಲ್ಲೇ ಪಾಪಿ. ಆದರೆ ಈ ‘ ಧನೈಷಣಾ’ ಎನ್ನುವುದು ಸರಿಯಾದ ಮಾರ್ಗದಲ್ಲಿಯೇ ಆಗಬೇಕಾದ್ದು.
೧) ಕೃಷಿ,
೨) ಪಶು ಪಾಲನೆ.
೩) ವಾಣಿಜ್ಯ.
೪) ಸೇವೆ
ಈ ಮಾರ್ಗಗಳಲ್ಲಿ ಅಥವಾ ಸಜ್ಜನರಿಂದ ನಿಂದಿತವಲ್ಲದ ಹಾಗೂ ವೃತ್ತಿಪುಷ್ಟಕರವಾದ ಯಾವುದೇ ಮಾರ್ಗದಲ್ಲಿ ‘ ಧನ ಸಂಪಾದನೆ’ ಮಾಡಬೇಕು. ಅವಮಾನವಿಲ್ಲದ ದೀರ್ಘ ಜೀವನ ಅವನದ್ದಾಗುತ್ತದೆ.

೩) ಪರಲೋಕೈಷಣಾ :

ಮೊದಲಿನ ಎರಡು ಉದ್ದೇಶಗಳೇ ಜೀವನದ ಪರಮ ಗುರಿಯಲ್ಲ. ಮುಂದಿನ ಜನ್ಮದ  ಜೀವನಕ್ಕಾಗಿಯೂ ನಾವು ಈಗಲೇ ಪ್ರಯತ್ನ ಮಾಡಬೇಕು. ಆಗ ಸಂಶಯ ಉಂಟಾಗುತ್ತದೆ. ಪುನರ್ಜನ್ಮ ಉಂಟೇ, ಇಲ್ಲವೇ? ಕೆಲವು ನಾಸ್ತಿಕರು ಇಲ್ಲವೆನ್ನುತಾರೆ. ಅನೇಕರು ಉಂಟೆನ್ನುತ್ತಾರೆ. ಪ್ರತ್ಯಕ್ಷವಾದಿಗಳು ತಾವು ಕಂಡದ್ದು ಮಾತ್ರ ಸತ್ಯ. ಕಾಣಲಾರದ್ದನ್ನು ಹೇಗೆ ನಂಬುವುದು? ಎಂದು ಪ್ರಶ್ನೆ ಮಾಡುತ್ತರಲ್ಲವೇ? ಇದಕ್ಕೆ ಆಪ್ತೋಪದೇಶ , ಪ್ರತ್ಯಕ್ಷ, ಅನುಮಾನ ಹಾಗೂ ಯುಕ್ತಿ ಪ್ರಮಾಣಗಳಿಂದ ಆತ್ರೇಯರು ಸಿದ್ಧಪಡಿಸುತ್ತಾರೆ.
 

೧) ಆಪ್ತೋಪದೇಶ ಪ್ರಮಾಣ : 

ರಜಸ್ತಮರಹಿತರಾದ, ತ್ರಿಕಾಲ ಜ್ಞಾನಿಗಳಾದ, ಶಿಷ್ಟಜನರನ್ನು ಆಪ್ತರೆನ್ನುತ್ತಾರೆ. ಕೇವಲ ಸತ್ವಯುಕ್ತರಾದ ಇಂಥವರು ಸತ್ಯವಲ್ಲದೇ ಇನ್ನೇನನ್ನೂ ನುಡಿಯಲಾರರು. ರಾಗ, ದ್ವೇಷ, ಈರ್ಷ್ಯೆ, ಭಯ, ಕ್ರೋಧ, ಮೋಹಗಳನ್ನು ಗೆದ್ದ ಮಹರ್ಷಿಗಳು ತಮ್ಮ ದಿವ್ಯ ಚಕ್ಷುಸ್ಸಿನಿಂದ ಕಂಡದ್ದನ್ನು ಕಂಡಂತೆ ಅನೇಕ ಗ್ರಂಥಗಳಲ್ಲಿ ಹೇಳಿರುವರು “ಪುನರ್ಜನ್ಮವುಂಟು” ಎಂದು. ಇದು ಪುನರ್ಜನ್ಮದ ಪ್ರಥಮ ಪ್ರಮಾಣ.

೨) ಪ್ರತ್ಯಕ್ಷ ಪ್ರಮಾಣ :

ಪ್ರತ್ಯಕ್ಷವಾಗಿಯೂ ಕೆಳಕಂಡ ಪ್ರಮಾಣಗಳು ‘ಪುನರ್ಜನ್ಮವಿದೆ’ ಎಂಬುದಾಗಿ ಸಾಕ್ಷಿ ನೀಡುತ್ತವೆ.
೧) ತಂದೆತಾಯಿಗಳಂತಿರದ ಮಕ್ಕಳು.
೨) ಒಂದೇ ತಂದೆ ತಾಯಿಯಲ್ಲಿ  ಹುಟ್ಟಿದ ಮಕ್ಕಳಲ್ಲಿ ವರ್ಣಭೇದ, ಸ್ವರಭೇದ, ಆಕೃತಿ ಭೇದ, ಮನಸ್ಸಿನ ವಿಶಿಷ್ಟತೆ, ಬುದ್ಧಿ ಭೇದ ಹಾಗೂ ಅದೃಷ್ಟ ವಿಶೇಷಗಳು.
೩) ಕೀಳು ಜನ್ಮ ಹಿರಿದಾದ ಜನ್ಮ ಪಡೆಯುವಿಕೆ.
೪) ಒಬ್ಬರು ಐಶ್ವರ್ಯವಂತರಾದರೆ ಇನ್ನೊಬ್ಬರು ನಿರ್ಗತಿಕರು.
೫) ಒಬ್ಬರು ಆರೋಗ್ಯವಂತರಾದರೆ, ಇನ್ನೊಬ್ಬರು ಅನಾರೋಗ್ಯಪೀಡಿತರು.
೬) ಆಯುಸ್ಸಿನ ಪ್ರಮಾಣ ಬೇರೆ ಬೇರೆ.
೭) ಕಲಿಯದೇ ಸಹಜವಾಗಿ  ಹಾಲು ಕುಡಿಯುವ ಮಗು, ಸಹಜವಾದ ಅಳು, ನಗು, ಭಯ ಇತ್ಯಾದಿಗಳು.
೮) ಒಂದೇ ರೀತಿಯ ಪ್ರಯತ್ನಕ್ಕೆ ಒಬ್ಬನಿಗೆ ಫಲ, ಇನ್ನೊಬ್ಬನಿಗೆ ವೈಫಲ್ಯ.
೯) ಕೆಲವು ಕೆಲಸಗಳಲ್ಲಿ ಕೆಲವರಿಗೆ ವಿಶಿಷ್ಟ ಜ್ಞಾನ.
೧೦) ಕೆಲವರಲ್ಲಿ ವಿಶಿಷ್ಟ ಪ್ರೀತಿ, ಕೆಲವರನ್ನು ಕಂಡರಾಗದು.
೧೧) ಪೂರ್ವ ಜನ್ಮ ಸ್ಮರಣೀಯ  ಉದಾಹರಣೆಗಳು: ಇದಲ್ಲದೇ, ಪೂರ್ವಜನ್ಮದ ಕುರಿತು ವಿಜ್ಞಾನಿಗಳು ಮಾಡಿದ ( ಎಡ್ಗರ್ ಕೈಸೀ, ಬ್ರಿಯಾನ್ ವೈಸ್, ಮೂಡಿ ಮುಂತಾದ ಮಾನಸಿಕ ತಜ್ಞರು) ಸಂಶೋದನೆಗಳು ಪ್ರತ್ಯಕ್ಷವಾಗಿ  ಪುನರ್ಜನ್ಮವನ್ನು  ಸಿದ್ಧಮಾಡಿದೆ.

೩) ಅನುಮಾನ ಪ್ರಮಾಣ :

ಕಾರಣವಿಲ್ಲದೇ  ಕಾರ್ಯವಿಲ್ಲ. ತಾನಿ ಈ ಜನ್ಮದಲ್ಲಿ ಮಾಡದ ತಪ್ಪಿಗೆ  ಫಲವನ್ನು ಉಣಬೇಕಾದ ಸಂದರ್ಭದಲ್ಲಿ ಇದು ಹಿಂದೆಂದೋ ತಾನೆ ಬಿತ್ತಬೀಜ, ಈಗ ಫಲ ಕೊಡುತ್ತಿರಬಹುದೆಂಬ ‘ ಅನುಮಾನ ಪ್ರಮಾಣ’

೪) ಯುಕ್ತಿ ಪ್ರಮಾಣ :

ಕರ್ತೃಕರಣಗಳು ಸೇರಿದರೆ ಮಾತ್ರ ‘ಕ್ರಿಯಾ’ ಮಾಡಿದ ಕರ್ಮಕ್ಕೆ ಮಾತ್ರ ಫಲ. ಮಾಡದ ಕರ್ಮಕ್ಕಲ್ಲ. ಬೇವಿನ ಬೀಜ ಬಿತ್ತಿ ಮಾವಿನ ಹಣ್ಣು ಪಡೆಯಲಾಗದು. ಆದ್ದರಿಂದ ನಡೆಯುವ ಎಲ್ಲ ವಿಶಿಷ್ಟ ಕ್ರಿಯೆಗಳಿಗೂ  ಹಿಂದೊಂದು ಕಾರಣವಿರಬೇಕಲ್ಲವೇ?  ಎಂಬುದೇ ಯುಕ್ತಿ ಪ್ರಮಾಣ. ಹೀಗೆ ೪ ಪ್ರಮಾಣಗಳಿಂದ  “ಪುನರ್ಜನ್ಮ” ಸಿದ್ಧವಾಗಲು ಮನುಷ್ಯನು ಮುಕ್ತಿಗಾಗಿ ( ಪರಲೋಕೈಷಣಕ್ಕಾಗಿ)  ಹೀಗೆ ಪ್ರಯತ್ನಿಸಬೇಕು.
೧) ಗುರುಶುಶ್ರೂಷೆ,
೨) ನಿತ್ಯ ಅಧ್ಯಯನ ( ಜ್ಞಾನ ಸಂಪಾದನೆ),
೩) ವ್ರತಪಾಲನೆ,
೪) ಪುತ್ರೋತ್ಪಾದನೆ,
೫) ಪತ್ನೀ(ಪತಿ) ಪುತ್ರರ ಪಾಲನೆ,
೬) ಅತಿಥಿ ಪೂಜೆ,
೭) ದಾನ,
೮) ತಪಸ್ಸು,
೯) ಅಸೂಯಾ ರಹಿತತೆ,
೧೦) ದೇಹವಾಂಗ್ಮನಸ್ಸು ಸದಾ ಪರಮಾತ್ಮನಲ್ಲಿ ಸಮಾಧಾನ.
ಹೀಗೆ ಸಜ್ಜನರು ನಡೆದ ದಾರಿಯಲ್ಲಿ  ನಡೆದರೆ, ಇಹಲೋಕದಲ್ಲಿ ಮಾತ್ರವಲ್ಲ, ಪರಜನ್ಮದಲ್ಲೂ ಸುಖ ಪ್ರಾಪ್ತಿ ನಿಶ್ಚಯ.

Share With Your Friends

Leave a Comment