ಎಷ್ಟು ನೀನುಂಡರೇಂ……
ಡಿವಿಜಿಯವರ ಕಗ್ಗದ ಪದ್ಯವೊಂದುಂಟು;
“ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು।
ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕುದೆಲ್ಲ ಕಸ।
ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು?
ಮುಷ್ಟಿ ಪಿಷ್ಟವು ತಾನೆ? – ಮಂಕುತಿಮ್ಮ॥”
ಕೆಲವು ತಾಯಂದಿರು ಮಕ್ಕಳು ಗಟ್ಟಿಯಾಗಲೆಂದು ಪದೇ ಪದೇ ತಿನ್ನಿಸಿ ಖಾಯಿಲೆ ತರಿಸಿಕೊಳ್ಳುವುದನ್ನು ಕಂಡು ಈ ಪದ್ಯ ನೆನಪಾಗುವುದುಂಟು. ವಸ್ತುತಃ ಸಕಾಲದಲ್ಲಿ ಆಹಾರ ಸೇವಿಸದಿದ್ದರೂ ಕಷ್ಟ, ಅತಿಯಾಗಿ ತಿಂದರೂ ತೊಂದರೆ. ಹಿತಮಿತವಾಗಿ ಸಕಾಲದಲ್ಲಿ ಸೇವಿಸಿದರೆ ಮಾತ್ರ ಆರೋಗ್ಯ, ದೇಹವೃದ್ಧಿ. ಇದೇ ರೀತಿ ತನ್ನ ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸಿದರೂ ಬಳಸಲು ಸಾಧ್ಯವಾಗುವುದು ಅಲ್ಪ ಮಾತ್ರವಲ್ಲವೇ?
ತೈತ್ತಿರೀಯ ಉಪನಿಷತ್ತು ಉಸಿರಿದ ಕಿವಿ ಮಾತಿನಂತೆ-
ಅನ್ನದಿಂದಲೇ ಉತ್ಪತ್ತಿ, ಅನ್ನದಿಂದಲೇ ವೃದ್ಧಿ, ಅನ್ನದಿಂದಲೇ ನಾಶ. ಅನ್ನವನ್ನು ಸರಿಯಾಗಿ ಸೇವಿಸಲರಿತವನೇ ಸುಖಿಯಾಗಬಲ್ಲನೆಂಬುದು ಅನುಭವದ ಮಾತೂ ಹೌದು. ಸರಿಯಾದ ಕ್ರಮದಲ್ಲಿ ಅನ್ನ ಸೇವಿಸುವುದರಿಂದ ರೋಗ ಬಾರದಿರುವಂತೆ ತಡೆಯಬಹುದಲ್ಲವೇ? ಸುಶ್ರುತರ ಕಿವಿಮಾತು ಇಲ್ಲಿದೆ ನೋಡಿ –
“ಸುಖಮುಚ್ಚೈಃ ಸಮಾಸೀನಃ ಸಮದೇಹೋಽನ್ನತತ್ಪರಃ ।
ಕಾಲೇ ಸಾತ್ಮ್ಯಂ ಲಘುಸ್ನಿಗ್ಧಮುಷ್ಣಂ ಕ್ಷಿಪ್ರಂ ದ್ರವೋತ್ತರಮ್ ॥೪೬೫॥
ಬುಭುಕ್ಷಿತೋಽನ್ನಮಶ್ನೀಯಾನ್ಮಾತ್ರಾ ವದ್ವಿದಿತಾಗಮಃ ॥” ॥ಸು. ಸೂ. ೪೬ – ೪೬೫॥
ಬುಭುಕ್ಷಿತೋಽನ್ನಮಶ್ನೀಯಾನ್ಮಾತ್ರಾ
೧. ಸುಖಂ ಉಚ್ಚೈಃ ಸಮಾಸೀನಃ – ಕೊಂಚ ಎತ್ತರದ ಸ್ಥಾನದಲ್ಲಿ ಸರಿಯಾಗಿ ಕುಳಿತುಕೊಳ್ಳಬೇಕು.
೨. ಸಮದೇಹಃ – ಶರೀರ ನೇರವಾಗಿರಬೇಕು. ಬೆನ್ನುಕೋಲು ಬಾಗಿರಬಾರದು.
೩. ಅನ್ನತತ್ಪರಃ – ಅನ್ನದಲ್ಲಿಯೇ ಮನಸ್ಸಿರಬೇಕು. ಟಿ ವಿ ಮೇಲಾಗಲೀ, ಬೇರೆ ವಿಚಾರದಲ್ಲಾಗಲೀ ಗಮನವಿರಬಾರದು.
೪. ಕಾಲೇ – ಸಕಾಲದಲ್ಲಿ ಆಹಾರ ಸೇವಿಸಬೇಕು. ಇದರಿಂದ ತೃಪ್ತಿ ಉಂಟಾಗುತ್ತದೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ ನಿಶ್ಚಿತವಾದ ಸಮಯದಲ್ಲಿಯೇ ಆಹಾರ ಸೇವಿಸಬೇಕು. ಕಾಲವಲ್ಲದ ಕಾಲದಲ್ಲಿ ಮಧ್ಯೆ ಮಧ್ಯೆ ಸೇವಿಸುವುದರಿಂದ ಆ ಆಹಾರ ಹಾಗೂ ಮುಂದಿನ ಆಹಾರ ಎರಡೂ ಜೀರ್ಣವಾಗದೆ ದೋಷಗಳಾಗಿ ಮಾರ್ಪಟ್ಟು ವ್ಯಾಧಿ ಉತ್ಪತ್ತಿಗೆ ಕಾರಣವಾಗುವುದು.
೫. ಸಾತ್ಮ್ಯಂ – ಚೈನೀಸ್, ನಾರ್ತ್ ಇಂಡಿಯನ್, ಬೆಂಗಾಲೀಸ್ ಎಂದೂ, ಸೋಯಾಪುಡ್, ಸೋಯಾ ಆಯಿಲ್ ಎಂದೂ ಅಭ್ಯಾಸವಿರದ ಆಹಾರ ತಿಂದು ಜೀರ್ಣಿಸಿಕೊಳ್ಳಲಾಗದೆ ಕಷ್ಟಪಡುತ್ತಿರುವವರೆಷ್ಟೋ?!
ಕುಚ್ಚಲಕ್ಕಿಯವರು ಜೋಳದ ರೊಟ್ಟಿ ತಿಂದು,ಅನ್ನದವರು ರಾಗಿ ತಿಂದು ಒದ್ದಾಡುವವರೆಷ್ಟೋ? ಪ್ರತಿಯೊಬ್ಬರಿಗೂ ಹಿತವಾದ ಆಹಾರವೆಂದರೆ ತನ್ನ ಶರೀರ ಹುಟ್ಟಿನಿಂದ ಬೆಳೆದು ಬಂದ ಆಹಾರ ವಿಧಾನವೇನೋ ಅದೇ ಆತನಿಗೆ ಹಿತ. ಇದನ್ನು ‘ಸಾತ್ಮ್ಯ’ ಆಹಾರವೆನ್ನುವರು.
ಕಂಪ್ಯೂಟರ್ ಗೆ ಮೊದಲೇ ಫೀಡ್ ಮಾಡದ ಸಾಫ್ಟ್ ವೇರ್ ಒಂದು ವಿಷಯದ ಕುರಿತು ಕೆಲಸ ಕೊಟ್ಟರೆ ಅದು ಮಾಡಬಹುದೇ? ಅದರಂತೆ ಶರೀರಕ್ಕೂ ಅಭ್ಯಾಸವಿರದ ಆಹಾರವನ್ನು ಜೀರ್ಣಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಕೆಲವೊಬ್ಬರಿಗೆ ವಾಂತಿ ಬೇಧಿ ಆಗುವುದು ಇದೇ ಕಾರಣದಿಂದಲೇ. ‘ಸಾತ್ಮ್ಯ’ ಆಹಾರವೇ ಎಲ್ಲರಿಗೂ ಹಿತ. ಇದರಿಂದ ಯಾವುದೇ ತೊಂದರೆ ಉಂಟಾಗುವ ಪ್ರಮೇಯವಿಲ್ಲ.
೬. ಲಘು – ಪಚನಕ್ಕೆ ಹಗುರವಾಗಿರಬೇಕು. ಲಾಡು, ಮೊಳಕೆಕಾಳು, ಕರಿದ ತಿಂಡಿ ಒಟ್ಟಿಗೆ ಸ್ವಲ್ಪ ಸ್ವಲ್ಪವೇ ತಿಂದರೂ ಹೊಟ್ಟೆ ಭಾರವಾಗಿ ಕಷ್ಟಪಟ್ಟಾಗ ಮಾತ್ರ ಇದರ ಅರ್ಥ ತಿಳಿಯುತ್ತದೆ. ಹಗುರವಾದ ಆಹಾರ ಬೇಗನೇ ಜೀರ್ಣವಾಗುವುದು.
೭. ಸ್ನಿಗ್ಧಮುಷ್ಣಂ – ಆಹಾರ ಜಿಡ್ಡಿನಿಂದಲೂ ಕೂಡಿರಬೇಕು. ಬಿಸಿಯಾಗಿಯೂ ಇರಬೇಕು. ಆಗ ಇದು ಜೀರ್ಣಶಕ್ತಿ ಹೆಚ್ಚಿಸಲು, ಶರೀರಕ್ಕೆ ಬಲ ಕೊಡಲೂ ಸಹಾಯಕವಾಗುತ್ತದೆ.
೮. ಕ್ಷಿಪ್ರಂ – ಅತಿ ನಿಧಾನವಾಗಿ ತಿನ್ನಬಾರದು. ಬಿಸಿ ಆರಬಾರದು. ಹಾಗೆಂದು ಗಬಗಬನೆ ತಿನ್ನಬೇಕೆಂದು ಅರ್ಥವಲ್ಲ. ಸಾಧಾರಣವಾಗಿ ಬೇಗನೆ ತಿನ್ನುವುದು ಒಳ್ಳೆಯದು. ಇದರಿಂದ ಸರಿಯಾಗಿ ಆಹಾರ ಜೀರ್ಣವಾಗಬಲ್ಲದು.
೯. ದ್ರವೋತ್ತರಂ – ಘಟ್ಟಿಯಾಗಿ ಅನ್ನವನ್ನು ಕಲಸಿ ಉಣ್ಣಬಾರದು. ಸಾಂಬಾರು, ಸಾರು, ಮಜ್ಜಿಗೆ ಮುಂತಾದ ಪದಾರ್ಥಗಳನ್ನು ಸ್ವಲ್ಪ ಹೆಚ್ಚಾಗಿಯೇ ಕಲಸಿ ಸೇವಿಸಬೇಕು. ಇದರಿಂದ ದೋಷರಹಿತವಾಗಿ ಅನ್ನ ಜೀರ್ಣವಾಗುತ್ತದೆ.
೧೦. ಬುಭುಕ್ಷಿತಃ – ಚೆನ್ನಾಗಿ ಹಸಿವೆಯಾದ ಮೇಲೆಯೇ ಉಣ್ಣಬೇಕು. ಹಸಿವಿಲ್ಲದೇ ತಿಂದ ಆಹಾರ ದೋಷ ಮತ್ತು ಮಲವಾಗುವುದೇ ಹೊರತು ಶರೀರ ಧಾತುವಾಗಿ ಮಾರ್ಪಡುವುದಿಲ್ಲ.
೧೧. ಮಾತ್ರಾವತ್ – ಸರಿಯಾದ ಪ್ರಮಾಣದಲ್ಲಿ ತಿನ್ನಬೇಕು. ೧/೨ ಭಾಗ ಘನಾಹಾರದಿಂದಲೂ, ೧/೪ ಭಾಗ ದ್ರವಾಹಾರದಿಂದಲೂ, ೧/೪ ಭಾಗ ಖಾಲಿ ಬಿಟ್ಟು ಆಹಾರ ಸೇವಿಸಬೇಕು. ತೇಕು ಬರುವ ಮೊದಲೇ ಆಹಾರ ಸೇವನೆ ನಿಲ್ಲಿಸುವುದು ಒಳ್ಳೆಯದು. ಸರಿಯಾದ ಪ್ರಮಾಣದ ಆಹಾರ ಅಗ್ನಿಯನ್ನು ಧಾತುಗಳನ್ನು ವೃದ್ಧಿಮಾಡುತ್ತದೆ.
೧೨. ವಿದಿತಾಗಮಃ – ಹಿತ ಯಾವುದು? ಅಹಿತ ಯಾವುದು? ಎಂದು ತಿಳಿದು ತನಗೆ ಹಿತವಾದುದನ್ನು ಮಾತ್ರ ಸ್ವೀಕರಿಸುವುದು ಒಳ್ಳೆಯದು.
“ನ ರಾಗಾತ್ ನಾಪ್ಯ ವಿಜ್ಞಾನಾತ್ ಆಹಾರಮುಪಯೋಜಯೇತ್।
ಪರೀಕ್ಷ್ಯ ಹಿತಮಶ್ನೀಯಾತ್ ದೇಹೋ ಹಿ ಆಹಾರಸಂಭವಃ ॥” ( ಚ. ಸೂ. ೨೮)
ಬಾಯಿ ಚಪಲದಿಂದ ಅಥವಾ ಅಜ್ಞಾನದಿಂದ ಆಹಾರ ಸೇವಿಸಬಾರದು. ಚೆನ್ನಾಗಿ ಯುಕ್ತಾ-ಯುಕ್ತವಾಗಿ ವಿವೇಚನೆ ಮಾಡಿ ಹಿತವಾದುದನ್ನೇ ಸೇವಿಸಬೇಕು. ಏಕೆಂದರೆ We are what we eat? ನಾವು ಏನನ್ನು ತಿನ್ನುತ್ತೇವೆಯೋ, ಅದರಂತೆಯೇ ಆಗುತ್ತೇವೆ.